ಫುಟ್‌ಬಾಲ್‌: ಮರಳಿದ ‘ಸಂತೋಷ’

7

ಫುಟ್‌ಬಾಲ್‌: ಮರಳಿದ ‘ಸಂತೋಷ’

Published:
Updated:
ಫುಟ್‌ಬಾಲ್‌: ಮರಳಿದ ‘ಸಂತೋಷ’

ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ಗೆ ವಿಶಿಷ್ಠ ಪರಂಪರೆ ಇದೆ. 77 ವರ್ಷಗಳ ಹಿಂದೆ ಶುರುವಾದ ಟೂರ್ನಿ ಹಲವು ಫುಟ್‌ಬಾಲ್‌ ತಾರೆಯರ ಉಗಮಕ್ಕೆ ವೇದಿಕೆ ಕಲ್ಪಿಸಿದೆ. ಇದು ದೇಶದ ಪ್ರತಿಷ್ಠಿತ ಚಾಂಪಿಯನ್‌ಷಿಪ್‌. ಇದರಲ್ಲಿ ಆಡಿ ಗಮನ ಸೆಳೆದ ಅನೇಕರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಮಿನುಗಿದ್ದಾರೆ.

ಪಶ್ಚಿಮ ಬಂಗಾಳ, ಚಾಂಪಿಯನ್‌ಷಿಪ್‌ನ ಅತ್ಯಂತ ಯಶಸ್ವಿ ತಂಡವಾಗಿದೆ. ಈ ತಂಡ 32 ಬಾರಿ ಟ್ರೋಫಿ ಎತ್ತಿಹಿಡಿದಿದೆ. ಟೂರ್ನಿಯಲ್ಲಿ ಕರ್ನಾಟಕವೂ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಮೈಸೂರು ರಾಜ್ಯವಾಗಿದ್ದಾಗ ತಂಡ ನಾಲ್ಕು ಬಾರಿ ಚಾಂಪಿಯನ್‌ ಆಗಿತ್ತು. ಜೊತೆಗೆ ನಾಲ್ಕು ಸಲ ರನ್ನರ್ಸ್‌ ಅಪ್‌ ಗೌರವ ಗಳಿಸಿತ್ತು. ಕರ್ನಾಟಕ ಎಂದು ನಾಮಕರಣವಾದ ಬಳಿಕ ರಾಜ್ಯ ತಂಡ ಪ್ರಶಸ್ತಿ ಗೆದ್ದಿಲ್ಲ. ಒಮ್ಮೆ ರನ್ನರ್ಸ್‌ ಅಪ್‌ ಆಗಿದ್ದೇ ಉತ್ತಮ ಸಾಧನೆ.

50 ವರ್ಷಗಳ ಬಳಿಕ ಅರಳಿದ ಸಂತೋಷ

ಕರ್ನಾಟಕದಲ್ಲಿ ಈಗ ಮತ್ತೆ ಸಂತೋಷ್‌ ಟ್ರೋಫಿಯ ಸಂಭ್ರಮ ಗರಿಗೆದರಿದೆ. 50 ವರ್ಷಗಳ ನಂತರ ಬೆಂಗಳೂರಿನಲ್ಲಿ ದಕ್ಷಿಣ ವಲಯದ ಅರ್ಹತಾ ಟೂರ್ನಿ ನಡೆಯುತ್ತಿದೆ.

ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ) ಮತ್ತು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ (ಎಐಎಫ್ಎಫ್‌) ಸಹಯೋಗದಲ್ಲಿ ಆಯೋಜನೆಯಾಗಿರುವ ಚಾಂಪಿಯನ್‌ಷಿಪ್‌ನ ಪಂದ್ಯಗಳು ಜನವರಿ 17ರಿಂದ 22ರವರೆಗೆ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆಯಲಿವೆ.

1968-69ರಲ್ಲಿ ಕೊನೆಯ ಬಾರಿಗೆ ಕಂಠೀರವ ಕ್ರೀಡಾಂಗಣದಲ್ಲಿ ಸಂತೋಷ್‌ ಟ್ರೋಫಿ ಪಂದ್ಯಗಳು ನಡೆದಿದ್ದವು. ಆಗ ಮೈಸೂರು ತಂಡ ಪಶ್ಚಿಮ ಬಂಗಾಳವನ್ನು ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಫೈನಲ್‌ ಪಂದ್ಯದ ನಿಗದಿತ ಅವಧಿಯ ಆಟ ಮುಗಿದಾಗ ಯಾವ ತಂಡವೂ ಗೋಲು ಗಳಿಸಿರಲಿಲ್ಲ. ಆದರೆ ಪೆನಾಲ್ಟಿ ಶೂಟೌಟ್‌ನಲ್ಲಿ ಮಿಂಚಿದ್ದ ರಾಜ್ಯ ತಂಡ 1-0ಗೋಲಿನಿಂದ ಜಯಭೇರಿ ಮೊಳಗಿಸಿತ್ತು.

ಹೊಸ ಸವಾಲು

ಐದು ದಶಕಗಳ ನಂತರ ಉದ್ಯಾನ ನಗರಿಯಲ್ಲಿ ಚಾಂಪಿಯನ್‌ಷಿಪ್‌ ನಡೆಯುತ್ತಿರುವ ಕಾರಣ ಇದನ್ನು ಎಳ್ಳಷ್ಟು ಕೊರತೆಯಿಲ್ಲದೆ ಯಶಸ್ವಿಯಾಗಿ ಆಯೋಜಿಸುವ ಸವಾಲು ಈಗ ಕೆಎಸ್‌ಎಫ್‌ಎ ಮುಂದಿದೆ. ಇದಕ್ಕಾಗಿ ಸಂಸ್ಥೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದ ಈಸ್ಟ್‌ ಸ್ಟ್ಯಾಂಡ್‌ ಬಳಕೆಗೆ ಲಭ್ಯವಿಲ್ಲ. ಹೀಗಾಗಿ ಉಳಿದಿರುವ ಮೂರು ಸ್ಟ್ಯಾಂಡ್‌ಗಳಲ್ಲಿ ಪ್ರೇಕ್ಷಕರು ಮತ್ತು ಗಣ್ಯರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಬೇಕಿದೆ. ಟೂರ್ನಿಗಳಲ್ಲಿ ಭಾಗವಹಿಸುವ ತಂಡಗಳ ಆಟಗಾರರು ಮತ್ತು ನೆರವು ಸಿಬ್ಬಂದಿಗಳಿಗೆ ಊಟ ಮತ್ತು ವಸತಿ ಹಾಗೂ ಅಭ್ಯಾಸಕ್ಕೆ ಸುಸಜ್ಜಿತ ಮೈದಾನಗಳನ್ನು ಒದಗಿಸುವ ಜವಾಬ್ದಾರಿಯೂ ಸಂಸ್ಥೆಯ ಮೇಲಿದೆ.

ಚಾಂಪಿಯನ್‌ಷಿಪ್‌ನ ಮಹತ್ವ

ತಮ್ಮೊಳಗಿರುವ ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಲು ಯುವ ಆಟಗಾರರಿಗೆ ಸಂತೋಷ್‌ ಟ್ರೋಫಿ ಮಹತ್ವದ ವೇದಿಕೆಯಾಗಿದೆ. ಟೂರ್ನಿಯಲ್ಲಿ ಒಟ್ಟು 31 ತಂಡಗಳು ಭಾಗವಹಿಸುವುದರಿಂದ ರಾಷ್ಟ್ರೀಯ ತಂಡದ ಕೋಚ್‌ ಮತ್ತು ವಿವಿಧ ಕ್ಲಬ್‌ಗಳ ಕೋಚ್‌ಗಳಿಗೆ ಪ್ರತಿಭಾನ್ವಿತರನ್ನು ಆಯ್ಕೆ ಮಾಡಲು ವಿಪುಲ ಅವಕಾಶ ಸಿಗುತ್ತದೆ. ಐ ಲೀಗ್‌ ಮತ್ತು ಫೆಡರೇಷನ್‌ ಕಪ್‌ನಲ್ಲಿ ಕೆಲವೇ ಕ್ಲಬ್‌ಗಳಿಗೆ ಮಾತ್ರ ಆಡುವ ಅವಕಾಶ ಇದೆ. ಆದರೆ ಸಂತೋಷ್‌ ಟ್ರೋಫಿಯಲ್ಲಿ ರಾಜಸ್ಥಾನ, ಜಾರ್ಖಂಡ್‌, ಛತ್ತೀಸಗಡದ ತಂಡಗಳೂ ಆಡುತ್ತವೆ. ಹೀಗಾಗಿ ದೇಶದ ಎಲ್ಲಾ ಭಾಗಗಳಿಗೂ ಫುಟ್‌ಬಾಲ್‌ ಕಂಪು ಪಸರಿಸಲು ಇದು ನೆರವಾಗಿದೆ.

ರಾಷ್ಟ್ರೀಯ ತಂಡದಿಂದ ಸ್ಥಾನ ಕಳೆದುಕೊಂಡವರು ಸಂತೋಷ್‌ ಟ್ರೋಫಿಯಲ್ಲಿ ಉತ್ತಮ ಸಾಮರ್ಥ್ಯ ತೋರಿ ಮತ್ತೆ ತಂಡಕ್ಕೆ ಮರಳಿರುವ ಉದಾಹರಣೆಗಳು ಸಾಕಷ್ಟಿವೆ.

ಸಂತೋಷ್‌ ಟ್ರೋಫಿಯ ಹಿನ್ನೆಲೆ

1941ರಲ್ಲಿ ಮೊದಲ ಬಾರಿಗೆ ಚಾಂಪಿಯನ್‌ಷಿಪ್‌ ಆಯೋಜಿಸಲಾಗಿತ್ತು. ಕೋಲ್ಕತ್ತದಲ್ಲಿ ನಡೆದಿದ್ದ ಚೊಚ್ಚಲ ಟೂರ್ನಿಯಲ್ಲಿ ಬಂಗಾಳ ಪ್ರಶಸ್ತಿ ಜಯಿಸಿತ್ತು. ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆದ ತಂಡ ಕಮಲ ಗುಪ್ತಾ ಟ್ರೋಫಿ ಪಡೆಯುತ್ತದೆ.

ಹಿಂದೆ ಭಾರತ ಫುಟ್‌ಬಾಲ್‌ ಸಂಸ್ಥೆಯ ಅಧ್ಯಕ್ಷರಾಗಿದ್ದ ಎಸ್‌.ಕೆ. ಗುಪ್ತಾ, ಪತ್ನಿಯ ಸ್ಮರಣಾರ್ಥ ಈ ಟ್ರೋಫಿ ನೀಡಲು ಆರಂಭಿಸಿದ್ದರು. ಮೂರನೇ ಸ್ಥಾನ ಪಡೆಯುವ ತಂಡ ಸಂಪಂಗಿ ಕಪ್‌ ಸ್ವೀಕರಿಸಲಿದೆ. ಮೈಸೂರಿನ ಪ್ರಮುಖ ಆಟಗಾರ ಸಂಪಂಗಿ ಅವರ ನೆನಪಿಗಾಗಿ ಮೈಸೂರು ಫುಟ್‌ಬಾಲ್‌ ಸಂಸ್ಥೆ (ಈಗ ಕೆಎಸ್‌ಎಫ್‌ಎ) 1952ರಿಂದಲೂ ಈ ಟ್ರೋಫಿ ನೀಡುತ್ತಿದೆ.

ಪ್ರಶಸ್ತಿ ಜಯಿಸುವ ಅವಕಾಶ ಇದೆ

‘ಈ ಬಾರಿ ಕರ್ನಾಟಕ ತಂಡದವರಿಗೆ ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶ ಇದೆ’ ಎಂದು ಹಿರಿಯ ಆಟಗಾರ ದಕ್ಷಿಣಾಮೂರ್ತಿ ಹೇಳಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಬೆಂಗಳೂರು ಎಫ್‌ಸಿ, ಓಜೋನ್‌ ಎಫ್‌ಸಿ ಮತ್ತು ಎಂಇಜಿ ಕ್ಲಬ್‌ಗಳ ಪರ ಆಡಿದ ಹಲವರು ತಂಡದಲ್ಲಿದ್ದಾರೆ. ತಂಡದ ಶಕ್ತಿ ಹೆಚ್ಚಿಸಲು ಕೆಎಸ್‌ಎಫ್‌ಎ ಈ ಬಾರಿ ವಿಶೇಷ ತರಬೇತಿ ಶಿಬಿರ ಆಯೋಜಿಸಿದೆ. ಇದರಲ್ಲಿ ಒಂದು ತಿಂಗಳಿಂದ ಆಟಗಾರರಿಗೆ ಹಲವು ವಿನೂತನ ಕೌಶಲ ಮತ್ತು ತಂತ್ರಗಳನ್ನು ಹೇಳಿಕೊಡುತ್ತಿರುವುದು ಸ್ವಾಗತಾರ್ಹ. ಅರ್ಹತಾ ಟೂರ್ನಿಯಲ್ಲಿ ರಾಜ್ಯಕ್ಕೆ ಸರ್ವಿಸಸ್‌ ತಂಡದಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ. ಈ ಸವಾಲನ್ನು ಮೆಟ್ಟಿನಿಂತರೆ ನಮ್ಮವರ ಪ್ರಶಸ್ತಿಯ ಹಾದಿ ಸುಲಭವಾಗಲಿದೆ’ ಎಂದರು.

‘ರಾಜ್ಯ ತಂಡದಲ್ಲಿ ಬೆಂಗಳೂರಿನವರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂಬ ಆರೋಪಗಳು ಇವೆ. ಮೈಸೂರು, ಮಂಡ್ಯ ಹೀಗೆ ಹಲವು ಜಿಲ್ಲೆಗಳಲ್ಲಿ ಲೀಗ್‌ಗಳು ನಡೆಯುತ್ತಿವೆ. ಅಲ್ಲಿ ಉತ್ತಮ ಸಾಮರ್ಥ್ಯ ತೋರುವ ಮಕ್ಕಳಿಗೂ ಮುಂದಿನ ದಿನಗಳಲ್ಲಿ ಅವಕಾಶ ಸಿಗುವಂತಾಗಬೇಕು. ಆಗ ತಂಡದ ಶಕ್ತಿ ಇನ್ನಷ್ಟು ಹೆಚ್ಚಿಸಬಹುದು’ ಎಂದು ಹೇಳಿದರು.

*

50 ವರ್ಷಗಳ ನಂತರ ಸಂತೋಷ್‌ ಟ್ರೋಫಿ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಿರುವುದು ಖುಷಿಯ ವಿಚಾರ. ಯುವಕರನ್ನು ಈ ಕ್ರೀಡೆಯತ್ತ ಸೆಳೆಯಲು ಟೂರ್ನಿ ನೆರವಾಗಲಿದೆ.

–ಕ್ಸೇವಿಯರ್‌ ವಿಜಯಕುಮಾರ್‌,

ಹಿರಿಯ ಆಟಗಾರ

*

ಟೂರ್ನಿಯಲ್ಲಿ ವಿವಿಧ ರಾಜ್ಯಗಳ ಪ್ರಮುಖ ಆಟಗಾರರು ಭಾಗವಹಿಸುತ್ತಾರೆ. ಅವರ ಅಭ್ಯಾಸ ಕ್ರಮ ಮತ್ತು ಆಟವನ್ನು ಹತ್ತಿರದಿಂದ ನೋಡಿ ಅದನ್ನು ನಮ್ಮವರು ಮೈಗೂಡಿಸಿಕೊಳ್ಳಬಹುದು. ಜೊತೆಗೆ ಹಲವು ಹೊಸ ವಿಷಯಗಳನ್ನು ಕಲಿಯಲು ರಾಜ್ಯದ ಆಟಗಾರರಿಗೆ ಟೂರ್ನಿ ನೆರವಾಗಲಿದೆ.

–ಪ್ರದೀಪ್‌ ಕುಮಾರ್‌,

ಹಿರಿಯ ಆಟಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry