ಬರಲಿರುವ ಪರೀಕ್ಷೆಯ ಸಿದ್ಧತೆ ಹೀಗಿರಲಿ

7

ಬರಲಿರುವ ಪರೀಕ್ಷೆಯ ಸಿದ್ಧತೆ ಹೀಗಿರಲಿ

Published:
Updated:
ಬರಲಿರುವ ಪರೀಕ್ಷೆಯ ಸಿದ್ಧತೆ ಹೀಗಿರಲಿ

ಈಗಿನಿಂದ ಪರೀಕ್ಷೆಯ ದಿನದವರೆಗೆ ಇರುವ ಸಮಯವನ್ನು ಸದುಪಯೋಗ ಪಡಿಸಿಕೊಂಡು ಕ್ರಮಬದ್ಧವಾಗಿ ಅಧ್ಯಯನ ಮಾಡಿದಲ್ಲಿ ನಿರಾತಂಕವಾಗಿ ಪರೀಕ್ಷೆಗಳನ್ನು ಎದುರಿಸಬಹುದು. ಈ ನಿಟ್ಟಿನಲ್ಲಿ ಬರಲಿರುವ ಪರೀಕ್ಷೆಗೆ ನಿಮ್ಮ ಸಿದ್ಧತೆ ಹೇಗಿರಬೇಕೆಂಬ ಬಗ್ಗೆ ಕೆಲವು ಸಲಹೆಗಳನ್ನು ನೀಡುವುದೇ ಈ ಲೇಖನದ ಉದ್ದೇಶ.

ವಿದ್ಯಾರ್ಥಿ ಮಿತ್ರರೇ, ನಿಮ್ಮ ತರಗತಿಯಲ್ಲಿನ ಈ ವರ್ಷದ ಪಾಠ-ಪ್ರವಚನಗಳು ಮುಗಿಯುವ ಹಂತಕ್ಕೆ ತಲುಪಿದೆಯಲ್ಲವೆ? ನೀವೀಗ ಶಾಲೆಯ ಮಟ್ಟದಲ್ಲಿ ನಡೆಯುವ ಪೂರ್ವ ಸಿದ್ಧತಾ ಪರೀಕ್ಷೆಗೆ ತಯಾರಾಗುತ್ತಿದ್ದೀರಲ್ಲವೆ? ಇನ್ನು ಕೆಲವೇ ವಾರಗಳಲ್ಲಿ ನೀವು ಅಂತಿಮ ಪರೀಕ್ಷೆಯನ್ನು ಬರೆಯಬೇಕಾಗಿದೆ. ಅದರಲ್ಲಿಯೂ ಈ ವರ್ಷ ಪರೀಕ್ಷೆಗಳನ್ನು ಹಲವಾರು ಕಾರಣಗಳಿಗಾಗಿ ಕೊಂಚ ಮುಂಚಿತವಾಗಿ ನಡೆಸಲು ಸರ್ಕಾರ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಸಮಯಾಭಾವ ನಿಮ್ಮನ್ನು ಕಾಡುತ್ತಿರಬೇಕಲ್ಲವೆ? ನೀವು ಧೃತಿಗೆಡುವ ಅವಶ್ಯಕತೆ ಇಲ್ಲ. ಈಗಿನಿಂದ ಪರೀಕ್ಷೆಯ ದಿನದವರೆಗೆ ಇರುವ ಸಮಯವನ್ನು ಸದುಪಯೋಗ ಪಡಿಸಿಕೊಂಡು ಕ್ರಮಬದ್ಧವಾಗಿ ಅಧ್ಯಯನ ಮಾಡಿದಲ್ಲಿ ನಿರಾತಂಕವಾಗಿ ಪರೀಕ್ಷೆಗಳನ್ನು ಎದುರಿಸಬಹುದು. ಈ ನಿಟ್ಟಿನಲ್ಲಿ ಬರಲಿರುವ ಪರೀಕ್ಷೆಗೆ ನಿಮ್ಮ ಸಿದ್ಧತೆ ಹೇಗಿರಬೇಕೆಂಬ ಬಗ್ಗೆ ಕೆಲವು ಸಲಹೆಗಳನ್ನು ನೀಡುವುದೇ ಈ ಲೇಖನದ ಉದ್ದೇಶ.

ಕ್ರಮಬದ್ಧ ಅಧ್ಯಯನಕ್ಕೆ ಸಿದ್ಧರಾಗಿ

ಭಾಷಾ ವಿಷಯಗಳೂ ಸೇರಿ ಹೆಚ್ಚೆಂದರೆ ಆರು ವಿಷಯಗಳಿಗೆ ನೀವು ಪರೀಕ್ಷೆಯಲ್ಲಿ ಉತ್ತರಿಸಬೇಕಲ್ಲವೆ? ಈ ಆರು ವಿಷಯಗಳ ಅಧ್ಯಯನಕ್ಕೆ ಒಂದು ವೇಳಾಪಟ್ಟಿಯನ್ನು ಹಾಕಿಕೊಳ್ಳಿ. ಅದರಲ್ಲಿ, ಒಂದು ದಿನಕ್ಕೆ ಒಂದು ವಿಷಯದಂತೆ ಬೆಳಿಗ್ಗೆ ಕನಿಷ್ಠ ಎರಡು ಗಂಟೆ, ಸಂಜೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಎರಡರಿಂದ ಮೂರು ಗಂಟೆ ಅಧ್ಯಯನಕ್ಕೆ ಮೀಸಲಿಡಿ. ರಜಾದಿನವಾದ ಭಾನುವಾರವನ್ನು ಹೆಚ್ಚಿನ ಅಧ್ಯಯನ ಅವಶ್ಯವಿರುವ ಅಥವಾ ಕ್ಲಿಷ್ಟ ಎನಿಸುವ ವಿಷಯಕ್ಕೆ ಮೀಸಲಿಡಿ. ವೇಳಾಪಟ್ಟಿಯನ್ನು ನಿಮ್ಮ ಶಿಕ್ಷಕ ಹಾಗೂ ಪೋಷಕರಿಗೆ ತೋರಿಸಿ, ಅವರ ಸಲಹೆಯನ್ನು ಅಳವಡಿಸಿಕೊಳ್ಳಿ.

ವೇಳಾಪಟ್ಟಿಯನ್ನು ನಿಮ್ಮ ಅಧ್ಯಯನ ಸ್ಥಳದಲ್ಲಿ ತೂಗು ಹಾಕಿಕೊಳ್ಳಿ. ಸಾಕಷ್ಟು ಗಾಳಿ, ಬೆಳಕು ಇರುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಅಧ್ಯಯನಕ್ಕೆ ಬೇಕಾಗುವ ಪಠ್ಯಪುಸ್ತಕ, ನಿಮ್ಮ ತರಗತಿಯಲ್ಲಿ ಬರೆದುಕೊಂಡ ಟಿಪ್ಪಣಿ (ನೋಟ್ಸ್), ಪೂರಕ ಅಧ್ಯಯನ ಸಾಮಗ್ರಿ – ಇವೆಲ್ಲವನ್ನೂ ಸುಲಭವಾಗಿ ಸಿಗುವಂತೆ ನಿಮ್ಮ ಅಧ್ಯಯನ ಸ್ಥಳದಲ್ಲಿ ವಿಷಯವಾರು ಜೋಡಿಸಿಟ್ಟುಕೊಳ್ಳಿ. ಓದಿನಲ್ಲಿ ನಿಮಗೆ ಏಕಾಗ್ರತೆ ಬರಬೇಕಾದಲ್ಲಿ ಈ ರೀತಿಯ ಮಾನಸಿಕ ಸಿದ್ಧತೆಗಳು ಅತ್ಯವಶ್ಯ. ಇದರಿಂದ ನಿಮ್ಮ ಆತ್ಮವಿಶ್ವಾಸವೂ ಹೆಚ್ಚುತ್ತದೆ.

ಗಟ್ಟಿಯಾಗಿ ಓದಿಕೊಳ್ಳಿ

ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡುವಾಗ ಗಟ್ಟಿಯಾಗಿ ನಿಮಗೆ ಕೇಳಿಸುವ ರೀತಿ ಓದಿಕೊಳ್ಳುವುದು ಒಳ್ಳೆಯದು. ಇದರಿಂದ ನಿಮ್ಮ ಕಣ್ಣುಗಳ ಜೊತೆಗೆ, ನಿಮ್ಮ ಕಿವಿಗಳೂ ಓದಿನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. ಇವೆರಡೂ ಜ್ಞಾನೇಂದ್ರಿಯಗಳಿಂದ ಬರುವ ಮಾಹಿತಿಯನ್ನು ಮೆದುಳು ಸಮನ್ವಯಗೊಳಿಸುವುದರಿಂದ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ನಿಮಗೆ ಸುಲಭವಾಗುತ್ತದೆ. ಹೀಗೆ ಓದುವಾಗ ನಿಮಗೆ ಏಕಾಗ್ರತೆ ಅತ್ಯವಶ್ಯ. ಓದುವ ಸಮಯದಲ್ಲಿ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಟಿ.ವಿ., ಮೊಬೈಲ್, ಲ್ಯಾಪ್‌ಟಾಪ್ ಮುಂತಾದ ಸಾಧನಗಳನ್ನು ದೂರವಿಡುವ ದೃಢ ನಿರ್ಧಾರ ಮಾಡಿ.

ಓದಿದ್ದರ ಸಾರಾಂಶ ಬರೆದುಕೊಳ್ಳಿ

ಯಾವುದೇ ವಿಷಯದಲ್ಲಿ ಪ್ರತಿದಿನ ನೀವು ಓದಿ ಮನನ ಮಾಡಿಕೊಂಡ ಅಧ್ಯಾಯದ ಸಂಕ್ಷಿಪ್ತ ಸಾರಾಂಶವನ್ನು ಒಂದು ಹಾಳೆಯಲ್ಲಿ ಬರೆದುಕೊಳ್ಳಿ. ಸಾರಾಂಶ ಸಾಧ್ಯವಾದಷ್ಟೂ ಪ್ರಮುಖ ಪದಗಳ ರೂಪದಲ್ಲಿರಲಿ. ಅಧ್ಯಾಯವನ್ನು ಓದಿ ಮುಗಿಸಿದ ನಂತರ, ಪುಸ್ತಕವನ್ನು ಮುಚ್ಚಿಟ್ಟು, ಸಾರಾಂಶದಲ್ಲಿ ನೀವು ಬರೆದುಕೊಂಡಿರುವ ಪದಗಳನ್ನು ಒಂದೊಂದಾಗಿ ತೆಗೆದುಕೊಂಡು ಸಂಬಂಧಿಸಿದ ಮಾಹಿತಿಯನ್ನು ನೆನಪಿಸಿಕೊಳ್ಳಿ. ಸಮಸ್ಯೆಯಾದಲ್ಲಿ, ಮತ್ತೊಮ್ಮೆ ವಿಷಯವನ್ನು ಓದಿಕೊಳ್ಳಿ. ಪ್ರತಿ ಬಾರಿ ಓದುವಾಗ ಹೀಗೆ ಮಾಡುವುದರಿಂದ ನಿಮ್ಮ ಸ್ಮರಣಶಕ್ತಿ ಸುಧಾರಿಸುತ್ತದೆ.

ಪರೀಕ್ಷೆಯ ದಿನದಂದು ಪ್ರಶ್ನಪತ್ರಿಕೆಯಲ್ಲಿನ ಪ್ರಮುಖ ಪದಗಳನ್ನು ನೋಡುತ್ತಿದ್ದಂತೆ ಪೂರಕ ಮಾಹಿತಿಯನ್ನು ನೆನಪಿಗೆ ತಂದುಕೊಳ್ಳುವುದಕ್ಕೆ ಈ ವಿಧಾನ ಅತ್ಯುಪಯುಕ್ತ. ಇದೇ ವಿಧಾನವನ್ನು ಗಣಿತದ ಪ್ರಮುಖ ಸೂತ್ರಗಳಿಗೂ ವಿಜ್ಞಾನಕ್ಕೆ ಸಂಬಂಧಿಸಿದ ಚಿತ್ರಗಳಿಗೂ ಬಳಸಿಕೊಳ್ಳಿ. ಈ ರೀತಿ ಬರೆದುಕೊಂಡ ಹಾಳೆಗಳನ್ನು ಸುರಕ್ಷಿತವಾಗಿ ಒಂದೆಡೆ ತೆಗೆದಿಟ್ಟುಕೊಳ್ಳಿ. ಪರೀಕ್ಷೆ ಹತ್ತಿರ ಬಂದಂತೆ, ಓದಿದ್ದನ್ನು ಪುನರ್ಮನನ ಮಾಡಿಕೊಳ್ಳಲು ಈ ಹಾಳೆಗಳನ್ನು ಬಳಸಿಕೊಳ್ಳಿ.

ಓದಿನ ಮಧ್ಯೆ ಕೊಂಚ ವಿಶ್ರಾಂತಿ ಇರಲಿ

ನೀವು ಓದಲು ಕುಳಿತಾಗ ಮಧ್ಯೆ ಆಗಾಗ ಸಣ್ಣ ವಿಶ್ರಾಂತಿ ಪಡೆಯುವುದು ಅವಶ್ಯಕ. ಪ್ರತಿ ಒಂದು ಗಂಟೆಯ ಓದಿನ ನಂತರ ಕನಿಷ್ಠ ಐದು ನಿಮಿಷಗಳ ವಿಶ್ರಾಂತಿ ಪಡೆಯಿರಿ. ಆ ಸಮಯದಲ್ಲಿ ಓದುವ ಕೋಣೆಯಲ್ಲಿಯೇ ಅತ್ತಿಂದಿತ್ತ ಕೆಲವು ಹೆಜ್ಜೆ ಹಾಕಿ. ಇಲ್ಲವೇ, ಸರಳವಾದ ಯಾವುದಾದರೂ ವ್ಯಾಯಾಮವನ್ನು ಮಾಡಿ. ಇದರಿಂದ ಮೆದುಳು ಸೇರಿದಂತೆ ನಿಮ್ಮ ದೇಹದ ವಿವಿಧ ಭಾಗಗಳಿಗೆ ರಕ್ತಸಂಚಾರ ಚುರುಕಾಗುತ್ತದೆ. ಆಯಾಸ ಕಡಿಮೆಯಾಗುತ್ತದೆ. ಬಿಡುವಿಲ್ಲದೆ ನಿರಂತರವಾಗಿ ಓದುವುದರಿಂದ ಏಕತಾನತೆ ಉಂಟಾಗುತ್ತದೆ. ಇದು ನಿಮ್ಮ ಏಕಾಗ್ರತೆಗೆ ಭಂಗ ತರುತ್ತದೆ.

ಪೌಷ್ಟಿಕವಾದ ಆಹಾರ ಸೇವಿಸಿ

ತಮ್ಮ ವಿವಿಧ ಚಟುವಟಿಕೆಗಳಿಗೆ ದೇಹದ ಎಲ್ಲ ಜೀವಕೋಶಗಳಿಗೆ ಬೇಕಾಗುವ ಶಕ್ತಿಯನ್ನು ಒದಗಿಸುವುದು ನಿಮ್ಮ ಆಹಾರದ ಘಟಕಗಳು ಎಂಬುದು ನಿಮಗೆ ತಿಳಿದ ವಿಷಯ. ಓದಿದ್ದು ನೆನಪಿರಬೇಕಾದರೆ, ವಿಶೇಷವಾಗಿ ಮೆದುಳಿನ ನರಕೋಶಗಳಲ್ಲಿ ನಿರಂತರವಾಗಿ ಶಕ್ತಿಯ ಬಿಡುಗಡೆ ಆಗಬೇಕು. ಹೀಗಾಗಿ, ಕಾಲ ಕಾಲಕ್ಕೆ ಸರಿಯಾಗಿ ಪೌಷ್ಟಿಕವಾದ ಆಹಾರ ಸೇವಿಸುವುದು ಈ ಸಮಯದಲ್ಲಿ ಅತ್ಯಂತ ಮುಖ್ಯ. ಓದಿನ ಒತ್ತಡದಲ್ಲಿ, ಆಹಾರಸೇವನೆಯನ್ನು ಮುಂದೂಡುವುದು ಸರಿಯಲ್ಲ. ಅಲ್ಲದೆ, ಕಾಫಿ, ಟೀ ಮುಂತಾದ ಉತ್ತೇಜಕ ಪಾನೀಯಗಳನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದಲ್ಲ.

ನಿದ್ದೆಗೆಟ್ಟು ಓದುವುದು ಒಳ್ಳೆಯದಲ್ಲ. ಕನಿಷ್ಠ ಆರು ಗಂಟೆಯ ನಿದ್ರೆ ಅತ್ಯವಶ್ಯ. ನಿದ್ರೆ ಅದಕ್ಕಿಂತ ಕಡಿಮೆಯಾದಲ್ಲಿ ಅದು ಮೆದುಳಿನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಅನಗತ್ಯ ಒತ್ತಡಗಳಿಗೆ ಒಳಗಾಗಬೇಡಿ. ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಿ. ನೆನಪಿಡಿ, ಮಾನಸಿಕವಾಗಿ ನೀವು ದೃಢವಾಗಿದ್ದಷ್ಟೂ ದೈಹಿಕವಾಗಿಯೂ ಆರೋಗ್ಯವಾಗಿರುತ್ತೀರಿ. ಪರೀಕ್ಷೆಯ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ.

ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸಿ

ಪರೀಕ್ಷೆಯಲ್ಲಿನ ನಿಮ್ಮ ಯಶಸ್ಸು ನಿಮ್ಮ ಕ್ರಮಬದ್ಧ ಓದಿನ ಜೊತೆಗೆ ಕೇಳಿರುವ ಪ್ರಶ್ನೆಗಳಿಗೆ ನೀವು ಉತ್ತರಿಸುವ ರೀತಿಯನ್ನೂ ಅವಲಂಬಿಸಿರುತ್ತದೆ. ಇದನ್ನು ನೀವು ಅಭಿವೃದ್ಧಿ ಪಡಿಸಿಕೊಳ್ಳಬೇಕಾದರೆ ಪ್ರತಿ ವಿಷಯದಲ್ಲೂ ಹಿಂದಿನ ಕೆಲವು ವರ್ಷಗಳ ಪ್ರಶ್ನಪತ್ರಿಕೆಯನ್ನು ಪರಾಮರ್ಶಿಸುವುದು ಅತ್ಯವಶ್ಯ. ನಿಮ್ಮ ಶಾಲಾ–ಕಾಲೇಜಿನ ಗ್ರಂಥಾಲಯದಿಂದ ನೀವು ಈ ಪ್ರಶ್ನಪತ್ರಿಕೆಗಳನ್ನು ಎರವಲು ಪಡೆಕೊಳ್ಳಬಹುದು. ಪ್ರತಿ ವಿಷಯದಲ್ಲಿನ ಪ್ರತಿ ಅಧ್ಯಾಯಕ್ಕೆ ಎಷ್ಟು ಅಂಕಗಳನ್ನು ಮೀಸಲಾಗಿ ಇಡಲಾಗಿದೆ ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು.

ಪ್ರತಿ ಭಾನುವಾರ ಅಥವಾ ಇನ್ನಾವುದೇ ರಜಾದಿನದಂದು ಬೇರೆ ಬೇರೆ ವಿಷಯಗಳಲ್ಲಿ ಹಿಂದಿನ ವರ್ಷದ ಪ್ರಶ್ನಪತ್ರಿಕೆಗಳನ್ನು ಉತ್ತರಿಸುವ ಕ್ರಮವನ್ನು ಜಾರಿಗೆ ತನ್ನಿ. ಇದರಿಂದ ಹಲವಾರು ಪ್ರಯೋಜನಗಳಿವೆ. ಪ್ರಶ್ನೆಗಳಿಗೆ ಉತ್ತರಿಸುವಾಗ ನಿಮ್ಮ ಸ್ಮರಣಶಕ್ತಿಯನ್ನು ಒರೆಗೆ ಹಚ್ಚಿದಂತಾಗುತ್ತದೆ. ಯಾವುದನ್ನು ಮತ್ತೆ ಪುನರ್ಮನನ ಮಾಡಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ಸಹಾಯಕವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಒಂದು ಪ್ರಶ್ನಪತ್ರಿಕೆಗೆ ಉತ್ತರಿಸಲು ಬೇಕಾಗುವ ಸಮಯವನ್ನು ತೀಳಿದುಕೊಳ್ಳಲು ಸಾಧ್ಯವಾಗುತ್ತದೆ. ಅಂತಿಮ ಪರೀಕ್ಷೆಯಲ್ಲಿ ಸಮಯವನ್ನು ಹೊಂದಾಣಿಕೆ ಮಾಡಿಕೊಳುವುದಕ್ಕೆ ಇದು ಅತ್ಯಂತ ಉಪಯುಕ್ತ.

ಸಮಾನ ಮನಸ್ಕ ಸ್ನೇಹಿತರೊಡನೆ ಚರ್ಚಿಸಿ

ನಿಮ್ಮ ಹಾಗೇ ಅಧ್ಯಯನಶೀಲರಾಗಿರುವ ಸಮಾನ ಮನಸ್ಕ ಸ್ನೇಹಿತರ ಜೊತೆ ಪ್ರತಿ ನಿತ್ಯ ಸಂಜೆ ಕನಿಷ್ಠ ಒಂದು ಗಂಟೆ ನೀವು ಓದಿದ ಅಧ್ಯಾಯದ ಬಗ್ಗೆ ಮುಕ್ತವಾಗಿ ಚರ್ಚಿಸಿ. ನೀವೆಲ್ಲರೂ ಒಂದೇ ರೀತಿಯ ವೇಳಾಪಟ್ಟಿಯನ್ನು ಹಾಕಿಕೊಂಡಿದ್ದರೆ, ಈ ಪ್ರಕ್ರಿಯೆ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ. ನೀವು ಓದಿರುವ ಅಧ್ಯಾಯದಲ್ಲಿನ ಕ್ಲಿಷ್ಟ ಅಂಶಗಳ ಬಗ್ಗೆ ಪರಸ್ಪರ ಚರ್ಚೆ ಮಾಡಿ. ಸಂಭಾವ್ಯ ಪ್ರಶ್ನೆಗಳನ್ನು, ಅವುಗಳಿಗೆ ಉತ್ತರಗಳನ್ನೂ ಕಂಡುಕೊಳ್ಳಿ. ನಿಮಗೆ ಕ್ಲಿಷ್ಟ ಅನ್ನಿಸಿದ ವಿಷಯವೊಂದು ನಿಮ್ಮ ಸ್ನೇಹಿತನಿಗೆ ಸುಲಭವಾಗಿ ಅರ್ಥವಾಗಿರಬಹುದು. ಪರಸ್ಪರ ಚರ್ಚಿಸುವ ಮೂಲಕ ಇಬ್ಬರೂ ಅಥವಾ ನಿಮ್ಮ ಇತರ ಎಲ್ಲ ಸ್ನೇಹಿತರೂ ಇದರ ಪ್ರಯೋಜನವನ್ನು ಪಡೆಯಬಹುದು. ಆದರೆ, ಇಲ್ಲಿ ವ್ಯರ್ಥ ಕಾಲಹರಣಕ್ಕೆ ಅವಕಾಶ ಕೊಡಬೇಡಿ.

ಸಾಧ್ಯವಾದರೆ ಸಮಾನ ಮನಸ್ಕ ಸ್ನೇಹಿತರ ಸಣ್ಣ ಗುಂಪೊಂದನ್ನು ರಚಿಸಿಕೊಳ್ಳಿ. ಒಟ್ಟಿಗೆ ಕುಳಿತು ಅಧ್ಯಯನ ಮಾಡಿ. ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಿ. ಬರೀ ಓದಿದ್ದು ಬಹು ಬೇಗ ಮರೆತು ಹೋಗುತ್ತದೆ ಎಂದುಕೊಂಡು ಓದುತ್ತಾ ಕೇಳಿಸಿಕೊಂಡದ್ದು ಸಾಕಷ್ಟು ಕಾಲ ನೆನಪಿನಲ್ಲಿ ಉಳಿಯುತ್ತದೆ. ಓದುವುದರ ಜೊತೆಗೆ ಕೇಳಿಸಿಕೊಂಡು ಚರ್ಚೆ ಮಾಡಿದ ವಿಷಯಗಳು ಬಹು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ ಎಂಬುದು ಮನಃಶಾಸ್ತ್ರಜ್ಞರು ಕಂಡುಕೊಂಡಿರುವ ಸತ್ಯ.

ವಿದ್ಯಾರ್ಥಿಗಳೇ, ಮೇಲೆ ಹೇಳಿರುವ ಅಂಶಗಳನ್ನು ನಿಮ್ಮ ಓದುವ ಪ್ರಕ್ರಿಯೆಯಲ್ಲಿ ಅಳವಡಿಸಿಕೊಂಡಲ್ಲಿ, ಮುಂಬರುವ ಪರೀಕ್ಷೆಗಳನ್ನು ಯಾವ ಆತಂಕವೂ ಇಲ್ಲದೆ ಸಂಪೂರ್ಣ ಆತ್ಮವಿಶ್ವಾಸದಿಂದ ಎದುರಿಸಬಹುದು. ನಿಮ್ಮ ಗುರಿಯನ್ನು ತಲುಪಬಹುದು. ನಿಮಗೆ ಶುಭವಾಗಲಿ. 

ಸಮಯದ ಸದುಪಯೋಗಕ್ಕೆ ಒತ್ತು

ಪರೀಕ್ಷೆ ಮುಗಿಯುವವರೆಗೆ ನಿಮ್ಮ ಓದಿಗೆ ಸಿಗುವ ಸಮಯ ಅತ್ಯಮೂಲ್ಯ. ಯಾವುದೇ ಕಾರಣಕ್ಕೆ ಸಮಯವನ್ನು ಹಾಳು ಮಾಡಬೇಡಿ. ನೀವು ಹಾಕಿಕೊಂಡ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಪಾಲಿಸಿ. ಒಂದೆರಡು ವಾರಗಳ ನಂತರ, ಅವಶ್ಯ ಬಿದ್ದಲ್ಲಿ ನಿಮ್ಮ ವೇಳಾಪಟ್ಟಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಿ. ಪ್ರತಿ ದಿನದ ಅಧ್ಯಯನಕ್ಕೆ ಮೀಸಲಿಟ್ಟ ಸಮಯವನ್ನು ಕ್ರಮೇಣ ಹಂತ ಹಂತವಾಗಿ ಒಂದೆರಡು ಗಂಟೆ ಹೆಚ್ಚಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಅವಧಿಯನ್ನು ಕಡಿಮೆ ಮಾಡಿಕೊಳ್ಳಬೇಡಿ.

ಬಿಡುವಿರುವ ಸಮಯದಲ್ಲಿ ಗಣಿತದ ಸಮಸ್ಯೆಗಳನ್ನು ಬಿಡಿಸುವುದು, ವಿಜ್ಞಾನದ ಚಿತ್ರಗಳನ್ನು ಬರೆದು ಅಭ್ಯಾಸ ಮಾಡಿಕೊಳ್ಳುವುದು ಮುಂತಾದ ಚಟುವಟಿಕೆಗಳನ್ನು ಮಾಡಿ. ಇವೂ ಪರೀಕ್ಷಾ ಸಿದ್ಧತೆಯ ಪ್ರಮುಖ ಭಾಗ. ಅಧ್ಯಯನ ಮಾಡುವುದು ಎಂದರೆ ಬರೀ ಪಾಠವನ್ನು ಒದುವುದು ಮಾತ್ರವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಭಾನುವಾರ ಮತ್ತು ರಜಾದಿನಗಳಲ್ಲಿ ನಿಮಗೆ ಓದಲು ಸಿಗುವ ಹೆಚ್ಚಿನ ಸಮಯವನ್ನು ಕ್ಲಿಷ್ಟ ಎನಿಸಿದ ವಿಷಯಗಳಿಗೆ ಅಥವಾ ಅಧ್ಯಾಯಗಳಿಗೆ ಮೀಸಲಿಡಿ. ಒದಗುವ ಯಾವುದೇ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡದೆ, ಸದುಪಯೋಗ ಪಡಿಸಿಕೊಳ್ಳಿ.

ನಿಮ್ಮ ಶಿಕ್ಷಕರ ನೆರವು ಪಡೆದುಕೊಳ್ಳಿ

ನೀವು ಅಧ್ಯಯನ ಮಾಡಿದ ವಿಷಯಗಳ ಸಾರಾಂಶಗಳನ್ನು ಬರೆದುಕೊಳ್ಳುವುದರ ಜೊತೆಗೆ, ಅದರಲ್ಲಿ ನಿಮಗೆ ಅರ್ಥವಾಗದೇ ಉಳಿದು ಹೋಗಿರುವ ಅಂಶಗಳನ್ನೂ, ಬಂದಿರುವ ಸಂದೇಹಗಳನ್ನೂ ಪಟ್ಟಿ ಮಾಡಿಕೊಳ್ಳಿ. ನಿಮ್ಮ ಪಠ್ಯಪುಸ್ತಕ ಅಥವಾ ನೋಟ್ಸ್‌ನಲ್ಲಿ ಇವುಗಳಿಗೆ ಪರಿಹಾರ ಸಿಗದೇ ಹೋದರೆ, ಕೂಡಲೇ ನಿಮ್ಮ ಶಿಕ್ಷಕರ ಸಹಾಯವನ್ನು ಪಡೆದು ಬಗೆಹರಿಸಿಕೊಳ್ಳಿ. ಸದಾ ನಿಮ್ಮ ಒಳಿತನ್ನೇ ಬಯಸುವ ಶಿಕ್ಷಕರು ನಿಮಗೆ ಸಹಾಯ ಮಾಡಲು ಎಂದಿಗೂ ಸಿದ್ಧವಿರುತ್ತಾರೆ ಎಂಬುದನ್ನು ನೆನಪಿಡಿ.

*–ಟಿ. ಎ. ಬಾಲಕೃಷ್ಣ ಅಡಿಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry