ಖುಷಿಯಾಗಿ ಬಾಳಿ, ಖುಷಿಯನ್ನೇ ಹಂಚಿ

5

ಖುಷಿಯಾಗಿ ಬಾಳಿ, ಖುಷಿಯನ್ನೇ ಹಂಚಿ

Published:
Updated:
ಖುಷಿಯಾಗಿ ಬಾಳಿ, ಖುಷಿಯನ್ನೇ ಹಂಚಿ

ವಿಚ್ಛೇದನ ಮತ್ತು ಹೊಂದಾಣಿಕೆ ಪರಸ್ಪರ ವಿರೋಧಾಭಾಸದ ಪರಿಕಲ್ಪನೆಗಳು. ಆದರೆ ವಿಚ್ಛೇದನದ ಪ್ರಸ್ತಾಪವನ್ನು ಮುನ್ನೆಲೆಗೆ ತಂದು, ಹೊಂದಾಣಿಕೆಯ ಸೂತ್ರಗಳನ್ನು ಶೋಧಿಸಿದ, ‘ಖುಷಿಯಾಗಿ ಬಾಳಿ, ಖುಷಿಯನ್ನೇ ಹಂಚಿ...’ ಎಂದು ಸಾರಿ ಹೇಳಿದ ಚಿತ್ರಗಳೆರಡು ಈಚೆಗೆ ಸದ್ದು ಮಾಡಿದವು. ಇಷ್ಟು ಓದುವ ಹೊತ್ತಿಗೆ ನಿಮಗೆ ‘ಸೋಗ್ಗಾಡೆ ಚಿನ್ನಿ ನಾಯನಾ’ (2016) ಮತ್ತು ‘ಶತಮಾನಂಭವತಿ’ (2017) ನೆನಪಾಗಿರುತ್ತೆ ಅಲ್ವಾ? ಈ ಎರಡೂ ಸಿನಿಮಾಗಳು ಸಂಕ್ರಾಂತಿಯಂಥ ಬಾಂಧವ್ಯದ ಹಬ್ಬದ ಸಂಭ್ರಮ ಹೆಚ್ಚಿಸುವ, ಖುಷಿ ಕೊಡುವ ಕಲಾಕೃತಿಗಳೂ ಹೌದು.

ದೂರದ ಅಮೆರಿಕದಲ್ಲಿರುವ ಮಗ–ಸೊಸೆ ವಿಚ್ಛೇದನ ಪತ್ರ ಕೈಲಿ ಹಿಡಿದು ಹಳ್ಳಿಮನೆಗೆ ಬರುವುದರೊಂದಿಗೆ ‘ಸೋಗ್ಗಾಡೆ...’ ತೆರೆದುಕೊಳ್ಳುತ್ತದೆ. ‘ಅತ್ತೆ, ಇನ್ನು ಸಾಧ್ಯವಿಲ್ಲ. ಇವನಿಂದ ನನಗೆ ಮುಕ್ತಿ ಬೇಕು’ ಎನ್ನುವುದು ಸೊಸೆಯ (ಲಾವಣ್ಯಾ ತ್ರಿಪಾಠಿ) ಮಾತು. ‘ಅವಳಿಗೆ ವಿಚ್ಛೇದನ ಬೇಕಂತೆ, ಕೊಟ್ಟುಬಿಡೋಣ’ ಎನ್ನುವುದು ಮಗನ (ನಾಗಾರ್ಜುನ) ಮಾರ್ನುಡಿ. ಮಗನ ಸಂಸಾರ ಕಣ್ಣೆದುರು ಒಡೆಯುತ್ತಿರುವುದನ್ನು ಕಂಡ ತಾಯಿಕರುಳು (ರಮ್ಯಾಕೃಷ್ಣ) ತಲ್ಲಣಿಸಿ ಹೋಗುತ್ತದೆ.

ಸ್ವತಂತ್ರ ಜೀವಿಗಳಾಗಿ ಭೂಮಿಗೆ ಬಂದ ಗಂಡು–ಹೆಣ್ಣು, ಇಷ್ಟಪಟ್ಟು ಹೇರಿಕೊಂಡ ಗಂಡ–ಹೆಂಡತಿಯ ಬಂಧನವನ್ನು ಖುಷಿಖುಷಿಯಾಗಿ ಅನುಭವಿಸಲು ಏನೆಲ್ಲಾ ಮಾಡಬಹುದು ಎಂಬ ಸಾಧ್ಯತೆಗಳೇ ‘ಸೋಗ್ಗಾಡೆ...’ ಎನ್ನುವ ಚಂದದ ಚಲನಚಿತ್ರ.

‘ಕಂಡಕಂಡ ಹೆಣ್ಣುಗಳ ಸೆರಗುಹಿಡಿದು ಓಡುತ್ತಿದ್ದ ಗಂಡನಂತೆ ತನ್ನ ಮಗ ಆಗಬಾರದು’ ಎಂದು ಅತಿಎಚ್ಚರದಿಂದ ಮಗನನ್ನು ಬೆಳೆಸುವ ತಾಯಿ ತನ್ನ ಮಗನನ್ನು ವೈದ್ಯನನ್ನಾಗಿಸುತ್ತಾಳೆ. ಆದರೆ, ಮಗನ ಮೇಲಿರುವ ತನ್ನ ಪ್ರಭಾವವೇ ಅವನ ದಾಂಪತ್ಯ ಹಾಳಾಗಲು ಕಾರಣ ಎಂಬುದನ್ನು ಅರಿತು ಕಣ್ಣೀರಿಡುತ್ತಾಳೆ. ‘ನನ್ನ ಬಗ್ಗೆ ಇವನು ಯೋಚಿಸುವುದೇ ಇಲ್ಲ’ ಎಂದು ಮನಸಿನಲ್ಲೇ ಕೊರಗುವ ಹೆಂಡತಿ, ‘ನನ್ನ ಬದುಕು ಇವಳಿಗೆ ಅರ್ಥವೇ ಆಗುವುದಿಲ್ಲ’ ಎಂದು ಪರಿತಪಿಸುವ ಗಂಡ, ‘ಖುಷಿಯೇ ಬದುಕಿನ ಮೂಲತತ್ವ’ ಎನ್ನುತ್ತಾ ರಸಿಕತೆಯನ್ನು ಬೋಧಿಸುವ ಅಪ್ಪ... ಹೀಗೆ ಮನುಷ್ಯ ಸ್ವಭಾವದ ಹಲವು ಮುಖಗಳೇ ವಿವಿಧ ಪಾತ್ರಗಳಾಗಿ ತೆರೆಯ ಮೇಲೆ ಬಂದು ನಲಿಯುತ್ತವೆ.

ಯಮಲೋಕ, ಸತ್ತ ಮನುಷ್ಯ ಇನ್ನೊಬ್ಬರ ಮೈಮೇಲೆ ಬರುವುದು, ಸಂಪತ್ತನ್ನು ಕಾವಲು ಕಾಯುವ ಸರ್ಪ... ಹೀಗೆ ಚಂದಮಾಮ ಕಥೆಯಂತೆ ಸಿನಿಮಾ ಓಡುತ್ತದೆ. ದ್ವಿಪಾತ್ರದಲ್ಲಿ ಮೋಡಿ ಮಾಡುವ ನಾಗಾರ್ಜುನ, ಪಾತ್ರವೇ ತಾನಾಗಿ ಬಿಡುವ ರಮ್ಯಾಕೃಷ್ಣ ಚಿತ್ರಕ್ಕೆ ಜೀವ ತುಂಬಿದ್ದಾರೆ.

‘ಸೋಗ್ಗಾಡೆ...’ಯ ಆಶಯಗಳನ್ನು ಮತ್ತೊಂದು ನೆಲೆಯಿಂದ ಶೋಧಿಸುವ ಚಿತ್ರ ‘ಶತಮಾನಂಭವತಿ’. ನಿರ್ದಿಷ್ಟವಾಗಿ ಇಂಥವರನ್ನು ನಾಯಕ, ನಾಯಕಿ ಎಂದು ಹೆಸರಿಸಲು ಸಾಧ್ಯವೇ ಆಗದಂಥ ಚಿತ್ರ ಇದು.

ಹಸಿರು ಹೊದ್ದ ಗ್ರಾಮ ಆತ್ರೇಯಪುರಂ. ರೈತ ರಾಘವರಾಜು (ಪ್ರಕಾಶ್‌ ರೈ) ಒಳಿತೇ ತಾನಾಗಿ ಬದುಕುತ್ತಿರುವ ಹಿರೀಕ. ಗಿಡಮರಗಳನ್ನು ಭಾವುಕವಾಗಿ ಪ್ರೀತಿಸುವ ರಾಘವ, ದೂರದೇಶದಲ್ಲಿರುವ ಮಕ್ಕಳಿಗಾಗಿ ಕೊರಗುತ್ತಾ, ಕುಗ್ಗುತ್ತಿರುವ ಹೆಂಡತಿ ಜಾನಕಮ್ಮನನ್ನು (ಜಯಸುಧಾ) ನೋಡಿ ನೋವು ತಿನ್ನುತ್ತಾನೆ. ಎಷ್ಟು ಸಲ ಕರೆದರೂ, ಯಾವ ಹಬ್ಬಕ್ಕೂ ಮಕ್ಕಳು ಬರುವುದಿಲ್ಲ. ‘ನಿಮ್ಮ ಅಮ್ಮನಿಗೆ ವಿಚ್ಛೇದನ ಕೊಡುತ್ತಿದ್ದೇನೆ. ಬಂದು ಆಕೆಯನ್ನು ಕರೆದುಕೊಂಡು ಹೋಗಿ’ ಎಂದು ಮಕ್ಕಳಿಗೊಮ್ಮೆ ಇಮೇಲ್ ಮಾಡಿಬಿಡುತ್ತಾನೆ.

ಹೆದರಿ ಓಡಿಬರುವ ಮಕ್ಕಳು ಅಪ್ಪ–ಅಮ್ಮನನ್ನು ಒಗ್ಗೂಡಿಸಲು ಯತ್ನಿಸುತ್ತಾ ತಮ್ಮ ಬಾಲ್ಯದ ನೆನಪುಗಳಿಗೆ ಜಾರುತ್ತಾರೆ. ಡಾಲರ್ ಕನಸಿನಲ್ಲಿ ಕಳೆದುಹೋಗಿದ್ದ ಬಾಂಧವ್ಯದ ಬಂಧಗಳನ್ನು ಹುಡುಕಿಕೊಳ್ಳುತ್ತಾರೆ. ಈ ನಡುವೆ ಆಸ್ಟ್ರೇಲಿಯಾದ ಮೊಮ್ಮಗಳು ನಿತ್ಯಾ (ಅನುಪಮಾ ಪರಮೇಶ್ವರನ್), ಹಳ್ಳಿಹುಡುಗ ರಾಜುಗೆ (ಶರ್ವಾನಂದ) ಮನ ಸೋಲುತ್ತಾಳೆ. ಇವರ ಮದುವೆಯಾಗಲಿದೆ ಎಂಬ ಖುಷಿಯೊಂದಿಗೆ ಚಿತ್ರಕ್ಕೆ ಶುಭಂ.

ಮರ ಏರುವ ಯಂತ್ರ, ಬೈಕ್‌ನಿಂದ ಉಳುಮೆ, ಹಳ್ಳಿಗೊಂದು ನ್ಯೂಸ್‌ ಚಾನೆಲ್... ಹೀಗೆ ಗ್ರಾಮ ವಿಕಾಸದ ಹಲವು ಸಾಧ್ಯತೆಗಳನ್ನೂ ಈ ಚಿತ್ರ ಶೋಧಿಸುತ್ತದೆ. ಬದುಕಿನ ಏಳುಬೀಳುಗಳಲ್ಲಿ ಮಾಗಿದ ಪಾತ್ರವನ್ನು ಆವಾಹಿಸಿಕೊಂಡಿರುವ ಪ್ರಕಾಶ್‌ ರೈ ಹೇಳುವ ‘ಮಕ್ಕಳಿಗೆ ಹೇಳಿಕೊಡಬೇಕಾಗಿರುವುದು ಎಕಾನಾಮಿಕ್ಸ್ ಅಲ್ಲ, ಎಮೋಷನ್ಸ್‌’. ‘ವ್ಯವಸಾಯ ಅನ್ನೋದು ವ್ಯಾಪಾರವಲ್ಲ, ಅದು ಜೀವನಪದ್ಧತಿ’ ಸಂಭಾಷಣೆಗಳು ಚಿತ್ರದ ಚೌಕಟ್ಟಿನಿಂದಾಚೆಗೂ ಸದ್ದು ಮಾಡಿದ್ದವು.

ಚಿತ್ರಮಂದಿರದಲ್ಲಿ ದೀಪ ಬೆಳಗಿದರೆ ಸಿನಿಮಾ ಮುಗಿಯಿತು ಎಂದು ಅರ್ಥ ತಾನೆ? ‘ಶತಮಾನಂಭವತಿ’ಯ ಆಶಯದ ಮಾತುಗಳು ಆಗಲೇ ಬೆಳಗುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry