ಸಂಕ್ರಾಂತಿಗೆ someಕ್ರಾಂತಿ

7

ಸಂಕ್ರಾಂತಿಗೆ someಕ್ರಾಂತಿ

Published:
Updated:
ಸಂಕ್ರಾಂತಿಗೆ someಕ್ರಾಂತಿ

ಫೇಸ್‍ಬುಕ್ಕು, ವಾಟ್ಸ್ಆ್ಯಪ್ ಕಾಲಘಟ್ಟದಲ್ಲಿ ಯಾವುದಕ್ಕೆ ಕೊರತೆ ಇದೆಯೊ, ಇಲ್ಲವೋ? ಹಬ್ಬ ಹರಿದಿನಗಳಲ್ಲಿ ಶುಭಾಶಯ ಸಂದೇಶಗಳಿಗೆ ಮಾತ್ರ ಕೊರತೆ ಇಲ್ಲ. ಹಿಂದೆ ಶುಭಾಶಯ ಸಂದೇಶ ಹೊತ್ತ ಒಂದು ಗ್ರೀಟಿಂಗ್ ಕಾರ್ಡು ತರಬಹುದಾದ ಸಂಭ್ರಮವನ್ನು ಈಗಿನ ಎಮೊಜಿ ಚಿಹ್ನೆಗಳು, ಫೇಸ್‍ಬುಕ್‍ ಸಂದೇಶಗಳು ತರುವುದಿಲ್ಲವಾದರೂ ಶುಭಾಶಯ ಹೇಳಿದೆವು ಎಂಬ ಸಮಾಧಾನವನ್ನು, ಹೇಳಿದರು ಎಂಬ ತೃಪ್ತಿಯನ್ನಂತೂ ಏಕಕಾಲದಲ್ಲಿ ನೀಡುತ್ತವೆ.

ಹೀಗೆ ಬಂದ ಅಸಂಖ್ಯ ಸಂದೇಶಗಳ ನಡುವೆ ಆತ್ಮೀಯ ಗೆಳೆಯ ವೆಂಕ್ಟನ ಸಂದೇಶವನ್ನು ಹುಡುಕುತ್ತಿದ್ದೆ. ವೆಂಕ್ಟ ಆತ್ಮೀಯ ಗೆಳೆಯ ಕಂ ಹೋರಾಟಗಾರ, ಕಂ ಸಾಹಿತಿ, ಕಂ ಸಮಾಜ ಸೇವಕ ಇತ್ಯಾದಿ. ಅವನ ಬೇಸಿಕ್ ಕ್ವಾಲಿಫಿಕೇಷನ್ನು ಕಾಲೇಜು ಡ್ರಾಪ್ ಔಟ್. ಮುಂದೆ ಯಾವುದಾದರೂ ಎಲೆಕ್ಷನ್‍ಗೆ ನಿಂತು ಹಂಬಲ್ ಪೊಲಿಟಿಷಿಯನ್ ಆಗಬೇಕು, ಸಮಾಜಕ್ಕೆ ಹೆಚ್ಚಿನ ಸೇವೆಯನ್ನು ಮಾಡಬೇಕು ಎಂಬುದು ಅವನ ಪರಮಾದ್ಯತೆಯ ಗುರಿ. ಸಮಾಜ ಎಂದರೆ ಅವನ ದೃಷ್ಟಿಯಲ್ಲಿ ಮೊದಲಿಗೆ ಕಾಣುವುದು ತನ್ನ ಕುಟುಂಬವೇ!

ಇಂಥ ಗೆಳೆಯನ ಶುಭಾಶಯ ಹುಡುಕಾಟದಲ್ಲಿ ಇರುವಾಗಲೇ ದಿಢೀರನೇ ಬಾಗಿಲು ತಳ್ಳುತ್ತಾ ಅವನೇ ಗೃಹಪ್ರವೇಶ ಮಾಡಿದ. ‘ಅಡ್ವಾನ್ಸಾಗಿ ಹ್ಯಾಪಿ ಸಂಕ್ರಾಂತಿ ಕಣ್ಲಾ’ ಎಂದ. ನನ್ನ ಪ್ರತಿಕ್ರಿಯೆಗೂ ಕಾಯದೇ 'ಈ ವರ್ಷ ಎಲ್ಲ ಬದಲಾಗಬೇಕು. ಇನ್ನು ಕಾಯಲಾಗದು. ಆಗಬೇಕು. ಕ್ರಾಂತಿ ಆಗಬೇಕು. ಈ ಸಂಕ್ರಾಂತೀಲಿ ಶುರುವಾಗ್ಬೇಕು. ಒಟ್ನಲ್ಲಿ ಕ್ರಾಂತಿಯಾಗಬೇಕು' ಎಂದ.

ಸಂಕ್ರಾಂತಿ ಅಂದರೆ ಎಳ್ಳು, ಬೆಲ್ಲ ಹಂಚಿ ಒಳ್ಳೇ ಮಾತಾಡುವುದು ಎನ್ನುತ್ತದೆ ಸಂಪ್ರದಾಯ. ‘ತಾವು ಬೆಳಿಗ್ಗೆ, ಬೆಳಿಗ್ಗೆಯೇ ಮನೆ ಪ್ರವೇಶಿಸುತ್ತಲೇ ಕ್ರಾಂತಿ ಅದು, ಇದು ಅಂತ ಬೇರೇನೋ ಹಂಚಲು ಹೊರಟಿರುವಂತಿದೆ. ಏನು ಅಜೆಂಡಾ. ಶುಭಾಶಯದೊಳಗಿನ ಆಶಯ ಏನು’ ಎಂದೆ.

'ಅದ್ನೇ ಡಿಸ್ಕಷನ್ ಮಾಡಾಣಾ ಅಂಥ ಬಂದಿವ್ನಿ. ಮೆಸೇಜು ಕೂಡಾ ಹಾಕದೇ, ಫೋನ್ ಮಾಡಿದ್ರೆ ಎಲ್ಲಿ ತಪ್ಪಿಸ್ಕತಿಯೋ ಅಂಥಾ ನೇರ ಬಂದಿವ್ನಿ. ಇವತ್ತು ಊಟ, ಸಂಜೆ ತಿಂಡಿ ಎಲ್ಲ ಇಲ್ಲೆಯಾ, ಫುಲ್ ಡಿಸ್ಕಷನ್' ಎಂದ.

ಆತ್ಮೀಯರ ಮಾತು, ಅಸಹನೆ, ಆಕ್ರೋಶ, ಖಂಡನೆ ಎಲ್ಲವನ್ನೂ ಒಳಗೊಂಡ ಫೇಸ್‍ಬುಕ್‍ ಪೋಸ್ಟುಗಳೆಲ್ಲಾ ಒಟ್ಟಿಗೆ ತೆರೆದುಕೊಂಡು ಗೊಂದಲವಾಗುವ ಸೂಚನೆ ಇತ್ತು. ಫೋನ್‍ನಲ್ಲಿ ಪೇಸ್‍ಬುಕ್‍ ಮುಚ್ಚಿ, ‘ವಾಟ್ಸ್ ಅಪ್’ ಎನ್ನುತ್ತಾ ಅವನೆದುರು ತೆರೆದುಕೊಂಡೆ.

ನೋಡಪ್ಪಾ ಸಂಕ್ರಾಂತಿ ಹಬ್ಬದ ಎದುರು ಕೂತಿದ್ದೇವೆ. ಹೇಳಿಕೇಳಿ ಇದು ಸುಗ್ಗಿ ಹಬ್ಬ. ನಾವು ಇದ್ನ ಸುಗ್ಗಿ ವರ್ಷವಾಗಿ ಮಾಡ್ಕೋಬೇಕು. ಅಂಥ ಐಡಿಯಾ ಕೊಡು. ಒಟ್ಟಿನಲ್ಲಿ ಕ್ರಾಂತಿ ಆಗಬೇಕು. ಸಮಾಜಕ್ಕೆ ಒಳ್ಳೆಯದಾಗಬೇಕು. ಸಮಾಜ ಅಂದ್ರೆ ಗೊತ್ತಲ್ಲ' ಎಂದು ಒತ್ತಿ ಹೇಳಿದ.

'ಕ್ರಾಂತಿ ಅಂದ್ರೆ ಎಂಥದು ಮಾರಾಯಾ? ನಮ್ಮಲ್ಲಿ ದನಗಳು ಇಲ್ಲ. ಅದಕ್ಕೆ ಜನಗಳ ಮಧ್ಯೆಯೇ ಏನಾದರೂ ಕಿಚ್ಚು ಹಾಯಿಸಬೇಕು ಎಂಬ ಚಿಂತನೆಯಾ?' ಎಂದು ಅನುಮಾನ ವ್ಯಕ್ತಪಡಿಸಿದೆ.

‘ಹಾಗಲ್ಲ ಮಾರಾಯ. ನಿನಗೆ ಗೊತ್ತಿಲ್ಲದಿರೋ ಸಂಗತಿ ಏನಿದೆ?! ನನ್ನ ಸಮಾಜಸೇವೆ ನಿನಗೆ ಗೊತ್ತಿದೆ. ಎಲ್ಲ ಪಾರ್ಟಿಲೂ ಒಳ್ಳೆ ಕಾಂಟ್ಯಾಕ್ಟ್ ಇದೆ. ಈ ಕನೆಕ್ಷನ್ ಬಳಸಿಕೊಂಡೇ ಒಳ್ಳೆ ಕಲೆಕ್ಷನ್ ಮಾಡಿಕೊಳ್ಳುವ ಅಂತ. ಹೇಗೂ ಮುಂದಿನ ನಾಲ್ಕು-ಐದು ತಿಂಗಳು ಎಲ್ಲ ಪಾರ್ಟಿಯೋರಿಗೂ ಸುಗ್ಗಿ ಹಬ್ಬವೇ ತಾನೇ. ಫಸಲು ಬಂದಷ್ಟು ಬರಲಿ’ ಎಂದ.

ಅವನ ದೂರಾಲೋಚನೆಗೆ ಮೆಚ್ಚುಗೆಯೂ ಅಲ್ಲದ, ಕೋಪವೂ ಅಲ್ಲದ ಭಾವನೆ ವ್ಯಕ್ತವಾಯಿತು. ಬೇಸಿಗೆ ಕಾಲದಲ್ಲಿ ಫಸಲು ತೆಗೆಯೋ ಚಿಂತನೆ ನಿನ್ನಂತ ಹಂಬಲ್ ‘ಪೊಲಿಟಿಷಿಯನ್‍ಗಳಿಗೆ ಹೊಳೆಯುತ್ತೆ ಸರಿ ಬಿಡು. ಆದ್ರೆ, ನನಗೂ ಇದಕ್ಕೂ ದೂರ. ನನ್ನಿಂದ ಏನಾಗಬೇಕು’ ಎಂದೆ.

‘ಏನಿಲ್ಲ. ತಾವು ಯಾವಾಗ್ಲೂ ಫೇಸ್‍ಬುಕ್‍ನಲ್ಲಿ ಮುಳುಗಿರ್ತೀರಲ್ಲ. ಅಲ್ಲಿ, ಇಂಥ ಐಡಿಯಾಗಳು ತುಂಬ ಜನರೇಟ್ ಅಗುತ್ತಂತೆ. ರಕ್ತಪಾತ ಮಾಡೋವ್ರು, ಕಿಚ್ಚು ಹಾಯಿಸೋರು ತುಂಬಾ ಜನರು ಇದ್ದಾರಂತೆ. ಒಳ್ಳೆ ಮಾತಾಡಿ, ಎಳ್ಳು-ಬೆಲ್ಲ ಹಂಚುವವರೂ ಇರಬಹುದು. ಅವರನ್ನು ಬದಿಗಿಡು. ನೀನು ಓದಿದ್ದರಲ್ಲಿ ನನಗೆ ಹೆಲ್ಪ್ ಆಗೋತರ ಏನಾದ್ರೂ ಐಡಿಯಾ ನೆನಪಿದ್ರೆ ಕೊಡು’ ಎಂದು ಅಂಗಲಾಚಿದ. ಇವನ ಚಾಣಕ್ಯ ತಂತ್ರ ಅರ್ಥ ಆಯ್ದು.

‘ನೋಡು ಗೆಳೆಯಾ. ನಿನ್ನ ಪ್ರಕಾರ ಸಮಾಜ ಅರ್ಥಾತ್ ಕುಟುಂಬವನ್ನು ನೋಡ್ಕಳಕ್ಕೆ ನೀನು ಶಕ್ತವಾಗಿದ್ದೀಯಾ. ಸುಮ್ನೆ ಕ್ರಾಂತಿ, ಕಿಚ್ಚು ಅಂತ ಹುಚ್ಚುಚ್ಚಾದ ಚಿಂತನೆ ಬಿಟ್ಟು, ಏನಾದ್ರೂ ಒಳ್ಳೇದು ಮಾಡು, ಮಾತನಾಡು’ ಎಂದು ಹಿತೈಷಿ ಆಗಲು ಮುಂದಾದೆ.

‘ಅಲ್ಲಪ್ಪ ಏನೋ ಗೆಳೆಯ ಅಂತ ಬಂದ್ರೆ, ನನ್ನ ಗುರಿಗೆ ತಣ್ಣೀರೆರೆಚುತ್ತಾ ಇದ್ದೀಯಾ? ಮನಸ್ಸು ಪರಿವರ್ತನೆ ಮಾಡಲು ಬರ್ತೀಯಲ್ಲ’ ಎಂದು ಶ್ಯಾನೆ ವಿಷಾದ ಪಟ್ಟುಕೊಂಡ. ನನಗೆ ಇವನು ಹಾದಿಗೆ ಬರ್ತಾನೆ ಎನಿಸಿತು.

ಈಗಲೇ ಕಬ್ಬಿಣ ಬಡಿಯೋದು ಸರಿ ಎಂದುಕೊಂಡು ‘ನೋಡು ಗೆಳೆಯಾ ನಿನಗೆ ಎಲ್ಲ ಪಾರ್ಟಿಲೂ ಗೆಳೆಯರಿದ್ದಾರೆ. ಒಳ್ಳೆಯದನ್ನು ಮಾಡಲು ನಿನ್ನಿಂದ ಸಾಧ್ಯ. ಒಂದ್ ಕೆಲಸ ಮಾಡು, ನೀನು ಫೇಸ್‍ಬುಕ್‍ಗೆ ಬಂದ್ಬಿಡು. ಆದಷ್ಟು ಒಳ್ಳೆಯದನ್ನು ಶೇರ್ ಮಾಡು. ಅದು ಎಲ್ಲ ಪಾರ್ಟಿಯಲ್ಲಿರುವ ನಿನ್ನಂಥಹ ಎಲ್ಲ ಹಂಬಲ್‍ ಪೊಲಿಟಿಷಿಯನ್‍ಗಳಿಗೂ ತಲುಪಲಿ. ಆಗ ನಿಜವಾಗಿ ಕ್ರಾಂತಿ ಆಗುತ್ತದೆ. ನಿನಗನ್ನಿಸಿದ ಒಳ್ಳೆಯದನ್ನು ಬರೆಯುತ್ತಾ ಹೋಗು’ ಎಂದು ಸಲಹೆ ಮಾಡಿದೆ.

‘ನೀನು ಹೇಳೋದು ಸರಿ ಇದೆ. ತಕ್ಷಣಕ್ಕೆ ನಿನ್ನ ಮಾತು ಕೇಳಿದ್ರೆ ನನಗೊಂದು ಕವನ ಹೊಳೆಯುತ್ತಾ ಇದೆ’ ಎಂದ.

ಅಲಲಾ, ಈ ಸಂಕ್ರಾಂತಿಯಲ್ಲಿ ಮತ್ತೊಬ್ಬ ಫೇಸ್‍ಬುಕ್‍ ಸಾಹಿತಿ ಹುಟ್ಟಿಕೊಂಡ ಸೂಚನೆ! ಮಕರ ಸಂಕ್ರಾಂತಿ ಜ್ಯೋತಿ ಕಂಡಷ್ಟೇ ಸಖೇದಾಶ್ಚರ್ಯವಾಯಿತು. ಅದೇನು ಹೇಳು ಎಂದು ಕಿವಿಯಾದೆ.

‘ಎಳ್ಳು-ಬೆಲ್ಲ

ಏನಾದರೂ ಸರಿ ಹಂಚು

ಅದು ಸಂಕ್ರಾಂತಿ,

ಕಥೆ-ಕವನ ಏನಾದರೂ ಸರಿ

ಒಟ್ಟಿನಲ್ಲಿ ಬರಿ ಅದು

SOME ಕ್ರಾಂತಿ’

ಎಂದು ಕವನವಾಚನ ಮುಗಿಸಿ ಹೆಂಗೈತೆ ಎಂಬಂತೆ ನನ್ನ ಕಡೆ ತಿರುಗಿದ.

ನನಗೂ ಆಶುಕವಿಯ ಸಾಲುಗಳನ್ನು ಕಂಡು ಖುಷಿಯಾಯಿತು ‘ಸಖತ್ತಾಗಿದೆ, ಮುಂದುವರಿಸು' ಎಂದು ಬೆನ್ನುತಟ್ಟಿದೆ.

‘ಇವತ್ತೇ ನಾನು ಕೂಡಾ ಫೇಸ್‍ಬುಕ್‍ ಅಕೌಂಟ್ ಓಪನ್ ಮಾಡ್ತೀನಿ. ಇದೇ ನನ್ನ ಮೊದಲ ಪೋಸ್ಟು’ ಎಂದು ಉತ್ಸಾಹದಲ್ಲಿ ಊಟಕ್ಕೂ ಇರದೆ ಹೊರಟ.

ನಾನು ವಾಟ್ಸ್‌ಆ್ಯಪ್‌ಗೆ ಆಗಷ್ಟೇ ಬಂದ ಸಂದೇಶವೊಂದನ್ನು ಆ ಕ್ಷಣಕ್ಕೆ ಇನ್ನೊಂದು ಗ್ರೂಪ್‍ಗೆ ಫಾರ್ವರ್ಡ್ ಮಾಡಿದಷ್ಟೇ ನಿರಾಳವಾದಂತೆ ಕುಳಿತೆ. ಪಕ್ಕದಲ್ಲಿದ್ದ ಸ್ಮಾರ್ಟ್‍ಫೋನ್‍ ನಗುತ್ತಿತ್ತು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry