ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನಿಗೆ ಪೊಂಗಲ್ ನಮನ

Last Updated 14 ಜನವರಿ 2018, 19:30 IST
ಅಕ್ಷರ ಗಾತ್ರ

ನಗರದಲ್ಲಿರುವ ತಮಿಳರ ಮನೆಗಳಲ್ಲಿ ಸಂಕ್ರಾಂತಿಗೆ ಎರಡು ದಿನವಿರುವಾಗಲೇ ಹಬ್ಬದ ಕಳೆ ಬರುತ್ತದೆ. ಯಾಕೆಂದರೆ ಅವರಿಗೆ ನಾಲ್ಕು ದಿನಗಳ ಹಬ್ಬವಿದು. ವರ್ಷದುದ್ದಕ್ಕೂ ಬರುವ ಹಬ್ಬಗಳನ್ನು ಸಂಕ್ರಾಂತಿಯ ಜೊತೆಗೇ ಸಡಗರದಿಂದ ಆಚರಿಸುವುದು ಅವರ ವಿಶೇಷ.

ಮೊದಲ ದಿನ ಬೋಗಿ ಹಬ್ಬ. ಮನೆಯಲ್ಲಿರುವ ಹಳೆಯ ಚಾಪೆ, ಪೊರಕೆ ಮತ್ತಿತರ ಹಳೆಯ ವಸ್ತುಗಳನ್ನು ಹೊರಹಾಕಿ ಸುಡಲಾಗುತ್ತದೆ. ಮಾಂಸಾಹಾರಿಗಳ ಮನೆಯಲ್ಲಿ ಅಂದು ಕರಿಮೀನಿನ ಸಾರು ಕಡ್ಡಾಯ. ‘ಹಳೆಯ ಚಾಪೆ, ಪೊರಕೆ ಸುಡುವುದೆಂದರೆ ಇಡೀ ವರ್ಷ ನಾವು ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳುವುದರ ಸಂಕೇತ. ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂಬ ಪ್ರತಿಜ್ಞೆಯೊಂದಿಗೆ ಸುಟ್ಟುಬಿಡುತ್ತೇವೆ’ ಎನ್ನುತ್ತಾರೆ ವಿಜಯನಗರದ ಟೆಲಿಕಾಂ ಬಡಾವಣೆ ನಿವಾಸಿ ಕಲಾವತಿ.

‘ಎರಡನೆಯ ದಿನ ಸೂರ್ಯನಿಗೆ ಪೊಂಗಲ್ ಅರ್ಪಣೆ. ಹಿಂದಿನ ರಾತ್ರಿ 12ರ ಹೊತ್ತಿಗೆ ಊರಿನ ಕುಂಬಾರರ ಮನೆಗೆ ಹೋಗಿ ಅಕ್ಕಿ, ಬೆಲ್ಲ, ಎಲೆ, ಅಡಿಕೆ, ಹಣ, ಹಣ್ಣು ನೀಡಿ ಹೊಸ ಮಡಕೆ ಖರೀದಿಸಿ ಅದನ್ನು ತಲೆ ಮೇಲೆ ಹೊತ್ತು ತರುತ್ತೇವೆ. ಮನೆಯ ಹಿತ್ತಲು ಅಥವಾ ಅಂಗಳದಲ್ಲಿ ಹೊಸ ಒಲೆಯಲ್ಲಿ ಬೆಂಕಿ ಹಚ್ಚಿ ಅದೇ ಮಡಕೆಯಲ್ಲಿ ಐದು, ಏಳು, ಒಂಬತ್ತು ಸೇರು ಅಕ್ಕಿಯ ಪೊಂಗಲ್ ತಯಾರಿಸುತ್ತೇವೆ. ಚಿಕ್ಕ ಮಡಕೆಯಲ್ಲಿ ಎರಡು ಸೇರು ಹೊಸ ಅಕ್ಕಿಯ ಸಕ್ಕರೆ ಪೊಂಗಲ್ ತಯಾರಿಸುತ್ತೇವೆ.

ಇದಕ್ಕೆಂದೇ, ಹೊಸ ಭತ್ತ ಕುಟ್ಟಿ ಅಕ್ಕಿ ಮಾಡಿ ಎತ್ತಿಟ್ಟಿರುತ್ತೇವೆ. ಸೂರ್ಯೋದಯದ ವೇಳೆಗೆ ಒಲೆಯ ಮೇಲಿರುವ ಪೊಂಗಲ್ ಉಕ್ಕಿ ಬರಬೇಕು. ಅದು ಸೂರ್ಯನಿಗೆ ಸಮರ್ಪಣೆಯಾದಂತೆ. ಹಾಗೆ ಪೊಂಗಲ್‌ ಉಕ್ಕಿ ಬರುವಾಗ ತೆಂಗಿನಕಾಯಿ ಒಡೆದು ಪೊಂಗಲ್ ಎಂದು ಮೂರು ಬಾರಿ ಕೂಗಿ ಸೂರ್ಯನಿಗೆ ನಮಸ್ಕರಿಸಲಾಗುತ್ತದೆ. ಹೀಗೆ ತಯಾರಿಸಿದ ಪೊಂಗಲನ್ನು ಮನೆ ಮಂದಿ ಮಾತ್ರ ಸೇವಿಸಬೇಕು.

ನೆಂಟರು, ನೆರೆಮನೆಯವರು, ಕೂಲಿ ಕಾರ್ಮಿಕರು, ಊರಿನ ದಲಿತರು ಸೇರಿದಂತೆ ಮನೆಗೆ ಬರುವವರಿಗೆ ಪ್ರತ್ಯೇಕ ಅಡುಗೆ ಮಾಡಿ ಬಡಿಸುತ್ತೇವೆ. ಅಂದು ಬಡವರು ಮನೆಮನೆಗೆ ಭಿಕ್ಷೆಗೆ ಹೋಗುವ ರೂಢಿ ಇದೆ’ ಎಂದು ತಮ್ಮೂರಿನ ಸಂಕ್ರಾಂತಿಯನ್ನು ವಿವರಿಸುತ್ತಾರೆ ಚೋಳೂರುಪಾಳ್ಯದ ಮಲ್ಲಿಕಾ.

ಮೂರನೆಯ ದಿನ ಸಂಕ್ರಾಂತಿ. ಮುಂಜಾನೆ ಮನೆಯ ಪುರುಷರು ಸ್ನಾನ ಮಾಡಿ ಮಡಿಯುಟ್ಟು ಗದ್ದೆಗೆ ಹೋಗಿ ಪೈರು ಕತ್ತರಿಸಿ ನದಿಯ ನೀರನ್ನು ತಂಬಿಗೆಯಲ್ಲಿ ತುಂಬಿ ಊರಿನ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿ ಮನೆಗೆ ತರುತ್ತಾರೆ. ಹಾಗೆ ಅವರು ಮನೆಗೆ ಬರುವ ವೇಳೆಗೆ ಮನೆ ಮಂದಿಯೆಲ್ಲ ಸ್ನಾನ ಮಾಡಿ ಮನೆಯ ಮುಂಭಾಗದಲ್ಲಿ ಸೆಗಣಿಯಲ್ಲಿ ಚೌಕಾಕಾರದ ಮನೆ ಮಾಡುತ್ತಾರೆ.

ಅದರ ಮಧ್ಯದಲ್ಲಿ ಗಣಪತಿಯ ಸಂಕೇತವಾಗಿ ಸೆಗಣಿಯ ದೊಡ್ಡ ಎರಡು ಮುದ್ದೆ ಇಟ್ಟು ರಂಗೋಲಿಯ ಅಲಂಕಾರ ಮಾಡುತ್ತಾರೆ. ದೇವರ ಮುಂದೆ ಪೊಂಗಲ್, ಪಾಯಸ, ವಡೆ ಬಡಿಸಿ ಅಕ್ಕಿಯ ಮೇಲೆ ತಂಬಿಗೆಯಲ್ಲಿ ನೀರಿಟ್ಟು ಅದರ ಮೇಲೆ ಹೊಸ ಬಟ್ಟೆಗಳನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ಹಸುಗಳನ್ನು ತೊಳೆದು ಸಿಂಗರಿಸುತ್ತಾರೆ. ಇದನ್ನು ‘ಮಾಡ್‌ ಪೊಂಗಲ್‌’ ಎಂದೇ ಕರೆಯುತ್ತಾರೆ.

‘ಸಂಕ್ರಾಂತಿ ದಿನ ಸಂಜೆ ಆರರ ವೇಳೆಗೆ ಅಲಂಕಾರ ಮಾಡಿದ ಹಸುಗಳಿಗೆ ಆರತಿ ಎತ್ತಿ, ಬೇಯಿಸಿದ ಅಕ್ಕಿ– ತೆಂಗಿನಕಾಯಿ ತಿನ್ನಿಸಲಾಗುತ್ತದೆ. ನಂತರ ಅವುಗಳನ್ನು ಮನೆಮುಂದೆ ಮಾಡಿಟ್ಟ ಸೆಗಣಿಯ ಮನೆಯೊಳಗಿಂದ ದಾಟಿಸಿ ಊರಾಚೆ ಅಟ್ಟಲಾಗುತ್ತದೆ. ಹೀಗೆ ಶೃಂಗಾರಗೊಂಡು ಪೂಜಿಸಲ್ಪಟ್ಟು ಎಲ್ಲ ಹಸುಗಳನ್ನು ಊರಿಗೆ ಮೂರುಸುತ್ತು ಓಡಿಸಲಾಗುತ್ತದೆ. ನಂತರ ಹಿರಿಯರನ್ನು ಸ್ಮರಿಸುವ ಕಾರ್ಯಕ್ರಮ. ಮನೆ ತುಂಬ ಧೂಪದ ಹೊಗೆ ಹಾಕಿ, ಸತ್ತ ಹಿರಿಯರಿಗೆ ಹೊಸ ಬಟ್ಟೆಗಳನ್ನು ಇಟ್ಟು ಕಡುಬು, ವಡೆ, ಪಾಯಸ, ಪೊಂಗಲ್ ಎಡೆ ಇಡುತ್ತಾರೆ.

ಪೊಂಗಲ್‌ ಹಬ್ಬದಂದು ತಯಾರಿಸುವ ಸಾಂಬಾರಿನಲ್ಲಿ ಗೆಡ್ಡೆಗಳೇ ಹೆಚ್ಚಿರುತ್ತವೆ. ಸಿಹಿ ಗೆಣಸು, ಸುವರ್ಣ ಗೆಡ್ಡೆ, ಸಿಹಿಕುಂಬಳ, ಚಪ್ಪರದವರೆ ಹೀಗೆ ಐದಾರು ಬಗೆಯ ತರಕಾರಿ ಸೇರಿಸಿ ಸಾಂಬಾರು ಮಾಡುವುದು ವಿಶೇಷ.

ಎಲ್ಲವೂ ಹೊಸ ತರಕಾರಿ ಆಗಬೇಕು. ನಾಲ್ಕನೇ ದಿನ ಮನರಂಜನೆಗೆ ಮೀಸಲು. ಸಂಕ್ರಾಂತಿ ದಿನ ದೇವರ ಮುಂದೆ ಇಟ್ಟ ಹೊಸ ಬಟ್ಟೆ ತೊಟ್ಟು ಮನೆ ಮಂದಿಯೆಲ್ಲ ಹೊರಗೆ ಸುತ್ತಾಡಿ ಬರುತ್ತಾರೆ. ಊರಿನ ಪ್ರಮುಖ ಜಾಗದಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಅಲ್ಲಿಗೆ ಸಂಕ್ರಾಂತಿ ಸಂಭ್ರಮ ಕೊನೆಗೊಳ್ಳುತ್ತದೆ’ ಎಂದು ವಿವರಿಸುತ್ತಾರೆ ರಾಜಾಜಿನಗರದ ಸುಕನ್ಯಾ.

ಹೀಗೆ ತಮಿಳರ ‘ಪೊಂಗಲ್‌ ಹಬ್ಬ’ ಧಾರ್ಮಿಕ ಆಚರಣೆಯ ಜೊತೆಗೆ, ಹಿರಿಯರನ್ನು ನೆನೆವ, ಸೂರ್ಯನಿಗೆ ನಮಿಸುವ, ಗೋವುಗಳಿಗೆ ಕೃತಜ್ಞತೆ ಸಲ್ಲಿಸುವ ಸಂಭ್ರಮದ ಉತ್ಸವವೂ ಆಗಿದೆ.

*
ಈ ನಾಲ್ಕೂ ದಿನ ಮನೆ, ಬೀದಿ ತುಂಬ ಆಕರ್ಷಕ ರಂಗೋಲಿ ಇಡುವುದು ವಿಶೇಷ. ರಾತ್ರಿ 12ರವರೆಗೂ ಹೆಣ್ಣುಮಕ್ಕಳು ರಂಗೋಲಿ ಸಿಂಗರಿಸುವುದರಲ್ಲಿ ನಿರತರಾಗುತ್ತಾರೆ. ನಗರದ ಚಿಕ್ಕಚಿಕ್ಕ ಮನೆಗಳಲ್ಲಿರುವ ನಮಗೆ ಆ ಸಂಭ್ರಮವಿಲ್ಲ.
-ಮಲ್ಲಿಕಾ

*
ನಗರದಲ್ಲಿ ವಾಸ ಮಾಡುವ ನಾವು ಹೊಸ ಮಡಕೆಯ ಬದಲು ಕುಕ್ಕರ್ ಗಳಲ್ಲಿ ಪೊಂಗಲ್ ಮಾಡುತ್ತೇವೆ. ಕೆಲವರು ಹೊಸ ಪಾತ್ರೆಯಲ್ಲೇ ಪೊಂಗಲ್ ತಯಾರಿಸುತ್ತಾರೆ.
-ರಮೀನಾ, ಚೋಳೂರುಪಾಳ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT