ಕಬ್ಬು ತಂದವರ ಕಷ್ಟ ಸುಖ

7

ಕಬ್ಬು ತಂದವರ ಕಷ್ಟ ಸುಖ

Published:
Updated:
ಕಬ್ಬು ತಂದವರ ಕಷ್ಟ ಸುಖ

ಸಂಕ್ರಾಂತಿ ಹಬ್ಬಕ್ಕೂ ಕಬ್ಬಿಗೂ ಬಿಡದ ನಂಟು. ಸಿಂಗರಿಸಿದ ಎತ್ತಿನ ಗಾಡಿಗೆ, ಎತ್ತುಗಳಿಗೆ ಕಬ್ಬಿನ ಜಲ್ಲೆ ಇಲ್ಲದಿದ್ದರೆ ಹಬ್ಬದ ಕಳೆ ಬರುವುದಾದರೂ ಹೇಗೆ? ಈ ಸಲ ತಡವಾಗಿ ಮಳೆಯಾದರೂ ನದಿ – ಕೊಳ್ಳಗಳು ತುಂಬಿವೆ. ಆದರೆ, ಸಕಾಲದಲ್ಲಿ ಬಿತ್ತನೆ ಆಗದ ಕಾರಣ ನಿರೀಕ್ಷಿತ ಪ್ರಮಾಣದ ಫಸಲು ರೈತರ ಕೈ ಸೇರಿಲ್ಲ’ ಎಂದುಮಾತು ಶುರು ಮಾಡಿದರು, ಕೆ.ಆರ್.ಮಾರುಕಟ್ಟೆ ಕಬ್ಬಿನ ಮಂಡಿ ವ್ಯಾಪಾರಿ ಅಮೀರ್ ಜಾನ್.

40 ವರ್ಷಗಳಿಂದ ಈ ವ್ಯಾಪಾರದಲ್ಲಿ ತೊಡಗಿರುವ ಅವರು, ‘ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬೆಲೆ ಏರಿಕೆ ಕಂಡಡೂ, ಉಳಿದ ದಿನಗಳಲ್ಲಿ ಅಷ್ಟಕ್ಕಷ್ಟೇ ಎನ್ನುತ್ತಾರೆ. ಎಂದಿನಂತೆ ಜ್ಯೂಸ್ ಸೆಂಟರ್‌ಗಳಿಂದ ಖರೀದಿ ನಡೆಯುತ್ತದೆ. ಆದರೆ, ಉತ್ತಮ ಬೆಲೆ ನಿರೀಕ್ಷೆ ಮಾಡಲು ಸಾಧ್ಯ ಇಲ್ಲ’ ಎನ್ನುತ್ತಾರೆ ಅವರು.

ಮಾರಾಟಗಾರರು ನೇರವಾಗಿ ರೈತರ ಹೊಲಗಳಿಗೆ ಭೇಟಿ ನೀಡಿ, ಕಬ್ಬು ಖರೀದಿಯಲ್ಲಿ ತೊಡಗಿದ್ದಾರೆ. ಎಕರೆ ಕಬ್ಬಿಗೆ ₹2.50 ಲಕ್ಷದವರಗೂ ಬೆಲೆ ನಿಗದಿ ವಹಿವಾಟು ನಡೆಯುತ್ತದೆ. ಕಬ್ಬು ಕಟಾವು ಮಾಡುವವರ ಕೂಲಿ, ಸಾಗಣೆ ವೆಚ್ಚ ಕಳೆದರೂ ಹಬ್ಬದ ಸಮಯದಲ್ಲಿ ಕೊಂಚ ಹೆಚ್ಚಿನ ಸಂಪಾದನೆ ಸಿಗುತ್ತದೆ ಎನ್ನುವುದು ಇವರಿಗೆ ಸಮಾಧಾನ.

ಹೊಳೆನರಸೀಪುರ ಸಮೀಪದಲ್ಲಿ ಗದ್ದೆ ಹೊಂದಿರುವ ವಾಸಿಂಖಾನ್ ತಾವು ಬೆಳೆದ ಕಬ್ಬನ್ನು ನೇರವಾಗಿ ಮಾರುಕಟ್ಟೆಗೆ ಮಾರುತ್ತಾರೆ. ಜೋಡಿ ಜಲ್ಲೆ ₹60ರಂತೆ ಮಾರಾಟವಾದರೆ, ಒಂದು ಕಟ್ಟು ಕಬ್ಬಿಗೆ ₹200 ರೂಪಾಯಿ. ಹಬ್ಬದ ಸಮಯದಲ್ಲಿ ಬೆಲೆ ಸ್ವಲ್ಪ ಹೆಚ್ಚಾಗುತ್ತದೆ. ‘ನಾವೂ ಬದುಕಬೇಕು, ನಮ್ಮನ್ನು ನಂಬಿರುವ ಕೂಲಿಗಳೂ ಬದುಕಬೇಕು’ ಎನ್ನುವ ವ್ಯವಹಾರದ ಜಾಣ್ಮೆ ಅವರದು.

ಮಾತಿಗೆ ಸಿಕ್ಕ ಮತ್ತೊಬ್ಬ ವ್ಯಾಪಾರಿ ಅಮೀರ್ ಜಾನ್, ‘ಈ ವರ್ಷ ಕಬ್ಬಿನ ಫಸಲು ಚೆನ್ನಾಗಿರುವ ಕಾರಣ ಮಾರುಕಟ್ಟೆಯಲ್ಲಿ ಧಾರಣೆ ಕಡಿಮೆಯಾಗಿದೆ’ ಎಂದು ವಿಶ್ಲೇಷಿಸಿದರು. ‘ಈ ಸಲ ಹಾಸನ, ಚನ್ನಪಟ್ಟಣದ ಭಾಗದಲ್ಲಿ ಉತ್ತಮ ಫಸಲು ಬಂದಿದೆ. ಪ್ರತಿವರ್ಷಕ್ಕೆ ಹೋಲಿಸಿದರೆ ಕಬ್ಬಿನ ಆವಕ ಹೆಚ್ಚಾಗಿದೆ. ಹೀಗಾಗಿ ಬೆಲೆಯಲ್ಲಿಯೂ ಏರಿಳಿತ ಸಹಜ. ವ್ಯಾಪಾರಿಗಳಿಗೆ ನಾಲ್ಕು ಕಾಸು ದಕ್ಕಿರುವುದಂತೂ ಸುಳ್ಳಲ್ಲ’ ಎನ್ನುವುದು ಅವರ ಖುಷಿಯ ಮಾತು.

ಆದರೆ ಸಕ್ಕರೆ ನಾಡು ಮಂಡ್ಯದ ರೈತರಿಗೆ ಕಬ್ಬು ಈ ವರ್ಷ ಕಹಿ ಆಗಿದೆಯಂತೆ. ‘ಮಳೆಯ ಕಣ್ಣಾಮುಚ್ಚಾಲೆ, ಕಾವೇರಿ ಕಾದಾಟದಿಂದ ನಾಲೆಗಳಿಗೆ ಸೂಕ್ತ ಸಮಯದಲ್ಲಿ ನೀರು ಹರಿಯದ ಕಾರಣ ನಿರೀಕ್ಷಿತ ಫಸಲು ಬಂದಿಲ್ಲ. ಹೀಗಾಗಿ ಬೆಳೆಗಾರರಿಗೆ ನಿರೀಕ್ಷಿತ ಲಾಭ ಸಿಗಲಿಲ್ಲ ಎನ್ನುವುದು’ ಕಬ್ಬು ಬೆಳೆಗಾರ ಶಂಭುನಹಳ್ಳಿ ಸುರೇಶ್ ಅಭಿಪ್ರಾಯ.

‘ಹೆಂಗಸರ ಕೊರಳಿನಲ್ಲಿ ತಾಳಿ ಬಿಟ್ಟರೆ ಮತ್ತೊಂದು ಒಡವೆ ಉಳಿದಿಲ್ಲ; ಒಂದು ವೇಳೆ ಗಂಡಸರೇನಾದರೂ ತಾಳಿ ಹಾಕಿಕೊಳ್ಳುವಂತಿದ್ದರೆ ಅದನ್ನು ಕೂಡ ಮಾರಿಕೊಳ್ಳುತ್ತಿದ್ದರು. ತಿಥಿ ಕಾರ್ಯಕ್ಕೂ ದುಡಿಲ್ಲದ ಅಸಹಾಯಕ ಸ್ಥಿತಿ ಇದೆ’ ಎಂದು ಸಿಹಿ ಬೆಳೆಯುವವರ ಪರಿಸ್ಥಿತಿ ವಿವರಿಸಿದರು. ‘ಸಂಕ್ರಾಂತಿಯಂದು ಕಬ್ಬಿಗೆ ಸಹಜವಾಗಿಯೇ ಬೇಡಿಕೆ ಹೆಚ್ಚು. ಹಳ್ಳಿಗಳಿಂದ ರೈತರೇ ನೇರವಾಗಿ ನಗರಕ್ಕೆ ಕಬ್ಬು ತಂದು ಮಾರುವ ವ್ಯವಸ್ಥೆಯನ್ನು ಸರ್ಕಾರ ಚಿಂತಿಸಬೇಕು. ಹೀಗೆ ಮಾಡಿದರೆ ರೈತರಿಗೂ ಲಾಭ, ಗ್ರಾಹಕರಿಗೂ ಹೊರೆ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಅವರು. ⇒v

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry