ನನ್‌ ಹೆಸ್ರು ನಂಜಪ್ಪ, ಮಾರೋದು ಸಿಹಿಯಪ್ಪ

7

ನನ್‌ ಹೆಸ್ರು ನಂಜಪ್ಪ, ಮಾರೋದು ಸಿಹಿಯಪ್ಪ

Published:
Updated:
ನನ್‌ ಹೆಸ್ರು ನಂಜಪ್ಪ, ಮಾರೋದು ಸಿಹಿಯಪ್ಪ

ನಾನು ನಂಜಪ್ಪ. ಕೆ.ಆರ್‌.ಪುರ ಬಸ್‌ಸ್ಟ್ಯಾಂಡ್‌ನಲ್ಲಿ ಸುಮಾರು 25 ವರ್ಷಗಳಿಂದ ಎಳನೀರು ವ್ಯಾಪಾರ ಮಾಡ್ತಾ ಇದ್ದೀನಿ. ಸಂಕ್ರಾಂತಿ ಬಂದಾಗ ಕಬ್ಬನ್ನೂ ಮಾರ್ತೀನಿ, ಈ ಕಬ್ಬಿನ ಯಾಪಾರ ಶಿವರಾತ್ರಿ ಮುಗೀವರ್ಗೂ ಚೆನ್ನಾಗಿ ನಡೆಯುತ್ತೆ.

ಹೊಸಕೋಟೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೋರ್‌ವೆಲ್‌ ನೀರಾವರಿ ಇರೋರು ಕಬ್ಬು ಬೆಳೀತಾರೆ. ಅಲ್ಲಿಂದಲೇ ನಾನು ತರಿಸಿಕೊಳ್ಳುತ್ತೇನೆ. ಒಂದು ಕಟ್ಟು ಕಬ್ಬನ್ನು ₹400 ಕೊಟ್ಟು ಖರೀದಿಸುತ್ತೇನೆ. ಒಂದು ಕಟ್ಟು ಅಂದ್ರೆ 10 ಕಬ್ಬು. ಒಂದು ಕಬ್ಬನ್ನು 50–60 ರೂಪಾಯಿಗೆ ಮಾರುತ್ತೇನೆ. ಹಾಗೇ ಒಂದು ಗಣಿಕೆ ಕಬ್ಬಿಗೆ 10 ರೂಪಾಯಿ.

ನನಗೆ ತಿಳಿದ ಮಟ್ಟಿಗೆ ಕಬ್ಬಿನಲ್ಲಿ ಮೂರು ಟೈಪು. ಒಂದು ಕರೀದು, ಮತ್ತೊಂದು ಬಿಳೀದು, ಮತ್ತೊಂದು ಕೆಂಪು ಕಬ್ಬು. ಕರಿ ಕಬ್ಬು ಸಂಕ್ರಾಂತಿಗೆ ಹೆಚ್ಚು ಮಾರಾಟ ಆಗುತ್ತದೆ. ಸಿಹೀನೂ ಹೆಚ್ಚಿರುತ್ತೆ. ಅದನ್ನೆ ಪೂಜೆಗೆ ಬಳಸ್ತಾರೆ, ಬಂಧುಗಳಿಗೆ ಹಂಚ್ತಾರೆ. ಈ ಹಾಸನದ ಕಡೆ ಬೆಳೆಯೊ ಕೆಂಪು ಕಬ್ಬನ್ನು ಜ್ಯೂಸ್‌ ಮಾಡಲು ಹೆಚ್ಚು ಬಳಸ್ತಾರೆ. ಇನ್ನು ಮಂಡ್ಯದ ಬಿಳಿ ಕಬ್ಬು ಸಕ್ರೆ ಫ್ಯಾಕ್ಟರಿಗೆ ಜಾಸ್ತಿ ಹೋಗುತ್ತೆ.

ನನ್ನ ಸ್ವಂತ ಊರು ಹೆಸರಘಟ್ಟ ಹೋಬಳಿಯ ಕಾಕೋಳ ಗ್ರಾಮ. ಸುಮಾರು 35 ವರ್ಷದವರೆಗೂ ಊರಲ್ಲೇ ಇದ್ದೆ. ನಾನು ಹತ್ತನೇ ಕ್ಲಾಸು ಫೇಲು. ಊರಲ್ಲಿ ನಮ್ದು ಸ್ವಂತ ಜಮೀನು ಇರ್ಲಿಲ್ಲ. ಬೇರೆಯವರ ಹೊಲ, ಗದ್ದೆ, ತೋಟಗಳಲ್ಲಿ ಕೆಲಸಕ್ಕೆ ಹೋಗ್ತಿದ್ದೆ. ಆಗಿನ ಕಾಲಕ್ಕೆ ದಿನಕ್ಕೆ ಬರೀ ಎರಡು ರೂಪಾಯಿ ಕೂಲಿ ಕೊಡ್ತಾ ಇದ್ರು. ಆಗ ದುಡ್ಡು ಕಡಿಮೆ ಇದ್ರೂ ನೆಮ್ದಿ ಜಾಸ್ತಿ ಇತ್ತು ಕಣಪ್ಪ.

ನನ್‌ ಹೆಂಡ್ತಿ ರಾಜಮ್ಮನ ತವರು ಕೆ.ಆರ್.ಪುರ. ಮದ್ವೆಯಾದ ಮ್ಯಾಲೆ ನಾನು ಈ ಕಡೆ ಬಂದೆ. ಆರಂಭದಲ್ಲಿ ಗಾರೆ ಕೆಲಸ, ಕಾರ್ಪೆಂಟರ್‌, ಮರಳು ಲಾರಿ ಲೋಡ್‌ ಮಾಡೊ ಕೆಲ್ಸ ಮಾಡ್ತಿದ್ದೆ. ಕೂಲಿ ಕಮ್ಮಿಯಿತ್ತು. ಅದನ್ನೂ ಸರಿಯಾಗಿ ಕೊಡ್ತಾ ಇರ್ಲಿಲ್ಲ. ಹಂಗಾಗಿ ಸ್ವಂತ ಯಾಪಾರ

ಮಾಡೊ ಯೋಚ್ನೆ ಬಂದು, ಎಳನೀರ್‌ ಯಾಪಾರಕ್ಕೆ ಕೈ ಹಾಕ್ದೆ. ನಾನ್‌ ಯಾಪಾರ ಶುರು ಮಾಡ್ದಾಗ ಒಂದ್ ಎಳನೀರಿಗೆ ಒಂದೂವರೆ ರೂಪಾಯಿ.

ಕೋಲಾರ, ಮಾಲೂರು, ಮಾಸ್ತಿ ಕಡೆಯಿಂದಲೇ ಕಾಯಿ ತರಿಸಿಕೊಳೋದು. ಮೊದ್‌ಮೊದಲು ಕಾಯಿ ಕೊಚ್ಚೋಕೆ ಬರ್ತಾ ಇರ್ಲಿಲ್ಲ. ನಮ್ಮನಿಯಾಕೆನೇ ಕಲಿಸಿದ್ಲು. ಒಂದು ಫೋನ್‌ ಹಾಕಿದರೆ ಸಾಕು, ತೋಟ್‌ದೋರೆ ಕಾಯಿ ತಂದ್‌ ಹಾಕ್ತಾರೆ. ಬೆಳಗಿನಿಂದ ಸಂಜೆವರ್ಗೂ

ನಾನು, ನನ್‌ ಹೆಂಡ್ತಿ ಕಾಯಿ ಮಾರ್ತೇವೆ.

ಬೆಂಗ್ಳೂರಿಗೆ ಬಂದು ಹದಿನೈದು ವರ್ಷ ಬಾಡಿಗೆ ಮನೇಲಿದ್ವಿ. ಅಲ್ಲಿನೇ ಮೂರು ಮಕ್ಕಳಾದ್ವು. ಇಬ್ರು ಹೆಣ್‌ ಮಕ್ಕಳನ್ನ ಮದುವೆ ಮಾಡಿಕೊಟ್ಟಿವ್ನಿ. ಮಗ ನೀಲಕಂಠ ಆಟೊ ಓಡಿಸ್ತಾನೆ. ನಾನು ಹತ್ತನೇ ಕ್ಲಾಸು ಫೇಲಾಗಿ ಎರಡನೇ ಬಾರಿ ಪರೀಕ್ಷೆ ಕೂರೋಕೆ ಇಪ್ಪತ್ತು ರೂಪಾಯಿ ಫೀಸು ಕಟ್ಟೋಕೆ ದುಡ್ಡಿರ್ಲಿಲ್ಲ. ಈಗ ಫೀಸು ಎಷ್ಟಾದರೂ ಕಟ್ಟುತ್ತೇನೆಂದರೂ ಮಗ ಹತ್ತಕ್ಕಿಂತ ಹೆಚ್ಚು ಓದ್ಲಿಲ್ಲ. ನಮ್‌ ದುಡಿಮೆ ಉಳಿಸಿ ಈಗ ಒಂದು ಸಣ್ಣ ಸ್ವಂತಮನೆ ಮಾಡಿಕೊಂಡಿದ್ದೀವಿ. ಯಾಪಾರ ಟೈಮಲ್ಲಿ ಕೆಲ ಗಿರಾಕಿಗಳು ಚೌಕಾಸಿ ಮಾಡ್ತಾರೆ, ರೇಗ್ತಾರೆ. ನಾನು ಕೂಲಾಗೆ ಮಾತ್‌ ಆಡ್ತೆನೆ.

ತೆಂಗನ್ನ ಮುಕ್ಕಣ್ಣೇಶ್ವರ ಅಂತಾರೆ. ಅವನೇ ನನ್‌ ಜೀವನ ನಡೆಸ್ತಾ ಇದಾನೆ. ಹಂಗಾಗಿನೇ ಕೈತುಂಬ ದುಡಿಮೆ, ಹೊಟ್ಟೆ ತುಂಬ ಊಟ, ಕಣ್‌ ತುಂಬ ನಿದ್ದೆ ಇದೆ. ನಂದಂತೂ ನೆಮ್ಮದಿ ಜೀವ್ನಾ ಕಣಪ್ಪಾ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry