ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಪುರದಲ್ಲಿ ಪರಿಷೆ

Last Updated 14 ಜನವರಿ 2018, 19:30 IST
ಅಕ್ಷರ ಗಾತ್ರ

ಕೆಂಗೇರಿ ಸಮೀಪದ ಸೋಂಪುರದಲ್ಲಿ ಸಂಕ್ರಾಂತಿ ಹಬ್ಬವನ್ನು ಗ್ರಾಮದ ಸುತ್ತಮುತ್ತಲಿನ ಜನರೆಲ್ಲ ಸೇರಿಕೊಂಡು ಆಚರಿಸುವುದು ವಿಶೇಷ. ಸೋಂಪುರದ ನಂದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಊರ ಹಬ್ಬದ ರೀತಿಯಲ್ಲಿ ಸಂಕ್ರಾಂತಿ ಆಚರಿಸಲಾಗುತ್ತದೆ.

ಈ ವರ್ಷವೂ ಜ.15ರಂದು ಸಂಕ್ರಾಂತಿ ಹಬ್ಬ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ರೈತರು ತಾವು ಬೆಳೆದ ದವಸ ದಾನ್ಯಗಳು, ತರಕಾರಿಗಳನ್ನು ಮಾರಾಟ ಮಾಡಲು ಅನುಕೂಲ ಕಲ್ಪಿಸಲಾಗಿದೆ.

ಸೋಂಪುರ ಬಳಿಯ ಚನ್ನವೀರಯ್ಯನ ಪಾಳ್ಯದಲ್ಲಿರುವ ನಂದಿ ಬಸವೇಶ್ವರಸ್ವಾಮಿ ದೇವಸ್ಥಾನವು ಚೋಳರ ಕಾಲದ್ದು. 2006ರಲ್ಲಿ ದೇವಸ್ಥಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದು ಹೊಸ ರೂಪ ನೀಡಲಾಯಿತು. ಇದರ ನೇತೃತ್ವ ವಹಿಸಿದ್ದ ಸ್ಥಳೀಯ ಮುಖಂಡ ಎಂ.ರುದ್ರೇಶ್‍ ದೇವಸ್ಥಾನಕ್ಕೆ ಸಂಪರ್ಕ ವ್ಯವಸ್ಥೆಯನ್ನೂ ಕಲ್ಪಿಸಿದರು.

ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಆಚರಣೆಗೆ ಇಲ್ಲಿ ವಿಶೇಷ ಮಹತ್ವ. ನಂದಿ ಬಸವೇಶ್ವರ ದೇವರ ಉತ್ಸವ, ಜಾತ್ರಾ ಮಹೋತ್ಸವ ಜರುಗಲಿದ್ದು ಹೆಮ್ಮಿಗೆಪುರದ ಮಾರಮ್ಮ, ಗಟ್ಟಿಗೆರೆ ಪಾಳ್ಯ, ಕಬ್ಬಾಳಮ್ಮ, ಚನ್ನವೀರಯ್ಯನಪಾಳ್ಯ, ಮಾರಮ್ಮ, ಎಚ್.ಗೊಲ್ಲಹಳ್ಳಿ ಕಬ್ಬಾಳಮ್ಮ ಸೇರಿದಂತೆ ವಿವಿಧ ದೇವರುಗಳ ಮೆರವಣಿಗೆ ನಡೆಯುತ್ತದೆ.

ಡಂಕಣಿಕೋಟೆ, ತಳಿ, ಧರ್ಮಪುರಿ, ಪಾವಗಡ, ಗೌರಿಬಿದನೂರು, ಕನಕಪುರ, ಮಾಗಡಿಯಿಂದ ಬರುವ ರೈತರು ತಲಾ ಎರಡು ಲೀಟರ್ ಕಡಲೇಕಾಯಿ ಹಾಗೂ ಒಂದು ಜೊತೆ ಕಬ್ಬನ್ನು ಉಚಿತವಾಗಿ ವಿತರಿಸುವ ಮೂಲಕ ಕಡಲೇಕಾಯಿ ಪರಿಷೆಯನ್ನೇ ನಡೆಸುವುದು ಈ ಊರಿನ ಸಂಕ್ರಾಂತಿ ಹಬ್ಬದ ವಿಶೇಷ. ಕಡಲೆಕಾಯಿ ಪರಿಷೆ ಶುರುವಾಗಿದ್ದು ಈ ದೇವಸ್ಥಾನದಲ್ಲಿಯೇ ಎಂಬುದು ಸೋಂಪುರದ ಹಿರಿಯರ ಅಭಿಪ್ರಾಯ.

ಈ ಬಾರಿಯ ಸಂಕ್ರಾಂತಿ ಉತ್ಸವದಲ್ಲಿ ಗ್ರಾಮದ, 60 ವರ್ಷ ತುಂಬಿದ ಹಿರಿಯ ರೈತರನ್ನು ಗೌರವಿಸುವ ‘ಮಾತೃಪಿತೃ ದೇವೋಭವ’ ಎಂಬ ವಿಶಿಷ್ಟ ಕಾರ್ಯಕ್ರಮವೂ ಇದೆ. ಉತ್ಸವಕ್ಕೆ ಧರ್ಮದ ಬೇಲಿ ಇಲ್ಲದಿರುವುದು ಮತ್ತೊಂದು ವಿಶೇಷ. ಮುಸಲ್ಮಾನ ಮತ್ತು ಕ್ರೈಸ್ತ ಜನಾಂಗದ ರೈತರೂ ಉತ್ಸವದಲ್ಲಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

ನೈಸ್ ಜಂಕ್ಷನ್ ಸೋಂಪುರ ಬಳಿಯ ಚನ್ನವೀರಯ್ಯನಪಾಳ್ಯದಲ್ಲಿ ನಡೆಯುವ ಈ ಜಾತ್ರೆಯು ರಾತ್ರಿ 8 ಗಂಟೆವರೆಗೆ ನಡೆಯಲಿದೆ. ಪೂಜಾ ಕುಣಿತ, ಪಟದ ಕುಣಿತ, ಡೊಳ್ಳು ಕುಣಿತ, ನಂದಿಧ್ವಜ, ಗೊರವನ ಕುಣಿತ, ವೀರಭದ್ರನ ಕುಣಿತ, ನಗಾರಿವಾದ್ಯ ಮಹಿಳೆಯರಿಂದ ವೀರಗಾಸೆ, ಕಂಸಾಳೆ, ಕರಡಿಕುಣಿತ ಸೇರಿದಂತೆ ಹಲವಾರು ಜಾನಪದ ಕಲೆಗಳ ಪ್ರದರ್ಶನವೂ ಇರುತ್ತದೆ.

ಮಲ್ಲಗಂಬ ಏರುವುದು, ಗುಂಡುಕಲ್ಲು ಎತ್ತುವ ಸ್ಪರ್ಧೆ, ಮಡಕೆ ಒಡೆಯುವುದು, ಹಾಲು ಕರೆಯುವ ಮತ್ತು ರಂಗೋಲಿ ಬಿಡಿಸುವ ಸ್ಪರ್ಧೆಗಳು ನಡೆಯಲಿವೆ. ಸಂಜೆ 6ಕ್ಕೆ ನಡೆಯುವ ಹಸುಗಳ ಕಿಚ್ಚು ಹಾಯಿಸುವ ಕಾರ್ಯಕ್ರಮ ಜಾತ್ರೆಯ ವಿಶೇಷ ಆಕರ್ಷಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT