ಹಬ್ಬದ ಸಂಭ್ರಮಕ್ಕೆ ತಾರಾ ಮೆರುಗು

7

ಹಬ್ಬದ ಸಂಭ್ರಮಕ್ಕೆ ತಾರಾ ಮೆರುಗು

Published:
Updated:
ಹಬ್ಬದ ಸಂಭ್ರಮಕ್ಕೆ ತಾರಾ ಮೆರುಗು

ಬಾಲ್ಯ ನೆನಪಾಗುತ್ತೆ

ಸಂಕ್ರಾಂತಿ ಅಂದ್ರೆ ಬಾಲ್ಯ ನೆನಪಾಗುತ್ತದೆ. ಹೊಸ ಬಟ್ಟೆ ಹಾಕ್ಕೊಂಡು ತಟ್ಟೆಯಲ್ಲಿ ಎಳ್ಳು, ಬೆಲ್ಲ, ಕಬ್ಬು, ಸಕ್ಕರೆ ಅಚ್ಚು ಇಟ್ಟುಕೊಂಡು ನೆಂಟರು ಮತ್ತು ಅಕ್ಕಪಕ್ಕದ ಮನೆಗಳಿಗೆ ಹೋಗಿ ಕೊಡುತ್ತಿದ್ದೆ. ನಾವು ನಾಲ್ಕು ಜನ ಮಕ್ಕಳು. ನಾನು ಚಿಕ್ಕವಳು. ತುಂಬಾ ಚಟುವಟಿಕೆಯಿಂದಿರುತ್ತಿದ್ದೆ. ಹಾಗಾಗಿ ನನ್ನನ್ನೇ ಎಳ್ಳು ಬೀರಲು ಕಳುಹಿಸುತ್ತಿದ್ದರು. ಚಂದವಾಗಿ ತಯಾರಾಗಿ ಮನೆಮನೆಗೆ ಹೋಗುವುದೇ ನನಗೆ ಸಂಭ್ರಮ. ಮನೆಯಲ್ಲಿ ಹಬ್ಬಕ್ಕಾಗಿ ವಿಭಿನ್ನ ತಿಂಡಿಗಳು ತಯಾರಾಗಿರುತ್ತಿತ್ತು. ಆಗಿನಷ್ಟು ಸಂಭ್ರಮ ಈಗಿಲ್ಲ. ಆದರೂ ಆದಷ್ಟು ಅಮ್ಮನ ಹಾಗೆ ನಾನು ಹಬ್ಬಗಳನ್ನು ಆಚರಿಸಲು ಪ್ರಯತ್ನಿಸುತ್ತೇನೆ. ನನ್ನ ಮಗಳನ್ನು ತಯಾರು ಮಾಡಿ ಎಳ್ಳು ಬೀರಲು ಕಳುಹಿಸುತ್ತೇನೆ. ಅವಳಿಗೂ ಹಬ್ಬದ ಖುಷಿ ಇದೆ.

–ಅನುರಾಧಾ ವಿಕ್ರಾಂತ್‌,  ಭರತನಾಟ್ಯ ಕಲಾವಿದೆ

*

ಕಲಾವಿದರ ಜೊತೆ ಸಂಭ್ರಮ

ಸಂಕ್ರಾಂತಿ ಹಬ್ಬದ ಸಮಯದಲ್ಲಿ ನಿರೂಪಣೆ, ನಾಟಕ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳಿರುತ್ತವೆ. ಹಾಗಾಗಿ ಹತ್ತು ವರ್ಷಗಳಿಂದ ಮನೆಯವರಿಗಿಂತ ಕಲಾಮಂದಿರದಲ್ಲಿಯೇ ಹಬ್ಬ ಆಚರಿಸಿದ್ದು ಹೆಚ್ಚು. ಚಿಕ್ಕವಳಿದ್ದಾಗ ಹೊಸ ಬಟ್ಟೆ ಸಿಗುತ್ತದೆ ಎಂಬ ಕಾರಣಕ್ಕೆ ಹಬ್ಬಕ್ಕಾಗಿ ಕಾಯುತ್ತಿದ್ದೆ. ನನ್ನ ಶಾಲಾ ಗೆಳತಿಯರು ಮನೆಯ ಸಮೀಪವೇ ಇದುದ್ದರಿಂದ ಎಲ್ಲರೂ ಹಟಕ್ಕೆ ಬಿದ್ದವರಂತೆ ಒಬ್ಬರಿಗಿಂತ ಮತ್ತೊಬ್ಬರು ಚೆನ್ನಾಗಿ ತಯಾರಿ ಆಗುತ್ತಿದ್ದೆವು. ಎಲ್ಲ ಸಮಸ್ಯೆಗಳ ಮಧ್ಯೆಯೂ ಅಮ್ಮ ನನ್ನನ್ನು ಹಿರೋಯಿನ್‌ ರೀತಿಯಲ್ಲಿ ತಯಾರಿ ಮಾಡುತ್ತಿದ್ದರು. ಸಂಕ್ರಾಂತಿ ದಿನ ನಾನು ಮನೆಗೆ ಬರುವಷ್ಟರಲ್ಲಿ 11 ಗಂಟೆ ಆಗುತ್ತಿತ್ತು. ‘ಊರು ಪೂರ್ತಿ ಇವಳು ಸಂಕ್ರಾಂತಿ ಕಾಳು ಹಂಚಿ ಬರುತ್ತಾಳೆ’ ಎಂದು ಮನೆಯವರು ತಮಾಷೆ ಮಾಡುತ್ತಿದ್ದರು. ಕಿಚ್ಚು ಹಾಯಿಸುವುದರ ಬಗ್ಗೆ ಟಿ.ವಿಯಲ್ಲಿ ನೋಡಿ ಗೊತ್ತಿತ್ತು. ಹೈಸ್ಕೂಲ್‌ನಲ್ಲಿದ್ದಾಗ ಮನೆಯ ಮೇಲೆ ಗೆಳೆಯರೊಂದಿಗೆ ಸೇರಿ ಕಿಚ್ಚು ಹಾಯಿಸುವ ತಯಾರಿ ಮಾಡಿ ಅವಾಂತರ ಮಾಡಿಕೊಂಡಿದ್ದೆವು. ಹೀಗೆ ಸಾಕಷ್ಟು ಘಟನೆಗಳು ಸಂಕ್ರಾಂತಿಯಲ್ಲಿ ನೆನಪಾಗುತ್ತದೆ.

–ನಯನಾ ಸೂಡ, ರಂಗಭೂಮಿ ಕಲಾವಿದೆ

*ಸಿಹಿ ಗಳಿಗೆಯ ನೆನಪು

ಚಿಕ್ಕವಯಸ್ಸಿನಿಂದಲೂ ಹಬ್ಬದ ದಿನ ದೇವಸ್ಥಾನಗಳಿಗೆ ಹೋಗುತ್ತೇನೆ. ಎಳ್ಳು, ಬೆಲ್ಲ ನನಗೆ ತುಂಬಾ ಇಷ್ಟ. ಮನೆಯೊಂದು ಮೂರು ಬಾಗಿಲು ಧಾರಾವಾಹಿ ಮಾಡುವಾಗ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ, ಅದನ್ನು ತೆರೆಯ ಮೇಲೂ ತೋರಿಸಿದ್ದೆವು. ಆದರೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸಂಭ್ರಮ ಇರುವುದು ಕಡಿಮೆ. ಹಾಗಾಗಿ ಅಂತಹ ಸನ್ನಿವೇಶವನ್ನು ತರುವ ಯೋಚನೆ ಮಾಡಿಲ್ಲ. ಈ ಹಬ್ಬದ ಸಲುವಾಗಿ ಹಳೆಯ ಕಹಿ ಘಟನೆಗಳನ್ನು ಮರೆತು, ಸಿಹಿ ಘಟನೆಗಳನ್ನು ಮೆಲುಕು ಹಾಕುತ್ತಾ, ಭವಿಷ್ಯದಲ್ಲಿ ಒಳ್ಳೆಯ ಕೆಲಸಗಳನ್ನೇ ಮಾಡಲು ತೀರ್ಮಾನಿಸುತ್ತೇನೆ.

–ಮೈಸೂರು ಮಂಜು, ಅಗ್ನಿಸಾಕ್ಷಿ ನಿರ್ದೇಶಕ

*ಎಳ್ಳು ಬೀರುವ ಸಂಭ್ರಮ

ಹಬ್ಬದ ದಿನ ಕುಟುಂಬದೊಂದಿಗೆ ಇರುತ್ತೇನೆ. ದೇವಸ್ಥಾನಕ್ಕೆ ಹೋಗುತ್ತೇನೆ. ಚಿಕ್ಕವಳಿದ್ದಾಗ‌ ಸಂಬಂಧಿಗಳೆಲ್ಲ ಒಟ್ಟಿಗೆ ಹಬ್ಬವನ್ನು ಆಚರಿಸುತ್ತಿದ್ದೆವು. ಎಲ್ಲರ ಮನೆಗೆ ಹೋಗಿ ಸಂಕ್ರಾಂತಿ ಕಾಳು ಹ‌ಚ್ಚಿ ಬರುತ್ತಿದ್ದೆ. ಆದರೆ ಈಗ ಎಲ್ಲರೂ ಒಟ್ಟಿಗೆ ಸೇರುವಷ್ಟು ಸಮಯ ಯಾರಿಗೂ ಇಲ್ಲ. ನನಗೆ ಸಂಕ್ರಾಂತಿ ಕಾಳೆಂದರೆ ತುಂಬಾ ಇಷ್ಟ. ಹಬ್ಬಕ್ಕೆ ಸ್ವಲ್ಪ ದಿನಗಳ ಮುಂಚೆಯೇ ಮನೆಯಲ್ಲಿ ಇದರ ತಯಾರಿ ಪ್ರಾರಂಭವಾಗುತ್ತದೆ. ಅಕ್ಕಪಕ್ಕದ ಮಕ್ಕಳೆಲ್ಲ ಸಿಂಗರಿಸಿಕೊಂಡು ಮನೆಗೆ ಬಂದು ಎಳ್ಳು ಬೀರುವುದನ್ನು ನೋಡುವುದೇ ಖುಷಿ.

–ನಿಶಾರಾ, ವಸ್ತ್ರವಿನ್ಯಾಸಕಿ

*ಸಂಕ್ರಾಂತಿ ಕಾಳು ತಿಂದಷ್ಟು ಸಾಲದು

ಸಂಕ್ರಾಂತಿ ಹಬ್ಬ ನಮ್ಮನೆಯಲ್ಲಿ ವಿಶೇಷವಾಗಿಯೇ ಆಚರಿಸುತ್ತೇವೆ. ಸಂಕ್ರಾಂತಿ ಹಿಂದಿನ ದಿನ ನನ್ನ ಹುಟ್ಟುಹಬ್ಬ ಹಾಗಾಗಿ  ಹಬ್ಬದ ಸಂಭ್ರಮ ಒಂದು ದಿನ ಮುಂಚಿತವಾಗಿಯೇ ನಮ್ಮನೆಯಲ್ಲಿ ಪ್ರಾರಂಭವಾಗುತ್ತದೆ. ಹಬ್ಬಕ್ಕೆ ಯಾರೇ ಮನೆಗೆ ಬಂದರೂ ನಾನೇ ಎಳ್ಳು, ಬೆಲ್ಲ ಕೊಡುತ್ತೇನೆ. ನನಗೆ ಸಂಕ್ರಾಂತಿ ಕಾಳು, ಕಬ್ಬು ಎಂದರೆ ತುಂಬಾ ಇಷ್ಟ. ಹಾಗಾಗಿ ನಮ್ಮನೆಯಲ್ಲಿ ಎರಡು ಡಬ್ಬಿ ಎಳ್ಳು, ಬೆಲ್ಲ ಇರುತ್ತದೆ. ಒಂದು ನನಗಾದರೆ, ಇನ್ನೊಂದು ಬೇರೆಯವರಿಗೆ ಕೊಡಲು. ಚಿಕ್ಕವಳಿದ್ದಾಗ ಸಂಕ್ರಾಂತಿ ಕಾಳಿನ 20 ಪ್ಯಾಕೆಟ್‌ ಹಂಚಲು ಕೊಟ್ಟರೆ ಅದರಲ್ಲಿ 10 ಪ್ಯಾಕೆಟ್‌ ನಾನೇ ತಿಂದು ಖಾಲಿ ಮಾಡುತ್ತಿದ್ದೆ. ಕತ್ತು ತುಂಬಾ ಸರ, ಕೈ ತುಂಬಾ ಬಳೆ, ಹಣ್ಣೆಗೆ ಕುಂಕುಮ ಹಚ್ಚಿಕೊಂಡು ತಯಾರಾಗುತ್ತಿದ್ದೆ.  ಈಗೆಲ್ಲ ಅದನ್ನು ಮಿಸ್‌ ಮಾಡಿಕೊಳ್ಳುತ್ತೇನೆ.

–ಅದಿತಿ, ನಟಿ

*ಈ ಹಬ್ಬ ನನಗೆ ವಿಶೇಷ

ವರ್ಷದ ಮೊದಲ ಹಬ್ಬ ಇದೊಂದು ಖುಷಿಯಾದರೆ ನನ್ನ ಅಜ್ಜನ ಹುಟ್ಟುಹಬ್ಬವೂ ಇದೆ ದಿನ. ಹಾಗಾಗಿ ನಮ್ಮನೆಯಲ್ಲಿ ದುಪ್ಪಟ್ಟು ಖುಷಿ. ಮಧ್ಯಾಹ್ನ ಹಬ್ಬದೂಟ ಮಾಡಿ ಸಂಜೆ ಅಜ್ಜನ ಹುಟ್ಟುಹಬ್ಬದ ಆಚರಣೆಗೆ ಹೊರಗಡೆ ಹೋಗುತ್ತೇವೆ. ನನಗೆ ಸಕ್ಕರೆ ಅಚ್ಚು ತುಂಬಾ ಇಷ್ಟ. ಮೊದಲೆಲ್ಲ ಮನೆಯಲ್ಲಿಯೇ ಮಾಡುತ್ತಿದ್ದರು. ಎಳ್ಳುಬೀರುವ ನೆಪದಲ್ಲಿ ಕುಟುಂಬದವರೆಲ್ಲ ಸೇರುತ್ತೇವೆ. ನಗರದ ಒಂದೊಂದು ಬೀದಿಯಲ್ಲಿ ನಮ್ಮ ಸಂಬಂಧಿಗಳು ಇದ್ದಾರೆ. ಹಾಗಾಗಿ ಈ ಹಬ್ಬದ ದಿನ ಚಿಕ್ಕವಳಿದ್ದಾಗ ಪೂರ್ತಿ ಬೆಂಗಳೂರು ಸುತ್ತುತ್ತಿದ್ದೆ.

–ಹಿತಾ, ನಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry