ಸಮೀಕ್ಷೆ ಆಧರಿಸಿ ಅಭ್ಯರ್ಥಿ ಗುರುತಿಸಲು ಕಾಂಗ್ರೆಸ್‌ ಚಿಂತನೆ

7
ದೆಹಲಿಯ ಖಾಸಗಿ ಸಂಸ್ಥೆ ಮೂಲಕ ಮುಖ್ಯಮಂತ್ರಿಯಿಂದ ಸಮೀಕ್ಷೆ

ಸಮೀಕ್ಷೆ ಆಧರಿಸಿ ಅಭ್ಯರ್ಥಿ ಗುರುತಿಸಲು ಕಾಂಗ್ರೆಸ್‌ ಚಿಂತನೆ

Published:
Updated:

ಬೆಂಗಳೂರು: ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಖಾಸಗಿ ಸಂಸ್ಥೆಯೊಂದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮೀಕ್ಷೆ ನಡೆಸುತ್ತಿದ್ದು, 15 ದಿನಗಳ ಒಳಗೆ ಪೂರ್ಣವಾಗಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ದೆಹಲಿಯ ಸಂಸ್ಥೆಯೊಂದು ಸ್ಥಳೀಯರ ನೆರವು ಪಡೆದು ಸಮೀಕ್ಷೆ ನಡೆಸುತ್ತಿದೆ. ಈಗಾಗಲೇ ಶೇ 50ರಷ್ಟು ಮುಗಿದಿದೆ. ಫೆಬ್ರುವರಿ ಎರಡನೆ ವಾರದಲ್ಲಿ ಪಕ್ಷದ ಪ್ರಮುಖ ನಾಯಕರ ಎದುರು ಸಮೀಕ್ಷಾ ವರದಿ ಬಹಿರಂಗಪಡಿಸಲು ಉದ್ದೇಶಿಸಲಾಗಿದೆ.

ಸಮೀಕ್ಷೆಯಲ್ಲಿ 22 ಪ್ರಶ್ನೆಗಳನ್ನು ಮತದಾರರಿಗೆ ಕೇಳಲಾಗಿದೆ. ರಾಜ್ಯ ಸರ್ಕಾರದ ಸಾಧನೆ, ಮುಖ್ಯಮಂತ್ರಿ ವರ್ಚಸ್ಸು, ಸಚಿವರ, ಶಾಸಕರ ಜನಪ್ರಿಯತೆ, ಕಾರ್ಯದಕ್ಷತೆ, ಆಡಳಿತ ವಿರೋಧಿ ಅಲೆ, 2013ರ ವಿಧಾನಸಭೆ ಮತ್ತು 2014 ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತ ನೀಡಿದ್ದೀರಿ, ಕಳೆದ ಚುನಾವಣೆಯಲ್ಲಿ ಸೋತ ಕ್ಷೇತ್ರದಲ್ಲಿರುವ 3– 4 ಆಕ್ಷಾಂಕ್ಷಿಗಳ ಪೈಕಿ ಯಾರು ಅಭ್ಯರ್ಥಿಯಾದರೆ ಸೂಕ್ತ, ಚುನಾವಣೆಯಲ್ಲಿ ಮುಖ್ಯವಾಗುವ ವಿಚಾರಗಳೇನು ಮುಂತಾದ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನಾವಳಿಗಳಿವೆ ಎಂದು ಗೊತ್ತಾಗಿದೆ.

ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಪರವಾಗಿ ಮುಖ್ಯಮಂತ್ರಿ ಈ ಸಮೀಕ್ಷೆ ನಡೆಸುತ್ತಿದ್ದಾರೆ. ಖಾಸಗಿ ಸಂಸ್ಥೆಯ 150 ಮಂದಿ ಈ ಕಾರ್ಯದಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಪ್ರತಿ ಕ್ಷೇತ್ರಗಳಲ್ಲಿ ಆ ಕ್ಷೇತ್ರಗಳಿಗೆ ಸೇರದವರನ್ನೂ ಸಮೀಕ್ಷೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಸಮೀಕ್ಷೆಯ ಫಲಿತಾಂಶದ ಮೇಲೆ ಸಂಭಾವ್ಯ ಅಭ್ಯರ್ಥಿಯನ್ನು ಗುರುತಿಸಿ ಹೈಕಮಾಂಡ್‌ಗೆ ಶಿಫಾರಸು ಮಾಡಲು ಚಿಂತನೆ ನಡೆದಿದೆ.

‘ಅತ್ಯಂತ ವೈಜ್ಞಾನಿಕವಾಗಿ ಈ ಸಮೀಕ್ಷೆ ನಡೆಯಲಿದ್ದು, ನಿಖರ ಫಲಿತಾಂಶ ನಿರೀಕ್ಷಿಸಲಾಗಿದೆ. ಹೀಗಾಗಿ, ಇದನ್ನು ಆಧರಿಸಿಯೇ ಪಕ್ಷದ ರಾಜ್ಯ ನಾಯಕರು ಅಭ್ಯರ್ಥಿ ಹೆಸರು ಅಂತಿಮಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ ಬಂಡಾಯದ ಮಾತುಗಳು ಕೇಳಿಬಂದರೆ, ಅದರ ಶಮನಕ್ಕೆ ಮತ್ತು ಒಗ್ಗಟ್ಟು ಪ್ರದರ್ಶಿಸಲು ಸಮೀಕ್ಷೆ ಫಲಿತಾಂಶವನ್ನೇ ಆಧಾರವಾಗಿ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry