ಬಶೀರ್‌ ಕೊಲೆ ಕೇರಳದ ಇಬ್ಬರ ಬಂಧನ

7

ಬಶೀರ್‌ ಕೊಲೆ ಕೇರಳದ ಇಬ್ಬರ ಬಂಧನ

Published:
Updated:

ಮಂಗಳೂರು: ಜನವರಿ 3ರಂದು ಕಾಟಿಪಳ್ಳ ದೀಪಕ್‌ ರಾವ್‌ ಕೊಲೆಗೆ ಪ್ರತೀಕಾರವಾಗಿ ಅದೇ ದಿನ ರಾತ್ರಿ ಕೊಟ್ಟಾರ ಚೌಕಿಯಲ್ಲಿ ನಡೆದ ಅಬ್ದುಲ್‌ ಬಶೀರ್‌ ಮೇಲಿನ ದಾಳಿ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕೇರಳದ ಕಾಸರಗೋಡು ಜಿಲ್ಲೆಯ ಮತ್ತಿಬ್ಬರು ಯುವಕರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

‘ಕಾಸರಗೋಡು ಸಮೀ‍ಪದ ಮೊಗ್ರಾಲ್‌ನ ಗಾಂಧಿನಗರದ ನಿವಾಸಿ ಲತೀಶ್‌ (24) ಮತ್ತು ಕಾಸರಗೋಡು ನಗರದ ವಿದ್ಯಾನಗರ ನಿವಾಸಿ ಪುಷ್ಪರಾಜ್‌ (23) ಬಂಧಿತರು. ಈ ಇಬ್ಬರೂ ಈಗಾಗಲೇ ಬಂಧಿತರಾಗಿರುವ ನಾಲ್ವರ ಜತೆ ಕೃತ್ಯದಲ್ಲಿ ಭಾಗಿಯಾಗಿದ್ದರು’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್ ತಿಳಿಸಿದ್ದಾರೆ.

ಜ.3ರ ರಾತ್ರಿ 10 ಗಂಟೆ ಸುಮಾರಿಗೆ ನಗರದ ಕೊಟ್ಟಾರ ಚೌಕಿ ಬಳಿ ಫಾಸ್ಟ್ ಫುಡ್‌ ಮಳಿಗೆಯ ಬಾಗಿಲು ಮುಚ್ಚಿ ಮನೆಗೆ ತೆರಳುತ್ತಿದ್ದ ಬಶೀರ್‌ ಮೇಲೆ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಜ.7ರಂದು ನಗರದ ಎ.ಜೆ.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಈ ಕೃತ್ಯದಲ್ಲಿ ಕಾಸರಗೋಡು ನಗರದ ಪಿ.ಕೆ.ಶ್ರೀಜಿತ್ ಅಲಿಯಾಸ್‌ ಶ್ರೀಜು, ಮಂಗಳೂರಿನ ಪಡೀಲ್‌ನ ಕಿಶನ್ ಪೂಜಾರಿ, ಧನುಷ್ ಪೂಜಾರಿ ಮತ್ತು ಕಾಸರಗೋಡಿನ ಸಂದೇಶ್ ಕೋಟ್ಯಾನ್ ಎಂಬುವವರನ್ನು ನಗರ ಅಪರಾಧ ಘಟಕದ ಪೊಲೀಸರು ಬಂಧಿಸಿದ್ದರು. ಈ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಲತೀಶ್‌ ಮತ್ತು ಪುಷ್ಪರಾಜ್‌ ಕೂಡ ಕೃತ್ಯದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿತ್ತು. ಸಿಸಿಬಿ ಇನ್‌ಸ್ಪೆಕ್ಟರ್‌ ಶಾಂತಾರಾಂ, ಸಬ್‌ ಇನ್‌ಸ್ಪೆಕ್ಟರ್‌ ಶ್ಯಾಮ್ ಸುಂದರ್ ಮತ್ತು ತಂಡ ಇವರನ್ನು ಬಂಧಿಸಿದೆ.

‘ಎಲ್ಲ ಆರೋಪಿಗಳೂ ಕಂಕನಾಡಿ ಗರಡಿ ಜಾತ್ರೆಯಲ್ಲಿ ಒಟ್ಟಾಗಿದ್ದರು. ಅಲ್ಲಿಂದ ಕಿಶನ್‌ ಪೂಜಾರಿ ಮತ್ತು ಧನುಷ್‌ ಪೂಜಾರಿ ಮನೆಗೆ ಹೋಗಿ ಮಾರಕಾಸ್ತ್ರಗಳನ್ನು ತಂದಿದ್ದರು. ಈಗ ಬಂಧಿತರಾಗಿರುವ ಲತೀಶ್‌ ಮತ್ತು ಪುಷ್ಪರಾಜ್‌ ಆರೋಪಿಗಳ ತಂಡ ಗರಡಿಯಿಂದ ಪಡೀಲ್‌ಗೆ ಹೋಗಿ ಅಲ್ಲಿಂದ ಕೊಟ್ಟಾರ ಚೌಕಿಗೆ ಬಂದು ಕೃತ್ಯ ಎಸಗಿ ಮಂಜೇಶ್ವರದ ಕಡೆಗೆ ಪರಾರಿಯಾಗುವವರೆಗೂ ಮೋಟರ್‌ ಬೈಕ್‌ ಚಾಲನೆ ಮಾಡಿದ್ದರು’ ಎಂದು ಮೂಲಗಳು ತಿಳಿಸಿವೆ.

ಆರೋಪಿಗಳು ಯಾವುದೇ ಸಂಘಟನೆ ಜೊತೆ ನಂಟು ಹೊಂದಿರುವ ಮಾಹಿತಿ ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ವಿಚಾರಣೆ ಮುಂದುವರಿದಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry