ಬಡ್ತಿ ಮೀಸಲು: ‘ಸುಪ್ರೀಂ’ ಆದೇಶ ಪಾಲಿಸಲು ವಿಫಲ

5

ಬಡ್ತಿ ಮೀಸಲು: ‘ಸುಪ್ರೀಂ’ ಆದೇಶ ಪಾಲಿಸಲು ವಿಫಲ

Published:
Updated:

ಬೆಂಗಳೂರು: ಬಡ್ತಿ ಮೀಸಲು ಕಾಯ್ದೆ– 2002 ಅನ್ನು ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್, ಸರ್ಕಾರಿ ನೌಕರರ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ, ಮುಂಬಡ್ತಿ ನೀಡುವ ಪ್ರಕ್ರಿಯೆಯನ್ನು ಜನವರಿ 15ರೊಳಗೆ ಪೂರ್ಣಗೊಳಿಸುವಂತೆ ನೀಡಿದ್ದ ಆದೇಶ ಪಾಲಿಸಲು ರಾಜ್ಯ ಸರ್ಕಾರ ವಿಫಲವಾಗಿದೆ.

1978ರಿಂದ ಅನ್ವಯವಾಗುವಂತೆ ಜ್ಯೇಷ್ಠತಾ ಪಟ್ಟಿ ಪರಿಷ್ಕೃರಿಸುವ ಕಾರ್ಯ ಪೂರ್ಣಗೊಳಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌), ಬಡ್ತಿ ಪ್ರಕ್ರಿಯೆಗೆ ಇನ್ನಷ್ಟು ಕಾಲಾವಕಾಶ ಕೇಳಲು ಸೋಮವಾರವೇ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ಮುಂದಾಗಿದೆ.

ಈ ಮಧ್ಯೆ, ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಿಕೊಂಡು ಬಂದಿರುವ ಅಹಿಂಸಾ (ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗದ ನೌಕರರ ಒಕ್ಕೂಟ), ಈಗಾಗಲೇ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಹಿತ ಕಾಪಾಡಲು ರಾಜ್ಯ ಸರ್ಕಾರ ತಂದಿರುವ ಬಡ್ತಿ ಮೀಸಲು ಮಸೂದೆ ರಾಷ್ಟ್ರಪತಿ ಅಂಗಳದಲ್ಲಿದೆ.

ಕಾಯ್ದೆ ರದ್ದುಪಡಿಸಿ 2017ರ ಫೆ. 9ರಂದು ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ಆರು ತಿಂಗಳಲ್ಲಿ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿ ಬಡ್ತಿ ಪ್ರಕ್ರಿಯೆ ನಡೆಸುವಂತೆ ಸೂಚಿಸಿತ್ತು. ಆರು ತಿಂಗಳ ಕಾಲಾವಕಾಶ ಮುಗಿಯುತ್ತಿದ್ದಂತೆ ಮತ್ತಷ್ಟು ಕಾಲಾವಕಾಶ ಕೋರಿದ್ದ ಸರ್ಕಾರ, ಜ. 15ರವರೆಗೆ ಸಮಯ ಪಡೆದುಕೊಂಡಿತ್ತು. ಅದರಂತೆ 2017ರ ನವೆಂಬರ್ 30ರೊಳಗೆ ಹೊಸ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಬೇಕಿತ್ತು. ಆದರೆ, ಈ ಕಾರ್ಯ ವಿಳಂಬವಾಗಿದೆ ಎಂದು ಡಿಪಿಎಆರ್‌ ಮೂಲಗಳು ತಿಳಿಸಿವೆ.

ಲೋಕೋಪಯೋಗಿ, ಅರಣ್ಯ, ವಿಧಾನಸಭೆ ಸಚಿವಾಲಯ ಸಿದ್ಧಪಡಿಸಿರುವ ವಿವಿಧ ವೃಂದಗಳ ಪರಿಷ್ಕೃತ ಜ್ಯೇಷ್ಠತಾ ಪಟ್ಟಿಯಲ್ಲಿ ಲೋಪಗಳಿವೆ ಎಂಬ ಆರೋಪ ಕೇಳಿಬಂದಿದೆ. ಅಹಿಂಸಾ ಸಂಘಟನೆ ಈಗಾಗಲೇ ಈ ಬಗ್ಗೆ ಡಿಪಿಎಆರ್‌ಗೆ ದೂರು ಸಲ್ಲಿಸಿದ್ದು, ನ್ಯಾಯಾಲಯದಲ್ಲೂ ಪ್ರಶ್ನಿಸಲು ತೀರ್ಮಾನಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry