ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ 30 ಸಾವಿರ ‘ಶಕ್ತಿ ಕೇಂದ್ರ’ಗಳು !

ಮತದಾರರ ಮನೆ ಬಾಗಿಲು ತಟ್ಟಲು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರ ತಯಾರಿ
Last Updated 14 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮನವೊಲಿಸಿ, ಪಕ್ಷದ ಪರವಾಗಿ ಮತಚಲಾಯಿಸುವಂತೆ ಮಾಡಲು ಬಿಜೆಪಿ ಸುಮಾರು 30,000 ‘ಶಕ್ತಿ ಕೇಂದ್ರ’ಗಳನ್ನು ಸ್ಥಾಪಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

ಈ ಶಕ್ತಿ ಕೇಂದ್ರಗಳು ಪಕ್ಷವನ್ನು ಅಧಿಕಾರದ ದಡಕ್ಕೆ ಮುಟ್ಟಿಸುವ ಪ್ರಮುಖ ಸಾಧನ ಎಂದು ಬಿಜೆಪಿ ಪರಿಗಣಿಸಿದೆ. ಈಗಾಗಲೇ ಶೇ 30 ರಷ್ಟು ಶಕ್ತಿ ಕೇಂದ್ರಗಳ ಸ್ಥಾಪನೆ ಆಗಿದೆ. ಫೆಬ್ರುವರಿ ಕೊನೆಯೊಳಗೆ ಶೇ100 ರಷ್ಟು ಕೇಂದ್ರಗಳ ಸ್ಥಾಪನೆ ಕಾರ್ಯ ಪೂರ್ಣಗೊಳ್ಳಲಿದೆ.

‘ಶಕ್ತಿ ಕೇಂದ್ರಗಳ ಪ್ರಯೋಗವನ್ನು ಇತ್ತೀಚೆಗೆ ಗೆದ್ದ ಎಲ್ಲ ರಾಜ್ಯಗಳ ಚುನಾವಣೆಗಳಲ್ಲೂ ಮಾಡಿದೆ. ಕರ್ನಾಟಕದ ಮಟ್ಟಿಗೆ ಈ ಪ್ರಯೋಗ ಹೊಸತು’ ಎಂದು ಬಿಜೆಪಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಈ ಕೇಂದ್ರಗಳ ಚಟುವಟಿಕೆಗಳು ಮತ್ತು ಸದಸ್ಯರ ಕಾರ್ಯ ನಿರ್ವಹಣೆಯ ಉಸ್ತುವಾರಿ ನೇರವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರೇ ವಹಿಸುತ್ತಾರೆ. ಆನ್‌ಲೈನ್‌ ಮೂಲಕವೇ ಶಕ್ತಿಕೇಂದ್ರಗಳ ಚಟುವಟಿಕೆ ಮಾಹಿತಿಯನ್ನು ಪಡೆಯುತ್ತಾರೆ ಎಂದು ಮೂಲಗಳು ಹೇಳಿವೆ.

ಚುನಾವಣಾ ಸಂದರ್ಭದಲ್ಲಿ ಒಂದು ಕಡೆ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಅಬ್ಬರದ ಪ್ರಚಾರ ನಡೆಸಿದರೆ, ಶಕ್ತಿ ಕೇಂದ್ರಗಳು ತಳಮಟ್ಟದಲ್ಲಿ ಮತದಾರರ ಮನೆ ಬಾಗಿಲು ತಟ್ಟಿ, ಅವರ ಮನವೊಲಿಸುವ ಕೆಲಸ ಮಾಡುತ್ತವೆ. ಪ್ರತಿ ಐದು ಮತಗಟ್ಟೆಗಳಿಗೊಂದು ಶಕ್ತಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಪ್ರತಿ ಶಕ್ತಿ ಕೇಂದ್ರಕ್ಕೊಬ್ಬ ಅಧ್ಯಕ್ಷ ಇರುತ್ತಾರೆ. ಒಂದು ಶಕ್ತಿ ಕೇಂದ್ರದಲ್ಲಿ 50 ರಿಂದ 100 ಸದಸ್ಯರು ಇರುತ್ತಾರೆ. ಈ ಅಧ್ಯಕ್ಷರೊಂದಿಗೆ ಕೇಂದ್ರದಲ್ಲಿ ಅಮಿತ್‌ ಷಾ ಮತ್ತು ರಾಜ್ಯದಲ್ಲಿ ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌ ನಿರಂತರ ಸಂಪರ್ಕದಲ್ಲಿರುತ್ತಾರೆ. ಹೀಗೆ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಫೆಬ್ರುವರಿ ಅಂತ್ಯದೊಳಗೆ ಕಣಕ್ಕೆ ಇಳಿಸಲಾಗುವುದು.

ಒಂದು ಶಕ್ತಿ ಕೇಂದ್ರದ ಸದಸ್ಯರು ಮತ್ತೊಂದು ಶಕ್ತಿ ಕೇಂದ್ರದ ವ್ಯಾಪ್ತಿಗೆ ತಲೆ ಹಾಕುವಂತಿಲ್ಲ. ರಾಜ್ಯ ನಾಯಕರೂ ಹಸ್ತಕ್ಷೇಪ ಮಾಡುವಂತಿಲ್ಲ. ಸದಸ್ಯರು ಎಲ್ಲಿ ಹೋಗುತ್ತಾರೆ. ಪಕ್ಷದ ಪರವಾಗಿ ಹೇಗೆ ಕೆಲಸ ಮಾಡುತ್ತಾರೆ ಎಂಬ ಮಾಹಿತಿ ಷಾ ಮತ್ತು ಅರುಣ್‌ ಕುಮಾರ್‌ ಅವರಿಗೆ ತಲುಪುತ್ತದೆ. ಅವರಿಗೆ ಅಗತ್ಯ ಸಲಹೆ, ಸೂಚನೆ ಮತ್ತು ಮಾರ್ಗದರ್ಶನವನ್ನು ನೀಡುತ್ತಾರೆ. ಐದು ಮನೆಗಳಿಗೊಬ್ಬ ಸದಸ್ಯ ಭೇಟಿ ನೀಡಬೇಕು. ತನಗೆ ನಿಗದಿ ಮಾಡಿದ ರಸ್ತೆ ಅಥವಾ ಬೀದಿಯಲ್ಲಿ ವ್ಯಾಪ್ತಿಯನ್ನು ವಿಧಾನಸಭಾ ಚುನಾವಣೆ ಮುಗಿಯುವವರೆಗೂ ನೋಡಿಕೊಳ್ಳಬೇಕು. ಆ ಪ್ರದೇಶದಲ್ಲೇ ವಾಸ್ತವ್ಯ ಹೂಡಬೇಕು ಎಂಬ ಸೂಚನೆ ನೀಡಲಾಗಿದೆ ಮೂಲಗಳು ಹೇಳಿವೆ.

ತಂಡಗಳಿಗೆ ಸಮರ್ಪಿತ ಕಾರ್ಯಕರ್ತರನ್ನೇ ಸದಸ್ಯರನ್ನಾಗಿ ಆಯ್ಕೆ ಮಾಡಲಾಗುತ್ತದೆ. ವಿಧಾನಸಭಾ ಚುನಾವಣೆ ಬಳಿಕವೂ ಶಕ್ತಿ ಕೇಂದ್ರ ಸಕ್ರಿಯವಾಗಿರಲಿದ್ದು, 2019 ರಲ್ಲಿ ನಡೆಯುವ ಲೋಕಸಭಾ ಚುನಾವಣೆ ಮುಗಿಯುವವರೆಗೂ ಕಾರ್ಯನಿರ್ವಹಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ನವಶಕ್ತಿ ಸಮಾವೇಶಗಳು:

ಬಿ.ಎಸ್‌.ಯಡಿಯೂರಪ್ಪ ಅವರ ಪರಿವರ್ತನಾ ಯಾತ್ರೆ ಪೂರ್ಣಗೊಳ್ಳುತ್ತಿದ್ದಂತೆ 224 ವಿಧಾನಸಭಾ ಕ್ಷೇತ್ರಗಳಲ್ಲೂ ‘ನವಶಕ್ತಿ ಸಮಾವೇಶ’ಗಳನ್ನು ನಡೆಸಲು ಬಿಜೆಪಿ ತೀರ್ಮಾನಿಸಿದೆ.  ಪ್ರತಿ ಬೂತ್‌ ಕಮಿಟಿಯ ಅಧ್ಯಕ್ಷರು, ಮಹಿಳಾ ಮುಖಂಡರು, ಪರಿಶಿಷ್ಟಜಾತಿ ಮತ್ತು ಪಂಗಡಗಳ ಪ್ರತಿನಿಧಿಗಳ ಸೇರಿ ಒಂಭತ್ತು ಮಂದಿ ಈ ಸಮಾವೇಶದಲ್ಲಿ ಭಾಗವಹಿಸುತ್ತಾರೆ ಎಂದೂ ಮೂಲಗಳು ಹೇಳಿವೆ.

6 ವಿಭಾಗಗಳಿಗೆ ಪ್ರತ್ಯೇಕ ಕಾರ್ಯತಂತ್ರ:

ರಾಜ್ಯವನ್ನು ಆರು ಭಾಗಗಳನ್ನಾಗಿ ವಿಂಗಡಿಸಿ ಪ್ರತಿಯೊಂದಕ್ಕೂ ಪ್ರತ್ಯೇಕ ಚುನಾವಣಾ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಪ್ರತಿ ವಿಭಾಗಕ್ಕೂ ಕೇಂದ್ರದ ಒಬ್ಬ ನಾಯಕನನ್ನು ಉಸ್ತುವಾರಿಯಾಗಿ ಜವಾಬ್ದಾರಿ ನೀಡಲಾಗುತ್ತದೆ. ರಾಜ್ಯದ ಕಾರ್ಯದರ್ಶಿ ಅಥವಾ ಪ್ರಧಾನಕಾರ್ಯದರ್ಶಿಗಳನ್ನೂ ನೇಮಕ ಮಾಡಲಾಗುತ್ತದೆ. ಪ್ರತಿ ವಿಭಾಗಕ್ಕೂ ಪ್ರತ್ಯೇಕ ‘ವಾರ್‌ ರೂಮ್‌’ ಇರುತ್ತದೆ. ಸೋಷಿಯಲ್‌ ಮೀಡಿಯಾ ಗ್ರೂಪ್‌ ಇರುತ್ತದೆ. ಆಯಾ ವಿಭಾಗ ವಿಷಯಗಳಿಗೆ ಅನುಗುಣವಾಗಿ ಕಾರ್ಯತಂತ್ರ ರೂಪಿಸಲಾಗುತ್ತದೆ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT