ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಮೀಸಲಾತಿ: ಮತ್ತೊಂದು ಸಭೆ ನಡೆಸಿ ಅಂತಿಮ ತೀರ್ಮಾನ

Last Updated 14 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ಸದಾಶಿವ ಆಯೋಗ ಸಲ್ಲಿಸಿರುವ ವರದಿ ಕುರಿತು ಅಡ್ವೊಕೇಟ್‌ ಜನರಲ್‌ ಮತ್ತು ಕಾನೂನು ತಜ್ಞರ ಅಭಿಪ್ರಾಯ ಪಡೆದ ಬಳಿಕ ಮತ್ತೊಂದು ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಆಯೋಗದ ಶಿಫಾರಸುಗಳ ಕುರಿತು ದಲಿತ ಸಮುದಾಯದ ಜನಪ್ರತಿನಿಧಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದರು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ‘ಮುಖ್ಯಮಂತ್ರಿ ನೀಡಿದ ಈ ಸಲಹೆಗೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು’ ಎಂದರು.

‘ಸದಾಶಿವ ಆಯೋಗದ ವರದಿಯಲ್ಲಿರುವ ಅಂಕಿಅಂಶಗಳು ಮತ್ತು ಶಿಫಾರಸುಗಳ ಬಗ್ಗೆ ತಿಳಿಸುವಂತೆ ಸಭೆಯಲ್ಲಿ ಭಾಗವಹಿಸಿದರು ಒತ್ತಾಯಿಸಿದರು. ಪರಿಶಿಷ್ಟ ಜಾತಿ ಪಟ್ಟಿಯಿಂದ ಭೋವಿ ಮತ್ತು ಲಂಬಾಣಿ ಜಾತಿ ಕೈಬಿಡಬೇಕೆಂಬ ಪ್ರಸ್ತಾಪವೂ ಸಭೆಯಲ್ಲಿ ಕೇಳಿಬಂತು. ಆದರೆ, ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಅಂಥ ಯಾವುದೇ ಪ್ರಸ್ತಾವ ನಮ್ಮ ಮುಂದಿಲ್ಲ. ಎರಡೂ ಜಾತಿಗಳನ್ನು ಕೈಬಿಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು’ ಎಂದು ಆಂಜನೇಯ ಹೇಳಿದರು.

‘ವರದಿ ಬಗ್ಗೆ ಹಲವು ದಿನಗಳಿಂದ ಪರ –ವಿರೋಧ ಹೋರಾಟಗಳು ನಡೆಯುತ್ತಿವೆ. ಈ ಕಾರಣಕ್ಕೆ, ಪರ ಮತ್ತು ವಿರೋಧ ಇರುವವರನ್ನು ಕರೆದು ಸಭೆ ನಡೆಸುವ ಮೂಲಕ ಮುಕ್ತ ಮಾತುಕತೆಗೆ ಮುಖ್ಯಮಂತ್ರಿ ವೇದಿಕೆ ಕೊಟ್ಟರು. ಎಲ್ಲರೂ ಅವರವರ ಅಭಿಪ್ರಾಯಗಳನ್ನು ಮಂಡಿಸಿದರು. ಎಲ್ಲರ ಮಾತುಗಳನ್ನು ಆಲಿಸಿದ ಮುಖ್ಯಮಂತ್ರಿ, ಯಾರಿಗೂ ಅನ್ಯಾಯ ಆಗದಂತೆ, ಸಾಮಾಜಿಕ ನ್ಯಾಯದಡಿ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದರು’ ಎಂದೂ ಅವರು ತಿಳಿಸಿದರು.

‘ಈ ಹಿಂದೆಯೂ ಒಮ್ಮೆ ಸಚಿವ ಸಂಪುಟದ ಮುಂದೆ ಸದಾಶಿವ ಆಯೋಗದ ವರದಿ ಬಂದಿತ್ತು. ಆಗಲೂ ಕಾನೂನು ಅಭಿಪ್ರಾಯ ಪಡೆಯಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ವರದಿ ಕುರಿತು ಚರ್ಚೆ ನಡೆದಿರಲಿಲ್ಲ’ ಎಂದು ನೆನಪಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆಂಜನೇಯ, ‘ಕಾನೂನು ಸಲಹೆ ಪಡೆಯುವ ಸಂಬಂಧ ಯಾವುದೇ ಗಡುವು ವಿಧಿಸಿಲ್ಲ. ಆದರೆ, ಆದಷ್ಟು ಶೀಘ್ರ ಸಲಹೆ ಪಡೆಯಲಾಗುವುದು. ಸಾಂವಿಧಾನಾತ್ಮಕ ಅಂಶಗಳ ಕುರಿತು ಸಲಹೆ ಪಡೆಯಲಾಗುವುದು’ ಎಂದು ವಿವರಿಸಿದರು.

ವರದಿ ಅನುಷ್ಠಾನದ ಬಗ್ಗೆ ನಿಮ್ಮ ವೈಯಕ್ತಿಕ ಅಭಿಪ್ರಾಯವೇನು ಎಂದು ಕೇಳಿದಾಗ, ‘ಈವರೆಗೆ ವರದಿಯನ್ನು ಕತ್ತಲಲ್ಲಿ ಇಟ್ಟು ಚರ್ಚೆ ಮಾಡುತ್ತಿದ್ದೆವು. ಮೊದಲ ಬಾರಿಗೆ ಹೊರಗಡೆ ತಂದು ಚರ್ಚೆ ಮಾಡಿದ್ದೇವೆ. ವರದಿ ಬಗ್ಗೆ ಮುಖ್ಯಮಂತ್ರಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹಿಂದೆಯೇ ನಾನು ಹೇಳಿದ್ದೇನೆ. ಹೀಗಾಗಿ, ಮತ್ತೆ ಹೇಳುವಂಥದ್ದು ಏನೂ ಇಲ್ಲ’ ಎಂದರು.

ಪ್ರತಿಭಟನೆನಿರತರ ಜೊತೆ ಸಭೆ ಇಂದು

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಮಾದಿಗ ದಂಡೋರ ಸೇರಿದಂತೆ ಹಲವು ದಲಿತ ಸಂಘಟನೆಗಳು ಧರಣಿ ನಡೆಸುತ್ತಿವೆ. ಈ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸೋಮವಾರ (ಜ.15) ಸಂಜೆ 5 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ ಎಂದು ಆಂಜನೇಯ ಹೇಳಿದರು.

ಕಾನೂನು ಸಲಹೆ ಪಡೆಯಬೇಕಿಲ್ಲ

ನಾನು ನೀಡಿರುವ ವರದಿಗೆ ಸಂಬಂಧಪಟ್ಟಂತೆ ಕಾನೂನು ಸಲಹೆ ಪಡೆಯುವ ಅಗತ್ಯ ಇಲ್ಲ. ನಿಯಮಬದ್ಧವಾಗಿ ನಿಯಮಬದ್ಧವಾಗಿಯೇ ಅಧ್ಯಯನ ಮಾಡಿ ವರದಿ ಕೊಟ್ಟಿದ್ದೇನೆ’ ಎಂದು ನ್ಯಾಯಮೂರ್ತಿ ಎ.ಜೆ. ಸದಾಶಿವ ಹೇಳಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ಸರ್ಕಾರಕ್ಕೆ ಸದ್ಯಕ್ಕೆ ಇರುವುದು ಎರಡೇ ದಾರಿ. ಅದನ್ನು ಒಪ್ಪುವುದು ಅಥವಾ ತಿರಸ್ಕರಿಸುವುದು. ಅದನ್ನು ಬಿಟ್ಟು ಕಾಲಹರಣ ಮಾಡಲು ಕಾನೂನು ಸಲಹೆ ಪಡೆಯಲು ತೀರ್ಮಾನಿಸಲಾಗಿದೆ’ ಎಂದೂ ಹೇಳಿದರು.

‘ನಾನು ನೀಡಿದ ವರದಿ ವೈಜ್ಞಾನಿಕವಾಗಿದ್ದು, ರಾಜ್ಯ ಸರ್ಕಾರ ಒಪ್ಪಿದರೆ, ಸಂಬಂಧಪಟ್ಟ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ತಮಿಳುನಾಡು, ಆಂಧ್ರಪ್ರದೇಶ, ಪಂಜಾಬ್‌ ಇದೇ ರೀತಿ ಸಲ್ಲಿಸಿದ ವರದಿಗಳು ಕೇಂದ್ರದ ಮುಂದಿವೆ’ ಎಂದರು.

‘ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಜನಗಣತಿಗೆ ಪೂರಕವಾಗಿಯೇ ನನ್ನ ವರದಿ ಇದೆ. ಸಮುದಾಯಗಳ ಜನರ ಲೆಕ್ಕಾಚಾರದಲ್ಲಿ 50 ಸಾವಿರದಷ್ಟು ವ್ಯತ್ಯಾಸ ಇರಬಹುದು. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಂದಾಯ ಅಧಿಕಾರಿಗಳು ಹಳ್ಳಿ, ಹಳ್ಳಿಗಳಿಗೆ, ಮನೆ– ಮನೆಗಳಿಗೂ ತೆರಳಿ ಸಮೀಕ್ಷೆ ನಡೆಸಿದ್ದಾರೆ. ರಾಜಕೀಯ ಕಾರಣಕ್ಕೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಾದರೆ ಬೇರೆ ಕಾರಣ ಕೊಡಬಹುದಿತ್ತು’ ಎಂದೂ ಹೇಳಿದರು.

‘ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿ ಆಗಿದ್ದಾಗ ಈ ವರದಿ ನೀಡಿದ್ದೇನೆ. ಆರು ವರ್ಷವಾದರೂ ಸರ್ಕಾರ ಇದನ್ನು ಒಪ್ಪಿಕೊಂಡಿಲ್ಲ’ ಎಂದು ಸದಾಶಿವ ವಿಷಾದಿಸಿದರು.

ವರದಿಯಲ್ಲಿ ಒಂದು ಪ್ಯಾರಾದಷ್ಟು ಕೈಬರಹದಲ್ಲಿದೆ ಎಂಬ ವದಂತಿಗೆ, ‘ನಾನು ಕೈ ಬರಹದಲ್ಲಿ ಏನನ್ನೂ ಬರೆದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಆಯೋಗ ಶಿಫಾರಸು ಮಾಡಿದ ಮೀಸಲು
ಜಾತಿ -          ಶೇಕಡಾ

ಪರಿಶಿಷ್ಟ ಜಾತಿ ಬಲಗೈ ಬಣ– 5

ಪರಿಶಿಷ್ಟ ಜಾತಿ ಎಡಗೈ ಬಣ–6

ಅಸ್ಪೃಶ್ಯರಲ್ಲದ ಪರಿಶಿಷ್ಟ ಜಾತಿ–3

ದಕ್ಷಿಣ ಕನ್ನಡದ ಪ್ರತ್ಯೇಕ ಪರಿಶಿಷ್ಟ ಜಾತಿ– 1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT