ನಾವು ಮತ್ತು ನಮ್ಮ ದೇಶ

7

ನಾವು ಮತ್ತು ನಮ್ಮ ದೇಶ

Published:
Updated:

ವಾಯವ್ಯ ಕಣಿವೆಗಳ ಮೂಲಕ ನಮ್ಮ ದೇಶ ಪ್ರವೇಶಿಸಿದ ವಿದೇಶಿ ಆಕ್ರಮಣಕಾರರಿಗೆ ಮೊದಲು ಎದುರಾದದ್ದು ಸಿಂಧೂ ನದಿ. ನೀರಿನ ಸಮೃದ್ಧಿಯ ಕಾರಣ ಈ ಪ್ರದೇಶದಲ್ಲಿ ನೆಲೆ ನಿಂತ ಅವರು ಅದನ್ನು ‘ಸಿಂಧೂ ದೇಶ’ ಎಂದು ಕರೆದರು. ಬಳಕೆಯಲ್ಲಿ ಇದು ‘ಹಿಂದೂ ದೇಶ’ ಆಯಿತು. ಆದ್ದರಿಂದ ಹಿಂದೂ ಶಬ್ದಕ್ಕೆ ಇತಿಹಾಸವಿಲ್ಲ. ಇದು ಇತ್ತೀಚಿನದು. ಹಿಂದೂ ದೇಶ ಎಂಬುದು ಒಂದು ಸೀಮಿತ ಪ್ರದೇಶಕ್ಕೆ ಅನ್ವಯವಾಗುವ ಹೆಸರು. ಹಾಗಾಗಿ ಈ ಹೆಸರನ್ನು ಇಡೀ ದೇಶಕ್ಕೆ ಅನ್ವಯಿಸಬಾರದು ಎಂಬುದು ಕೆಲವರ ವಾದ. ಹಾಗೆಯೇ ‘ಹಿಂದುಸ್ತಾನ’. ಇದಕ್ಕೂ ಆಕ್ಷೇಪಗಳಿವೆ.

ವಾಸ್ತವವಾಗಿ ನಮ್ಮ ದೇಶ ಎರಡು ಭಾಗಗಳಾಗಿ ಒಡೆದದ್ದೇ ಹಿಂದೂ ಧರ್ಮ ಮತ್ತು ಮುಸ್ಲಿಂ ಧರ್ಮಗಳ ಹೆಸರಿನಲ್ಲಿ. ಹಿಂದುಸ್ತಾನ ಎಂಬ ಹೆಸರು ಅಪಥ್ಯವಾಗಿದ್ದವರನ್ನು ಕುರಿತು ಒಮ್ಮೆ ನಮ್ಮ ಮಾಜಿ ಪ್ರಧಾನಿಯೊಬ್ಬರು, ‘ನೆರೆಯ ಪಾಕಿಸ್ತಾನವೇ ನಮ್ಮ ದೇಶವನ್ನು ಹಿಂದುಸ್ತಾನ ಎಂದು ಕರೆಯುತ್ತಿದೆ. ಆದರೆ ನಾವು ಮಾತ್ರ ಹಾಗೆ ಕರೆಯಲು ಹಿಂಜರಿಯುತ್ತಿದ್ದೇವೆ’ ಎಂದು ನೊಂದು ಹೇಳಿದ್ದುಂಟು.

ನಮ್ಮ ಅಖಂಡ ದೇಶವು ಹಲವರ ಅದೂರದೃಷ್ಟಿಯ ಫಲವಾಗಿ, ರಾಜಕೀಯ ಲಾಭಕ್ಕಾಗಿ ಹಾಗೂ ಸ್ವಾರ್ಥ ರಾಜಕಾರಣಕ್ಕಾಗಿ ಧರ್ಮಾಧಾರಿತವಾಗಿ ಭಾಗವಾದ ಮೇಲೆ ನಮಗೆ ಉಳಿದದ್ದು ಹಿಂದುಸ್ತಾನ ಮಾತ್ರ ಎಂಬ ವಿಶಾಲಾರ್ಥದ ಜನರ ಭಾವನೆಯನ್ನು ನಮ್ಮ ಆಗಿನ ರಾಷ್ಟ್ರೀಯ ನಾಯಕರೇ ಒಪ್ಪಲಿಲ್ಲ. ಒಪ್ಪಲಿಲ್ಲ ಎನ್ನುವುದಕ್ಕಿಂತ ನಮ್ಮ ದೇಶವನ್ನು ಹಿಂದುಸ್ತಾನ ಎಂದು ಕರೆಯುವುದು ಅವರಿಗೆ ಬೇಡವಾಗಿತ್ತು. ಇಲ್ಲಿ ಅನೇಕ ಧರ್ಮಗಳಿವೆ, ಅಸಂಖ್ಯ ಜಾತಿಗಳಿವೆ. ಆದ್ದರಿಂದ ಸಂಕುಚಿತಾರ್ಥ(?)ದ ಹಿಂದು‌ಸ್ತಾನ ಎಂಬ ಹೆಸರು ಈ ದೇಶಕ್ಕೆ ಒಪ್ಪದು ಎಂಬ ಧೋರಣೆಯಿಂದ ಬ್ರಿಟಿಷರು ಕರೆದ ‘ಇಂಡಿಯಾ’ ಹೆಸರೇ ಇವರಿಗೆ ಪ್ರಿಯವಾಯಿತು.

ಇತ್ತೀಚೆಗೆ ‘ನಾನು ಹಿಂದೂ ಅಲ್ಲ’ ಎಂಬ ಕೂಗು ಪ್ರಖರವಾಗಿ ಕೇಳಿಬರುತ್ತಿದೆ. ಈ ಕೂಗಿನ ಹಿನ್ನೆಲೆ ಗಮನಿಸಿದರೆ, ಇದು ರಾಜಕೀಯಪ್ರೇರಿತ ಹಾಗೂ ಹೆಚ್ಚಿನ ಲಾಭದ ನಿರೀಕ್ಷೆಯಿಂದ ಹುಟ್ಟಿದ್ದೇ ಹೊರತು ಮನಸ್ಸಿನೊಳಗಿನ ಪ್ರಾಮಾಣಿಕ ಪ್ರೇರಣೆಯಿಂದ ಅಲ್ಲ ಎನ್ನುವುದು ಕೂಗುವವರಿಗೂ ಕೇಳುವವರಿಗೂ ಗೊತ್ತಿಲ್ಲದೆ ಇಲ್ಲ.

ಹಿಂದುಸ್ತಾನದಲ್ಲಿ ಬೇರೆ ಬೇರೆ ಜಾತಿ, ಧರ್ಮಗಳಿದ್ದರೂ ಇವರೇನೂ ಬೇರೆ ಬೇರೆ ದೇಶಗಳಿಂದ ವಲಸೆ ಬಂದು ಇಲ್ಲಿ ನೆಲೆಸಿದವರಲ್ಲ. ಇವರೆಲ್ಲ ಇದೇ ದೇಶದಲ್ಲಿ ಹುಟ್ಟಿ ಇಲ್ಲಿನ ಸಂಸ್ಕೃತಿಯನ್ನು ಅರಿತು ಬೆಳೆದವರು. ಬೇರೆ ಬೇರೆ ಧರ್ಮಗಳನ್ನು ಅನಿವಾರ್ಯವಾಗಿ ಒಪ್ಪಿ, ಅಪ್ಪಿಕೊಂಡವರು. ಆದ್ದರಿಂದ ಹಿಂದುಸ್ತಾನವು ಹಲವಾರು ಜಾತಿ ಮತಗಳಿಗೆ ನೆಲೆಯಾಗಿದ್ದರೂ ಇವರೆಲ್ಲ ಇಲ್ಲಿಯವರೇ ಆಗಿದ್ದರಿಂದ ದೇಶವನ್ನು ಹಿಂದುಸ್ತಾನ ಎಂದು ಧಾರಾಳವಾಗಿ ಕರೆದು ಏಕತೆ ಪ್ರದರ್ಶಿಸಬಹುದಿತ್ತು.

ಆದರೆ ಅಧಿಕಾರದ ಸವಿ ಹತ್ತಿದ ಪಕ್ಷಗಳ ನಾಯಕರಿಗೆ ಅಧಿಕಾರದಲ್ಲಿಯೇ ಮುಂದುವರಿಯಬೇಕಾದರೆ ಬ್ರಿಟಿಷರ ನೀತಿಯಂತೆ ಜನರನ್ನು ‘ಒಡೆದು ಆಳದೆ ಗತ್ಯಂತರವಿಲ್ಲ’ ಎಂಬ ಅಂಶ ಮನದಟ್ಟಾಗಿತ್ತು. ಆದ್ದರಿಂದ ಮೊದಲಿನಿಂದಲೇ ಪ್ರಜೆಗಳನ್ನು ಜಾತಿ, ಮತಗಳ ಹೆಸರಿನಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು ಎಂದು ಒಡೆಯುವ ಸೂತ್ರ ಅನುಸರಿಸಲಾಯಿತು. ಹೀಗಾಗಿ ಧರ್ಮದ ಹೆಸರಿನಲ್ಲಿ ಜಾತಿಗಳಿಗೆ ಅನಗತ್ಯ ಪ್ರಾಮುಖ್ಯ ದೊರೆಯತೊಡಗಿತು. ಇದರಿಂದ ಹಲವು ಜಾತಿಗಳವರಿಗೆ ಲಾಭವೂ ಸಿಗತೊಡಗಿ, ಉಳಿದ ಅನೇಕ ಜಾತಿಗಳವರಿಗೆ ಈ ಲಾಭ ಗಳಿಕೆಯ ಮೇಲೆ ಕಣ್ಣು ಬಿತ್ತು. ಒಂದು ಕಾಲಕ್ಕೆ ತಾವೆಲ್ಲ ಹಿಂದೂಗಳು ಎಂದು ಗರ್ವದಿಂದ ಹೇಳಿಕೊಳ್ಳುತ್ತಿದ್ದ ಇದೇ ಹಿಂದೂ ಸಮುದಾಯಕ್ಕೆ ಸೇರಿದ್ದ ಹಲವು ಜಾತಿಗಳವರು ಅದರಿಂದ ಸಿಡಿದು ತಮ್ಮದು ಬೇರೆ ಜಾತಿ, ಬೇರೆ ಧರ್ಮ ಎಂದು ಘೊಷಿಸಿಕೊಳ್ಳತೊಡಗಿದರು. ಧರ್ಮದ ಹೆಸರಿನಲ್ಲಿ ವಿರಸಗಳಾದವು. ಹೊಡೆದಾಡುವ ಮಟ್ಟ ಮುಟ್ಟಿದರು.

ಈ ನೆಲದಲ್ಲಿಯೇ ಹುಟ್ಟಿ ಬೆಳೆದ ಜೈನ, ಬೌದ್ಧ, ಸಿಖ್ ಮುಂತಾದ ಮತಗಳ ಮೂಲ ಹಿಂದೂ ಧರ್ಮವೇ ಆಗಿದ್ದರೂ ಬ್ರಿಟಿಷರು ಸ್ವಾತಂತ್ರ್ಯಪೂರ್ವದಲ್ಲಿಯೇ ಇವನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸಿಬಿಟ್ಟಿದ್ದರು. ಈಗ ಇದೇ ಧೋರಣೆಯನ್ನು ಅನುಸರಿಸಿ ಪ್ರತಿಯೊಂದು ಜಾತಿ ಮತಗಳವರೂ ‘ತಮ್ಮದೂ ‍ಪ್ರತ್ಯೇಕ ಧರ್ಮ’ ಎಂದು ಹಣೆಪಟ್ಟಿ ಕಟ್ಟಿಕೊಂಡು ಅಲ್ಪಸಂಖ್ಯಾತರೆನಿಸಿಕೊಳ್ಳಲು, ಹಿಂದುಳಿದವರ ಪಟ್ಟಿಗೆ ಸೇರಿಕೊಳ್ಳಲು, ಅದರೊಂದಿಗೆ ಸಿಗಬಹುದಾದ ಸವಲತ್ತುಗಳಿಗಾಗಿ ಒಂದೇ ಸಮ ಹವಣಿಸಿಯೇ ಇದ್ದಾರೆ.

ಹೀಗೆ ಎಲ್ಲರೂ ನಾವು ಹಿಂದೂಗಳಲ್ಲ ಎಂಬ ಹೋರಾಟಕ್ಕೆ ತೊಡಗಿದರೆ ಹಿಂದೂ ಧರ್ಮದಲ್ಲಿ ಉಳಿಯುವವರು ಯಾರು? ಹಿಂದೂ ಧರ್ಮವೇ ಒಂದು ಅಲ್ಪಸಂಖ್ಯಾತ ಧರ್ಮವಾಗಿ ಬಿಡಬಹುದೇ?

‘ಜಾತಿಗಳೆಂದರೆ ದೀಪ ಹಚ್ಚಿದ ಹಲವು ಹಣತೆಗಳು. ಅವುಗಳು ಬೀರುವ ಬೆಳಕೇ ಹಿಂದೂ ಧರ್ಮ’ ಎಂದು ಅನುಭಾವಿಯೊಬ್ಬರು ಸೊಗಸಾದ ವಿಶ್ಲೇಷಣೆ ಮಂಡಿಸಿದ್ದರೂ ಲಾಭದ ಅಮಲಿನಲ್ಲಿರುವ ಯಾರಿಗೂ ಇಂಥ ಮಾತುಗಳತ್ತ ಗಮನಹರಿಸಲು ವೇಳೆಯೇ ಇಲ್ಲ.

ಹಿಂದೂ ಧರ್ಮವು ಶೋಷಣೆಯನ್ನು ಒಳಗೊಂಡಿದೆ ಎಂಬುದು ಹಲವರ ಆರೋ‍ಪ. ಹಿಂದೂಧರ್ಮದಲ್ಲಿ ಮನುಸ್ಮೃತಿ ಇದೆ. ಅಸ್ಪೃಶ್ಯತೆ ಇದೆ ಎಂಬ ದೂರು ಚಿರಾಯುವಾಗಿದೆ. ‘ನಾನು ಹಿಂದೂ’ ಎನ್ನುವವರಿಗೆ ಕೋಮುವಾದಿ ಪಟ್ಟ ಗಟ್ಟಿಯೂ ಆಗಿದೆ.

ಹೀಗಾಗಿ ಹಲವರಿಗೆ ಹಿಂದೂ ಧರ್ಮವೆಂದರೆ ಅಲರ್ಜಿ. ಎಷ್ಟು ಎಂದರೆ, ಭಾರತದ ನೆಲದಲ್ಲಿ ಹುಟ್ಟಿಲ್ಲದ ಧರ್ಮಗಳಿಗೆ ಮತಾಂತರವಾಗುವಷ್ಟು! ಈ ವಿಷಯದಲ್ಲಿ ಮಾಧ್ಯಮಗಳೂ ಸಂಯಮದಿಂದ ವರ್ತಿಸುತ್ತಿಲ್ಲ. ಇವೆಲ್ಲ ವೈಪರೀತ್ಯಗಳಿಂದ ಈಗ ಏನಾಗಿದೆಯೆಂದರೆ ಮನುಷ್ಯ, ಮನುಷ್ಯನನ್ನು ದ್ವೇಷಿಸತೊಡಗಿದ್ದಾನೆ.

ಹಿಂದೂ ಧರ್ಮ ಇತ್ತೀಚಿನದು ಎನ್ನುವುದಾದರೆ ಇದಕ್ಕೂ ಮೊದಲು ಸಾವಿರಾರು ವರ್ಷಗಳಿಂದ ಇಲ್ಲಿ ಬದುಕಿದ ಜನರಿಗೆ ಯಾವ ಧರ್ಮವೂ ಇರಲೇ ಇಲ್ಲವೇ? ವೇದ ಕಾಲದಲ್ಲಿ ಯಾವ ಧರ್ಮವಿತ್ತು?

ಇದಕ್ಕೆ ಖ್ಯಾತ ವಿದ್ವಾಂಸರೊಬ್ಬರು ಹೀಗೆ ಉತ್ತರಿಸುತ್ತಾರೆ: ‘ಆಗ ನಮ್ಮ ದೇಶದಲ್ಲಿ ಒಂದೇ ಧರ್ಮವಿತ್ತು. ಅದೇ ಸನಾತನ ಧರ್ಮ. ಸನಾತನವೆಂದರೆ ಬಹಳ ಕಾಲದಿಂದ ಇರುವುದು. ಪುರಾತನವಾದುದು. ಶಾಶ್ವತವಾಗಿರುವುದು ಇತ್ಯಾದಿ ಅರ್ಥಗಳಿವೆ. ಸನಾತನ ಧರ್ಮ ಒಂದು ರೀತಿಯಲ್ಲಿ ಜನಜೀವನದೊಂದಿಗೆ ಸಾಗಿಬಂದ ಧರ್ಮ. ಸದ್ಗುಣಗಳಿಂದ ಕೂಡಿದ ಮಾನವ ಧರ್ಮ. ಇದಕ್ಕೆ ಯಾರೂ ಸ್ಥಾಪಕರಿಲ್ಲ’.

ನಮ್ಮ ದೇಶವು ಇಂಡಿಯಾ, ಹಿಂದುಸ್ತಾನ ಹಾಗೂ ಭಾರತ ಹೀಗೆ ಮೂರು ಹೆಸರುಗಳಿಂದ ಗುರುತಿಸಿಕೊಂಡಿದೆ. ಇಂಡಿಯಾ ಎಂಬುದು ಬ್ರಿಟಿಷರಿಂದ ಬಂದ ಬಳುವಳಿ. ಇದೂ ಸಹ ಹಿಂದುಸ್ತಾನದ ಅಪಭ್ರಂಶವೇ. ಇಂಡಸ್ (ಸಿಂಧೂ) ನದಿಯಿಂದಾಗಿ ಇಂಗ್ಲಿಷ್‌ನಲ್ಲಿ ಇಂಡಿಯಾ ಆಯಿತು. ಹಾಗಾದರೆ ಭಾರತ?

ಭಾರತವನ್ನು ಆಳಿದ ಮೊದಲ ಚಕ್ರವರ್ತಿ ‘ಭರತ’ನಿಂದಾಗಿ ಭಾರತ ಎಂಬ ಅಭಿದಾನ ಈ ನೆಲಕ್ಕೆ ಪ್ರಾಪ್ತವಾಯಿತು. ಬಹುಶಃ ಈಗಲೂ ಭಾರತ ಎಂಬ ಶಬ್ದಕ್ಕೆ ಯಾರದೇ ವಿರೋಧವಿದ್ದ ಹಾಗೆ ಕಾಣುತ್ತಿಲ್ಲ. ಅಲ್ಲದೆ ‘ನಾವು ಭಾರತೀಯರು’ ಎಂದು ಕರೆದುಕೊಳ್ಳುವುದರಲ್ಲಿಯೂ ಯಾವುದೇ ಜಾತಿ, ಮತ, ಧರ್ಮಗಳ ಸೋಂಕಿಲ್ಲ. ‘ನಾವೆಲ್ಲ ಒಂದು’ ಎಂಬ ಉನ್ನತ ಸಂದೇಶವೇ ಎದ್ದು ಕಾಣುತ್ತಿದೆ.

ಆದ್ದರಿಂದ ನಮ್ಮ ದೇಶವನ್ನು ಭಾರತವಾಗಿ ರೂಪಿಸಲು, ನಾವೆಲ್ಲ ಭಾರತೀಯರಾಗಿ ಒಗ್ಗೂಡಲು ಇದು ಸಕಾಲವಾಗಿರಬಹುದಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry