ಎಸ್‌ಎಫ್‌ಐ ನಾಯಕಿಗೆ ಕಿರುಕುಳ: ಒಬ್ಬನ ಬಂಧನ

7

ಎಸ್‌ಎಫ್‌ಐ ನಾಯಕಿಗೆ ಕಿರುಕುಳ: ಒಬ್ಬನ ಬಂಧನ

Published:
Updated:
ಎಸ್‌ಎಫ್‌ಐ ನಾಯಕಿಗೆ ಕಿರುಕುಳ: ಒಬ್ಬನ ಬಂಧನ

ಮಂಗಳೂರು: ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಮಾಧುರಿ ಬೋಳಾರ ಅವರು ಮುಸ್ಲಿಂ ಸಹಪಾಠಿಯ ಜೊತೆಗಿದ್ದ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ರವಾನಿಸಿ ಕಿರುಕುಳ ನೀಡಿದ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಒಬ್ಬ ಯುವಕನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲ್ಲೂಕಿನ ಕಕ್ಕಿಂಜೆ ಸಮೀಪದ ತೋಟತಾಡಿ ಮನೆಯ ಬೈಲಂಗಡಿ ಗಾಂದೋಟ್ಯ ಮನೆಯ ನಿವಾಸಿ ಶ್ರೀಹರಿ ಅಲಿಯಾಸ್‌ ಹರೀಶ್‌ ದೇವಾಡಿಗ ಅಲಿಯಾಸ್‌ ಕಕ್ಕಿಂಜೆ ಹರೀಶ್ (22) ಬಂಧಿತ ಯುವಕ. ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ ಪೊಲೀಸರು ನಗರದ ಪಂಪ್‌ವೆಲ್‌ ಬಳಿ ಶನಿವಾರ ಬೆಳಿಗ್ಗೆ ಆರೋಪಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್ ತಿಳಿಸಿದ್ದಾರೆ.

ಮಾಧುರಿ ಅವರು ಕಳೆದ ವರ್ಷ ಸಂಘಟನೆಯ ಅಧ್ಯಯನ ಶಿಬಿರಕ್ಕೆ ಸಹ ಕಾರ್ಯಕರ್ತರ ಜತೆ ತೆರಳುವಾಗ ಬಸ್ಸಿನಲ್ಲಿ ಸೆಲ್ಫಿ ಫೋಟೊ ತೆಗೆದುಕೊಂಡಿದ್ದರು. ಅವರೊಂದಿಗೆ ಎಸ್‌ಎಫ್‌ಐ ಕಾರ್ಯಕರ್ತ ಹಂಝ ಕಿನ್ಯಾ ಇದ್ದರು. ಆ ಚಿತ್ರವನ್ನು ಗೆಳೆಯರು ಫೇಸ್‌ಬುಕ್‌ ಖಾತೆಯಲ್ಲಿ ಹಾಕಿಕೊಂಡಿದ್ದರು.

ಆ ಫೋಟೊವನ್ನು ಅಲ್ಲಿಂದ ಡೌನ್‌ಲೋಡ್‌ ಮಾಡಿದ್ದ ಕೆಲವರು, ‘ಹಿಂದೂ ಹುಡುಗಿ ಮುಸ್ಲಿಂ ಹುಡುಗನ ಜೊತೆ ಇದ್ದಾಳೆ...’ ಎಂದು ಅವಹೇಳನಕಾರಿ ಸಂದೇಶಗಳನ್ನು ಸೃಷ್ಟಿಸಿ ವಾಟ್ಸ್‌ ಆ್ಯಪ್‌ನಲ್ಲಿ ರವಾನಿಸಿದ್ದರು. ಮಾಧುರಿ ಮತ್ತು ಹಂಝ ಅವರನ್ನು ಬೆದರಿಸುವ ಪ್ರತಿಕ್ರಿಯೆಗಳನ್ನು ಕೆಲವರು ನೀಡಿದ್ದರು. ಮುಸ್ಲಿಂ ಧರ್ಮವನ್ನು ಅವಹೇಳನ ಮಾಡುವ ಸಂದೇಶಗಳನ್ನೂ ಕೆಲವರು ಹಾಕಿದ್ದರು.

ಮಾಧುರಿ ನೀಡಿದ್ದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಶ್ರೀಹರಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry