ಮರಳು ಆಮದು: ಎಂಎಸ್‌ಐಎಲ್‌ ಕೈಸೇರಿದ ಮೊದಲ ಪರವಾನಗಿ

7

ಮರಳು ಆಮದು: ಎಂಎಸ್‌ಐಎಲ್‌ ಕೈಸೇರಿದ ಮೊದಲ ಪರವಾನಗಿ

Published:
Updated:
ಮರಳು ಆಮದು: ಎಂಎಸ್‌ಐಎಲ್‌ ಕೈಸೇರಿದ ಮೊದಲ ಪರವಾನಗಿ

ಮಂಗಳೂರು: ವಿದೇಶಿ ಮರಳು ಆಮದು ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸುವ ಗಣಿ ಮತ್ತು ಖನಿಜ ತಿದ್ದುಪಡಿ ನಿಯಮ ಜಾರಿಯಾಗಿದ್ದು, ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ಗೆ (ಎಂಎಸ್‌ಐಎಲ್‌) ಮೊದಲ ಪರವಾನಗಿಯನ್ನೂ ವಿತರಣೆ ಮಾಡಲಾಗಿದೆ.

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಜತೆಯಲ್ಲೇ ಖಾಸಗಿ ವ್ಯಕ್ತಿ ಮತ್ತು ಕಂಪನಿಗಳೂ ಮರಳು ಆಮದು, ಮಾರಾಟ ಮಾಡಲು ಹೊಸ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ವ್ಯಕ್ತಿಗಳು ಮತ್ತು ಕಂಪನಿಗಳಿಂದ ಮರಳು ಆಮದಿಗೆ ಅನುಮತಿ ಕೋರಿ ಏಳು ಅರ್ಜಿಗಳು ಸಲ್ಲಿಕೆಯಾಗಿವೆ.

‘ಮರಳು ಆಮದು ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸುವ ತಿದ್ದುಪಡಿ ನಿಯಮಗಳನ್ನು ಡಿಸೆಂಬರ್‌ 23ರಂದು ಜಾರಿಗೊಳಿಸಲಾಗಿದೆ. ಡಿಸೆಂಬರ್‌ 26ರಂದು ಮರಳು ಆಮದು ಮಾರ್ಗಸೂಚಿ ಪ್ರಕಟಿಸಲಾಗಿದೆ. ನಿಯಮ ಮತ್ತು ಮಾರ್ಗಸೂಚಿಯ ಎಲ್ಲ ಷರತ್ತುಗಳನ್ನು ಪೂರೈಸಿರುವ ಎಂಎಸ್‌ಐಎಲ್‌ಗೆ ಮೊದಲ ಪರವಾನಗಿಯನ್ನೂ ವಿತರಿಸಿದ್ದೇವೆ. ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ವಿದೇಶಿ ಮರಳು ಮಾರಾಟ ಆರಂಭವಾಗಲಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಎನ್‌.ಎಸ್‌.ಪ್ರಸನ್ನಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಲಭ್ಯತೆ ತೋರಿಸಬೇಕು:

ಮರಳು ಆಮದು ಪರವಾನಗಿ ಕೋರಿ ಅರ್ಜಿ ಸಲ್ಲಿಸುವವರು ಸಂಬಂಧಿಸಿದ ದೇಶದಿಂದ ಮರಳು ರಫ್ತು ಮಾಡಲು ಅನುಮತಿ ಪಡೆದಿರುವ ಅಥವಾ ಮರಳುಗಾರಿಕೆ ನಡೆಸಲು ಅನುಮತಿ ಹೊಂದಿರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ. ಮರಳು ಆಮದು ಪರವಾನಗಿಯ ಅವಧಿಯನ್ನು ಐದು ವರ್ಷಗಳಿಗೆ ಸೀಮಿತಗೊಳಿಸಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಕೇಂದ್ರ ವಾಣಿಜ್ಯ ಸಚಿವಾಲಯದ ವಿದೇಶಿ ವ್ಯಾಪಾರ ಮಹಾನಿರ್ದೇಶಕರ ಕಚೇರಿಯಲ್ಲಿ ನೋಂದಣಿ ಮಾಡಿಸಿ, ‘ಆಮದು ರಫ್ತು ಸಂಕೇತ’ (ಐಇಸಿ) ಪಡೆದಿರಬೇಕು.

ಪರವಾನಗಿ ಹೊಂದಿರುವವರು ಆಮದು ಮಾಡಿಕೊಂಡ ಮರಳನ್ನು ಬಂದರಿನಿಂದ ಸ್ಟಾಕ್‌ ಯಾರ್ಡ್‌ಗೆ ಸಾಗಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಖನಿಜ ಸಾಗಣೆ ಪರವಾನಗಿ (ಎಂಡಿಪಿ) ಪಡೆಯುವುದು ಕಡ್ಡಾಯ. ರಾಜ್ಯ ಪ್ರವೇಶಿಸಿದ ವಿದೇಶಿ ಮರಳನ್ನು ಹೊರ ರಾಜ್ಯಕ್ಕೆ ಕೊಂಡೊಯ್ಯಬೇಕಾದರೆ ಮತ್ತೊಮ್ಮೆ ನಿಗದಿತ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಪರೀಕ್ಷೆ ಕಡ್ಡಾಯ:

ಬಂದರು ತಲುಪಿದ ಮರಳನ್ನು ಅಲ್ಲಿಂದ ಹೊರಕ್ಕೆ ಸಾಗಿಸಲು ಅನುಮತಿ ಕೋರುವಾಗ ಆ ಮರಳಿನ ಮಾದರಿಯ ಪರೀಕ್ಷಾ ವರದಿಯನ್ನೂ ಇಲಾಖೆಗೆ ಸಲ್ಲಿಸಬೇಕು. ಆಮದು ಮಾಡಿಕೊಂಡ ಮರಳು ಬಿಐಎಸ್‌– 383/2016ರ ಗುಣಮಟ್ಟ ಹೊಂದಿದೆ ಎಂಬುದನ್ನು ನಿರೂಪಿಸಬೇಕು. ಅದರಲ್ಲಿ ನಿಷೇಧಿತ ಖನಿಜಗಳು ಮತ್ತು ಪರಿಸರಕ್ಕೆ ಹಾನಿಯಾಗುವಂತಹ ಅಂಶಗಳಿಲ್ಲ ಎಂಬುದನ್ನೂ ಸಾಬೀತು ಮಾಡಿದ ಬಳಿಕವಷ್ಟೇ ಸಾಗಣೆ ಪರವಾನಗಿ ದೊರೆಯಲಿದೆ.

ಇಲ್ಲಿನ ಸಸ್ಯಸಂಕುಲ ಅಥವಾ ಇತರೆ ಜೀವಿಗಳಿಗೆ ಅಪಾಯ ತಂದೊಡ್ಡಬಲ್ಲ ಹಾನಿಕಾರಕ ಅಂಶಗಳು ಮತ್ತು ಕಳೆಗಿಡಗಳು, ಬೀಜಗಳು ವಿದೇಶಿ ಮರಳಿನಲ್ಲಿ ಇಲ್ಲ ಎಂಬುದನ್ನು ಖಚಿತಪಡಿಸುವ ಪ್ರಯೋಗಾಲಯಗಳ ಪರೀಕ್ಷಾ ವರದಿಯನ್ನು ಸಲ್ಲಿಸಬೇಕು. ಮರಳು ರಫ್ತು ಮಾಡಿದ ದೇಶ ಮತ್ತು ರಾಜ್ಯದ ಸಕ್ಷಮ ಪ್ರಾಧಿಕಾರಗಳಿಂದ ಈ ಪ್ರಮಾಣಪತ್ರವನ್ನು ಪಡೆದು ಸಲ್ಲಿಸಿದ ಬಳಿಕವಷ್ಟೇ ಸಾಗಣೆ ಪರವಾನಗಿ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಚೀಲದಲ್ಲೇ ಇರಬೇಕು:

‘ವಿದೇಶಿ ಮರಳನ್ನು ಚೀಲದಲ್ಲಿ ತುಂಬಿಸಿಯೇ ಮಾರಾಟ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ‌50ರಿಂದ 100 ಕೆ.ಜಿ.ವರೆಗಿನ ಮರಳು ಚೀಲಗಳನ್ನು ಮಾರಾಟ ಮಾಡಲು ಅವಕಾಶವಿದೆ. ಸ್ಥಳೀಯ ಮರಳಿನಂತೆ ವಾಹನಗಳಿಗೆ ತುಂಬಿಸಿ ಮಾರಾಟ ಮಾಡಲು ಅವಕಾಶವಿಲ್ಲ’ ಎಂದು ಪ್ರಸನ್ನಕುಮಾರ್‌ ತಿಳಿಸಿದರು.

ಮರಳಿನ ಚೀಲದ ಮೇಲೆ ಬ್ಯಾಚ್‌ ಸಂಖ್ಯೆ, ಚೀಲ ತುಂಬಿಸಿದ ಸ್ಥಳ ಮತ್ತು ದಿನಾಂಕ, ನಿವ್ವಳ ತೂಕ, ಮರಳಿನ ಗುಣಮಟ್ಟ, ಗರಿಷ್ಠ ಮಾರಾಟ ದರ, ಬಲ್ಕ್‌ ಪರವಾನಗಿ ಸಂಖ್ಯೆ ಮತ್ತು ದಿನಾಂಕ, ಆಮದುದಾರರ ನೋಂದಣಿ ಸಂಖ್ಯೆ ಮತ್ತು ಮರಳಿನ ಮೂಲದ ಕುರಿತ ಮಾಹಿತಿಯನ್ನು ಮುದ್ರಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಮರಳು ಆಮದು ವಹಿವಾಟು ನಡೆಸುವವರು ರಾಜ್ಯ ಸರ್ಕಾರದ ಅನುಮತಿ ಇಲ್ಲದೇ ಬೇರೆ ಮರಳನ್ನು ಮಾರಾಟ ಮಾಡುವಂತಿಲ್ಲ. ಪರವಾನಗಿ ಇಲ್ಲದೇ ಮರಳು ಆಮದು, ಸಂಗ್ರಹ, ಸಾಗಣೆ ಮತ್ತು ಮಾರಾಟ ಮಾಡುವಂತಿಲ್ಲ. ಉಳಿದಂತೆ ಕರ್ನಾಟಕ ಗಣಿ ಮತ್ತು ಖನಿಜ ನಿಯಮ– 1994ರ ಎಲ್ಲ ಅಂಶಗಳೂ ವಿದೇಶಿ ಮರಳು ಮಾರಾಟದ ಮೇಲೆ ಅನ್ವಯವಾಗುತ್ತವೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಪ್ರತಿ ಟನ್‌ಗೆ ₹ 60 ಶುಲ್ಕ

ಬಂದರು ತಲುಪಿದ ಮರಳನ್ನು ಹೊರಗಡೆ ಸಾಗಿಸಲು ಕಂಪ್ಯೂಟರೀಕೃತ ಖನಿಜ ಸಾಗಣೆ ರಹದಾರಿ (ಸಿಎಂಡಿಪಿ) ಪಡೆಯುವುದು ಕಡ್ಡಾಯ. ಆಗ ಪ್ರತಿ ಟನ್‌ ಮರಳಿಗೆ ₹ 60 ಶುಲ್ಕ ಪಾವತಿಸಬೇಕು. ಪ್ರತಿ ಟ್ರಿಪ್‌ ಶೀಟ್‌ ದಾಖಲೆಗೆ ₹ 10 ಶುಲ್ಕ ನಿಗದಿಪಡಿಸಲಾಗಿದೆ. ಉಳಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಗದಿಪಡಿಸುವ ಎಲ್ಲ ಶುಲ್ಕಮತ್ತು ತೆರಿಗೆಗಳನ್ನು ಪಾವತಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry