ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷವಾದರೂ ಮಾಸಿಲ್ಲ ಸುಗ್ಗಿ ನೆನಪು

Last Updated 14 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಸವನಪುರ ಗ್ರಾಮದಲ್ಲಿ ಪ್ರತಿ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ದನಗಳ ಜಾತ್ರೆ ನಡೆಯುತ್ತಿತ್ತು. ಈ ಹಬ್ಬ ನಿಂತು 50 ವರ್ಷಗಳೇ ಕಳೆದಿವೆ. ಆದರೆ ಆಗಿನ ಸಂಭ್ರಮ ಹೆಸರಘಟ್ಟ ಹಾಗೂ ಸುತ್ತಲಿನ ಗ್ರಾಮಸ್ಥರ ನೆನಪಿನಂಗಳದಿಂದ ಇನ್ನೂ ಮಾಸಿಲ್ಲ.

50 ವರ್ಷಗಳ ಹಿಂದೆ ಹೆಸರಘಟ್ಟದಲ್ಲಿ ಭಾರತೀಯ ತೋಟಗಾರಿಕೆ ಸಂಸ್ಥೆಯನ್ನು ನಿರ್ಮಿಸಲಾಗಿತ್ತು. ಇದಕ್ಕಾಗಿ ಗೊಂದಳ್ಳಿ, ಬಸವನಪುರ ಹಾಗೂ ಮೇಡಹಳ್ಳಿಯ ಗ್ರಾಮಸ್ಥರು ಜಾಗ ಬಿಟ್ಟುಕೊಡಬೇಕಾಯಿತು. ಭೂಮಿಯನ್ನು ಬಿಟ್ಟುಕೊಟ್ಟು ರೈತರು ಹೆಸರಘಟ್ಟ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ನೆಲೆಸಿದರು. ಬಸವನಪುರದಲ್ಲಿ ನಡೆಯುತ್ತಿದ್ದ ದನಗಳ ಜಾತ್ರೆಯೂ ಕ್ರಮೇಣ ನಿಂತು ಹೋಯಿತು.

ಮೂರು ದಿನ ನಡೆಯುತ್ತಿದ್ದ ಜಾತ್ರೆಗೆ 15 ದಿನಗಳಿಗೂ ಮುನ್ನವೇ ತಯಾರಿ ನಡೆಯುತ್ತಿತ್ತು. ಜಾತ್ರೆಯ ನೆಪದಲ್ಲಿ ನೆಂಟರು ಒಂದೆಡೆ ಸೇರುತ್ತಿದ್ದರು. ಸಂಬಂಧಗಳನ್ನು ಬೆಸೆಯುತ್ತಿದ್ದರಿಂದ ಜಾತ್ರೆಗೆ ವಿಶಿಷ್ಟ ಕಳೆ ಬರುತ್ತಿತ್ತು ಎಂದು ಗ್ರಾಮದ ಹಿರಿಯರು ಈಗಲೂ ಸಂಕ್ರಾಂತಿ ಸಂದರ್ಭದಲ್ಲಿ ಮೆಲುಕು ಹಾಕುತ್ತಾರೆ. ಜಾತ್ರೆ ನಡೆಯುತ್ತಿದ್ದ ಜಾಗ ಈಗ ಸಂಸ್ಥೆಯ ಸ್ವತ್ತು.

‘ಸಂಕ್ರಾಂತಿ ಹಬ್ಬ ಬಂತೆಂದರೆ ದನಗಳ ಜಾತ್ರೆಯದ್ದೇ ವಿಶೇಷ. ಜಾತ್ರೆಗಾಗಿ ಬರುವ ಬಂಧು–ಬಳಗದವರಿಗೆ ಉಪಚಾರ ಮಾಡುವುದೇ ನಮಗೆ ಸಡಗರ. ಸುಗ್ಗಿಯ ಸಂಭ್ರಮ ಈಗ ಇಲ್ಲ’ ಎಂದು ಹೆಸರಘಟ್ಟ ನಿವಾಸಿ ರಾಘಣ್ಣ ಬೇಸರ ವ್ಯಕ್ತಪಡಿಸಿದರು.

‘ರೈತರು ಹತ್ತಾರು ವರ್ಷಗಳಿಂದ ಕೃಷಿ ಮಾಡುತ್ತಿದ್ದ ಭೂಮಿಯನ್ನು ಬಿಟ್ಟು ಬೇರೆಡೆ ಹೋಗಬೇಕಾಯಿತು. ಈ ಭೂಮಿಗೆ ಸರಿಯಾಗಿ ಪರಿಹಾರವನ್ನೂ ಕೊಡಲಿಲ್ಲ’ ಎಂದು ಗೊಂದಳ್ಳಿಯಿಂದ ವಲಸೆ ಬಂದ ರೈತ ಗೋವಿಂದಯ್ಯ ದೂರಿದರು.

‘ರೈತರು ದನಗಳ ಜಾತ್ರೆಗಾಗಿ 15 ದಿನಗಳ ಮುನ್ನವೇ ಬಸವನಪುರಕ್ಕೆ ಬಂದು ಟೆಂಟ್‌ ಹಾಕುತ್ತಿದ್ದರು. ಅವರ ಉಪಚಾರವನ್ನು ಗ್ರಾಮಸ್ಥರೇ ನೋಡಿಕೊಳ್ಳುತ್ತಿದ್ದರು. ಜಾತ್ರೆಯ ನೆಪದಲ್ಲಿ ವಧು–ವರರ ಅನ್ವೇಷಣೆಯೂ ನಡೆಯುತ್ತಿತ್ತು. ಮನುಷ್ಯ ಸಂಬಂಧಗಳ ಕೊಂಡಿಯಾಗಿ ಜಾತ್ರೆ ಮಾರ್ಪಟ್ಟಿತ್ತು’ ಎಂದು ರೈತ ಬಸವರಾಜು ಮೆಲುಕು ಹಾಕಿದರು.

ಪಾಳುಬಿದ್ದ ಶಾಲೆ, ಕಟ್ಟಡಗಳು

ಮೂರು ಗ್ರಾಮಗಳ ನಿವಾಸಿಗಳನ್ನು ತೆರವುಗೊಳಿಸಿದ ಬಳಿಕ ಅಲ್ಲಿದ್ದ ಅನೇಕ ಮನೆಗಳನ್ನು ಕೆಡವಲಾಯಿತು. ಕೆಲವು ಪಾಳುಬಿದ್ದ ಸ್ಥಿತಿಯಲ್ಲಿವೆ. ಇವುಗಳ ಸುತ್ತಲೂ ಹುಲ್ಲು ಬೆಳೆದುಕೊಂಡಿದೆ. ವಲಸೆ ಹೋದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಭಾರತೀಯ ತೋಟಗಾರಿಕೆ ಸಂಸ್ಥೆಯು ಗೊಂದಳ್ಳಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ತೆರೆದಿತ್ತು. ಆದರೆ, ಆ ಶಾಲೆಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಾರದ ಕಾರಣ 1999ರಲ್ಲಿ ಅದನ್ನು ಮುಚ್ಚಲಾಗಿತ್ತು ಎಂದು ನಿವೃತ್ತ ಶಿಕ್ಷಕ ಜಿ.ನಾರಾಯಣಪ್ಪ ತಿಳಿಸಿದರು.

-ಸಿ.ಎಸ್.ನಿರ್ವಾಣ ಸಿದ್ದಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT