ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ನಲ್ಲಿ ‘ಸುಗ್ಗಿ–ಹುಗ್ಗಿ’ ಸಡಗರ

Last Updated 14 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಧಾನ್ಯಗಳ ರಾಶಿ ಪೂಜೆ, ಕಿಚ್ಚು ಹಾಯಿಸುವುದು, ಜಾನಪದ ಕಲೆಗಳ ಪ್ರದರ್ಶನದಿಂದಾಗಿ ಲಾಲ್‌ಬಾಗ್‌ನಲ್ಲಿ ಭಾನುವಾರ ಗ್ರಾಮೀಣ ಲೋಕವೇ ಅನಾವರಣಗೊಂಡಿತ್ತು.

ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಲಾಲ್‌ಬಾಗ್‌ನಲ್ಲಿ ‘ಸುಗ್ಗಿ–ಹುಗ್ಗಿ’ ಹೆಸರಿನಲ್ಲಿ ಮೊದಲ ಬಾರಿಗೆ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಗ್ರಾಮೀಣ ಸೊಗಡಿನ ಈ ಸಂಕ್ರಾಂತಿಯ ಸಂಭ್ರಮ ಆಚರಿಸಲು ಬೆಳಿಗ್ಗೆಯಿಂದಲೇ ಜನ ಕುಟುಂಬ ಸಮೇತ ಬಂದಿದ್ದರು. ಎಳ್ಳು–ಬೆಲ್ಲ ಹಂಚುವುದೇ ಸಂಕ್ರಾಂತಿ ಹಬ್ಬವೆಂದು ಪರಿಭಾವಿಸಿದ್ದ ನಗರದ ಬಹುತೇಕ ಜನರಿಗೆ ಸಂಕ್ರಾಂತಿ ಆಚರಣೆಯ ವಿಧಿವಿಧಾನಗಳೇನು, ಏಕೆ ಈ ಹಬ್ಬ ಆಚರಿಸತ್ತಾರೆ ಎಂಬ ಸಮಗ್ರ ಮಾಹಿತಿ ತಿಳಿಯಲು ಸುಗ್ಗಿ–ಹುಗ್ಗಿ ವೇದಿಕೆಯಾಯಿತು. ದಿನವಿಡೀ ನಡೆದ ಈ ಹಬ್ಬದ ಸಡಗರದಲ್ಲಿ ಜನ ಉತ್ಸಾಹದಿಂದ ಪಾಲ್ಗೊಂಡರು.

ಸೂರ್ಯ ದಕ್ಷಿಣಾಯನದಿಂದ ಉತ್ತರಾಯನದೆಡೆಗೆ ಪಥ ಬದಲಿಸುವುದೇ ಸಂಕ್ರಾಂತಿ. ರಾಜ್ಯದಾದ್ಯಂತ ಒಂದೊಂದು ಪ್ರದೇಶದಲ್ಲಿ ಒಂದು ರೀತಿಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮಲೆನಾಡು, ಬಯಲು ಸೀಮೆ, ಮೈಸೂರು, ಮದ್ಯ ಕರ್ನಾಟಕ, ಕರಾವಳಿ ಹಾಗೂ ಮುಂಬೈ ಕರ್ನಾಟಕಗಳಲ್ಲಿ ಈ ಹಬ್ಬ ಆಚರಿಸುವ ಉದ್ದೇಶ ಒಂದೇ ಆಗಿದ್ದರೂ ಅಡುಗೆ, ಆಚರಣೆ ವಿಭಿನ್ನವಾಗಿರುತ್ತದೆ. ಈ ವೈವಿಧ್ಯಗಳನ್ನು ಈ ಕಾರ್ಯಕ್ರಮ ಪರಿಚಯಿಸಿತು.

‘ಬಯಲುಸೀಮೆ ಪ್ರಾಂತ್ಯ’ ಎಂಬ ಮಳಿಗೆಯಲ್ಲಿ ಆ ಭಾಗದಲ್ಲಿ ಹೇಗೆ ಸಂಕ್ರಾಂತಿ ಆಚರಿಸಲಾಗುತ್ತದೆ ಎನ್ನುವುದನ್ನು ತುಮಕೂರಿನ ಸಾವಯವ ಕೃಷಿಕರ ಪ್ರಾಂತೀಯ ಒಕ್ಕೂಟ ಪ್ರಸ್ತುತಪಡಿಸಿತು. ‘ಭತ್ತದ ರಾಶಿಗೆ ಪೂಜೆ ಮಾಡಿ, ಸಿಹಿ ಅಡುಗೆ ಮಾಡುತ್ತೇವೆ. ಸಂಜೆ ಮಕ್ಕಳು ಎಳ್ಳು–ಬೆಲ್ಲ ಬೀರಿ, ಹಿರಿಯರ ಆಶಿರ್ವಾದ ಪಡೆಯುತ್ತಾರೆ’ ಎಂದು ಒಕ್ಕೂಟದ ಎನ್‌. ವಸಂತಾ ತಿಳಿಸಿದರು.

ಅಲ್ಲಿಂದ ಸ್ವಲ್ಪ ದೂರದಲ್ಲಿ ಅರೆ ಮಲೆನಾಡಿನವರು ಸ್ವಾಗತಿಸಿದರು. ಹಾಸನ ಜಿಲ್ಲೆಯ ನೇಗಿಲ ಯೋಗಿ ಸಾವಯವ ಕೃಷಿಕರ ಸಂಘದವರು ಹಾಸನ, ಸಕಲೇಶಪುರ ಪ್ರದೇಶಗಳಲ್ಲಿ ಸಂಕ್ರಾಂತಿಯ ಸಂಭ್ರಮ ಹೇಗಿರುತ್ತದೆ ಎಂದು ವಿವರಿಸಿದರು. ‘ದವಸ ಧಾನ್ಯ ಹೆಚ್ಚಾಗಬೇಕು ಎಂದು ಕಣದಲ್ಲಿ ಪೂಜೆ ಮಾಡುತ್ತೇವೆ. ಬನವಾಸೆ ಎಂದು ಸಣ್ಣ ಕೊಳಗದಲ್ಲಿ ಭತ್ತವನ್ನು ತುಂಬಿ ಪೂಜೆ ಮಾಡಿ ಅದನ್ನು ದಾಸಯ್ಯನಿಗೆ ದಾನ ಮಾಡುತ್ತೇವೆ. ಈ ಹಬ್ಬದಲ್ಲಿ ವಿಶೇಷ ಖಾದ್ಯಗಳಾದ ಉದ್ರಿಗೆ ಗಂಗಳದ ಹಿಟ್ಟು ( ಅಕ್ಕಿಯಿಂದ ಮಾಡುವುದು), ಕಾಯಿ ಕಡಬು, ಪುಟ್ಟಿಟ್ಟು, ತಪ್ಪಲಿ ಹಿಟ್ಟು, ಎಲೆಗೊರದಿಟ್ಟು, ಬಟ್ಟಲಿಟ್ಟು ಸೇರಿದಂತೆ ನಾನಾ ಸಿಹಿ ಹಾಗೂ ಖಾರದ ಅಡುಗೆಗಳನ್ನು ಮಾಡಿ ಸವಿಯುತ್ತೇವೆ’ ಎಂದು ಚಿಕ್ಕಂದೂರಿನ ನಾಗರಾಜು ತಿಳಿಸಿದರು.

ಶಾವಿಗೆ ಒತ್ತುವ ಸಾಧನ, ಕುಡ್ಲ, ದಬ್ಬೆ, ಕೊಂಗ ಮರ, ಮರದ ನೇಗಿಲು, ಮರದ ಕುಂಟೆ, ಬಾಯಿ ಕುಕ್ಕೆ, ಕೂರಿಗೆ ಬಟ್ಟಲು ಹೀಗೆ ಕೃಷಿ ಬದುಕಿನ ಅವಿಭಾಜ್ಯ ಅಂಗಗಳಂತಿರುವ ಪರಿಕರಗಳನ್ನು ಇಲ್ಲಿ ಪ್ರದರ್ಶಿಸಲಾಯಿತು.

ಅಲ್ಲಿಂದ ಮುಂದೆ ಮುಂಬೈ ಕರ್ನಾಟಕ ಭಾಗದ ಅಡುಗೆಗಳ ಘಮಘಮ ಎದುರಾಯಿತು. ಘನಮಠ ಶಿವಯೋಗಿಗಳ ಸಾವಯವ ಕೃಷಿಕರ ಸಂಘದವರಾದ ಬಿ.ಬಿ.ನಾಯಕ್, ಹಬ್ಬದ ಖಾದ್ಯಗಳಾದ ಸಜ್ಜೆ ರೊಟ್ಟಿ, ಜೋಳದ ಅನ್ನ, ಜವೆ ಗೋದಿ ಹುಗ್ಗಿ, ಶೇಂಗಾ ಹೋಳಿಗೆ, ಎಳ್ಳುಂಡೆ, ಗುರೆಳ್ಳು ಚಟ್ಟಿ, ರಾಗಿಯ ಕಡುಬು, ಗೋವಿನ ಜೋಳದ ರೊಟ್ಟಿಗಳ ವಿಶೇಷತೆಯನ್ನು ತಿಳಿಸಿದರು.

ಪಟ ಕುಣಿತ, ಮಹಿಳಾ ತಮಟೆ, ಪೂಜಾ ಕುಣಿತದಂತಹ ಜಾನಪದ ಕಲಾ ಪ್ರದರ್ಶನಗಳು ಹಬ್ಬದ ಮೆರುಗು ಹೆಚ್ಚಿಸಿದವು.  ಜೋಗಿಲ ಸಿದ್ಧರಾಜು ಮತ್ತು ತಂಡದ ಸುಗ್ಗಿ ಹಾಡುಗಳು, ಶಕುಂತಲಾ ದೇವಲಾ ನಾಯಕ ಅವರ ಗೀಗೀ ಪದಗಳು, ರಾಧಾಬಾಯಿ ಮಾದರ ಅವರ ಚೌಡಿಕೆ ಪದಗಳು ಹಳ್ಳಿಯ ಜನರ ಸಮೃದ್ಧ ಬದುಕಿನ ವೈವಿಧ್ಯವನ್ನು  ಪರಿಚಯಿಸಿದವು. ಇಸ್ಕಾನ್‌ನ ಅಕ್ಷಯಪಾತ್ರ ಪ್ರತಿಷ್ಠಾನದಿಂದ ಸಿಹಿ ಮತ್ತು ಖಾರದ ಪೊಂಗಲ್ ವಿತರಿಸಲಾಯಿತು.

ಎತ್ತಿನಬಂಡಿ ಸವಾರಿ

ಇಲ್ಲಿದ್ದ ಎತ್ತಿನ ಬಂಡಿ ಸವಾರಿ ಮಕ್ಕಳನ್ನು ಆಕರ್ಷಿಸಿತು. ‘ಹೈ.. ಹೈ...’ ಎಂದು ಬಂಡಿ ಓಡಿಸಿ ಮಕ್ಕಳು ಸಂಭ್ರಮಿಸಿದರು. ಹಿರಿಯರಿಗೆ ಅದರಲ್ಲಿ ಸವಾರಿ ಮಾಡುವುದಕ್ಕಿಂತ ಅದರ ಎದುರು ನಿಂತು ಸೆಲ್ಫಿ ತೆಗೆದುಕೊಳ್ಳುವ ಉತ್ಸಾಹ ಹೆಚ್ಚಿತ್ತು. ಮಕ್ಕಳು ಎತ್ತಿನಬಂಡಿಯಲ್ಲಿ ಸವಾರಿ ಮಾಡಿದ ಅನುಭವ ಪಡೆಯಲೆಂದು ಪೋಷಕರು ಆಶಿಸಿದರು. ಮಕ್ಕಳನನ್ನು ಬಂಡಿಗೆ ಹತ್ತಿಸುವ ತವಕದಲ್ಲಿದ್ದರು.

ಬಂಡಿ ಸವಾರಿಗೆ ಹಿರಿಯರಿಗೆ ₹20, ಮಕ್ಕಳಿಗೆ ₹10 ನಿಗದಿ ಮಾಡಲಾಗಿತ್ತು.

ಸಿರಿಧಾನ್ಯಗಳ ಊಟ ಇಷ್ಟಪಟ್ಟ ಜನ

ಸಿರಿಧಾನ್ಯಗಳಿಂದ ಮಾಡಿದ ಸಜ್ಜೆ ರೊಟ್ಟಿ, ಸಿರಿಧಾನ್ಯಗಳ ದೊಸೆ, ರಾಗಿ, ಬರಗು, ಹಾರಕ, ಸಾಮೆ, ಊದಲು, ಜೋಳದ ಬಿಸ್ಕತ್ತುಗಳು, ಹಪ್ಪಳ, ಸಂಡಿಗೆ, ಚಟ್ನಿ ಪುಡಿ, ಪೊಂಗಲ್‌, ವಿವಿಧ ಸಿಹಿ ಪದಾರ್ಥಗಳು ಜನರ ನಾಲಿಗೆ ರುಚಿಯನ್ನು ತಣಿಸಿದವು. ಖಾದ್ಯಗಳ ಬೆಲೆ ತುಸು ಹೆಚ್ಚಾದರೂ ಅಪರೂಪಕ್ಕೊಮ್ಮೆ ವಿಭಿನ್ನ ಊಟ ಮಾಡುತ್ತಿರುವ ಖುಷಿ ಅವರಲ್ಲಿತ್ತು.

ಗಾಳಿಪಟ ಹಾರಿಸಿ ಸಂಭ್ರಮಿಸಿದ ಜನ

ಇದೇ ಗಾಳಿಪಟ ಬೇಕು, ದಾರದ ಬಣ್ಣ ನಾನು ಹೇಳಿದ್ದೆ ಬೇಕು ಎಂದು ರಚ್ಚೆ ಹಿಡಿಯುತ್ತಿದ್ದ ಮಕ್ಕಳಿಗೆ, ಸಿಗುತ್ತಿದ್ದ ಗಾಳಿಪಟವನ್ನೇ ಹಾರಿಸಲು ಮನವೊಲಿಸುವಷ್ಟರಲ್ಲಿ ಪೋಷಕರು ಸುಸ್ತಾಗುತ್ತಿದ್ದರು. ಸುಡು ಬಿಸಿಲಿನಲ್ಲಿಯೂ ಮಕ್ಕಳು ತಾಸುಗಟ್ಟಲೆ ಗಾಳಿಪಟ ಹಾರಿಸಿದರು. ಆದರೂ ಅವರ  ಉತ್ಸಾಹ ಕುಗ್ಗಿರಲಿಲ್ಲ. ಗಾಳಿಪಟದೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ಮಕ್ಕಳು ಮರೆಯಲ್ಲಿಲ್ಲ.

* ನಗರದ ಜನರಿಗೆ ಹಳ್ಳಿಯ ಮತ್ತು ಕೃಷಿ ಸಂಸ್ಕೃತಿಯ ಪರಿಚಯವಿರುವುದಿಲ್ಲ. ಎಲ್ಲಾ ಧರ್ಮದವರು ಒಟ್ಟಾಗಿ ಈ ಹಬ್ಬ ಆಚರಿಸುವಂತೆ ಮಾಡುವುದು ನನ್ನ ಉದ್ದೇಶವಾಗಿತ್ತು

–ಕೃಷ್ಣ ಬೈರೇಗೌಡ, ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT