ಕೇರಳದ ಉತ್ಸವಗಳಿನ್ನು ‘ಪರಿಸರಸ್ನೇಹಿ’

7

ಕೇರಳದ ಉತ್ಸವಗಳಿನ್ನು ‘ಪರಿಸರಸ್ನೇಹಿ’

Published:
Updated:

ತಿರುವನಂತಪುರ: ಕೇರಳ ಸರ್ಕಾರವು ‘ಪರಿಸರಸ್ನೇಹಿ ನೀತಿ’ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದು, ರಾಜ್ಯದಲ್ಲಿ ನಡೆಯುವ ಎಲ್ಲ ಧರ್ಮಗಳ ಪ್ರಮುಖ ಉತ್ಸವಗಳು ಇನ್ನುಮುಂದೆ ಪರಿಸರಸ್ನೇಹಿಯಾಗಿ ಇರಲಿವೆ.

ಏಷ್ಯಾದಲ್ಲೇ ಅತಿ ದೊಡ್ಡದಾದ ಕ್ರೈಸ್ತರ ‘ಮಾರಾಮನ್‌’ ಸಮ್ಮೇಳನ, ಲಕ್ಷಾಂತರ ಮಹಿಳೆಯರು ಭಾಗವಹಿಸುವ ‘ಆಟ್ಟುಕಾಲ್‌ ಪೊಂಗಾಲ’ ಉತ್ಸವ, ಭೀಮಪಳ್ಳಿಯಲ್ಲಿ ನಡೆಯುವ ಉರುಸ್‌ ಸೇರಿದಂತೆ ರಾಜ್ಯದ ಪ್ರಮುಖ ಕಾರ್ಯಕ್ರಮಗಳು ಪರಿಸರಸ್ನೇಹಿ ನೀತಿಯನ್ನು ಅನುಸರಿಸಲಿದೆ.

ಎಲ್ಲವೂ ಯೋಜನೆಯಂತೆ ನಡೆದರೆ, ಕೇರಳದ ಹಬ್ಬಗಳ ತಾಯಿ ಎಂದು ಕರೆಯುವ ‘ತ್ರಿಶೂರ್ ಪೂರಂ’ ಉತ್ಸವವೂ ಇದೇ ಮಾದರಿಯಲ್ಲಿ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರಿಸರಸ್ನೇಹಿ ಉತ್ಸವ ಆಚರಿಸುವ ಸಂಬಂಧ ಧಾರ್ಮಿಕ ಮುಖಂಡರು ಹಾಗೂ ಜನಪ್ರತಿನಿಧಿಗಳ ಜತೆ, ನೈರ್ಮಲ್ಯದ ಹೊಣೆಹೊತ್ತಿರುವ ರಾಜ್ಯದ ನೋಡಲ್‌ ಏಜೆನ್ಸಿ ‘ಶುಚಿತ್ವ ಅಭಿಯಾನ’ದ ಅಧಿಕಾರಿಗಳು ಈಗಾಗಲೇ ಮಾತುಕತೆ ನಡೆಸಿದ್ದಾರೆ.

ಇತ್ತೀಚೆಗೆ ನಡೆದ ಶಿವಗಿರಿ ಜಾತ್ರೆ, ಪರುಮಾಲ ಚರ್ಚ್‌ ಉತ್ಸವ, ಶಬರಿಮಲೆ ಮಕರವಿಳಕ್ಕು ಉತ್ಸವ ಹಾಗೂ ಮಲಯಟ್ಟೂರ್‌ ಉತ್ಸವವನ್ನೂ ಇದೇ ರೀತಿ ನಡೆಸಲಾಗಿದೆ. ಸಮಾರಂಭ ಆಯೋಜಿಸುವ ಧಾರ್ಮಿಕ ಸಂಸ್ಥೆಗಳು ಹಾಗೂ ಭಕ್ತರು ಪರಿಸರಸ್ನೇಹಿ ವಸ್ತುಗಳನ್ನು ಬಳಸುವುದು, ಪ್ಲಾಸ್ಟಿಕ್‌ ಬ್ಯಾಗ್‌ಗಳ ಬದಲಾಗಿ ಬಟ್ಟೆ ಚೀಲದ ಬಳಕೆ ಮಾಡುವುದರಿಂದ ತ್ಯಾಜ್ಯದ ಸಂಗ್ರಹಣೆ ತಪ್ಪಿಸಿದಂತಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಉತ್ಸವದ ವೇಳೆ ಉತ್ಪತ್ತಿಯಾಗುವ ಆಹಾರ ತ್ಯಾಜ್ಯ ಹಾಗೂ ಪರಿಸರಕ್ಕೆ ಹಾನಿ ಉಂಟುಮಾಡುವ ವಸ್ತುಗಳನ್ನು ತಡೆಯುವುದೇ ಬಹುದೊಡ್ಡ ಸವಾಲು’ ಎಂದು ಶುಚಿತ್ವ ಅಭಿಯಾನದ ನಿರ್ದೇಶಕ ಸಿ.ವಿ.ಜಾಯ್‌ ಹೇಳಿದ್ದಾರೆ.

2015ರಲ್ಲಿ ರಾಜ್ಯದಲ್ಲಿ ನಡೆದ ‘ರಾಷ್ಟ್ರೀಯ ಕ್ರೀಡೆ’ಗಳಲ್ಲಿ ಪರಿಸರಸ್ನೇಹಿ ನೀತಿ ಯಶಸ್ವಿಯಾಗಿ ಜಾರಿಯಾದ ಬಳಿಕ, ರಾಜ್ಯದ ಇತರ ಉತ್ಸವಗಳಿಗೂ ಇದನ್ನು ವಿಸ್ತರಿಸಲು ಶುಚಿತ್ವ ಅಭಿಯಾನವು ನಿರ್ಧಾರ ತೆಗೆದುಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry