ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಕುಂಬಿಯಲ್ಲಿ ಕಾಲುವೆ ಕಾಮಗಾರಿ: ‘ಸುಪ್ರೀಂ‘ ನಿರ್ದೇಶನ ಉಲ್ಲಂಘನೆ

ಮಹದಾಯಿ: ಗೋವಾ ಮುಖ್ಯ ಕಾರ್ಯದರ್ಶಿಯಿಂದ ಕರ್ನಾಟಕಕ್ಕೆ ಪತ್ರ
Last Updated 14 ಜನವರಿ 2018, 20:36 IST
ಅಕ್ಷರ ಗಾತ್ರ

ಪಣಜಿ: ಕಣಕುಂಬಿ ಗ್ರಾಮದಲ್ಲಿ ಮಹದಾಯಿ ನದಿಯ ಉಪನದಿಯಲ್ಲಿ ಕಾಲುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವ ಮೂಲಕ ಕರ್ನಾಟಕವು ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ಉಲ್ಲಂಘಿಸಿದೆ ಎಂದು ಗೋವಾದ ಮುಖ್ಯ ಕಾರ್ಯದರ್ಶಿ ಧರ್ಮೇಂದ್ರ ಶರ್ಮಾ ಅವರು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭ ಅವರಿಗೆ ಪತ್ರ ಬರೆದಿದ್ದಾರೆ.

‘ಪತ್ರದ ಸಂಪೂರ್ಣ ವಿವರ ನನ್ನ ಬಳಿ ಇಲ್ಲ. ಆದರೆ, ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ ಎಂಬುದನ್ನು ಕರ್ನಾಟಕದ ಗಮನಕ್ಕೆ ತಂದಿದ್ದೇವೆ. ಅವರು ಕಾಮಗಾರಿ ನಡೆಸುವಂತಿಲ್ಲ’ ಎಂದು ಗೋವಾ ಮುಖ್ಯಮಂತ್ರಿ ಮನೋಹರ್‌ ಪರ‍್ರೀಕರ್‌ ಹೇಳಿದ್ದಾರೆ.

ಕರ್ನಾಟಕ ಮಾಡಿರುವ ಉಲ್ಲಂಘನೆಯನ್ನು ಸರ್ಕಾರವು ಸುಪ್ರೀಂಕೋರ್ಟ್‌ನ ಗಮನಕ್ಕೆ ತರಲಿದೆ ಎಂದು ಅವರು ಹೇಳಿದ್ದಾರೆ.

ಕಣಕುಂಬಿ ಗ್ರಾಮದಲ್ಲಿ ಕರ್ನಾಟಕ ಕೈಗೆತ್ತಿಕೊಂಡಿದೆ ಎನ್ನಲಾದ ಕಾಮಗಾರಿಯನ್ನು ಪರಿಶೀಲಿಸುವುದಕ್ಕಾಗಿ ಗೋವಾ ಜಲ ಸಂಪನ್ಮೂಲ ಇಲಾಖೆ ಕಳೆದ ಶುಕ್ರವಾರ ತಂಡವೊಂದನ್ನು ಕಳುಹಿಸಿತ್ತು.

ಜಲಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್‌ ಶನಿವಾರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದರು.

ನಂತರ ಪಣಜಿಯಲ್ಲಿ ಮಾತನಾಡಿದ್ದ ಅವರು, ‘ಕರ್ನಾಟಕವು ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ಉಲ್ಲಂಘಿಸಿದೆ. ಆ ಬಗ್ಗೆ ನಮ್ಮ ಬಳಿ ಸಾಕ್ಷ್ಯಗಳಿವೆ. ಮಹದಾಯಿ ನೀರು ಹಂಚಿಕೆ ನ್ಯಾಯಮಂಡಳಿಯಲ್ಲಿ ನಡೆಯುವ ಮುಂದಿನ ವಿಚಾರಣೆ ಸಂದರ್ಭದಲ್ಲಿ ಅದನ್ನು ಸಲ್ಲಿಸುತ್ತೇವೆ’ ಎಂದು ಹೇಳಿದ್ದರು.

ಮಹದಾಯಿ: ಪ್ರಧಾನಿ ಮಧ್ಯಸ್ಥಿಕೆಗೆ ಖರ್ಗೆ ಆಗ್ರಹ

ಮುಗಳಖೋಡ (ಬೆಳಗಾವಿ ಜಿಲ್ಲೆ): ‘ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.

ಇಲ್ಲಿಯ ಜಿಡಗಾ ಮಠದಲ್ಲಿ ಭಾನುವಾರ ನಡೆದ ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆಯ ಸಮಾರೋಪದಲ್ಲಿ ಪಾಲ್ಗೊಂಡಿದ್ದ ಅವರು, ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

‘ಯಾವುದೇ ಎರಡು ರಾಜ್ಯಗಳ ನಡುವೆ ಸಮಸ್ಯೆ ಇದ್ದಾಗ, ಪ್ರಧಾನಿ ಮಧ್ಯಪ್ರವೇಶ ಅವಶ್ಯ ಇರುತ್ತದೆ. ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ನಿವಾರಿಸಲು ಅಂದಿನ ಪ್ರಧಾನಿ ಇಂದಿರಾಗಾಂಧಿ ಮುಂದಾಗಿದ್ದರು. ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮನವೊಲಿಸಿ ತಮಿಳುನಾಡಿಗೆ ನೀರು ಕೊಡಿಸಿದ್ದರು. ಅಂತೆಯೇ ಈಗಿನ ಪ್ರಧಾನಿ ಮನಸ್ಸು ಮಾಡಬೇಕು’ ಎಂದರು.

‘ಗೋವಾ ಮುಖ್ಯಮಂತ್ರಿಗೆ ಪತ್ರ ಬರೆಯುವುದರಿಂದ ಏನೂ ಪ್ರಯೋಜನವಿಲ್ಲ. ಬಿಜೆಪಿಯುವರು ಜನರಿಗೆ ಸುಳ್ಳು ಹೇಳಿ ನಂಬಿಕೆ ದ್ರೋಹ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕೆಟ್ಟ ಪದ ಬಳಕೆ ಖಂಡನೀಯ: ಮುಖ್ಯಮಂತ್ರಿ ಟ್ವೀಟ್‌

ಬೆಂಗಳೂರು: ಕನ್ನಡಿಗರ ಕುರಿತಾದ ಗೋವಾ ನೀರಾವರಿ ಸಚಿವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದ್ದಾರೆ.

‘ಗೋವಾ ನೀರಾವರಿ ಸಚಿವರು ಕನ್ನಡಿಗರ ವಿರುದ್ಧ ಕೆಟ್ಟ ಪದ ಬಳಸಿದ್ದಾರೆ. ಇದು ಅತ್ಯಂತ ಖಂಡನೀಯ. ಗೋವಾ ಜನರ ಬಗ್ಗೆ ನಮಗೆ ದ್ವೇಷ ಇಲ್ಲ. ಆದರೆ, ನಮ್ಮ ಜನರಿಗಾಗಿ ಮಹದಾಯಿಯಿಂದ ನೀರನ್ನು ಪಡೆದೇ ತೀರುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್‌ ಮಾಡಿದ್ದಾರೆ.

‘ಕನ್ನಡಿಗರನ್ನು ಅವಮಾನಿಸಿದ ಗೋವಾ ಮಂತ್ರಿಯನ್ನು ಅಲ್ಲಿನ ಬಿಜೆಪಿ ಸರ್ಕಾರ ತಕ್ಷಣ ವಜಾಗೊಳಿಸಲಿ. ಮಹದಾಯಿ ವಿಚಾರದಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡುವುದನ್ನು ಬಿಜೆಪಿ ನಿಲ್ಲಿಸಲಿ’ ಎಂದು ಕಾಂಗ್ರೆಸ್‌ ನಾಯಕ ಸಿ. ನಾರಾಯಣ ಸ್ವಾಮಿ ಟ್ವಿಟ್‌ ಮಾಡಿದ್ದಾರೆ.

ಗೋವಾ ಸಚಿವರಿಗೆ ಟ್ವಿಟರ್‌ನಲ್ಲಿ ಸಂಸದ ಪ್ರತಾಪಸಿಂಹ ತರಾಟೆ

ಮೈಸೂರು: ಕನ್ನಡಿಗರ ಅವಹೇಳನ ಮಾಡಿರುವ ಗೋವಾ ಬಿಜೆಪಿ ಸರ್ಕಾರದ ನೀರಾವರಿ ಸಚಿವ ವಿನೋದ್ ಪಾಲ್ಯೇಕರ್ ಅವರನ್ನು ಸಂಸದ ಪ್ರತಾಪಸಿಂಹ ಅವರು ಟ್ವಿಟರ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

‘@ಪರ್ರೀಕರ್‌ಜೀ, ಗೋವಾ ಕಾಂಗ್ರೆಸ್‌ನ ಕೊಳಕು ರಾಜಕಾರಣದ ಹೊರತಾಗಿಯೂ ಉದಾರತೆ ತೋರಿರುವ ನಿಮ್ಮನ್ನು ನಾವು ಗೌರವಿಸುತ್ತೇವೆ. ಸರ್‌, ಪದಗಳು ಉಚಿತವಾಗಿ ಸಿಗುತ್ತವೆ. ಆದರೆ. ಅವುಗಳನ್ನು ಬಳಸುವಾಗ ಎಚ್ಚರದಿಂದ ಇರಬೇಕು. ಸರಿಯಾದ ಭಾಷೆ ಬಳಸಿ ಮಾತನಾಡುವಂತೆ ಸಚಿವ ವಿನೋದ್‌ ಪಾಲ್ಯೇಕರ್‌ಗೆ ಸಲಹೆ ನೀಡಿ. ಇಲ್ಲವಾದರೆ ಅವರು ಮತ್ತೊಮ್ಮೆ ಕರ್ನಾಟಕಕ್ಕೆ ಕಾಲಿಟ್ಟರೆ ನಾವೇ ಪಾಠ ಕಲಿಸಬೇಕಾಗುತ್ತದೆ’ ಎಂದು ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕರ್‌ ಅವರ ಟ್ವಿಟರ್‌ ಖಾತೆಗೆ ಟ್ಯಾಗ್ ಮಾಡಿದ್ದಾರೆ.

ಪಾಲ್ಯೇಕರ್‌ ಹೇಳಿಕೆ ಖಂಡನೀಯ: ಯಡಿಯೂರಪ್ಪ

ಬೆಂಗಳೂರು: ಕನ್ನಡಿಗರ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿರುವ ಗೋವಾ ನೀರಾವರಿ ಸಚಿವ ವಿನೋದ ಪಾಲ್ಯೇಕರ್‌ ಅವರ ಹೇಳಿಕೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಟೀಕಿಸಿದ್ದಾರೆ.

‘ಗೋವಾ ಫಾರ್ವರ್ಡ್‌ ಪಕ್ಷದ ನಾಯಕ ಅವಹೇಳನಕಾರಿ ಶಬ್ದಗಳನ್ನು ಬಳಸಿರುವುದು ಸರಿಯಲ್ಲ. ಅದನ್ನು ನಾನು ಕಟು ಶಬ್ದಗಳಲ್ಲಿ ಖಂಡಿಸುತ್ತೇನೆ. ಎರಡು ರಾಜ್ಯಗಳ ನಡುವೆ ಸೌರ್ಹಾರ್ದತೆಯ ವಾತಾವರಣ ನಿರ್ಮಾಣವಾಗುತ್ತಿರುವಾಗ ಪರಿಸ್ಥಿತಿ ಹಾಳುಮಾಡುವ ಇಂತಹ ಬೇಜವಾಬ್ದಾರಿ ಹೇಳಿಕೆಗಳಿಂದ ಯಾರಿಗೂ ಲಾಭವಿಲ್ಲ. ಕನ್ನಡಿಗರ ಬಗ್ಗೆ ಮಾತನಾಡುವ ಅಧಿಕಾರವನ್ನು ಅವರಿಗೆ ಯಾರೂ ನೀಡಿಲ್ಲ. ಕೂಡಲೇ ಪಾಲ್ಯೇಕರ್‌ ಅವರು ಕ್ಷಮೆ ಕೋರಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

***

ಟ್ವೀಟ್ ಪ್ರತಿಕ್ರಿಯೆಗಳು

‘ಕನ್ನಡಿಗರ ವಿರುದ್ಧ ಗೋವಾ ನೀರಾವರಿ ಸಚಿವ ವಿನೋದ ಪಾಲ್ಯೇಕರ್‌ ನೀಡಿರುವ ಹೇಳಿಕೆ ಖಂಡನೀಯ. ಗೋವಾ ಜನರನ್ನು ಮೆಚ್ಚಿಸಲು ಕನ್ನಡಿಗರ ಅವಹೇಳನ ಮಾಡುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರಿಗೆ ಶೋಭೆ ತರುವುದಿಲ್ಲ’
– ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ
*

‘ವಿನೋದ ಪಾಲ್ಯೇಕರ್‌ ಹೇಳಿಕೆ ಅತ್ಯಂತ ನಾಚಿಕೆಗೇಡಿತನದ್ದು. ಬಿ.ಎಸ್‌. ಯಡಿಯೂರಪ್ಪ ಅವರೇ ಪಾಲ್ಯೇಕರ್‌ ನಿಮಗೂ ಕನಿಷ್ಠ ಗೌರವ ಕೊಟ್ಟಿಲ್ಲ. ಕನ್ನಡಿಗರನ್ನು ಅವಹೇಳನ ಮಾಡಿರುವ ಅವರು ನಿಮ್ಮನ್ನೂ ಅವಮಾನಿಸಿದಂತೆ’
– ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಧ್ಯಕ್ಷ
*

‘ಗೋವಾದ ಬಿಜೆಪಿ ಸರ್ಕಾರದಲ್ಲಿರುವ ಸಚಿವರು ಕನ್ನಡಿಗರನ್ನು ಅವಹೇಳನ ಮಾಡಿದ್ದಾರೆ. ಈ ಬಗ್ಗೆ ಬಿ.ಎಸ್‌. ಯಡಿಯೂರಪ್ಪ ಅವರ ನಿಲುವು ಏನು? ನೀರಿನ ವಿಚಾರಕ್ಕೆ ಒಂದು ರಾಜ್ಯದ ಜನರನ್ನು ನಿಂದಿಸುವುದು ಸರಿಯೇ’
– ಮಾಣಿಕಂ ಠಾಕೂರ್‌, ಎಐಸಿಸಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT