ಗವಿಪುರದ ಶಿವಲಿಂಗಕ್ಕೆ ‘ಬೆಳಕಿನ ತಿಲಕ’

7

ಗವಿಪುರದ ಶಿವಲಿಂಗಕ್ಕೆ ‘ಬೆಳಕಿನ ತಿಲಕ’

Published:
Updated:
ಗವಿಪುರದ ಶಿವಲಿಂಗಕ್ಕೆ ‘ಬೆಳಕಿನ ತಿಲಕ’

ಬೆಂಗಳೂರು: ಗವಿಪುರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಜೆ 5.15ಕ್ಕೆ ಶಿವಲಿಂಗದ ಮೇಲೆ ಬೆಳಕಿನ ತಿಲಕ ಮೂಡಿತು. ವರ್ಷದಲ್ಲಿ ಒಂದು ಬಾರಿ ಮಾತ್ರ ಸಂಭವಿಸುವ ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡ ಭಕ್ತ ಸಮೂಹ ಪುಳಕಿತಗೊಂಡಿತು.

ಈ ವರ್ಷ ಮಕರ ಸಂಕ್ರಾತಿ ಹಬ್ಬಕ್ಕೆ ಒಂದು ದಿನ ಮುಂಚಿತವಾಗಿಯೇ ಸೂರ್ಯನ ಕಿರಣಗಳು ಲಿಂಗವನ್ನು ಸ್ಪರ್ಶಿಸಿವೆ. ನೇಸರ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಾಯಿಸುವ ಪುಣ್ಯಕಾಲದಲ್ಲಿ ಸಂಭವಿಸುವ ಈ ವಿದ್ಯಮಾನವನ್ನು ನೋಡಲು ಸಾವಿರಾರು ಮಂದಿ ಸೇರಿದ್ದರು. ಮೈಸೂರು, ಮಂಡ್ಯ, ತುಮಕೂರು, ದೂರದ ಕಲುಬುರ್ಗಿ, ದಾವಣಗೆರೆಯಿಂದಲೂ ಭಕ್ತರು ಬಂದಿದ್ದರು. 

‘ದೇವಾಲಯದ ದಕ್ಷಿಣ ದಿಕ್ಕಿನಲ್ಲಿರುವ ಕಿಟಕಿ ಮೂಲಕ ನಂದಿ ಕೋಡುಗಳ ಮಧ್ಯಭಾಗದಿಂದ ಶಿವನ ಪಾದವನ್ನು ನೇರವಾಗಿ ಸ್ಪರ್ಶಿಸಿ ಸಂಪೂರ್ಣವಾಗಿ ಪಥ ಬದಲಿಸಿತು. 1 ನಿಮಿಷ 7 ಸೆಕೆಂಡ್‌ಗಳ ಕಾಲ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಗೋಚರಿಸಿದವು. ಇಷ್ಟು ದೀರ್ಘ ಕಾಲ ಲಿಂಗದ ಮೇಲೆ ಬೆಳಕು ಮೂಡಿದ್ದು ಇದೇ ಮೊದಲು’ ಎನ್ನುತ್ತಾರೆ ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಎಸ್.ಸೋಮಸುಂದರ್ ದೀಕ್ಷಿತ್‌.

‘ಈ ಅಪೂರ್ವ ದೃಶ್ಯವನ್ನು ನೋಡಲು ಮಧ್ಯಾಹ್ನದಿಂದ ಕಾತುರಳಾಗಿದ್ದೆ. ಆ ಅನುಭವವನ್ನು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ಮನಸ್ಸಿಗೆ ನೆಮ್ಮದಿಯಾಗಿದೆ’ ಎನ್ನುತ್ತಾರೆ ಬಸವನ ಗುಡಿ ನಿವಾಸಿ ಲಕ್ಷ್ಮಿ ಚಂದ್ರು.

‘ದೇವರ ದರ್ಶನ ಮಾಡಿ ಖುಷಿಯಾಗಿದೆ. ಎಲ್ಲರಿಗೂ ಸಂಕ್ರಾಂತಿ ಸುಖ ಸಂತೋಷ ತರಲಿ ಎಂದು ಹಾರೈಸುತ್ತೇನೆ’ ಎಂದು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ತಿಳಿಸಿದರು.

ವೀಕ್ಷಣೆಗೆ ವಿಶೇಷ ವ್ಯವಸ್ಥೆ: ಭಕ್ತರು ದೇವಸ್ಥಾನದ ಆವರಣದಲ್ಲೇ ಈ ಅಪೂರ್ವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅನುಕೂಲವಾಗುವಂತೆ ದೊಡ್ಡ ಪರದೆಗಳನ್ನು ಜೋಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry