‘ಚಾಮರಾಜೇಂದ್ರ ಉದ್ಯಾನ’ ಹೆಸರು ಚಾಲ್ತಿಗೆ ಸಿದ್ಧತೆ

7
ಕಬ್ಬನ್‌ ಪಾರ್ಕ್‌: ಹೈಕೋರ್ಟ್‌ ಬಳಿಯ ಪ್ರವೇಶದ್ವಾರ ಉದ್ಘಾಟನೆಗೆ ಸಜ್ಜು

‘ಚಾಮರಾಜೇಂದ್ರ ಉದ್ಯಾನ’ ಹೆಸರು ಚಾಲ್ತಿಗೆ ಸಿದ್ಧತೆ

Published:
Updated:
‘ಚಾಮರಾಜೇಂದ್ರ ಉದ್ಯಾನ’ ಹೆಸರು ಚಾಲ್ತಿಗೆ ಸಿದ್ಧತೆ

–ಅಮೂಲ್ಯ ಪಿ.ಎಲ್‌.

ಬೆಂಗಳೂರು: ಕಬ್ಬನ್‌ ಉದ್ಯಾನಕ್ಕೆ ‘ಶ್ರೀ ಚಾಮರಾಜೇಂದ್ರ ಉದ್ಯಾನವನ’ ಎಂದು ಮರುನಾಮಕರಣ ಮಾಡಿ 70 ವರ್ಷಗಳೇ ಕಳೆದಿದೆ. ಆದರೆ, ಈಗಲೂ ಹಳೆಯ ಹೆಸರೇ ಚಾಲ್ತಿಯಲ್ಲಿದೆ. ಅಧಿಕೃತ ಹೆಸರನ್ನೇ ಚಾಲ್ತಿಗೆ ತರಲು ನಿರ್ಧರಿಸಿರುವ ತೋಟಗಾರಿಕಾ ಇಲಾಖೆ ಉದ್ಯಾನದ ಎರಡು ದ್ವಾರಗಳಲ್ಲಿ ‘ಶ್ರೀ ಚಾಮರಾಜೇಂದ್ರ ಉದ್ಯಾನವನ’ ಎಂದು ನಾಮಫಲಕ ಹಾಕಲು ಮುಂದಾಗಿದೆ.

ಹೈಕೋರ್ಟ್‌ ಬಳಿ ನಿರ್ಮಾಣವಾಗುತ್ತಿರುವ ನೂತನ ಜಂಟಿ ಪ್ರವೇಶ ದ್ವಾರದ ಮೇಲೆ ‘ಶ್ರೀ ಚಾಮರಾಜೇಂದ್ರ ಉದ್ಯಾನವನ’ (ಕಬ್ಬನ್‌ ಪಾರ್ಕ್‌) ಎಂದು ಬರೆಯಲಾಗಿದೆ. ಈ ಪ್ರವೇಶ ದ್ವಾರದ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದೆ.

ಇಡೀ ಉದ್ಯಾನದಲ್ಲಿ ಎಲ್ಲೂ ನಾಮಫಲಕ ಇರಲಿಲ್ಲ. ಮೊದಲ ಬಾರಿ ಇಲ್ಲಿಗೆ ಬರುವವರಿಗೆ ಇದರಿಂದ ಗೊಂದಲವಾಗುತ್ತಿತ್ತು. ಎರಡೂ ಪ್ರವೇಶ ದ್ವಾರಗಳಲ್ಲಿ ‘ಶ್ರೀ ಚಾಮರಾಜೇಂದ್ರ ಉದ್ಯಾನವನ (ಕಬ್ಬನ್‌ ಪಾರ್ಕ್‌), ತೋಟಗಾರಿಕೆ ಇಲಾಖೆ’ ಎಂದು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಬರೆಯಲಾಗಿದ್ದು, ಕರ್ನಾಟಕ ಸರ್ಕಾರದ ಲಾಂಛನವೂ ದ್ವಾರದ ಮೇಲಿದೆ ಎಂದು ಉದ್ಯಾನದ ಉಪನಿರ್ದೇಶಕ ಮಹಂತೇಶ್‌ ಮುರಗೋಡ ತಿಳಿಸಿದರು

‘ಕಬ್ಬನ್‌ ಉದ್ಯಾನಕ್ಕೆ ಏಳು ಪ್ರವೇಶ ದ್ವಾರಗಳಿವೆ. ಇವುಗಳಲ್ಲಿ  ಹೈಕೋರ್ಟ್‌ ಮತ್ತು ಹಡ್ಸನ್‌ ವೃತ್ತದ ಬಳಿಯ ದ್ವಾರಗಳು ಶಿಥಿಲವಾಗಿದ್ದವು. ಅವುಗಳನ್ನು ಕೆಡವಿದ್ದೇವೆ. ಹೈಕೋರ್ಟ್‌ ಬಳಿ ಹೊಸ ದ್ವಾರ ನಿರ್ಮಿಸಲಾಗುತ್ತಿದೆ. ಇದರ ಆಕಾರವನ್ನು ಹೈಕೋರ್ಟ್ ಕಟ್ಟಡಕ್ಕೆ ಪೂರಕವಾಗಿ

ವಿನ್ಯಾಸಗೊಳಿಸಿದ್ದೇವೆ’ ಎಂದರು.

ಪ್ರವೇಶ ದ್ವಾರದ ಹಿಂಬದಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ‘ಪ್ರಕೃತಿ ದೇವಿಯ ಸೊಬಗು ದೇಗುಲದಿ, ಆನಂದವೇ ಪೂಜೆ ಮೌನವೇ ಮಹಾಸ್ತೋತ್ರ’ ಹಾಗೂ ಕವಿ ಜಿ.ಎಸ್‌. ಶಿವರುದ್ರಪ್ಪ ಅವರ ಕವನವೊಂದರ ‘ದಿನದ ಧೂಳಿನ ಕೊಳೆಯ ತೊಳೆವುದು ಇಲ್ಲಿನ ಅಮೃತದ ಸೇಚನ– ಪ್ರಕೃತಿ ಮಾತೆಯ ಸ್ತನ್ಯಪಾನದಿ ಪುಷ್ಟಿಗೊಳುವುದು ಚೇತನ’ ಎಂಬ ಪರಿಸರ ರಕ್ಷಣೆಯ ಸಂದೇಶ ಸಾರುವ ಸಾಲುಗಳನ್ನು ಬರೆಯಲಾಗಿದೆ.

ಹೈಕೋರ್ಟ್‌ ಬಳಿ ಪ್ರವೇಶ ದ್ವಾರ ಉದ್ಘಾಟನೆಯಾದ ಬಳಿಕ ಹಡ್ಸನ್‌ ವೃತ್ತದ ಬಳಿಯ ಹೊಸ ದ್ವಾರದ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ದ್ವಾರವನ್ನು ನಗರ ಕೇಂದ್ರೀಯ ಗ್ರಂಥಾಲಯದ ಕಟ್ಟಡಕ್ಕೆ ‍ಪೂರಕವಾಗಿ ವಿನ್ಯಾಸಗೊಳಿಸಲಾ

ಗಿದೆ. ಲೋಕೋಪಯೋಗಿ ಇಲಾಖೆಯ ವಾಸ್ತುಶಿಲ್ಪಿಯೊಬ್ಬರು ಈ ದ್ವಾರಗಳ ವಿನ್ಯಾಸ ರೂಪಿಸಿದ್ದಾರೆ.‌

ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಇಲಾಖೆ ಈ ದ್ವಾರಗಳ ನಿರ್ಮಾಣಕ್ಕಾಗಿ ₹ 85 ಲಕ್ಷ ಬಿಡುಗಡೆಗೊಳಿಸಿತ್ತು.

ಸ್ಮಾರ್ಟ್‌ ಲೈಟಿಂಗ್‌ ವ್ಯವಸ್ಥೆ

‘ಬೆಸ್ಕಾಂ ಸಹಯೋಗದೊಂದಿಗೆ ಉದ್ಯಾನದಲ್ಲಿ ಹೆಚ್ಚುವರಿಯಾಗಿ 300 ವಿದ್ಯುತ್‌ ಕಂಬಗಳನ್ನು ಅಳವಡಿಸಲಾಗುವುದು. ಇದರ ಜೊತೆಗೆ 100ರಿಂದ 120 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸುತ್ತೇವೆ’ ಎಂದು ಮಹಂತೇಶ್‌ ತಿಳಿಸಿದರು.

‘ಈಗಿರುವ ಸೋಡಿಯಂ ಬಲ್ಬ್‌ಗಳ ಬದಲು ಎಲ್‌.ಇ.ಡಿ. ಬಲ್ಬ್‌ಗಳನ್ನು ಅಳವಡಿಸುತ್ತೇವೆ. ಈ ಬಲ್ಬ್‌ಗಳಿಗೆ ಸೆನ್ಸರ್‌(ಸಂವೇದಕ) ಅಳವಡಿಸಿದ್ದು, ಮಧ್ಯರಾತ್ರಿ ವೇಳೆ ಇವು ಕಡಿಮೆ ಪ್ರಕಾಶ ಹೊಂದಿರುತ್ತವೆ. ಈ ಹೊತ್ತಿನಲ್ಲಿ ಮನುಷ್ಯರು ಅಥವಾ ಪ್ರಾಣಿಗಳ ಚಲನವಲನ ಕಂಡು ಬಂದಲ್ಲಿ ಹೆಚ್ಚು ಪ್ರಕಾಶಿಸುತ್ತವೆ. ಸಿ.ಸಿ.ಟಿ.ವಿ ಕ್ಯಾಮೆರಾಗಳ ಮೇಲ್ವಿಚಾರಣಾ ಕೊಠಡಿಯನ್ನೂ ನಿರ್ಮಿಸಲಿದ್ದೇವೆ. ಇದರಿಂದ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬಹುದು’ ಎಂದರು.

‘ಉದ್ಯಾನದಲ್ಲಿ 350 ವಿದ್ಯುತ್‌ ಕಂಬಗಳಿವೆ. ಅವುಗಳಲ್ಲಿ ಹಲವು ಶಿಥಿಲಗೊಂಡಿವೆ. ಅವುಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸುತ್ತೇವೆ. ಜೊತೆಗೆ 3.5 ಕಿಲೋ ಮೀಟರ್‌ ಇರುವ ಹೊಸಕೋಟೆ ಮುರಮ್‌ ಮಾರ್ಗದ ಒಂದು ಬದಿಯಲ್ಲಿ 15ರಿಂದ 30 ಮೀಟರ್‌ ಅಂತರದಲ್ಲಿ ಹೆಚ್ಚುವರಿಯಾಗಿ 300 ವಿದ್ಯುತ್‌ ಕಂಬಗಳನ್ನು ಅಳವಡಿಸುತ್ತೇವೆ’ ಎಂದು ತಿಳಿಸಿದರು.

ಉದ್ಯಾನದ ಇತಿಹಾಸ

ಮೈಸೂರು ರಾಜ್ಯದ ಕಮಿಷನರ್ ಜಾನ್ ಮೀಡೆ ಆಳ್ವಿಕೆಯ ಅವಧಿಯಲ್ಲಿ 1868 ರಿಂದ 1872ರ ನಡುವೆ ಈ ಉದ್ಯಾನವನ್ನು ಅಭಿವೃದ್ಧಿಪಡಿಸಲಾಯಿತು. ಆರಂಭದಲ್ಲಿ ಈ ಉದ್ಯಾನವನ್ನು ಮೀಡೆಸ್‌ ಪಾರ್ಕ್ ಎಂದು ಕರೆಯಲಾಗುತ್ತಿತ್ತು. 1873ರಲ್ಲಿ ಮಾರ್ಕ್‌ ಕಬ್ಬನ್‌ ಅವರ ಹೆಸರನ್ನು ಇಡಲಾಯಿತು. 1948 ಜುಲೈ 26ರಂದು ಉದ್ಯಾನಕ್ಕೆ ‘ಶ್ರೀ ಚಾಮರಾಜೇಂದ್ರ ಒಡೆಯರ್’ ಎಂದು ಮರುನಾಮಕರಣ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry