ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಂದವರಿಗೆ ನೆರವಾಗಲು ಸಜ್ಜಾಗುತ್ತಿದೆ ಸ್ವಯಂಸೇವಕ ಪಡೆ

Last Updated 14 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅನ್ಯಾಯಕ್ಕೆ ಒಳಗಾಗಿ ನೊಂದವರಿಗೆ ನೆರವಾಗಲು ಸ್ವಯಂಸೇವಕರ ಪಡೆಯೊಂದು ಸಜ್ಜಾಗುತ್ತಿದೆ. ಇದಕ್ಕಾಗಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭಾಗ್ ಮುಂದಾಳತ್ವದಲ್ಲಿ ತರಬೇತಿ ಶಿಬಿರ ಹಾಗೂ ಸಭೆಗಳನ್ನು ನಡೆಸಲಾಗುತ್ತಿದೆ.

ಮಲ್ಲೇಶ್ವರದಲ್ಲಿ ಭಾನುವಾರ ಈ ಸಲುವಾಗಿ ನಡೆದ ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸಕ್ತರು ಭಾಗವಹಿಸಿದರು.

‘ಅನ್ಯಾಯಕ್ಕೊಳಗಾಗಿ ನೊಂದವರಿಗೆ ನ್ಯಾಯ ಕೊಡಿಸಲು 40 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ನಮ್ಮ ಪ್ರತಿಷ್ಠಾನಕ್ಕೆ ಪ್ರತಿದಿನ ಏನಿಲ್ಲವೆಂದರೂ 20–30 ಪ್ರಕರಣಗಳು ಬರುತ್ತಿವೆ. ಈವರೆಗೆ 36 ಸಾವಿರ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುವಂತೆ ಮಾಡಿರುವ ತೃಪ್ತಿ ನಮ್ಮದು. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಇನ್ನಷ್ಟು ಸ್ವಯಂಸೇವಕರ ಅಗತ್ಯವಿದೆ’ ಎಂದು ಶಾನುಭಾಗ್ ಹೇಳಿದರು.

‘ಮೈಸೂರು, ಬಳ್ಳಾರಿ, ಕಲಬುರ್ಗಿ, ಕೊಚ್ಚಿ, ಹೈದರಾಬಾದ್‌ ಸೇರಿದಂತೆ ಅನೇಕ ಕಡೆಗಳಿಂದ ಜನರು ಸಮಸ್ಯೆ ಹೇಳಿಕೊಂಡು ನಮ್ಮ ಬಳಿ ಬರುತ್ತಾರೆ. ಕೇವಲ ಒಂದು ತಂಡದಿಂದ ಎಲ್ಲರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಾಧ್ಯವಿಲ್ಲ. ಅಲ್ಲದೆ, ಜನರಿಗೆ ಪ್ರಯಾಣ, ಊಟ ಹಾಗೂ ವಸತಿಗೆಂದು ಸಾವಿರಾರು ರೂಪಾಯಿ ವೆಚ್ಚವಾಗುತ್ತಿದೆ. ಅವರಿದ್ದ ಸ್ಥಳದಲ್ಲೇ ಸ್ವಯಂ ಸೇವಕರಿದ್ದರೆ, ಸಮಸ್ಯೆಗಳನ್ನು ಪರಿಹರಿಸಬಹುದು. ಹೀಗಾಗಿ ಆಸಕ್ತರಿಗೆ ತರಬೇತಿ ನೀಡುತ್ತಿದ್ದೇವೆ. ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲೂ ಇಂತಹ ಸಭೆಗಳನ್ನು ಏರ್ಪಡಿಸಲಾಗುತ್ತಿದೆ’ ಎಂದು ಹೇಳಿದರು.

‘ನಮಗೆ ವ್ಯವಸ್ಥೆಯ ವಿರುದ್ಧ ಅನೇಕ ಸಲ ಕೋಪ ಬರುತ್ತದೆ. ಏನಾದರೂ ಮಾಡಬೇಕು ಎನಿಸುತ್ತದೆ. ಆದರೆ ನಮ್ಮದೇ ಜಂಜಾಟಗಳಲ್ಲಿ ಸಿಲುಕಿದ್ದೇವೆ.  ಕೆಲಸದ ಒತ್ತಡದ ನಡುವೆಯೂ ಈ ಸಮಸ್ಯೆಗಳಿಗೆ ಪರಿಹಾರ ಸಿಗುವಂತೆ ಮಾಡಲು ನೆರವಾಗಬಹುದು. ಅಹಿಂಸಾ ಮಾರ್ಗದ ಮೂಲಕ, ಒಂದು ರೂಪಾಯಿಯನ್ನೂ ಖರ್ಚು ಮಾಡದೆಯೂ ಜನರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ನ್ಯಾಯ ಒದಗಿಸಬಹುದು’ ಎಂದು ಹೇಳಿದರು.‌

ಮೂರು ಷರತ್ತು:

‘ಸ್ವಯಂಸೇವಕರಾಗುವವರು ರಾಜಕೀಯ ಪಕ್ಷಗಳ ಜತೆ ಗುರುತಿಸಿಕೊಳ್ಳುವಂತಿಲ್ಲ. ರಾಜಕೀಯಕ್ಕೆ ಹೋದರೂ, ನಮ್ಮ ಸಂಘಟನೆಯ ಹೆಸರನ್ನು ಬಳಸಿಕೊಳ್ಳುವಂತಿಲ್ಲ. ಅಳಲು ತೋಡಿಕೊಂಡು ಬರುವ ವ್ಯಕ್ತಿಗಳಿಂದ ಹಣ ಪಡೆಯುವಂತಿಲ್ಲ. ಪ್ರಶಸ್ತಿ ಪಡೆಯುವ ಹಂಬಲ ಇಟ್ಟುಕೊಳ್ಳಬಾರದು’ ಎಂದು ಅವರು ಕಟ್ಟುನಿಟ್ಟಿನ ಷರತ್ತು ವಿಧಿಸಿದರು.

ಮೈಸೂರಿನಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ಆಸಕ್ತರು ಪ್ರತಿ ವಾರ ಒಂದೆಡೆ ಕಲೆತು ಸಣ್ಣ ಪುಟ್ಟ ಪ್ರಕರಣಗಳನ್ನು ಬಗೆಹರಿಸುವುದು ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಬಳಿಕ, ಅವರಿಗೆ ಉಡುಪಿಯಲ್ಲಿ ಶಿಬಿರ ನಡೆಸಲಾಗುತ್ತದೆ. ಶಿವಮೊಗ್ಗ, ಧಾರವಾಡದಲ್ಲೂ ಸಭೆ ನಡೆಸುವ ಉದ್ದೇಶವಿದೆ ಎಂದು ಪತ್ರಕರ್ತೆ ಕುಸುಮಾ ತಿಳಿಸಿದರು.

ಸಂಪರ್ಕ: 7892034519

ಹೋರಾಟಕ್ಕೆ ಧುಮುಕಿದ್ದು ಹೀಗೆ..

‘1975ರ ತುರ್ತು ಪರಿಸ್ಥಿತಿ ಸಂದರ್ಭ. ಆಗ ತಾನೇ ನನ್ನ ಪದವಿ ವ್ಯಾಸಂಗ ಮುಗಿದಿತ್ತು. ಕೆಲಸಕ್ಕಾಗಿ ನವೆಂಬರ್‌ 16ರಂದು ವಿದೇಶಕ್ಕೆ ಹೋಗಬೇಕಿತ್ತು. 14ರಂದು ಆಟದ ಮೈದಾನದಲ್ಲಿ ನಾವು ಗುಂಪುಗೂಡಿದ್ದೆವು. ಜೆ.ಪಿ. ಚಳವಳಿಯಲ್ಲಿ ಭಾಗವಹಿಸಿದ ನೆಪದಲ್ಲಿ ಪೊಲೀಸರು ನಮ್ಮನ್ನು ಜೈಲಿಗಟ್ಟಿದ್ದರು. ಅಲ್ಲಿನ ವ್ಯವಸ್ಥೆ ಕಂಡು, ಈ ಹೋರಾಟಕ್ಕೆ ಧುಮುಕಿದೆ’ ಎಂದು ರವೀಂದ್ರನಾಥ ಶಾನುಭಾಗ್‌ ನೆನಪು ಮಾಡಿಕೊಂಡರು.

ಗುಂಡುಗಳು ಹೊಕ್ಕರೂ ಬದುಕಿದ ಅರಣ್ಯ ರಕ್ಷಕ

ಅನ್ಯಾಯಕ್ಕೊಳಗಾದವರಿಗೆ ಕಾನೂನು ಹೋರಾಟದ ಮೂಲಕವೇ ನ್ಯಾಯ ಒದಗಿಸಿದ ಪ್ರಕರಣಗಳನ್ನು ಶಾನುಭಾಗ್‌ ಉದಾಹರಣೆ ನೀಡಿದರು.

‘ಮನೋಹರ್‌ (19) ಎಂಬುವರ ತಂದೆ ಕೊಡಗಿನಲ್ಲಿ ಅರಣ್ಯ ರಕ್ಷಕರಾಗಿದ್ದರು. ಮರಗಳ ಕಳ್ಳ ಸಾಗಣೆ ಸಂದರ್ಭದಲ್ಲಿ ಅವರ ತಂದೆಯನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದರು. ಅನುಕಂಪದ ಆಧಾರದ ಮೇಲೆ ಮನೋಹರ್‌ ಅವರಿಗೆ ಅದೇ ಹುದ್ದೆ ಸಿಕ್ಕಿತ್ತು. ಮೂರು ತಿಂಗಳ ಬಳಿಕ, ದುಷ್ಕರ್ಮಿಗಳು ಮನೋಹರ್‌ಗೂ ಗುಂಡಿಕ್ಕಿದ್ದರು. 20ಕ್ಕೂ ಹೆಚ್ಚಿನ ಗುಂಡುಗಳು ಅವರ ದೇಹ ಹೊಕ್ಕಿದ್ದವು. ಅವರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.’

‘12 ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಅವರ ದೇಹದಿಂದ ಗುಂಡುಗಳನ್ನು ಹೊರ ತೆಗೆಯಲಾಗಿತ್ತು. ಚಿಕಿತ್ಸೆಗೆ ₹4.5 ಲಕ್ಷ ಖರ್ಚಾಗಿತ್ತು.  ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಮತ್ತು ಕೆಲಸದಲ್ಲಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಕಾನೂನು ಹೋರಾಟ ನಡೆಸಿದೆವು. ಇದಕ್ಕೆ ಮಣಿದ ಸರ್ಕಾರ ಕೊನೆಗೂ ಅವರಿಗೆ ₹4.5 ಲಕ್ಷ ನೀಡಿತು. ಈ ಹಣವನ್ನು ಸಾಲಗಾರರಿಗೆ ಮರಳಿಸಿದರು. ಕೆಲಸದಲ್ಲಿ ಮುಂದುವರಿಯಲು ಸರ್ಕಾರ ಅವಕಾಶ ಕಲ್ಪಿಸಿತು’ ಎಂದು ಶಾನುಭಾಗ್‌ ತಿಳಿಸಿದರು.

‘ಶಾಲೆಯೊಂದರಲ್ಲಿ ₹15 ಸಂಬಳಕ್ಕೆ 22 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಅಕ್ಕು ಮತ್ತು ಲೀಲಾ ಪ್ರಕರಣದಲ್ಲೂ ಸುದೀರ್ಘ ಕಾನೂನು ಹೋರಾಟ ನಡೆಸಿದ್ದೇವೆ. ಅವರಿಗೆ ₹27 ಲಕ್ಷ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT