ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲ್ಲಹಳ್ಳಿ ಕ್ವಾರಿಗೆ ದಕ್ಷಿಣ ಭಾಗದ ಕಸ

Last Updated 14 ಜನವರಿ 2018, 19:23 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ದಕ್ಷಿಣ ಭಾಗದ ಕಸವನ್ನು ಬನ್ನೇರುಘಟ್ಟ ರಸ್ತೆಯ ಹುಲ್ಲಹಳ್ಳಿ ಕ್ವಾರಿಗೆ ಕಸ ಸಾಗಿಸಲು ಬಿಬಿಎಂಪಿ ನಿರ್ಧರಿಸಿದೆ.ಇಲ್ಲಿರುವ 8 ಎಕರೆಯ ಕ್ವಾರಿಗೆ ಪ್ರತಿದಿನ 500 ಟನ್‌ ಕಸವನ್ನು ಸಾಗಿಸಲು ಉದ್ದೇಶಿಸಲಾಗಿದೆ.

‘ಈ ಕ್ವಾರಿಗೆ ಹೋಗಲು ಸಮರ್ಪಕ ರಸ್ತೆ ಇಲ್ಲ. ರಸ್ತೆಗೆ 100 ಮೀಟರ್‌ನಷ್ಟು ಜಾಗದ ಅಗತ್ಯವಿದೆ. ಆ ಜಾಗವನ್ನು ಖಾಸಗಿಯವರಿಂದ ಸ್ವಾಧೀನ ಪಡಿಸಿಕೊಳ್ಳಬೇಕಿದ್ದು, ಈ ಬಗ್ಗೆ ಭೂಮಾಲೀಕರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಜಾಗ ಸಿಕ್ಕ ಬಳಿಕ ರಸ್ತೆ ನಿರ್ಮಿಸಿ, ಕಸ ಸಾಗಿಸುತ್ತೇವೆ’ ಎಂದು ಪಾಲಿಕೆಯ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಕ್ಷಿಣ ಭಾಗದ ಕಸವನ್ನು ಉತ್ತರ ಭಾಗದ ಬಾಗಲೂರು, ಬೆಲ್ಲಹಳ್ಳಿ ಹಾಗೂ ಮಿಟ್ಟಗಾನಹಳ್ಳಿ ಕ್ವಾರಿಗಳಿಗೆ ಸಾಗಿಸಲಾಗುತ್ತಿದೆ. ಪ್ರತಿದಿನ 2,000 ಟನ್‌ನಷ್ಟು ಕಸ ರವಾನೆಯಾಗುತ್ತಿದೆ. ಇದಕ್ಕಾಗಿ 150 ಲಾರಿಗಳು ಬಳಕೆಯಾಗುತ್ತಿದ್ದು, ಪ್ರತಿ ಲಾರಿಗೆ ತಿಂಗಳಿಗೆ ₹30 ಸಾವಿರದಿಂದ ₹40 ಸಾವಿರ ಹೆಚ್ಚುವರಿ ವೆಚ್ಚವಾಗುತ್ತಿದೆ. ಹುಲ್ಲಹಳ್ಳಿಯಲ್ಲಿ ಕಸ ವಿಲೇವಾರಿ ಮಾಡುವುದರಿಂದ ಸಾಗಣೆ ವೆಚ್ಚ ಗಣನೀಯವಾಗಿ ಕಡಿಮೆ ಆಗಲಿದೆ’ ಎಂದರು.

ಬಾಗಲೂರು ಕ್ವಾರಿಯ ಎರಡೂವರೆ ಎಕರೆಯಲ್ಲಿ ಕಸ ಸುರಿಯಲಾಗಿದ್ದು, ಅಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಇನ್ನೂ ಎರಡು ಎಕರೆಯಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಮಹದೇವಪುರ ಕ್ಷೇತ್ರದ ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ಕಸ ಸುರಿಯದಂತೆ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಿಗೆ ಕಸ ಸಾಗಣೆಯನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದರು.

ಬೆಲ್ಲಹಳ್ಳಿ ಕ್ವಾರಿಯು 12 ಎಕರೆ ಹೊಂದಿದ್ದು, 6 ಎಕರೆಯಲ್ಲಿ ಕಸ ಸುರಿಯಲಾಗಿದೆ. ಇಲ್ಲಿ ಈ ಹಿಂದೆ ಪ್ರತಿದಿನ 1,000 ಟನ್‌ ಕಸವನ್ನು ವಿಲೇವಾರಿ ಮಾಡಲಾಗುತ್ತಿತ್ತು. ಮಿಟ್ಟಗಾನಹಳ್ಳಿ ಕ್ವಾರಿ ಬಂದ್‌ ಆಗಿರುವುದರಿಂದ ಬೆಲ್ಲಹಳ್ಳಿ ಕ್ವಾರಿಗೆ 1,500 ಟನ್‌ ಕಸ ಸಾಗಿಸಲಾಗುತ್ತಿದೆ. ಮಿಟ್ಟಗಾನಹಳ್ಳಿಯಲ್ಲಿ ಕಟ್ಟಡದ ಅವಶೇಷಗಳನ್ನು ವಿಲೇವಾರಿ ಮಾಡಲು ನಿರ್ಧರಿಸಿದ್ದೇವೆ’ ಎಂದರು.

‌‘ಸ್ಥಳೀಯರ ವಿರೋಧದಿಂದಾಗಿ ಕನ್ನಹಳ್ಳಿ ಹಾಗೂ ಸೀಗೆಹಳ್ಳಿಯ ಕಸ ಸಂಸ್ಕರಣಾ ಘಟಕಗಳನ್ನು ನಿಲ್ಲಿಸಲಾಗಿದೆ’ ಎಂದು ತಿಳಿಸಿದರು.

ಕಣ್ಣೂರು ಕ್ವಾರಿಯಲ್ಲಿ ಕಟ್ಟಡ ತ್ಯಾಜ್ಯ

ನಗರದಲ್ಲಿ ಉತ್ಪತ್ತಿಯಾಗುವ ಕಟ್ಟಡದ ಅವಶೇಷಗಳನ್ನು ಮರು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ, ಬಹಳಷ್ಟು ಮಂದಿ ಕಟ್ಟಡದ ಅವಶೇಷಗಳನ್ನು ಕೆರೆ ಹಾಗೂ ರಸ್ತೆ ಪಕ್ಕ ಸುರಿಯುತ್ತಿದ್ದಾರೆ. ಇದನ್ನು ತಡೆಗಟ್ಟಲು ಕಣ್ಣೂರು ಕ್ವಾರಿಯಲ್ಲಿ ಕಟ್ಟಡ ತ್ಯಾಜ್ಯ ಸುರಿಯಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಈ ಕ್ವಾರಿ 12 ಎಕರೆ ಇದೆ. ಇದರ ಪ್ರಸ್ತಾವವನ್ನು ಪಾಲಿಕೆಗೆ ಸಲ್ಲಿಸಿದ್ದು, ಕೌನ್ಸಿಲ್‌ ಸಭೆಯ ಅನುಮೋದನೆ ಸಿಗುವುದು ಬಾಕಿ ಇದೆ ಎಂದು ಸರ್ಫರಾಜ್‌ ಖಾನ್‌ ತಿಳಿಸಿದರು.

‘ಭೂಭರ್ತಿಯಿಂದ ಪರಿಸರಕ್ಕೆ ಹಾನಿ ಇಲ್ಲ’

ಕಸದಿಂದ ಉತ್ಪತ್ತಿಯಾಗುವ ರಸವು (ಲಿಚೆಟ್‌) ಅಂತರ್ಜಲ ಸೇರಬಾರದು ಎಂಬ ಉದ್ದೇಶದಿಂದ ಕ್ವಾರಿಗಳಲ್ಲಿ ಕಸ ಸುರಿಯುವ ಮುನ್ನ ಡಾಂಬರುಯುಕ್ತ ಟಾರ್ಪಲ್‌ಗಳನ್ನು ಹಾಕಲಾಗುತ್ತದೆ. ತ್ಯಾಜ್ಯ ರಸವನ್ನು ಸಂಗ್ರಹಿಸಲು ಅಲ್ಲಲ್ಲಿ ಸಣ್ಣ ಬಾವಿಗಳನ್ನು ನಿರ್ಮಿಸಲಾಗುತ್ತದೆ. ಇದರಲ್ಲಿ ಸಂಗ್ರಹಗೊಂಡ ತ್ಯಾಜ್ಯರಸವನ್ನು ಸಂಸ್ಕರಣಾ ಘಟಕದಲ್ಲಿ ಶುದ್ಧೀಕರಿಸಲಾಗುತ್ತದೆ. ಈ ನೀರನ್ನು ಉದ್ಯಾನಗಳಿಗೆ, ವಾಹನ ತೊಳೆಯಲು ಬಳಕೆ ಮಾಡಿಕೊಳ್ಳಲಾಗುತ್ತದೆ. ಭೂಭರ್ತಿ ಮಾಡಿದ ಬಳಿಕ, ಅಲ್ಲಿ ಉದ್ಯಾನ ಹಾಗೂ ರೇಸ್‌ ಟ್ಯಾಕ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಭೂಭರ್ತಿಯಿಂದ ಪರಿಸರ ಹಾನಿ ಉಂಟಾಗುವುದಿಲ್ಲ ಎಂದು ಸರ್ಫರಾಜ್‌ ಖಾನ್‌ ತಿಳಿಸಿದರು.

ಅಂಕಿ–ಅಂಶ

4,000 ಟನ್‌‌ -ನಗರದಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಕಸ


1,500 ಟನ್‌ -ಕ್ವಾರಿಗಳಲ್ಲಿ ವಿಲೇವಾರಿ ಮಾಡುತ್ತಿರುವ ಕಸ


₹60 ಲಕ್ಷ -ದಕ್ಷಿಣ ಭಾಗದ ಕಸ ಸಾಗಣೆಗೆ ಪ್ರತಿ ತಿಂಗಳು ತಗಲುತ್ತಿರುವ ಹೆಚ್ಚುವರಿ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT