ಅವಮಾನಕಾರಿ ಪದ ಹಿಂಪಡೆದ ಪಾಲ್ಯೇಕರ್‌

7
ಕರ್ನಾಟಕದವರು ಹರಾಮಿಗಳು: ಗೋವಾ ಸಚಿವ ಟೀಕೆ

ಅವಮಾನಕಾರಿ ಪದ ಹಿಂಪಡೆದ ಪಾಲ್ಯೇಕರ್‌

Published:
Updated:
ಅವಮಾನಕಾರಿ ಪದ ಹಿಂಪಡೆದ ಪಾಲ್ಯೇಕರ್‌

ಬೆಳಗಾವಿ: ‘ಕರ್ನಾಟಕದವರು ಹರಾಮಿಗಳು; ಅವರು ಏನನ್ನಾದರೂ ಮಾಡಬಲ್ಲರು’ ಎಂದು ಭಾನುವಾರ ಪಣಜಿಯಲ್ಲಿ ಹೇಳಿಕೆ ನೀಡಿದ ಗೋವಾದ ಜಲ ಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್‌, ತುಸು ಹೊತ್ತಿನಲ್ಲೇ ಆ ಮಾತನ್ನು ಹಿಂಪಡೆದರು.

ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಕಳಸಾ ನಾಲಾ ಕಾಮಗಾರಿ ಸ್ಥಳವನ್ನು ಶನಿವಾರ ಪರಿಶೀಲಿಸಿದ್ದರು.

ಕಾಮಗಾರಿ ವೀಕ್ಷಣೆಗೆ ಪೊಲೀಸ್ ಭದ್ರತೆಯಲ್ಲಿ ಹೋಗಿದ್ದರ ಔಚಿತ್ಯ ಪ್ರಶ್ನಿಸಿದ್ದ ಪಣಜಿಯ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಅವರು, ‘ಕರ್ನಾಟಕದವರು ಹರಾಮಿಗಳು. ಹೀಗಾಗಿ, ಪೊಲೀಸ್‌ ಭದ್ರತೆಯಲ್ಲಿ ಹೋಗಬೇಕಾಯಿತು’ ಎಂದಿದ್ದರು.

ನಂತರ, ‘ನನ್ನ ಹೇಳಿಕೆ ವಾಪಸ್‌ ಪಡೆದಿದ್ದೇನೆ. ಮಾತಿನ ಭರದಲ್ಲಿ, ಉದ್ವೇಗದಲ್ಲಿ ಹೀಗೆ ಹೇಳಿದ್ದೆ. ಅವಹೇಳನಕಾರಿಯಾದ ಆ ಪದವನ್ನು ತೆಗೆದುಹಾಕಿರಿ’ ಎಂದು ಕೋರಿದರು.

ಕರ್ನಾಟಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅವರು, ‘ಆ ಸರ್ಕಾರ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದೆ. ಮಹದಾಯಿ ವಿಚಾರದಲ್ಲಿ ಕೆಟ್ಟ ರಾಜಕಾರಣ ಮಾಡುತ್ತಿದೆ. ಗೋವಾ ಮುಖ್ಯಮಂತ್ರಿ ಮನೋಹರ್ ಪರ‍್ರೀಕರ್‌ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಬರೆದ ಪತ್ರ ನ್ಯಾಯಾಲಯದ ಆದೇಶ ಅಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮಹದಾಯಿ ನಮ್ಮ ತಾಯಿ. ಕರ್ನಾಟಕದಲ್ಲಿ ರೈತರು ಪ್ರತಿಭಟನೆ ಮಾಡಿದರೆ ನಮಗೇನು? ಈ ವಿವಾದ ನ್ಯಾಯಮಂಡಳಿಯಲ್ಲಿ ಇತ್ಯರ್ಥವಾಗುವವರೆಗೆ ನೀರು ನೀಡುವ ಪ್ರಶ್ನೆಯೇ ಇಲ್ಲ’ ಎಂದು ಪುನರುಚ್ಚರಿಸಿದರು.

ರಾಜ್ಯದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಕೂಡ ಕಳಸಾ ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಲಿದ್ದಾರೆ.

ಮಹದಾಯಿಗಾಗಿ ದೆಹಲಿಯಲ್ಲಿ ಸತ್ಯಾಗ್ರಹ(ಕೂಡಲಸಂಗಮ ವರದಿ): ಮಹದಾಯಿ ವಿವಾದವನ್ನು ಬಗೆಹರಿಸುವಂತೆ ಪ್ರಧಾನಿಗೆ ಒತ್ತಾಯಿಸಿ, ಮಾರ್ಚ್‌ 23ರಂದು ನವದೆಹಲಿಯಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಭಾನುವಾರ ತಿಳಿಸಿದರು.

ರಾಜ್ಯ ಮಟ್ಟದ ಹೋರಾಟವನ್ನು ರಾಷ್ಟ್ರ ಮಟ್ಟಕ್ಕೆ ಒಯ್ಯುತ್ತಿದ್ದು, ಇದರಲ್ಲಿ ರಾಜ್ಯದ 10 ಸಾವಿರ ರೈತರು ಭಾಗವಹಿಸುವರು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry