ಅಡ್ಡಾದಿಡ್ಡಿ ಚಾಲನೆ; ಆಫ್ರಿಕಾ ಪ್ರಜೆ ಸಾವು

7

ಅಡ್ಡಾದಿಡ್ಡಿ ಚಾಲನೆ; ಆಫ್ರಿಕಾ ಪ್ರಜೆ ಸಾವು

Published:
Updated:
ಅಡ್ಡಾದಿಡ್ಡಿ ಚಾಲನೆ; ಆಫ್ರಿಕಾ ಪ್ರಜೆ ಸಾವು

ಬೆಂಗಳೂರು: ಕಂಠಪೂರ್ತಿ ಮದ್ಯ ಕುಡಿದು ಮನೆಗೆ ಹೊರಟಿದ್ದ ಆಫ್ರಿಕಾ ಪ್ರಜೆ, ಹೆಣ್ಣೂರು ಸಮೀಪದ ಗೆದ್ದಲಹಳ್ಳಿಯಲ್ಲಿ ಭಾನುವಾರ ರಾತ್ರಿ ಅಡ್ಡಾದಿಡ್ಡಿಯಾಗಿ ಕಾರು ಓಡಿಸಿದ್ದಾರೆ. ಗೋಡೆ ಹಾಗೂ ರಸ್ತೆ ವಿಭಜಕಕ್ಕೆ ಕಾರು ಗುದ್ದಿಸಿದ್ದು, ಈ ಅವಘಡದಲ್ಲಿ ಚಾಲಕ ಅಸಮಿ ಬಲಿದ್ವಾಜಿ (24) ಮೃತಪಟ್ಟಿದ್ದಾರೆ.

ವಿದ್ಯಾರ್ಥಿ ವೀಸಾದಡಿ ದೇಶಕ್ಕೆ ಬಂದಿದ್ದ ಆಫ್ರಿಕಾದ ನಿವಾಸಿ ಅಸಮಿ, ನಗರದ ಆಚಾರ್ಯ ಕಾಲೇಜಿನಲ್ಲಿ ಬಿಸಿಎ ಕೋರ್ಸ್‌ ವ್ಯಾಸಂಗ ಮಾಡುತ್ತಿದ್ದರು. ಕಾರಿನಲ್ಲಿದ್ದ ಅವರ ಸ್ನೇಹಿತರಾದ ಪಿಯೋಟ್ರಪೆ (27) ಹಾಗೂ ಬ್ರೂನೊ (32) ಎಂಬುವರು ಗಾಯಗೊಂಡಿದ್ದಾರೆ. ಪೀಪಲ್‌ ಟ್ರೀ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಅಸಮಿ ಅವರ ಬಗ್ಗೆ ಮಾತ್ರ ಮಾಹಿತಿ ಸಿಕ್ಕಿದೆ. ಇನ್ನಿಬ್ಬರ ಬಗ್ಗೆ ಗೊತ್ತಾಗಿಲ್ಲ. ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತರಿಸಿಕೊಂಡ ಬಳಿಕ ಮಾಹಿತಿ ತಿಳಿದುಕೊಳ್ಳಲಿದ್ದೇವೆ’ ಎಂದು ಬಾಣಸವಾಡಿ ಸಂಚಾರ ಪೊಲೀಸರು ತಿಳಿಸಿದರು.

‘ನಾಲ್ವರು ಸ್ನೇಹಿತರು ಬಾಣಸವಾಡಿಯಲ್ಲಿ ಒಂದೇ ಮನೆಯಲ್ಲಿ ವಾಸವಿದ್ದರು. ಪಬ್‌ಗೆ ಹೋಗಿ ಪಾರ್ಟಿ ಮಾಡಲು ನಿರ್ಧರಿಸಿದ್ದ ಅವರೆಲ್ಲ ಅಸಮಿ ಕಾರಿನಲ್ಲಿ (ಕೆಎ 03 ಎಂಬಿ 9489) ಶನಿವಾರ ರಾತ್ರಿ ಹೊರಗಡೆ ಹೋಗಿದ್ದರು. ಭಾನುವಾರ ನಸುಕಿನವರೆಗೆ ಪಾರ್ಟಿ ಮಾಡಿದ್ದ ಅವರು, 4 ಗಂಟೆಗೆ ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ’ ಎಂದರು.

‘ಅಸಮಿ ಕಾರು ಚಾಲನೆ ಮಾಡುತ್ತಿದ್ದರು. ಗೆದ್ದಲಹಳ್ಳಿ ಬಳಿ ಬರುತ್ತಿದ್ದಂತೆ, ಕಾರಿನ ನಿಯಂತ್ರಣ ಕಳೆದುಕೊಂಡಿದ್ದರು. ಏಕಾಏಕಿ ಕಾರು, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಅಲ್ಲಿಂದ ರಸ್ತೆಗೆ ಬಂದು ಪಕ್ಕದ ಬೀಡಾ ಅಂಗಡಿಯ ಗೋಡೆಗೆ ಗುದ್ದಿತ್ತು. ಇದರಿಂದಾಗಿ ಕಾರು ಜಖಂಗೊಂಡು ನಾಲ್ವರೂ ಒಳಗೆ ಸಿಲುಕಿಕೊಂಡಿದ್ದರು. ಕುಡಿದ ಅಮಲಿನಲ್ಲಿದ್ದ ಅವರು ಹೊರಗೆ ಬರಲು ಸಾಧ್ಯವಾಗಿರಲಿಲ್ಲ.’

‘ಜೋರಾದ ಶಬ್ದ ಕೇಳಿ ಸ್ಥಳದಲ್ಲಿ ಸೇರಿದ್ದ ಸ್ಥಳೀಯರು, ಕಾರಿನಲ್ಲಿದ್ದ ಒಬ್ಬನನ್ನು ರಕ್ಷಿಸಿದರು. ಉಳಿದ ಮೂವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅಸಮಿ ಅಸುನೀಗಿದರು’ ಎಂದು ತಿಳಿಸಿದರು.

ಮೃತನ ವಿರುದ್ಧವೇ ಎಫ್‌ಐಆರ್‌:

‘ಕುಡಿದು ಅಮಲಿನಲ್ಲಿ ವಾಹನ ಚಲಾಯಿಸಿದ್ದರಿಂದ ಈ ಅವಘಡ ಸಂಭವಿಸಿದೆ. ಮೃತಪಟ್ಟಿರುವ ಚಾಲಕನ ವಿರುದ್ಧವೇ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ಗಾಯಾಳು ಹಾಗೂ ಸ್ಥಳೀಯರನ್ನು ಸಾಕ್ಷಿಯನ್ನಾಗಿ ಪರಿಗಣಿಸಿದ್ದೇವೆ’ ಎಂದು ಬಾಣಸವಾಡಿ ಪೊಲೀಸರು ತಿಳಿಸಿದರು.

‘ಶ್ರೀನಿವಾಸ್‌ ಎಂಬುವರಿಗೆ ಸೇರಿದ್ದ ಬೀಡಾ ಅಂಗಡಿಯ ಗೋಡೆ ಬಿದ್ದಿದೆ. ಅದರ ಪಕ್ಕದ ಕಟ್ಟಡದಲ್ಲಿದ್ದ ಕಬ್ಬಿಣದ ಮೆಟ್ಟಿಲುಗಳೂ ಜಖಂಗೊಂಡಿವೆ. ನಸುಕಿನಲ್ಲಿ ರಸ್ತೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಸ್ಥಳೀಯರಿಗೆ ಯಾವುದೇ ತೊಂದರೆ ಆಗಿಲ್ಲ’ ಎಂದು ಹೇಳಿದರು.

‘ಕುಡಿದು ವಾಹನ ಚಲಾಯಿಸುವವರ ಪತ್ತೆಗಾಗಿ ಸಿಬ್ಬಂದಿಯು ಗೆದ್ದಲಹಳ್ಳಿ ವೃತ್ತದಲ್ಲಿ ರಾತ್ರಿ 1 ಗಂಟೆವರೆಗೆ ವಾಹನಗಳ ತಪಾಸಣೆ ನಡೆಸಿದ್ದರು. ಬಳಿಕ ಹೊರಟು ಹೋಗಿದ್ದರು. ಅದೇ ಮಾರ್ಗದಲ್ಲೇ ನಸುಕಿನಲ್ಲಿ ಆಫ್ರಿಕಾ ಪ್ರಜೆಗಳು ಬಂದಿದ್ದರು’ ಎಂದರು.

********

ಟೆಂಪೊ ಗುದ್ದಿ ವೃದ್ಧೆ ಸಾವು

ಬೆಂಗಳೂರು: ಬಳ್ಳಾರಿ ರಸ್ತೆಯ ಪ್ಯಾಲೇಸ್ ಗುಟ್ಟಹಳ್ಳಿ ವೃತ್ತದಲ್ಲಿ ಟೆಂಪೊ ಗುದ್ದಿದ್ದರಿಂದ ಪಾದಚಾರಿ ಚಿನ್ನಕನ್ನು (75) ಎಂಬುವರು ಮೃತಪಟ್ಟಿದ್ದಾರೆ.

ತಮಿಳುನಾಡಿನ ವೆಲ್ಲೂರಿನ ಅವರು ನಗರದಲ್ಲಿರುವ ಸಂಬಂಧಿಕರನ್ನು ನೋಡಲು ಬೆಳಿಗ್ಗೆ ಬಂದಿದ್ದರು. ಬಸ್ಸಿನಿಂದ ಇಳಿದು ಸಂಬಂಧಿಕರ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

‘ಬೆಳಿಗ್ಗೆ 6.10 ಗಂಟೆಗೆ ಚಿನ್ನಕನ್ನು ಅವರಿಗೆ ಟೆಂಪೊ ಗುದ್ದಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಸ್ಥಳೀಯರು ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ಮೃತಪಟ್ಟಿರುವುದಾಗಿ ಹೇಳಿದರು. ಘಟನೆ ಸಂಬಂಧ ಚಾಲಕನನ್ನು ಬಂಧಿಸಿ ಟೆಂಪೊ ಜಪ್ತಿ ಮಾಡಿದ್ದೇವೆ’ ಎಂದು ಸದಾಶಿವನಗರ ಸಂಚಾರ ಪೊಲೀಸರು ತಿಳಿಸಿದರು.

ಭದ್ರತಾ ಸಿಬ್ಬಂದಿ ಸಾವು:

ಹಲಸೂರು ಬಳಿಯ ಗಂಗಾಧರ ಚೆಟ್ಟಿ ರಸ್ತೆಯಲ್ಲಿ ಸ್ಕೂಟರ್‌ ಗುದ್ದಿ ಭದ್ರತಾ ಸಿಬ್ಬಂದಿ ಪೂರ್ಣ ಬಹದ್ದೂರ್‌ (41) ಎಂಬುವರು ಮೃತಪಟ್ಟಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಭಾನುವಾರ ರಾತ್ರಿ 11 ಗಂಟೆಗೆ ಮನೆಗೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

‘ಕುಡಿದ ಅಮಲಿನಲ್ಲಿದ್ದ ವಿಜಯ್‌ ಎಂಬುವರು ಸ್ಕೂಟರ್‌ ಓಡಿಸಿಕೊಂಡು ಬಂದು ಪೂರ್ಣ ಅವರಿಗೆ ಗುದ್ದಿಸಿದ್ದರು. ಗಾಯಗೊಂಡ ಪೂರ್ಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು, ಮೃತಪಟ್ಟಿರುವುದಾಗಿ ಹೇಳಿದರು’ ಎಂದು ಪೊಲೀಸರು ತಿಳಿಸಿದರು.

‘ಸ್ಕೂಟರ್‌ ಹಿಂಬದಿ ಸವಾರ ಹರಿಕಿರಣ್‌ ಎಂಬುವರು ಗಾಯಗೊಂಡಿದ್ದಾರೆ. ವಿಜಯ್‌ನನ್ನು ಬಂಧಿಸಿ ಸ್ಕೂಟರ್‌ ಜಪ್ತಿ ಮಾಡಿದ್ದೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry