ಒಳ ಮೀಸಲಾತಿ: ಮುಖ್ಯಮಂತ್ರಿ ಸಭೆ ವಿಫಲ

7
ಕಿತ್ತಾಟ ಸರಿಯಲ್ಲ, ಚುನಾವಣೆ ಮೇಲೆ ಪರಿಣಾಮ: ಸಿದ್ದರಾಮಯ್ಯ ಆತಂಕ

ಒಳ ಮೀಸಲಾತಿ: ಮುಖ್ಯಮಂತ್ರಿ ಸಭೆ ವಿಫಲ

Published:
Updated:
ಒಳ ಮೀಸಲಾತಿ: ಮುಖ್ಯಮಂತ್ರಿ ಸಭೆ ವಿಫಲ

ಬೆಂಗಳೂರು:‌ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನ ಕುರಿತಂತೆ ಕೇಂದ್ರಕ್ಕೆ ಶಿಫಾರಸು ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಕರೆದಿದ್ದ ದಲಿತ ಸಮುದಾಯದ ಸಚಿವರು ಶಾಸಕರು, ಸಂಸದರ ಸಭೆ ಸ್ಪಷ್ಟ ತೀರ್ಮಾನ ಕೈಗೊಳ್ಳಲು ವಿಫಲವಾಯಿತು.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಾಲ್ಕು ತಾಸು ನಡೆದ ಚರ್ಚೆಯಲ್ಲಿ ಪರಿಶಿಷ್ಟ ಜಾತಿಯ ಎಡಗೈ ಹಾಗೂ ಬಲಗೈ ಬಣಗಳ ಮಧ್ಯೆ ಒಮ್ಮತ ಮೂಡದಿದ್ದುದ್ದರಿಂದ ಮುಂದಿನ ಹೆಜ್ಜೆ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲು ನಿರ್ಧರಿಸಲಾಗಿದೆ.

‘ಪರಿಶಿಷ್ಟ ಜಾತಿ, ಪಂಗಡದವರಿಗೆ ಒಳ ಮೀಸಲಾತಿ ನೀಡುವಂತೆ ಶಿಫಾರಸು ಮಾಡಿ ಸದಾಶಿವ ಆಯೋಗ ವರದಿ ಕೊಟ್ಟಿದೆ.  ವರದಿ ಜಾರಿಗೆ ಶಿಫಾರಸು ಮಾಡಿದರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಸಹಾಯವಾಗಲಿದೆ’ ಎಂದು ಮುಖ್ಯಮಂತ್ರಿಯ ಮನವೊಲಿಸಲು ಎಡಗೈ ಬಣದ ನಾಯಕರು ಯತ್ನಿಸಿದರು ಎಂದು ಮೂಲಗಳು ತಿಳಿಸಿವೆ.

ಆದರೆ, ಈ ಒತ್ತಡಕ್ಕೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮತ್ತು ಸಚಿವ ಎಚ್.ಸಿ. ಮಹದೇವಪ್ಪ, ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದರು. ‘ಈ ರೀತಿ ಮಾಡುವುದರಿಂದ ಚುನಾವಣೆಯಲ್ಲಿ ಬಲಗೈ ಸಮುದಾಯದ ಮತಗಳು ನಷ್ಟವಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, 50ಕ್ಕೂ ಹೆಚ್ಚು ಕ್ಷೇತ್ರಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಚುನಾವಣಾ ಹತ್ತಿರದಲ್ಲಿರುವಾಗ ವರದಿಯ ಜಾರಿಗೆ ಶಿಫಾರಸು ಮಾಡಬಾರದು’ ಎಂದು ಆಗ್ರಹಿಸಿದರು ಎಂದು ಗೊತ್ತಾಗಿದೆ.

ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ ಸಂಸದ ಕೆ.ಎಚ್‌. ಮುನಿಯಪ್ಪ, ‘ಎಡಗೈ ಸಮುದಾಯದ ಮತಗಳು ರಾಜ್ಯದಲ್ಲಿ ಹೆಚ್ಚಿವೆ. ಈ ಸಮುದಾಯದ ಬಹುತೇಕರಿಗೆ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಹೀಗಾಗಿ, ಒಳ ಮೀಸಲಾತಿ ಕಲ್ಪಿಸುವ ಈ ವರದಿಯನ್ನು ಅನುಷ್ಠಾನ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಇದರಿಂದ ಹೆಚ್ಚು ಮತ ಪಡೆಯಬಹುದು’ ಎಂದು ಮನವಿ ಮಾಡಿದರು.

’ಬೇರೆ ಸಮುದಾಯಗಳಿಗೆ ಹೋಲಿಸಿದರೆ ಹೆಚ್ಚು ಜನಸಂಖ್ಯೆ ಇರುವ ಮಾದಿಗ ಸಮುದಾಯ ಅತ್ಯಂತ ಹಿಂದುಳಿದಿದೆ. ಹೀಗಾಗಿ ವರದಿ ಅನುಷ್ಠಾನ ಆಗಲೇಬೇಕು’ ಎಂದು ಸಚಿವ ಆಂಜನೇಯ ಆಗ್ರಹಿಸಿದರು. ಆಗ, ಶಾಸಕ ಪಿ.ಎಂ. ನರೇಂದ್ರ ಸ್ವಾಮಿ, ‘ಅಂಜನೇಯ ಹೇಳಿದಂತೆ ಮಾಡಿದರೆ ಸಮಸ್ಯೆ ಹೆಚ್ಚುತ್ತದೆ. ಚುನಾವಣೆ ಸಮಯದಲ್ಲಿ ಇಂಥ ರಿಸ್ಕ್ ತಗೆದುಕೊಳ್ಳುವುದು ಬೇಡ. ಹಿಂದಿನಿಂದಲೂ ಒಂದೇ ರೀತಿಯ ಸೌಲಭ್ಯಗಳು ಎಲ್ಲರಿಗೂ ಸಿಕ್ಕಿದೆ. ಅದನ್ನು ಕೆಲವರು ಉಪಯೋಗಿಸಿಕೊಂಡರು. ಕೆಲವರು ಕೈಚೆಲ್ಲಿದರು. ಇವತ್ತು ನೀವು ಜಾರಿ ಮಾಡಿದರೆ, ಇನ್ನೊಂದು ಸಮುದಾಯ ನ್ಯಾಯಾಲಯಕ್ಕೆ ಹೋಗುವುದಿಲ್ಲ ಎಂಬುದಕ್ಕೆ ಗ್ಯಾರೆಂಟಿ ಏನು’ ಎಂದು ಪ್ರಶ್ನಿಸಿದರು.

‘ಚುನಾವಣೆ ಬರುತ್ತಿದೆ. ಈಗ ವರದಿ ಜಾರಿ ಮಾಡದಿದ್ದರೆ ಪಕ್ಷದ ಮೇಲೆ ಪರಿಣಾಮ ಮೇಲೆ ಬೀರಬಹುದು’ ಎಂದು ಸಚಿವ ಆರ್‌.ಬಿ. ತಿಮ್ಮಾಪೂರ ಹೇಳಿದರು ಎಂದು ಗೊತ್ತಾಗಿದೆ.

‘ಚುನಾವಣೆ ಹತ್ತಿರ ಇರುವುದರಿಂದ ಪರಸ್ಪರ ಕಿತ್ತಾಟ ಸರಿಯಲ್ಲ. ಎಲ್ಲರೂ ಒಂದಾಗಿರಬೇಕು. ಆಯೋಗದ ವರದಿಯನ್ನು ಚುನಾವಣೆಯ ನಂತರ ಶಿಫಾರಸು ಮಾಡುವ ಬಗ್ಗೆ ಒಟ್ಟಾಗಿ ತೀರ್ಮಾನಿಸೋಣ’ ಎಂದು ಮುಖ್ಯಮಂತ್ರಿ ಹೇಳಿದಾಗ, ಮುನಿಯಪ್ಪ ವಿರೋಧ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

‘ಚುನಾವಣೆ ಸಂದರ್ಭದಲ್ಲಿ ಯಾವುದೇ ನಿರ್ಧಾರ ಕೈಗೊಂಡರೂ ಪಕ್ಷಕ್ಕೆ ಹಿನ್ನಡೆ ಆಗಬಹುದು. ಅಷ್ಟೇ ಅಲ್ಲ, ಪರಿಶಿಷ್ಟರ ಅಭಿವೃದ್ಧಿಗೆ ₹ 27 ಸಾವಿರ ಕೋಟಿ ಅನುದಾನ ನೀಡಿದ್ದರೂ ಪಕ್ಷಕ್ಕೇನೂ ಅನುಕೂಲವಾಗದು. ಆದ್ದರಿಂದ ವರದಿಯನ್ನು ಮುಂದಿನ ಸರ್ಕಾರದ ಹೆಗಲಿಗೆ ಹಾಕೋಣ’ ಎನ್ನುವ ಮುಖ್ಯಮಂತ್ರಿ ಮಾತಿಗೆ ಎಡಗೈ ನಾಯಕರು ಒಪ್ಪಲಿಲ್ಲ.

ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಸಿಡಿಮಿಡಿಗೊಂಡ ಮುನಿಯಪ್ಪ, ‘ಈ ರೀತಿ ಮಾಡುವುದರಿಂದ ಮುಂದಿನ ಚುನಾವಣೆಯಲ್ಲಾಗುವ ಪರಿಣಾಮಗಳಿಗೆ ನೀವೇ ಹೊಣೆಗಾರರಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರೂ ಎಂದೂ ಗೊತ್ತಾಗಿದೆ.

ವರದಿ ಜಾರಿಯಿಂದ ರಾಜಕೀಯ ಲಾಭ– ಎಡಗೈ ಬಣ

50 ಕ್ಷೇತ್ರಗಳಲ್ಲಿ ನಷ್ಟ– ಬಲಗೈ ಬಣ

ಮುಖ್ಯಮಂತ್ರಿ ವಿರುದ್ಧ ಮುನಿಯಪ್ಪ ಸಿಡಿಮಿಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry