ದಂಪತಿಯ ₹ 52.85 ಲಕ್ಷದ ಚಿನ್ನ ಲೂಟಿ!

7

ದಂಪತಿಯ ₹ 52.85 ಲಕ್ಷದ ಚಿನ್ನ ಲೂಟಿ!

Published:
Updated:

ಬೆಂಗಳೂರು: ನಾಲ್ಕು ಬೈಕ್‌ಗಳಲ್ಲಿ ಬಂದ ಎಂಟು ದುಷ್ಕರ್ಮಿಗಳು, ಚಂದ್ರಾಲೇಔಟ್ ಪೊಲೀಸ್ ಠಾಣೆ ಸಮೀಪವೇ ಹಿರಿಯ ದಂಪತಿಯಿಂದ 1‌ ಕೆ.ಜಿ, 695 ಗ್ರಾಂ ಚಿನ್ನಾಭರಣ ಹಾಗೂ ₹ 2 ಲಕ್ಷ ‌ನಗದು ಇದ್ದ ಬ್ಯಾಗ್ ಕಿತ್ತುಕೊಂಡು ಹೋಗಿದ್ದಾರೆ.‌

ಜ.8ರ ಬೆಳಿಗ್ಗೆ 11.30ರ ಸುಮಾರಿಗೆ ಈ ಪ್ರಸಂಗ ನಡೆದಿದ್ದು, ಆರ್‌.ಸರೋಜಾ (54) ಎಂಬುವರು ದೂರು ಕೊಟ್ಟಿದ್ದಾರೆ. ಕೃತ್ಯದ ಹಿಂದೆ ಆಂಧ್ರಪ್ರದೇಶದ ‘ಓಜಿಕುಪ್ಪಂ’ ಗ್ಯಾಂಗ್‌ ಕೈವಾಡವಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಪೊಲೀಸರು, ಐದು ತಂಡಗಳನ್ನು ರಚಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಲೋಕೋಪಯೋಗಿ ಇಲಾಖೆಯ ನಿವೃತ್ತ ಎಂಜಿನಿಯರ್ ರಾಜಣ್ಣ ಹಾಗೂ ಅವರ ಪತ್ನಿ ಸರೋಜಾ, ಕುಟುಂಬ ಸದಸ್ಯರ ಜತೆ ನಾಗರಬಾವಿ ವೃತ್ತದ ನ್ಯೂ ಇನ್‌ಕಮ್ ಟ್ಯಾಕ್ಸ್ ಲೇಔಟ್‌ನಲ್ಲಿ ನೆಲೆಸಿದ್ದಾರೆ. ಹಣ–ಚಿನ್ನಾಭರಣವನ್ನು ಚಂದ್ರಾಲೇಔಟ್‌ನ ಅಪೆಕ್ಸ್‌ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ ದಂಪತಿ, ಸಂಬಂಧಿಕರ ಮದುವೆ ಸಮಾರಂಭದಲ್ಲಿ ಕುಟುಂಬ ಸದಸ್ಯರು ಧರಿಸಲೆಂದು ಅವುಗಳನ್ನು ತರಲು ನಿರ್ಧರಿಸಿದ್ದರು.

ಅಂತೆಯೇ ಜ.8ರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬ್ಯಾಂಕ್‌ಗೆ ತೆರಳಿ, 11 ಚಿನ್ನದ ಸರಗಳು ಸೇರಿದಂತೆ 1.695 ಗ್ರಾಂ ಚಿನ್ನಾಭರಣ ಹಾಗೂ ₹ 2 ಲಕ್ಷ ಬಿಡಿಸಿದ್ದರು. ಈ ಸಂದರ್ಭದಲ್ಲಿ ದುಷ್ಕರ್ಮಿಗಳಿಬ್ಬರು ಗ್ರಾಹಕರ ಸೋಗಿನಲ್ಲಿ ಬ್ಯಾಂಕ್‌ನಲ್ಲೇ ಓಡಾಡಿಕೊಂಡಿದ್ದರು. ಇದು ಅಲ್ಲಿನ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬ್ಯಾಂಕ್‌ನಿಂದ ಹಿಂಬಾಲಿಸಿದ್ದಾರೆ: ದಂಪತಿ ಒಡವೆ  ಪಡೆದಿದ್ದನ್ನು ನೋಡಿದ ಕೂಡಲೇ ಹೊರ ಬಂದ ಅವರಿಬ್ಬರೂ, ಆಚೆ ಇದ್ದ ಇತರೆ ಸದಸ್ಯರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಅವರು ದಂಪತಿಯ ಕಾರಿನ ಹಿಂದಿನ ಟೈರ್ ಪಂಕ್ಚರ್ ಮಾಡಿದ್ದಾರೆ.

ಇದನ್ನು ಗಮನಿಸದ ದಂಪತಿ, ನಗ–ನಾಣ್ಯವಿದ್ದ ಬ್ಯಾಗನ್ನು ಹಿಂದಿನ ಸೀಟಿನಲ್ಲಿ ಇಟ್ಟುಕೊಂಡು ಅಲ್ಲಿಂದ ಹೊರಟಿದ್ದಾರೆ. ಈ ವೇಳೆ ಬೈಕ್‌ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು, ಬ್ಯಾಂಕ್‌ನಿಂದ ಸುಮಾರು 300 ಮೀಟರ್‌ ದೂರದಲ್ಲಿರುವ ವಿದ್ಯಾಗಿರಿ ಲೇಔಟ್‌ನಲ್ಲಿ ದಂಪತಿಯ ವಾಹನ ನಿಲ್ಲಿಸಿದ್ದಾರೆ. ‘ಹಿಂದಿನ ಟೈರ್ ಪಂಕ್ಚರ್ ಆಗಿದೆ ನೋಡಿ’ ಎಂದು ಹೇಳಿ ಗಮನ ಬೇರೆಡೆ ಸೆಳೆಯಲು ಯತ್ನಿಸಿದ್ದಾರೆ.

ಅವರನ್ನು ನೋಡಿ ಹೆದರಿದ ರಾಜಣ್ಣ, ‘ಪಂಕ್ಚರ್ ಆಗಿದ್ದರೂ ಪರ್ವಾಗಿಲ್ಲ. ಸ್ವಲ್ಪ ದೂರದಲ್ಲೇ ನಮ್ಮ ಮನೆ ಇದೆ. ಹೀಗೆಯೇ ಹೋಗುತ್ತೇವೆ’ ಎಂದು ಹೇಳಿ ಕಿಟಕಿ ಗಾಜುಗಳನ್ನು ಮೇಲೇರಿಸಿಕೊಂಡು ಹೊರಟಿದ್ದಾರೆ. ಚಂದ್ರಾಲೇಔಟ್ ಠಾಣೆಯಿಂದ 200 ಮೀಟರ್ ದೂರದಲ್ಲಿರುವ ತಮ್ಮ ಮನೆ ಹತ್ತಿರ ಬಂದು, ಬ್ಯಾಗ್‌ನೊಂದಿಗೆ ಕಾರಿನಿಂದ ಕೆಳಗಿಳಿದಿದ್ದಾರೆ. ಆದರೆ, ಹಿಂಬಾಲಿಸಿಕೊಂಡೇ ಬಂದಿದ್ದ ದುಷ್ಕರ್ಮಿಗಳು, ಅವರ ಕೈಲಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಕ್ಷಣಾರ್ಧದಲ್ಲಿ ನಡೆದ ಈ ಕೃತ್ಯದಿಂದ ದಿಕ್ಕು ತೋಚದಂತಾದ ದಂಪತಿ, ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಅವರ ಚೀರಾಟ ಕೇಳಿ ಮನೆಗಳಿಂದ ಹೊರಬಂದ ಸ್ಥಳೀಯರು, ತಮ್ಮ ತಮ್ಮ ವಾಹನಗಳಲ್ಲೇ ಸುತ್ತಮುತ್ತಲ ರಸ್ತೆಗಳಲ್ಲಿ ಆ ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ನಂತರ ದಂಪತಿ ಠಾಣೆಗೆ ತೆರಳಿ ದೂರು ಕೊಟ್ಟಿದ್ದಾರೆ.

‘ಬ್ಯಾಂಕ್‌ನಿಂದ ದಂಪತಿ ಮನೆಗೆ ಬಂದ ಮಾರ್ಗದಲ್ಲಿರುವ ಎಲ್ಲ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನೂ ಪರಿಶೀಲಿಸುತ್ತಿದ್ದೇವೆ. ಎಂಟು ಮಂದಿಯೂ ಹೆಲ್ಮೆಟ್ ಧರಿಸಿದ್ದು, ಕೃತ್ಯಕ್ಕೆ ಕಪ್ಪು ಬಣ್ಣದ ಪಲ್ಸರ್ ಬೈಕ್ ಹಾಗೂ ಬಿಳಿ ಬಣ್ಣದ ಹೋಂಡಾ ಆ್ಯಕ್ಟಿವಾ ಸ್ಕೂಟರ್‌ಗಳನ್ನು ಬಳಸಿದ್ದಾರೆ. ಬ್ಯಾಂಕ್‌ನ ಕ್ಯಾಮೆರಾದಲ್ಲಿ ಇಬ್ಬರ ಚಹರೆ ಸಿಕ್ಕಿದೆ. ಆ ಸುಳಿವಿನ ಮೇಲೆಯೇ ತನಿಖೆ ಪ್ರಾರಂಭಿಸಿದ್ದೇವೆ’ ಎಂದು ಚಂದ್ರಾಲೇಔಟ್ ಪೊಲೀಸರು ತಿಳಿಸಿದ್ದಾರೆ.

‘ಓಜಿಕುಪ್ಪಂ ಗ್ಯಾಂಗ್‌ನವರೇ ಕೃತ್ಯ ಎಸಗಿರುವ ಬಗ್ಗೆ ಬಲವಾದ ಶಂಕೆ ಇದೆ. ಇದೇ ಸೆ.15ರಂದು ಅಮೃತಹಳ್ಳಿ ಪೊಲೀಸರು ಈ ಗ್ಯಾಂಗ್‌ನ ಶ್ರೀನಿವಾಸುಲು ಹಾಗೂ ಸುರೇಶ್ ಎಂಬುವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈಗ ಅವರಿಬ್ಬರನ್ನು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

ನಂಬರ್ ಪ್ಲೇಟ್ ಇರಲಿಲ್ಲ

‘ಕಳವಾಗಿರುವ ಒಡವೆಗಳ ಮೌಲ್ಯ ₹ 52.85 ಲಕ್ಷ. ಅವುಗಳಲ್ಲಿ ನನ್ನ ಅಳಿಯ ಹಾಗೂ ಭಾಮೈದನಿಗೆ ಸೇರಿದ ಆಭರಣಗಳೂ ಇವೆ. ಬಂದವರು ಹೆಲ್ಮೆಟ್ ಧರಿಸಿದ್ದರಿಂದ ಚಹರೆ ಕಾಣಿಸಲಿಲ್ಲ. ಬೈಕ್‌ಗಳಿಗೆ ನಂಬರ್‌ ಪ್ಲೇಟ್ ಸಹ ಇರಲಿಲ್ಲ’ ಎಂದು ರಾಜಣ್ಣ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ಬ್ಯಾಂಕ್‌ನಿಂದ ಹೋಗುವಾಗ ಎಚ್ಚರ’

‘ಈ ಗ್ಯಾಂಗ್‌ ಸದಸ್ಯರು ಅಂಗಿ ಮೇಲೆ ಗಲೀಜು ಎರಚಿ, ರಸ್ತೆ ಮೇಲೆ ನೋಟುಗಳನ್ನು ಎಸೆದು, ವಾಹನದ ಟೈರ್ ಪಂಕ್ಚರ್ ಆಗಿದೆ ಎಂದು ಸುಳ್ಳು ಹೇಳಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ವಂಚಿಸುತ್ತಿದ್ದಾರೆ. ಬ್ಯಾಂಕ್‌ನಿಂದ ಹಣ ಬಿಡಿಸಿಕೊಂಡು ಹೋಗುವವರು ಮಾರ್ಗಮಧ್ಯೆ ಎದುರಾಗುವ ಇಂಥ ಯಾವುದೇ ವ್ಯಕ್ತಿಗಳ ಜತೆಗೂ ಮಾತನಾಡಬೇಡಿ’ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಡೋರ್ ‍‍ಪುಶಿಂಗ್ ಅಫೆನ್ಸ್!

ಓಜಿಕುಪ್ಪಂ ಗ್ಯಾಂಗ್ ವಿರುದ್ಧ ಬೆಂಗಳೂರು ಮಾತ್ರವಲ್ಲದೆ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ 130 ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಹೊಸ ಹೊಸ ತಂತ್ರಗಳನ್ನು ಬಳಸಿ, ತಿರುಪತಿಯ ದೇವಾಲಯಗಳಲ್ಲೂ ಭಕ್ತರ ಬ್ಯಾಗ್‌ಗಳನ್ನು ದೋಚುತ್ತಿದ್ದಾರೆ.

ಅಲ್ಲಿನ ಕೆಲ ದೇವಾಲಯಗಳಲ್ಲಿ ಭಕ್ತರು ತಂಗಲು ಕೊಠಡಿಗಳ ವ್ಯವಸ್ಥೆ ಇದೆ. ಸಾಮಾನ್ಯವಾಗಿ ಆ ಕೊಠಡಿಗಳ ಬಾಗಿಲುಗಳನ್ನು ಪೂರ್ಣವಾಗಿ ಬಂದ್ ಮಾಡುವುದಿಲ್ಲ. ರಾತ್ರಿ ವೇಳೆ ಬಾಗಿಲು ತೆಗೆದು ಒಳನುಗ್ಗುವ ಇವರು, ಭಕ್ತರ ಬ್ಯಾಗ್ ಎಗರಿಸುತ್ತಿದ್ದಾರೆ. ಸ್ಥಳೀಯ ಪೊಲೀಸರು ಇದಕ್ಕೆ, ‘ಡೋರ್ ‍‍ಪುಶಿಂಗ್ ಅಫೆನ್ಸ್’ ಎಂಬ ಹೆಸರಿಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry