ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

766ನೇ ದಿನಕ್ಕೆ ತಲುಪಿದ ಯುವಕನ ಪ್ರತಿಭಟನೆ

ಪೊಲೀಸರ ವಶದಲ್ಲಿದ್ದ ವೇಳೆ ಸಹೋದರನ ಸಾವು– ಸಿಬಿಐ ತನಿಖೆಗೆ ಒತ್ತಾಯಿಸಿ ಧರಣಿ
Last Updated 14 ಜನವರಿ 2018, 19:37 IST
ಅಕ್ಷರ ಗಾತ್ರ

ತಿರುವನಂತಪುರ: ಪೊಲೀಸರ ವಶದಲ್ಲಿದ್ದ ಸಂದರ್ಭದಲ್ಲಿ ಸಹೋದರ ಸಾವನ್ನಪ್ಪಿದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಯುವಕನೊಬ್ಬ ಕೇರಳ ಸಚಿವಾಲಯ ಕಟ್ಟಡದ ಮುಂದೆ 766 ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ರಾಜ್ಯಾದಾದ್ಯಂತ ಬೆಂಬಲ ವ್ಯಕ್ತವಾಗಿದೆ.

ಸಹೋದರನ ಸಾವಿಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ 29 ವರ್ಷದ ಶ್ರೀಜಿತ್‌ ಕಳೆದ ಒಂದು ವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದರಿಂದ ಮಾಹಿತಿ ಪಡೆದು, ರಾಜ್ಯದ ವಿವಿಧೆಡೆಗಳಿಂದ ಭಾನುವಾರ ಪ್ರತಿಭಟನಾ ಸ್ಥಳಕ್ಕೆ ಬಂದ ಯುವಕರು ‘ಶ್ರೀಜಿತ್‌ಗೆ ನ್ಯಾಯ ಒದಗಿಸಿ’ ಎಂಬ ಫಲಕಗಳನ್ನು ಹಿಡಿದು ಬೆಂಬಲ ವ್ಯಕ್ತಪಡಿಸಿದರು. ಬೆಳಿಗ್ಗೆ ನಗರದಲ್ಲಿ ನಡೆದ ಪಾದಯಾತ್ರೆಯಲ್ಲಿ ಸಾಕಷ್ಟು ಮಹಿಳೆಯರು ಭಾಗವಹಿಸಿದ್ದರು.

ಶ್ರೀಜಿತ್‌ ಹೋರಾಟಕ್ಕೆ ರಾಜಕೀಯ ನಾಯಕರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಮುಖಂಡ ವಿ.ಎಂ.ಸುಧೀರನ್‌, ಮಲಯಾಳ ನಟ ಟೊವಿನೊ ಥಾಮಸ್‌ ಸ್ಥಳಕ್ಕೆ ಬಂದು ಉತ್ತೇಜನ ನೀಡಿದರು.

‘ಶ್ರೀಜಿತ್‌ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಬೇಡಿಕೆಗೆ ಸ್ಪಂದಿಸಬೇಕು ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ನ ಮುಖಂಡರು ಶನಿವಾರ ಒತ್ತಾಯಿಸಿದ್ದರು.

ಈ ಹಿಂದೆ, ಪ್ರಕರಣವನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಸಿಬಿಐ ರಾಜ್ಯ ಸರ್ಕಾರಕ್ಕೆ ಪ್ರತಿಕ್ರಿಯಿಸಿತ್ತು. ಇದೀಗ, ತನ್ನ ನಿರ್ಧಾರವನ್ನು ಪುನರ್‌ ಪರಿಶೀಲಿಸುವಂತೆ ಕೋರಿ ಸಿಬಿಐಗೆ ಪತ್ರ ಬರೆಯಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಮೊಬೈಲ್‌ ಕಳ್ಳತನ ಪ್ರಕರಣದಲ್ಲಿ 2014ರ ಮೇ ತಿಂಗಳಿನಲ್ಲಿ ಶ್ರೀಜಿತ್‌ ಸಹೋದರ ಶ್ರೀಜೀವ್‌ ಅವರನ್ನು ಪರಸ್ಸಾಲ ಪೊಲೀಸರು ಬಂಧಿಸಿದ್ದರು. ಎರಡು ದಿನಗಳ ಬಳಿಕ ಮನೆಯವರಿಗೆ ಕರೆ ಮಾಡಿದ್ದ ಪೊಲೀಸರು, ಶ್ರೀಜೀವ್‌ ಠಾಣೆಯಲ್ಲಿ ವಿಷಸೇವಿಸಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದರು. ಇದಾದ ಬಳಿಕ, ಪೊಲೀಸ್‌ ದೂರುಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಕೇರಳ ಸರ್ಕಾರವು ಕುಟುಂಬದವರಿಗೆ ₹10 ಲಕ್ಷ ಪರಿಹಾರ ವಿತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT