‘ಆಯ್ಕೆ ವಹಿವಾಟಿ’ಗೆ ಚವಳಿಕಾಯಿ ಬೀಜ

7
‘ಎನ್‌ಸಿಡಿಇಎಕ್ಸ್‌’ಗೆ ಮೊದಲ ಕೃಷಿ ಉತ್ಪನ್ನ * ರೈತರಿಗೆ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆ

‘ಆಯ್ಕೆ ವಹಿವಾಟಿ’ಗೆ ಚವಳಿಕಾಯಿ ಬೀಜ

Published:
Updated:
‘ಆಯ್ಕೆ ವಹಿವಾಟಿ’ಗೆ ಚವಳಿಕಾಯಿ ಬೀಜ

ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಸರಕು ವಿನಿಮಯ ಮಾರುಕಟ್ಟೆಯಲ್ಲಿ ಚವಳಿಕಾಯಿ ಬೀಜದ (ಗೋರೆಕಾಯಿ ಬೀಜ) ‘ಆಯ್ಕೆ ವಹಿವಾಟಿ’ಗೆ ಭಾನುವಾರ ಚಾಲನೆ ನೀಡಿದ್ದಾರೆ.‌

ರಾಷ್ಟ್ರೀಯ ಸರಕು ಮತ್ತು ಪದಾರ್ಥ ವಾಯಿದಾ ವಿನಿಮಯ ಕೇಂದ್ರದಲ್ಲಿ (ಎನ್‌ಸಿಡಿಇಎಕ್ಸ್‌) ವಹಿವಾಟಿಗೆ ಅವಕಾಶ ಪಡೆದಿರುವ ಮೊದಲ ಕೃಷಿ ಉತ್ಪನ್ನ ಇದಾಗಿದೆ.

‘ಕೆಲವು ಪ್ರದೇಶಗಳಲ್ಲಿ ಚವಳಿಕಾಯಿ ಉತ್ಪಾದನೆ ಹೆಚ್ಚಾಗಿದ್ದು, ಬೆಲೆ ಇಳಿಕೆ ಕಾಣುವಂತಾಗಿದೆ. ಆಯ್ಕೆ ವಹಿವಾಟಿನಿಂದಾಗಿ ರೈತರು ಬೆಳೆದ ಬೆಲೆಗಳಿಗೆ ಉತ್ತಮ ಬೆಲೆ ಸಿಗುವಂತಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.

ಇದರಲ್ಲಿ, ಮುಂಚಿತವಾಗಿಯೇ ನಿಗದಿ ಆದ ಬೆಲೆಯಲ್ಲಿ ವಹಿವಾಟ ನಡೆಯುತ್ತದೆ. ಹೀಗಾಗಿ ಹೆಚ್ಚುವರಿ ಇಳುವರಿ ಬಂದು ಬೆಲೆ ಕುಸಿತ ಕಂಡರೂ ಮುಂಚಿತವಾಗಿಯೇ ನಿಗದಿ ಆಗಿರುವ ಬೆಲೆ ಸಿಗುವುದರಿಂದ ರೈತರಿಗೆ ನಷ್ಟವಾಗುವುದಿಲ್ಲ. ಒಂದು ನಿರ್ದಿಷ್ಟ ದಿನದ ಒಳಗೆ ಅಥವಾ ಅದಕ್ಕೂ ಮೊದಲೇ, ಸರಕುಗಳನ್ನು ಖರೀದಿಸುವ ಅಥವಾ ಮಾರಾಟ ಮಾಡುವ ಹಕ್ಕನ್ನು ಆಯ್ಕೆ ವಹಿವಾಟು ನೀಡುತ್ತದೆ. ಆದರೆ ಖರೀದಿ ಅಥವಾ ಮಾರಾಟ ಮಾಡಲೇಬೇಕು ಎನ್ನುವ ನಿರ್ಬಂಧ ಇರುವುದಿಲ್ಲ.

ರೈತರು ದೇಶಕ್ಕೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದ ಅವರು, ‘ದೇಶವು ಆಹಾರ ಕೊರತೆ ಎದುರಿಸುತ್ತಿದ್ದಾಗ, ರೈತರು ಹೆಚ್ಚಿನ ಪರಿಶ್ರಮದಿಂದ ಕೆಲಸ ಮಾಡಿ ಬೇಡಿಕೆಗಿಂತಲೂ ಹೆಚ್ಚಿನ ಉತ್ಪಾದನೆ ಮಾಡಿದ್ದಾರೆ. ಇದರಿಂದ ಆಹಾರ ಕೊರತೆ ಸಮಸ್ಯೆ ನೀಗಿದೆ. ಆದರೆ ಉತ್ಪಾದನೆ ಹೆಚ್ಚಾಗುತ್ತಿರುವುದರಿಂದ ರೈತರು ಬೆಲೆ ಇಳಿಕೆಯ ಸಂಕಷ್ಟಕ್ಕೆ ಸಿಲುಕುವಂತಾಗಿದೆ’.

‘ಕೆಲವು ರೈತರಿಗೆ ಉತ್ಪಾದನಾ ವೆಚ್ಚವೂ ಸಿಗುತ್ತಿಲ್ಲ. ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡಲು ಕಳೆದ ಕೆಲವು ವರ್ಷಗಳಿಂದ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ‘ಆಯ್ಕೆ ವಹಿವಾಟು’ ಸಹ ಒಂದು ಮಾರ್ಗವಾಗಿದೆ. ಆರಂಭದಲ್ಲಿ ಇದು ಅಷ್ಟು ಪರಿಣಾಮಕಾರಿ ಎನ್ನುವ ಭಾವನೆ ಬರದೇ ಇರಬಹುದು. ಜಾಗೃತಿ ಮೂಡುತ್ತಿದ್ದಂತೆಯೇ ಇದರಿಂದ ಹೆಚ್ಚಿನ ಅನುಕೂಲ ಆಗಲಿದೆ’ ಎಂದು ಜೇಟ್ಲಿ ಹೇಳಿದ್ದಾರೆ.

‘ಬೆಲೆ ಕುಸಿತದ ಸಂದರ್ಭದಲ್ಲಿ ರೈತರಿಗೆ ರಕ್ಷಣೆ ನೀಡಲು ‘ಆಯ್ಕೆ ವಹಿವಾಟು’ ಒಂದು ಶಕ್ತಿಶಾಲಿ ಮಾರ್ಗವಾಗಿದೆ. ಇದರಿಂದ ಕೃಷಿ ಸರಕು ಮಾರುಕಟ್ಟೆ ಉತ್ತಮ ಬೆಳವಣಿಗೆ ಕಾಣುವ ವಿಶ್ವಾಸವಿದೆ’ ಎಂದು ಎನ್‌ಸಿಡಿಇಎಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಮೀರ್‌ ಶಾ ಹೇಳಿದ್ದಾರೆ.

ನೀತಿ ಆಯೋಗದ ಸದಸ್ಯ ರಮೇಶ್ ಚಂದ, ‘ನಾಫೆಡ್‌’ ವ್ಯವಸ್ಥಾಪಕ ನಿರ್ದೇಶಕ ಸಂಜೀವ ಕುಮಾರ್ ಚಂಧಾ, ಹಣಕಾಸು ಸಚಿವಾಲಯದ ಮತ್ತು ಸೆಬಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.

ವಾಯಿದಾ, ಆಯ್ಕೆ ವಹಿವಾಟು

ಪದಾರ್ಥಗಳ ವಹಿವಾಟಿಗೆ ಸಂಬಂಧಿಸಿದಂತೆ ನಡೆಯುವ ವಾಯಿದಾ ಮತ್ತು ಆಯ್ಕೆ ವಹಿವಾಟಿನಲ್ಲಿ ಖರೀದಿದಾರರು ಮತ್ತು ಮಾರಾಟಗಾರರ ಮೇಲೆ ವಿಧಿಸುವ ನಿರ್ಬಂಧದಲ್ಲಿ ಪ್ರಮುಖ ವ್ಯತ್ಯಾಸ ಇರುತ್ತದೆ.

ಆಯ್ಕೆ ವಹಿವಾಟಿನಲ್ಲಿ ನಿರ್ದಿಷ್ಟ ಬೆಲೆಗೆ ಸರಕು ಖರೀದಿಸಬೇಕೆಂಬ ನಿರ್ಬಂಧ ಇರುವುದಿಲ್ಲ. ವಾಯಿದಾ ವಹಿವಾಟಿನಲ್ಲಿ ಖರೀದಿದಾರರು ನಿರ್ದಿಷ್ಟ ಸರಕನ್ನು ಖರೀದಿಸಬೇಕಾದ ಮತ್ತು ಮಾರಾಟಗಾರರು ಆ ಸರಕನ್ನು ಭವಿಷ್ಯದ ನಿರ್ದಿಷ್ಟ ದಿನ ಮಾರಾಟ ಮಾಡಿ ಪೂರೈಸಬೇಕಾದ ಅನಿವಾರ್ಯತೆ ಇರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry