ಸೂಪರ್‌ ಲೀಗ್‌ಗೆ ಕರ್ನಾಟಕ ಲಗ್ಗೆ

7
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್‌

ಸೂಪರ್‌ ಲೀಗ್‌ಗೆ ಕರ್ನಾಟಕ ಲಗ್ಗೆ

Published:
Updated:
ಸೂಪರ್‌ ಲೀಗ್‌ಗೆ ಕರ್ನಾಟಕ ಲಗ್ಗೆ

ವಿಶಾಖಪಟ್ಟಣ: ಕರ್ನಾಟಕ ಮತ್ತು ತಮಿಳುನಾಡು ತಂಡಗಳು ದಕ್ಷಿಣ ವಲಯ ಹಂತದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಸೂಪರ್ ಲೀಗ್‌ಗೆ ಪ್ರವೇಶಿಸಿವೆ.

ಇಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಕರ್ನಾಟಕ ತಂಡ 20ರನ್‌ಗಳಿಂದ ಕೇರಳ ಎದುರು ಗೆಲುವಿನ ನಗೆ ಬೀರಿದೆ. ವೈ.ಎಸ್‌.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತಮಿಳುನಾಡು ತಂಡ 16ರನ್‌ಗಳಿಂದ ಹೈದರಾಬಾದ್‌ಗೆ ಸೋಲುಣಿಸಿದೆ.

ದಕ್ಷಿಣ ವಲಯ ವಿಭಾಗದ ಪಾಯಿಂಟ್ಸ್‌ ಪಟ್ಟಿಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದಿವೆ.

ಕರ್ನಾಟಕ ತಂಡ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯದಾಖಲಿಸುವ ಮೂಲಕ 16 ಪಾಯಿಂಟ್ಸ್ ಗಿಟ್ಟಿಸಿದೆ. ತಮಿಳುನಾಡು ತಂಡ ಕೂಡ ಆಡಿದ ಐದರಲ್ಲಿ ನಾಲ್ಕು ಪಂದ್ಯ ಗೆದ್ದು 16 ಪಾಯಿಂಟ್ಸ್ ಪಡೆದಿದೆ. ಆದರೆ ರನ್‌ರೇಟ್ ಪ್ರಕಾರ ಕರ್ನಾಟಕಕ್ಕೆ ಅಗ್ರಸ್ಥಾನ ಸಿಕ್ಕಿದೆ. ಮೂರನೇ ಸ್ಥಾನದಲ್ಲಿ ಆಂಧ್ರಪ್ರದೇಶ ತಂಡ ಇದೆ.

ಕೇರಳಕ್ಕೆ ಸೋಲುಣಿಸಿದ ವಿನಯ್‌ ಪಡೆ: ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಕೇರಳ ತಂಡ 19.2 ಓವರ್‌ಗಳಲ್ಲಿ 161 ರನ್‌ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿದೆ.

ಸವಾಲಿನ ಮೊತ್ತ ಬೆನ್ನಟ್ಟಿದ ಕೇರಳ ತಂಡದ ಬ್ಯಾಟ್ಸ್‌ಮನ್‌ಗಳು ಅಮೋಘ ಆರಂಭ ಪಡೆದರು. ನಾಯಕ ಸಂಜು ಸ್ಯಾಮ್ಸನ್‌ (71, 41ಎ, 8ಬೌಂ, 3ಸಿ), ವಿಷ್ಣು ವಿನೋದ್ (46, 26ಎ, 7ಬೌಂ, 1ಸಿ) ಮೊದಲ ವಿಕೆಟ್ ಜೊತೆಯಾಟಕ್ಕೆ 109ರನ್ ಪೇರಿಸಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳು ಹಾಕಿಕೊಟ್ಟ ಭದ್ರ ಬುನಾದಿಯೊಂದಿಗೆ ಕೇರಳ ತಂಡ ಪಂದ್ಯ ಗೆಲ್ಲುವ ಸೂಚನೆ ನೀಡಿತ್ತು.

128ರನ್‌ಗಳಿಗೆ ಕೇವಲ ಎರಡು ವಿಕೆಟ್ ಕಳೆದುಕೊಂಡಿದ್ದ ಸ್ಯಾಮ್ಸನ್‌ ಪಡೆ ದಿಡೀರ್ ಕುಸಿತ ಅನುಭವಿಸಿತು. ಅರುಣ್ ಕಾರ್ತಿಕ್‌ (13) ವಿಕೆಟ್ ಒಪ್ಪಸಿದ ಬಳಿಕ ಈ ತಂಡದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ಆರಂಭಿಸಿದರು. 40ರನ್‌ಗಳ ಅಂತರದಲ್ಲಿ ಎಂಟು ವಿಕೆಟ್‌ಗಳನ್ನು ಕಳೆದುಕೊಂಡು ಸೋಲು ಕಂಡಿತು.

ವಿನಯ್‌ ಕುಮಾರ್ (22ಕ್ಕೆ2) ಹಾಗೂ ಪ್ರವೀಣ್ ದುಬೆ (35ಕ್ಕೆ3) ಪರಿಣಾಮಕಾರಿ ಬೌಲಿಂಗ್‌ ದಾಳಿ ನಡೆಸಿದರು. ಸಂಜು ಸ್ಯಾಮ್ಸನ್ ಹಾಗೂ ಸಲ್ಮಾನ್ ನಿಜಾರ್ ಅವರ ಪ್ರಮುಖ ವಿಕೆಟ್‌ಗಳನ್ನು ವಿನಯ್ ಪಡೆದರು.

ಮಯಂಕ್ ಬ್ಯಾಟಿಂಗ್ ಸೊಬಗು: 58 ಎಸೆತಗಳಲ್ಲಿ 86ರನ್‌ ದಾಖಲಿಸಿದ ಆರಂಭಿಕ ಬ್ಯಾಟ್ಸ್‌ಮನ್‌ ಮಯಂಕ್ ಅಗರವಾಲ್ ಅಂಗಳದಲ್ಲಿ ಮಿಂಚು ಹರಿಸಿದರು. ಉಳಿದ ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾದರೂ ಮಯಂಕ್ ಅಮೋಘ ಇನಿಂಗ್ಸ್ ಕಟ್ಟುವ ಮೂಲಕ ಕರ್ನಾಟಕ ತಂಡದ ಮೊತ್ತ ಹೆಚ್ಚಿಸಿದರು. ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಅವರು ಸಿಡಿಸಿದರು.

ಆರ್‌.ಸಮರ್ಥ್‌ (27) ಎರಡನೇ ಅಧಿಕ ಸ್ಕೋರರ್‌ ಎನಿಸಿದರು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 181 (ಮಯಂಕ್ ಅಗರವಾಲ್‌ 86, ಕರುಣ್ ನಾಯರ್‌ 18, ಮನೀಷ್ ಪಾಂಡೆ 9, ಆರ್‌.ಸಮರ್ಥ್‌ 27, ಕೆ.ಗೌತಮ್‌ 21; ಕೆ.ಎಮ್‌.ಆಸಿಫ್‌ 34ಕ್ಕೆ2). ಕೇರಳ: 19.2 ಓವರ್‌ಗಳಲ್ಲಿ 161 (ಸಂಜು ಸ್ಯಾಮ್ಸನ್‌ 71, ವಿಷ್ಣು ವಿನೋದ್ 46, ಅರುಣ್ ಕಾರ್ತಿಕ್‌ 13, ಅಭಿಷೇಕ್‌ ಮೋಹನ್‌ 12; ಆರ್‌.ವಿನಯ್‌ ಕುಮಾರ್ 22ಕ್ಕೆ2, ಪ್ರವೀಣ್‌ ದುಬೆ 35ಕ್ಕೆ3) ಫಲಿತಾಂಶ: ಕರ್ನಾಟಕಕ್ಕೆ 20 ರನ್‌ಗಳ ಜಯ.

ಕರ್ನಾಟಕ ತಂಡಕ್ಕೆ ಕೇರಳ ಎದುರು 20 ರನ್‌ಗಳ ಜಯ

ಮಯಂಕ್ ಅಗರವಾಲ್‌ ಸ್ಪೋಟಕ ಅರ್ಧಶತಕ

ವಿನಯ್‌ ಕುಮಾರ್‌ಗೆ ಎರಡು ವಿಕೆಟ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry