ಭಾರತ ಯುವ ಪಡೆಯ ಶುಭಾರಂಭ

7
ಶ್ರೀಲಂಕಾ, ದಕ್ಷಿಣ ಆಫ್ರಿಕಾ ತಂಡಗಳಿಗೆ ಗೆಲುವು

ಭಾರತ ಯುವ ಪಡೆಯ ಶುಭಾರಂಭ

Published:
Updated:
ಭಾರತ ಯುವ ಪಡೆಯ ಶುಭಾರಂಭ

ಮೌಂಟ್‌ ಮಾಂಗನೂಯಿ, ನ್ಯೂಜಿಲೆಂಡ್‌: ಆಲ್‌ರೌಂಡ್ ಆಟವಾಡಿದ ಭಾರತದ ಯುವ ಪಡೆ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಇಲ್ಲಿನ ಬೇ ಓವಲ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಭಾರತ 100 ರನ್‌ಗಳಿಂದ ಮಣಿಸಿತು.

ತಲಾ ಮೂರು ಬಾರಿ ವಿಶ್ವಕಪ್ ಗೆದ್ದಿರುವ ಉಭಯ ತಂಡಗಳ ನಡುವಿನ ಹಣಾಹಣಿ ಕುತೂಹ ಕೆರಳಿಸಿತ್ತು. ಅಗ್ರ ಕ್ರಮಾಂಕದ ಮೂವರ ಭರ್ಜರಿ ಬ್ಯಾಟಿಂಗ್ ಮತ್ತು ವೇಗಿದ್ವಯರಾದ ಶಿವಂ ಮಾವಿ–ಕಮಲೇಶ್‌ ನಾಗರಕೋಟಿ ಅವರ ಪರಿಣಾಮಕಾರಿ ದಾಳಿ ಭಾರತಕ್ಕೆ ಸುಲಭ ಜಯ ತಂದುಕೊಟ್ಟಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತಕ್ಕೆ ನಾಯಕ ಪೃಥ್ವಿ ಶಾ (94; 100 ಎ, 2 ಸಿ, 8 ಬೌಂ) ಮತ್ತು ಮನ್‌ಜೋತ್ ಕಾರ್ಲಾ (86; 99 ಎ, 1 ಸಿ, 12 ಬೌಂ) ಅತ್ಯುತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಇವರಿಬ್ಬರು 178 ಎಸೆತಗಳಲ್ಲಿ 180 ರನ್‌ ಸೇರಿಸಿ ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸಿದರು.

20 ರನ್‌ಗಳ ಅಂತರದಲ್ಲಿ ಇವರಿಬ್ಬರು ಔಟಾದ ನಂತರ ಇನಿಂಗ್ಸ್ ಮುನ್ನಡೆಸುವ ಜವಾಬ್ದಾರಿ ಶುಭಂ ಗಿಲ್ (63; 54 ಎ, 1 ಸಿ, 6 ಬೌಂ) ಅವರ ಹೆಗಲಿಗೆ ಬಿತ್ತು. ನಿರಾಯಾಸವಾಗಿ ಬ್ಯಾಟ್‌ ಬೀಸಿದ ಅವರು ತಂಡದ ಮೊತ್ತ 300 ರನ್‌ ದಾಟಲು ಕಾರಣರಾದರು.

329 ರನ್‌ಗಳ ಜಯದ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 43ನೇ ಓವರ್‌ನಲ್ಲಿ 228 ರನ್‌ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ತಲಾ ಮೂರು ವಿಕೆಟ್‌ ಕಬಳಿಸಿದ ಕಮಲೇಶ್‌ ಮತ್ತು ಶಿವಂ ಎದುರಾಳಿ ಬ್ಯಾಟ್ಸ್‌ಮನ್‌ಗಳಲ್ಲಿ ನಡುಕ ಸೃಷ್ಟಿಸಿದರು.

ತಾಸಿಗೆ ತಲಾ 150 ಕಿಮೀ ಮತ್ತು 145 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ ಇವರಿಬ್ಬರ ದಾಳಿಗೆ ನಲುಗಿದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡಿದರು.

ಆರಂಭಿಕ ಜೋಡಿ ಜಾಕ್ ಎಡ್ವರ್ಡ್ಸ್‌ ಮತ್ತು ಮ್ಯಾಕ್ಸ್‌ ಬ್ರಯಾಂಟ್‌ ಮೊದಲ ವಿಕೆಟ್‌ಗೆ 57 ರನ್‌ ಸೇರಿಸಿ ಭರವಸೆ ಮೂಡಿಸಿದರು. ಇವರಿಬ್ಬರು ಔಟಾದ ನಂತರ ಇತರರಿಗೆ ಮಿಂಚಲು ಆಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಜೊನಾಥನ್‌ ಮೆರ್ಲೊ ತಂಡವನ್ನು ರಕ್ಷಿಸಲು ನಡೆಸಿದ ಶ್ರಮವೂ ವಿಫಲವಾಯಿತು. ಹೀಗಾಗಿ ತಂಡ ಸುಲಭವಾಗಿ ಸೋಲೊಪ್ಪಿಕೊಂಡಿತು.

ಮಿಂಚಿದ ಶಾ–ಕಾರ್ಲಾ ಜೋಡಿ

ಆರಂಭದಿಂದಲೇ ಅಮೋಘ ಬ್ಯಾಟಿಂಗ್ ಮಾಡಿದ ಪೃಥ್ವಿ ಶಾ ಮತ್ತು ಕಾರ್ಲಾ ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಲೆಕ್ಕಿಸದೆ ಮುನ್ನುಗ್ಗಿದರು. ನಿರಂತರವಾಗಿ ಬೌಂಡರಿಗಳನ್ನು ಸಿಡಿಸಿದ ಇವರಿಬ್ಬರು ಹಾಕಿಕೊಟ್ಟ ಬುನಾದಿಯ ಮೇಲೆ ಗಿಲ್‌ ರನ್ ಸೌಧ ಕಟ್ಟಿದರು. ಮಧ್ಯಮ ಕ್ರಮಾಂಕದ ಇತರ ಬ್ಯಾಟ್ಸ್‌ಮನ್‌ಗಳು ವೇಗವಾಗಿ ರನ್‌ ಗಳಿಸುವ ಭರದಲ್ಲಿ ವಿಕೆಟ್ ಕಳೆದುಕೊಂಡರು. ಅಭಿಷೇಕ್ ಶರ್ಮಾ 23 ರನ್‌ ಗಳಿಸಿ ಗಮನ ಸೆಳೆದರು.

ಶ್ರೀಲಂಕಾ, ದಕ್ಷಿಣ ಆಫ್ರಿಕಾ ತಂಡಗಳಿಗೆ ಜಯ

ದಿನದ ಉಳಿದೆರಡು ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಗೆಲುವು ಸಾಧಿಸಿದವು. ವಾಂಘರೇಯಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಲಂಕಾ ಏಳು ವಿಕೆಟ್‌ಗಳ ಜಯ ಗಳಿಸಿತು.

ಧನಂಜಯ ಲಕ್ಷಣ್‌ ಅಮೋಘ ಶತಕ (101; 120 ಎ, 1 ಸಿ, 8 ಬೌಂ) ಗಳಿಸಿದರೆ ಕಮಿಂದು ಮೆಂಡಿಸ್‌ ಆಲ್‌ರೌಂಡ್ ಆಟವಾಡಿ ಮಿಂಚಿದರು. ಲಿಂಕನ್‌–3ರಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 169 ರನ್‌ಗಳಿಂದ ಕೆನ್ಯಾವನ್ನು ಮಣಿಸಿತು. ನಾಯಕ ವ್ಯಾನ್ ಟೊಂಡರ್‌ (143; 121 ಎ, 5 ಸಿ, 14 ಬೌಂ) ಶತಕ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌

ಭಾರತ: 50 ಓವರ್‌ಗಳಲ್ಲಿ 7ಕ್ಕೆ 328 (ಪೃಥ್ವಿ ಶಾ 94, ಮನ್‌ಜೋತ್ ಕಾರ್ಲಾ 86, ಶುಭಂ ಗಿಲ್‌ 63, ಅಭಿಷೇಕ್ ಶರ್ಮಾ 23; ಜಾಕ್ ಎಡ್ವರ್ಡ್ಸ್‌ 65ಕ್ಕೆ4); ಆಸ್ಟ್ರೇಲಿಯಾ: 42.5 ಓವರ್‌ಗಳಲ್ಲಿ 228ಕ್ಕೆ ಆಲೌಟ್‌ (ಜಾಕ್ ಎಡ್ವರ್ಡ್ಸ್‌ 73, ಎಂ.ಬ್ರಿಯಾಂಟ್‌ 29, ಜೆ.ಮೆರ್ಲೊ 38, ಬಿ.ಜೆ.ಹಾಲ್ಟ್‌ 39; ಶಿವಂ ಮಾವಿ 45ಕ್ಕೆ3, ಕಮಲೇಶ್‌ ನಾಗರಕೋಟಿ 29ಕ್ಕೆ3). ಐರ್ಲೆಂಡ್‌: 48 ಓವರ್‌ಗಳಲ್ಲಿ 8ಕ್ಕೆ 207 (ಜೆ. ಗ್ರಾಸಿ 75, ಎಂ.ದೊನೆಗಾನ್‌ 36, ಜೆ.ಲಿಟಲ್‌ 25; ಕಮಿಂದು ಮೆಂಡಿಸ್‌ 35ಕ್ಕೆ3);

ಶ್ರೀಲಂಕಾ: 37.3 ಓವರ್‌ಗಳಲ್ಲಿ 3ಕ್ಕೆ 208 (ಧನಂಜಯ ಲಕ್ಷಣ್‌ 101; ಕಮಿಂದು ಮೆಂಡಿಸ್‌ 74). ದಿಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 7ಕ್ಕೆ 341 (ಜೀವೇಶನ್‌ ಪಿಳ್ಳೆ 62, ವ್ಯಾನ್‌ ಟೊಂಡರ್‌ 143; ಜೆ.ಎಸ್‌.ಕೂಂದಿ 49ಕ್ಕೆ2, ಜೆ.ಆರ್.ಮೇಪಾನಿ 60ಕ್ಕೆ2); ಕೆನ್ಯಾ: 50 ಓವರ್‌ಗಳಲ್ಲಿ 7ಕ್ಕೆ 172 (ಕೂಂದಿ 41, ಎ.ಪಿ.ಹಿರಾನಿ 35; ಅಖೋನಾ ಮಿನ್ಯಾಕ 9ಕ್ಕೆ2, ಕೆ.ಟಿ.ಸ್ಮಿತ್‌ 30ಕ್ಕೆ2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry