ಬಿಎಫ್‌ಸಿಗೆ ಸೋಲುಣಿಸಿದ ಡೈನಾಮೋಸ್

7

ಬಿಎಫ್‌ಸಿಗೆ ಸೋಲುಣಿಸಿದ ಡೈನಾಮೋಸ್

Published:
Updated:
ಬಿಎಫ್‌ಸಿಗೆ ಸೋಲುಣಿಸಿದ ಡೈನಾಮೋಸ್

ನವದೆಹಲಿ: ನಿರಂತರ ಸೋಲಿನ ಮೂಲಕ ಪಾಯಿಂಟ್ ಪಟ್ಟಿಯ ಕೊನೆಯಲ್ಲಿ ಉಳಿದಿರುವ ಡೆಲ್ಲಿ ಡೈನಾಮೋಸ್ ತಂಡ ಐಎಸ್‌ಎಲ್  (ಇಂಡಿಯನ್ ಸೂಪರ್‌ ಲೀಗ್) ಟೂರ್ನಿಯಲ್ಲಿ ಬಲಿಷ್ಠ ಬೆಂಗಳೂರು ಫುಟ್‌ಬಾಲ್ ಕ್ಲಬ್‌ಗೆ (ಬಿಎಫ್‌ಸಿ) ಆಘಾತ ನೀಡಿದೆ.

ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಡೈನಾಮೋಸ್‌ ತಂಡ 2–0 ಗೋಲುಗಳಿಂದ ಗೆದ್ದಿತು. ಲಾಲಿಯಾನ್ಜುಲಾ ಚಾಂಗ್ಟೆ (72ನೇ ನಿಮಿಷ) ಹಾಗೂ ಗಯಾನ್ ಫರ್ನಾಂಡಿಸ್ (97ನೇ ನಿಮಿಷ) ಪಂದ್ಯದ ಹೀರೊಗಳಾಗಿ ಮೆರೆದರು. ಈ ಸೋಲಿನೊಂದಿಗೆ ಬಿಎಫ್‌ಸಿ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಉಳಿಯಿತು. 10 ‍ಪಂದ್ಯಗಳಲ್ಲಿ ಎರಡು ಜಯ, ಏಳು ಸೋಲು ಮತ್ತು ಒಂದು ಡ್ರಾದೊಂದಿಗೆ ಡೈನಾಮೋಸ್ ಕೊನೆಯಲ್ಲೇ ಉಳಿದುಕೊಂಡಿತು.

ದ್ವಿತಿಯಾರ್ಧದಲ್ಲಿ ಮಿಂಚಿನ ಆಟ

ಬಿಎಫ್‌ಸಿ ಸಾಮರ್ಥ್ಯವನ್ನು ಪೂರ್ಣವಾಗಿ ಅರ್ಥೈಸಿಕೊಂಡಂತೆ ದ್ವಿತೀಯಾರ್ಧದಲ್ಲಿ ಆಕ್ರಮಣಕ್ಕೆ ಮುಂದಾದ ಡೆಲ್ಲಿ ಯಶಸ್ಸು ಗಳಿಸಿತು. 72ನೇ ನಿಮಿಷದಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಪ್ರೀತಮ್‌ ಕೊತಾಲ್ ಚಾಂಗ್ಟೆ ಬಳಿಗೆ ಕಳುಹಿಸಿದರು. ಮಿಂಚಿನ ವೇಗದಲ್ಲಿ ಚೆಂಡನ್ನು ಚಾಂಗ್ಟೆ ಒದ್ದರು. ಬಿಎಫ್‌ಸಿ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್‌ ಅವರನ್ನು ವಂಚಿಸಿ ಚೆಂಡು ಗುರಿ ಸೇರಿತು. 97ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಗಯಾನ್ ಗಳಿಸಿದ ಗೋಲು ಆತಿಥೇಯರ ಆತ್ಮವಿಶ್ವಾಸವನ್ನು ಹೆಚ್ಚಿಸಿತು.

ಗೋಲ್‌ ಕೀಪರ್‌ ಅರ್ನಬ್‌ದಾಸ್ ಶರ್ಮಾ ಅವರ ನೆರವಿನಿಂದ ಪ್ರಥಮಾರ್ಧದಲ್ಲಿ ತಂಡ ಅನೇಕ ಬಾರಿ ಅಪಾಯದಿಂದ ಪಾರಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry