ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್: ಭಾರತ ತಂಡಕ್ಕೆ ವಿರಾಟ್‌ ಕೊಹ್ಲಿ ಆಸರೆ

7
ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡ ಕೆ.ಎಲ್‌.ರಾಹುಲ್‌

ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್: ಭಾರತ ತಂಡಕ್ಕೆ ವಿರಾಟ್‌ ಕೊಹ್ಲಿ ಆಸರೆ

Published:
Updated:
ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್: ಭಾರತ ತಂಡಕ್ಕೆ ವಿರಾಟ್‌ ಕೊಹ್ಲಿ ಆಸರೆ

ಸೆಂಚೂರಿಯನ್‌: ಆತಿಥೇಯರು ಬೃಹತ್ ಮೊತ್ತ ಗಳಿಸದಂತೆ ಕಟ್ಟಿ ಹಾಕಲು ಯಶಸ್ವಿಯಾದರೂ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡ ಭಾರತಕ್ಕೆ ನಾಯಕ ವಿರಾಟ್ ಕೊಹ್ಲಿ ಆಸರೆಯಾದರು.

ಇಲ್ಲಿನ ಸೂಪರ್‌ ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಕೊಹ್ಲಿ (85; 130 ಎ, 8 ಬೌಂ) ಗಳಿಸಿದ ಅಜೇಯ ಅರ್ಧಶತಕದ ಬಲದಿಂದ ಭಾರತ ಐದು ವಿಕೆಟ್‌ಗಳಿಗೆ 183 ರನ್‌ ಗಳಿಸಿದೆ. ಎದುರಾಳಿಗಳ ಮೊತ್ತವನ್ನು ಹಿಂದಿಕ್ಕಬೇಕಾದರೆ ತಂಡಕ್ಕೆ ಇನ್ನೂ 152 ರನ್‌ಗಳ ಅಗತ್ಯವಿರುವುದರಿಂದ ಪಂದ್ಯ ಕುತೂಹಲದ ಹಾದಿಯಲ್ಲಿದೆ.

ದಕ್ಷಿಣ ಆಫ್ರಿಕಾವನ್ನು 335 ರನ್‌ಗಳಿಗೆ ಆಲೌಟ್ ಮಾಡಿದ ಭಾರತದ ಆರಂಭ ಚೆನ್ನಾಗಿರಲಿಲ್ಲ. ಶಿಖರ್ ಧವನ್ ಬದಲಿಗೆ ಸ್ಥಾನ ಗಳಿಸಿದ ಕೆ.ಎಲ್‌.ರಾಹುಲ್ ಮೊದಲ ವಿಕೆಟ್‌ಗೆ ಕೇವಲ 28 ರನ್‌ ಸೇರಿಸಿ ಔಟಾದರು. ಚೇತೇಶ್ವರ ಪೂಜಾರ ಖಾತೆ ತೆರೆಯದೇ ರನ್ ಔಟ್‌ ಆಗಿ ಮರಳಿದಾಗ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭಲ್ಲಿ ಕ್ರೀಸ್‌ಗೆ ಬಂದ ಕೊಹ್ಲಿ ಮೂರನೇ ವಿಕೆಟ್‌ಗೆ ಮುರಳಿ ವಿಜಯ್‌ ಜೊತೆ 79 ರನ್‌ ಸೇರಿಸಿದರು.

ವಿಜಯ್‌ (46; 126 ಎ, 6 ಬೌಂ), ರೋಹಿತ್ ಶರ್ಮಾ ಮತ್ತು ಪಾರ್ಥಿವ್ ಪಟೇಲ್‌ ಔಟಾದ ನಂತರ ಹಾರ್ದಿಕ್ ಪಾಂಡ್ಯ ನಾಯಕನ ಬೆಂಬಲಕ್ಕೆ ನಿಂತರು. ಇವರಿಬ್ಬರು ಆರನೇ ವಿಕೆಟ್‌ಗೆ 19 ರನ್‌ ಸೇರಿಸಿ ಸೋಮವಾರಕ್ಕೆ ಆಟ ಕಾಯ್ದಿರಿಸಿದ್ದಾರೆ.

ಇಶಾಂತ್‌ಗೆ ಮೂರು; ಶಮಿಗೆ ನೂರು

ಮೊದಲ ದಿನ ಔಟಾಗದೆ ಉಳಿದಿದ್ದ ನಾಯಕ ಫಾಫ್‌ ಡು ಪ್ಲೆಸಿ ಮತ್ತು ಸ್ಪಿನ್ನರ್‌ ಕೇಶವ್ ಮಹಾರಾಜ್‌ ಭಾನುವಾರ ಬೆಳಿಗ್ಗೆ ಉತ್ತಮ ಜೊತೆಯಾಟದ ನಿರೀಕ್ಷೆ ಮೂಡಿಸಿದರು. ದಿನದ ಒಂಬತ್ತನೇ ಓವರ್‌ ಹಾಕಿದ ಮಹಮ್ಮದ್ ಶಮಿ ಈ ಜೋಡಿಯ ಜೊತೆಯಾಟ ಮುರಿದು ನೂರನೇ ವಿಕೆಟ್‌ ಗಳಿಸಿದ ಸಂಭ್ರಮದಲ್ಲಿ ಮಿಂದರು. ಶಮಿ ಎಸೆತ ಮಹಾರಾಜ್ ಅವರ ಬ್ಯಾಟಿನ ಅಂಚಿಗೆ ಸೋಕಿ ಹಿಂದೆ ಚಿಮ್ಮಿತು. ಚೆಂಡನ್ನು ಹಿಡಿತಕ್ಕೆ ಪಡೆಯಲು ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್‌ ತಡ ಮಾಡಲಿಲ್ಲ.

ಕಗಿಸೊ ರಬಾಡ ನಾಯಕನಿಗೆ ಉತ್ತಮ ಸಹಕಾರ ನೀಡಿದರು. ಆದರೆ ದಿನದ 21ನೇ ಓವರ್‌ ನಂತರ ಬೌಲರ್‌ಗಳು ಆಧಿಪತ್ಯ ಸ್ಥಾಪಿಸಿದರು. ಕಗಿಸೊ ರಬಾಡ ಅವರನ್ನು ಇಶಾಂತ್ ಶರ್ಮಾ ಔಟ್‌ ಮಾಡಿದರು. ಡೀಪ್‌ ಸ್ಕ್ವೇರ್‌ಲೆಗ್‌ನಲ್ಲಿದ್ದ ಹಾರ್ದಿಕ್‌ ಪಾಂಡ್ಯ ಓಡಿ ಬಂದು ಪಡೆದ ಅಮೋಗ ಕ್ಯಾಚ್‌ಗೆ ರಬಾಡ ಬಲಿಯಾದರು. ತಮ್ಮ ಮುಂದಿನ ಓವರ್‌ನಲ್ಲಿ ಪ್ಲೆಸಿ ಅವರ ಸ್ಟಂಪ್‌ ಎಗರಿಸಿ ಇಶಾಂತ್‌ ಸಂಭ್ರಮಿಸಿದರು. ಮಾರ್ನೆ ಮಾರ್ಕೆಲ್‌ ಅವರನ್ನು ಮುರಳಿ ವಿಜಯ್‌ ಅವರ ಮುಷ್ಠಿಯಲ್ಲಿ ಬಂಧಿಯಾಗಿಸಿ ಆತಿಥೇಯರ ಇನಿಂಗ್ಸ್‌ಗೆ ಅಶ್ವಿನ್ ಅಂತ್ಯ ಹಾಡಿದರು.

ಕೈಚೆಲ್ಲಿದ ಕ್ಯಾಚ್‌ಗಳು: ಬೆಳಿಗ್ಗೆ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿ ಎದುರಾಳಿಗಳು 300 ರನ್‌ ದಾಟಲು ಭಾರತದ ಫೀಲ್ಡರ್‌ಗಳು ಅನುವು ಮಾಡಿಕೊಟ್ಟರು.

104ನೇ ಓವರ್‌ನಲ್ಲಿ ಕಗಿಸೊ ರಬಾಡ ಒಂದು ರನ್‌ ಗಳಿಸಿದ್ದ ಸಂದರ್ಭದಲ್ಲಿ ಅಶ್ವಿನ್ ಎಸೆತದಲ್ಲಿ ವಿರಾಟ್ ಕೊಹ್ಲಿ ಚೆಂಡನ್ನು ನೆಲಕ್ಕೆ ಹಾಕಿದ್ದರು.

ನಂತರದ ಎಸೆತದಲ್ಲಿ ಇದೇ ಬ್ಯಾಟ್ಸ್‌ಮನ್‌ ನೀಡಿದ ಕ್ಯಾಚ್‌ ಅನ್ನು ಹಾರ್ದಿಕ್ ಪಾಂಡ್ಯ ಕೈಚೆಲ್ಲಿದರು.

ಪ್ಲೆಸಿ (63; 142 ಎ, 9 ಬೌಂ) ಟೆಸ್ಟ್‌ನಲ್ಲಿ 17ನೇ ಅರ್ಧಶತಕ ದಾಖಲಿಸುವುದರೊಂದಿಗೆ ತಂಡದ ಮೊತ್ತ 300ರ ಗಡಿ ದಾಟಿಸಿದರು. ರಬಾಡ ಜೊತೆ ಎಂಟನೇ ವಿಕೆಟ್‌ಗೆ 42 ರನ್‌ ಸೇರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry