ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗ ಸಂಕ್ರಾಂತಿಗೆ ವರ್ಣರಂಜಿತ ಚಾಲನೆ

ತುಂಬಿ ತುಳುಕಿದ ರಂಗಾಯಣ, ಕಲಾಮಂದಿರ
Last Updated 15 ಜನವರಿ 2018, 4:03 IST
ಅಕ್ಷರ ಗಾತ್ರ

ಮೈಸೂರು: ಕುರಿ ಮರಿಯೊಂದನ್ನು ತಬ್ಬಿ ಹಿಡಿದ ನಾಲ್ವರು ಹಾಗೂ ಒಂದು ನಾಯಿಯೊಂದಿಗೆ ವೇದಿಕೆಯ ಮೇಲೆ ಕಲಾವಿದ ಮೈಮ್‌ ರಮೇಶ್‌ ಬರುತ್ತಿದ್ದಂತೆ ವನರಂಗದಲ್ಲಿ ಸಂಜೆಯ ಇಳಿ ಹೊತ್ತಿನಲ್ಲಿ ರಂಗೇರಿತು.

ವೇದಿಕೆ ಮೇಲೆ ಏನು ನಡೆಯುತ್ತಿದೆ ಎಂಬುದು ಪ್ರೇಕ್ಷಕರಿಗೆ ಗೊತ್ತಾಗುವ ಮೊದಲೇ ಸಾಹಿತಿ ಗಿರೀಶ ಕಾರ್ನಾಡ ಅವರು ಅಲ್ಲಿದ್ದವರಿಗೆ ನೀರು ಹಾಗೂ ಬೆಲ್ಲ ಕೊಟ್ಟರು. ಕಂಕುಳಲ್ಲಿ ಬಟ್ಟೆಯ ಗಂಟೊಂದನ್ನು ಹಿಡಿದು ಬಂದಿದ್ದ ಬಾಲಕ, ಬಾಲಕಿಯರು ಬೆಲ್ಲವನ್ನು ಸವಿದರು. ನಂತರ, ಕೊಡೆಯೊಂದನ್ನು ನೀಡಿದರು. ಇದರ ಜತೆಗೆ ಸಂಗೀತದ ವಿವಿಧ ವಾದ್ಯಗಳು, ಪುಸ್ತಕಗಳನ್ನೂ ನೀಡಿದರು. ಕೊಡೆಯ ಆಶ್ರಯದಲ್ಲಿ ಮೈಮ್ ರಮೇಶ್ ಹಾಗೂ ಅವರ ತಂಡ ಕೆಲಕಾಲ ಕುಳಿತು ವಿಶ್ರಮಿಸಿತು.

ಇದು ವನರಂಗದಲ್ಲಿ ಭಾನುವಾರ ಉದ್ಘಾಟನೆಗೊಂಡ ಬಹುರೂಪಿ ರಂಗೋತ್ಸವದ ಚಿತ್ರಣ. ಈ ಬಾರಿಯ ಬಹುರೂಪಿ ‘ವಲಸೆ’ ಪರಿಕಲ್ಪನೆಯಲ್ಲಿ ಸಂಘಟನೆಗೊಂಡಿದೆ. ವಲಸೆಯನ್ನು ಬಿಂಬಿಸುವ, ಬಂದವರಿಗೆ ಆಶ್ರಯ ಒದಗಿಸುವ ರೂಪಕದ ಮೂಲಕ ಕಾರ್ನಾಡ ಅವರು ನಾಟಕೋತ್ಸವಕ್ಕೆ ಚಾಲನೆ ನೀಡಿದರು. ಚಾಲನೆ ನೀಡುತ್ತಿದ್ದಂತೆ ವನರಂಗ ಎರಡೂ ಕಡೆಯ ಉಪ್ಪರಿಗೆಗಳ ಮೇಲೆ ನಗಾರಿ ನಾದಕ್ಕೆ ಯುವತಿಯರು ತ್ರಿಶೂಲ ಹಿಡಿದು ಜನಪದ ನೃತ್ಯವೊಂದನ್ನು ಮಾಡುವ ಮೂಲಕ ಸಭಿಕರನ್ನು ಸೂಜಿಗಲ್ಲಿನಂತೆ ಸೆಳೆದರು.

ಸಿಂಗಾರಗೊಂಡ ರಂಗಾಯಣ: ರಂಗಾ ಯಣವು ನವವಧುವಿನಂತೆ ಸಾಲಂಕೃತಗೊಂಡಿತ್ತು. ಕಲಾವಿದರು ವಿವಿಧ ಬಗೆಯಲ್ಲಿ ಆವರಣದಲ್ಲಿ ಕಲಾಕೃತಿಗಳನ್ನು ರಚಿಸಿದ್ದರು. ಹೆಜ್ಜೆ ಗುರುತುಗಳನ್ನು ಕೆಲವರು ಬಣ್ಣದಲ್ಲಿ ಬರೆದರೆ, ಮತ್ತೆ ಕೆಲವರು ಕಾಗದದ ತುಣುಕುಗಳನ್ನು ಅಂಟಿಸುವ ಮೂಲಕ ವಿಶಿಷ್ಟತೆ ಮೆರೆದರು. ತಳಿರು ತೋರಣಗಳಷ್ಟೇ ಅಲ್ಲದೇ, ಬಣ್ಣದ ಕಾಗದಗಳಿಂದಲೂ ಸಿಂಗರಿಸಿದ್ದು ಗಮನ ಸೆಳೆಯಿತು.

72 ಮಳಿಗೆಗಳು ಬಾಗಿಲು ತೆರೆದು ವ್ಯಾಪಾರ ಆರಂಭಿಸಿದ್ದವು. ಇವುಗಳಲ್ಲಿ 35 ಮಳಿಗೆಗಳಲ್ಲಿ ಕರಕುಶಲ ವಸ್ತುಗಳು, 16 ಮಳಿಗೆಗಳಲ್ಲಿ ಪುಸ್ತಕಗಳು, 12 ಮಳಿಗೆಗಳಲ್ಲಿ ವಿವಿಧ ಬಗೆಯ ಆಹಾರಗಳು ಇದ್ದವು.

ರಂಗಕರ್ಮಿ ಅನುರಾಧಾ ಕಪೂರ್, ರಂಗಾಯಣದ ನಿರ್ದೇಶಕಿ ಭಾಗೀರತಿ ಬಾಯಿ ಕದಂ, ಕರ್ನಾಟಕ ಪುಸ್ತಕ ಪ್ರಾಧಿಕಾರ ವಸುಂಧರಾ ಭೂಪತಿ, ಶಾಸಕ ವಾಸು ಇದ್ದರು.
***
ಕುಟುಂಬದ ತರಹದ ರಂಗಭೂಮಿ ರಂಗಾಯಣದ ಕೊಡುಗೆ– ಕಾರ್ನಾಡ

ರಂಗೋತ್ಸವ ಉದ್ಘಾಟಿಸಿ ಮಾತನಾಡಿದ ಸಾಹಿತಿ ಗಿರೀಶ ಕಾರ್ನಾಡ, ‘ರಂಗಭೂಮಿಯಲ್ಲಿ ಅಭಿನಯ ಎಲ್ಲರೂ ಮಾಡುತ್ತಾರೆ. ಆದರೆ, ಕುಟುಂಬದ ಹಾಗೆ ಇರುವ ರಂಗಭೂಮಿಯನ್ನು ನಾಡಿಗೆ ನೀಡಿದ್ದು ರಂಗಾಯಣದ ಕೊಡುಗೆ’ ಎಂದು ಶ್ಲಾಘಿಸಿದರು.

‘ಶಿಕಾರಿ’ ನಾಟಕವನ್ನು ನೋಡಿದ ರಂಗಕರ್ಮಿ ಅರುಂಧತಿ ನಾಗ್, ‘ಕಲಾವಿದರ ಮಾತುಗಳನ್ನು ಕೇಳಿ ಸಂತಸವಾಯಿತು. ಇಂತಹ ದನಿಯನ್ನು ಹಿಂದೆ ಕೇಳಿರಲಿಲ್ಲ ಎಂದು ಉದ್ಗರಿಸಿದರು. ಇಂತಹ ‘ಶಿಕಾರಿ’ ನಾಟಕವನ್ನು ಪ್ರದರ್ಶಿಸಿದ ರಂಗಾಯಣದ ಕಲಾವಿದರ ಪ್ರತಿಭೆ ಇದರಿಂದ ಗೊತ್ತಾಯಿತು’ ಎಂದರು.

‘30 ವರ್ಷಗಳ ಹಿಂದೆ ಇಲ್ಲೇ ಕುಳಿತು ರಂಗಾಯಣ ಹೇಗಿರಬೇಕು ಎಂದು ಹಿರಿಯ ರಂಗಕರ್ಮಿ ಬಿ.ವಿ.ಕಾರಂತರೊಂದಿಗೆ ಚಿಂತನೆಗಳನ್ನಷ್ಟೇ ಹಂಚಿಕೊಂಡಿರಲಿಲ್ಲ. ಬೈಗುಳ, ಜಗಳ, ಬಡಿದಾಟ ಇವೆಲ್ಲವೂ ಆಗಿತ್ತು. ಇದೆಲ್ಲ ಕನ್ನಡ ರಂಗಭೂಮಿಯ ಉಳಿವಿಗೆ ಮಾಡಿದ್ದು. ಬೆಳಿಗ್ಗೆ ಎದ್ದಾಗ ನಾವು ಏಕೆ ಜಗಳವಾಡಿದೆವು ಎಂಬುದು ಮರೆತೇ ಹೋಗುತ್ತಿತ್ತು. ರಂಗಾಯಣದ ಸ್ಥಾಪನೆಗೆ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಹಕಾರವೂ ಇತ್ತು’ ಎಂದು ನೆನಪುಗಳನ್ನು ಮೆಲುಕು ಹಾಕಿದರು.
***
ನಿರ್ದೇಶಕರು ಇದ್ದಾರೆ ಎಂದ ಪ್ರೇಕ್ಷಕರು!

ಸ್ವಾಗತ ಭಾಷಣ ಮಾಡಿದ ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ನಿರ್ದೇಶಕಿ ಭಾಗೀರತಿ ಬಾಯಿ ಕದಂ ಅವರನ್ನೇ ಮರೆತರು. ಆಗ ಪ್ರೇಕ್ಷಕರು ನಿರ್ದೇಶಕರು ಇದ್ದಾರೆ ಎಂದು ಕೂಗಿದ ಬಳಿಕ ಎಚ್ಚೆತ್ತ ಮಲ್ಲಿಕಾರ್ಜುನಸ್ವಾಮಿ ಕ್ಷಮೆ ಕೋರುತ್ತಾ ಅವರಿಗೆ ಸ್ವಾಗತ ಕೋರಿದರು.
***
ಬಹುರೂಪಿ ನನಗೆ ಸಂಕ್ರಾಂತಿ ಸವಿಸಂಕಟವಾಗಿದೆ. ಕರ್ನಾಟಕ ರಾಜ್ಯ ನಾಟಕಗಳಿಗೆ ನೀಡುವಷ್ಟು ಕೊಡುಗೆಗಳನ್ನು ಬೇರೆ ಯಾವ ರಾಜ್ಯವೂ ನೀಡುತ್ತಿಲ್ಲ.
– ಭಾಗೀರತಿ ಬಾಯಿ ಕದಂ, ರಂಗಾಯಣದ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT