ಕಿಚ್ಚು ಹಾದ ರಾಸು: ಸಂಭ್ರಮಿಸಿದ ರೈತರು

7
ಸಿದ್ದಲಿಂಗಪುರದ ಚಂದ್ರಮೌಳೇಶ್ವರ ದೇಗುಲದ ಬಳಿ ಕಳೆಗಟ್ಟಿದ ಸಂಕ್ರಾಂತಿ

ಕಿಚ್ಚು ಹಾದ ರಾಸು: ಸಂಭ್ರಮಿಸಿದ ರೈತರು

Published:
Updated:
ಕಿಚ್ಚು ಹಾದ ರಾಸು: ಸಂಭ್ರಮಿಸಿದ ರೈತರು

ಮೈಸೂರು: ಸಿದ್ದಲಿಂಗಪುರದ ಚಂದ್ರಮೌಳೇಶ್ವರ ದೇಗುಲದ ಎದುರು ಕಿಕ್ಕಿರಿದು ಜನ ಸೇರಿದ್ದರು. ಸೂರ್ಯ ಅಸ್ತಂಗತವಾಗುತ್ತಿದ್ದಂತೆ ರಸ್ತೆಯ ಮೇಲೆ ಬೆಂಕಿ ಮೇಲೆದ್ದಿತು. ಸಿಂಗಾರಗೊಂಡು ಸರದಿಗಾಗಿ ಎದುರು ನೋಡುತ್ತಿದ್ದ ರಾಸುಗಳು ಕಿಚ್ಚು ಹಾಯುತ್ತಿದ್ದಂತೆ ಎಲ್ಲೆಡೆ ಹರ್ಷೋದ್ಗಾರ ಮೇಲೆದ್ದಿತು.

ಸಂಕ್ರಾಂತಿಯ ಅಂಗವಾಗಿ ಸಿದ್ದಲಿಂಗಪುರದಲ್ಲಿ ರಾಸುಗಳಿಗೆ ಭಾನುವಾರ ಸಂಜೆ ಕಿಚ್ಚು ಹಾಯಿಸಲಾಯಿತು. ಬೆಂಕಿಯನ್ನು ಸೀಳಿ ಓಡುವ ರಾಸುಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಜಮಾಯಿಸಿದ್ದರು. ಸಂಜೆ 4ರಿಂದ 6.30ರವರೆಗೆ ನಡೆದ ಈ ಗ್ರಾಮೀಣ ಕ್ರೀಡೆಯ ಅಪರೂಪದ ಕ್ಷಣವನ್ನು ವಿದೇಶಿಗರೂ ಕಣ್ತುಂಬಿಕೊಂಡರು. ಇದರಿಂದ ಬೆಂಗಳೂರು–ಮೈಸೂರು ರಸ್ತೆಯಲ್ಲಿ ಸಂಚಾರ ಸಮಸ್ಯೆ ಸೃಷ್ಟಿಯಾಗಿತ್ತು.

ಸುಗ್ಗಿಯ ಸಂಭ್ರಮವನ್ನು ಜಾನುವಾರುಗಳೊಂದಿಗೆ ಆಚರಿಸುವ ಸಂಪ್ರದಾಯವನ್ನು ಸಿದ್ದಲಿಂಗಪುರದ ರೈತರು ನಡೆಸಿಕೊಂಡು ಬಂದಿದ್ದಾರೆ.

ಈ ಹಬ್ಬಕ್ಕಾಗಿ ದುಬಾರಿ ಬೆಲೆಯ ಎತ್ತುಗಳನ್ನು ಖರೀದಿಸುವುದು ಇಲ್ಲಿ ಪ್ರತಿಷ್ಠೆಯ ವಿಚಾರ. ಮೈತೊಳೆದು ಶುಚಿಗೊಳಿಸಿದ ರೈತರು ಕೋಡುಗಳಿಗೆ ಬಣ್ಣಬಳಿದು ಅಂದ ಹೆಚ್ಚಿಸಿದರು. ಕೊರಳಿಗೆ, ದೇಹಕ್ಕೆ ಹೂವಿನ ಮಾಲೆಗಳಿಂದ ಅಲಂಕರಿಸಿ ಬಲೂನುಗಳನ್ನು ಕಟ್ಟಿದರು.

ದೇಶದ ತ್ರಿವರ್ಣ ಧ್ವಜದ ಬಣ್ಣವನ್ನು ಬಳಿದುಕೊಂಡಿದ್ದ ಟಗರು ಗಮನ ಸೆಳೆಯಿತು. ಹೂವಿನಲ್ಲಿ ತಯಾರಿಸಿದ ಭಾರತದ ನಕಾಶೆಯನ್ನು ಜಾನುವಾರುಗಳ ಕೋಡುಗಳಿಗೆ ಕಟ್ಟಿ ದೇಶಪ್ರೇಮ ಮೆರೆದರು. ಕಿಚ್ಚು ಹಾದು ಬರುವ ರಾಸುಗಳು ಗ್ರಾಮದ ವಿವಿಧ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದವು. ಇವುಗಳ ಪಾದಪೂಜೆ ಮಾಡಿ ಪ್ರಸಾದ ನೀಡಿ ಮನೆ ತುಂಬಿಕೊಳ್ಳಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry