ಆಳ್ವಾಸ್‌ ವಿರಾಸತ್‌ಗೆ ಸಂಭ್ರಮದ ತೆರೆ

7
ಕೈಲಾಶ್ ಖೇರ್‌ ಕಂಠಕ್ಕೆ ಮನಸೋತ ಮೂಡುಬಿದಿರೆ–ಸಾಲು ಸಾಲು ರಸದೌತಣ

ಆಳ್ವಾಸ್‌ ವಿರಾಸತ್‌ಗೆ ಸಂಭ್ರಮದ ತೆರೆ

Published:
Updated:
ಆಳ್ವಾಸ್‌ ವಿರಾಸತ್‌ಗೆ ಸಂಭ್ರಮದ ತೆರೆ

ಮೂಡುಬಿದಿರೆ: ಸಿಕ್ಕಾಪಟ್ಟೆ ಎನರ್ಜಿ, ವಿಶಿಷ್ಟ ಮ್ಯಾನರಿಸಂ, ಜಾನಪದ ಹಾಗೂ ಸೂಫಿ ಸಂಗೀತ ಸೊಬಗು, ರಾಕ್ ಸಂಗೀತದ ಬೆಡಗು ಇವೆಲ್ಲವೂ ಕೈಲಾಶ್ ಖೇರ್ ನಡೆಸಿಕೊಟ್ಟ ಚಿತ್ರ ಸಂಗೀತ ಸಂಜೆಯ ಅದ್ಭುತ ಕ್ಷಣಗಳು.

ಮೂಡುಬಿದಿರೆಯ ಪುತ್ತಿಗೆಯಲ್ಲಿ ನಡೆಯುತ್ತಿರುವ 24ನೇ ವರ್ಷದ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಕೊನೆಯ ದಿನವಾದ ಭಾನುವಾರ ಬಾಲಿವುಡ್ ಗಾಯಕ ಕೈಲಾಶ್ ಖೇರ್ ಮತ್ತು ಅವರ ತಂಡ ನಡೆಸಿಕೊಟ್ಟ ಚಿತ್ರ ಸಂಗೀತ ಕಾರ್ಯಕ್ರಮ ಸಂಗೀತಾಭಿಮಾನಿಗಳನ್ನು ರಂಜಿಸಿತು. ‘ಹಾಡುವುದೇ ನನ್ನ ಪ್ಯಾಷನ್' ಎಂದು ಹೇಳಿಕೊಳ್ಳುವ ಕೈಲಾಶ್ ಖೇರ್ ತಮ್ಮ ‘ಲೈವ್ ಇನ್ ಕಾನ್ಸರ್ಟ್'ನಲ್ಲಿ ಪ್ರೇಕ್ಷಕರನ್ನು ಹಾಡುಗಳ ಹೊನಲಿನಲ್ಲಿ ಅಕ್ಷರಶಃ ಮೀಯಿಸಿದರು.

ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಕೈಲಾಶ್ ಮತ್ತು ಅವರ ತಂಡವನ್ನು ಆಳ್ವಾಸ್ ವಿದ್ಯಾರ್ಥಿನಿಯರು ಸಾಂಪ್ರದಾ ಯಿಕವಾಗಿ ಸ್ವಾಗತಿಸಿದರು. ಕೈಲಾಶ್ ಹಣೆಗೆ ತಿಲಕವಿಟ್ಟು, ಆರತಿ ಬೆಳಗಿದ ನಂತರ ಅವರಿಗೆ ರೋಸ್‍ವಾಟರ್ ಪೂಸಿ, ಪುಷ್ಪಾರ್ಚನೆ ಮಾಡಿ ವೇದಿಕೆಗೆ ಕಳುಹಿಸಿಕೊಟ್ಟರು. ವೇದಿಕೆಗೆ ಬಂದ ತಂಡದ ಸದಸ್ಯರಲ್ಲಿ ಒಬ್ಬರಾದ ವಯಲಿನ್ ಕಲಾವಿದ ಅದನ್ನು ಸುಶ್ರಾವ್ಯವಾಗಿ ನುಡಿಸುವಿಕೆಯ ಮೂಲಕ ಪ್ರೇಕ್ಷಕರನ್ನು ಸಂಗೀತ ಸಂಜೆಗೆ ಶ್ರುತಿಗೊಳಿಸಿದರು. ವಯಲಿನ್‍ನಿಂದ ಹೊಮ್ಮಿದ ನಾದವನ್ನು ಕಿವಿಯ ಮೂಲಕ ಎದೆಗೆ ಇಳಿಸಿಕೊಂಡ ಪ್ರೇಕ್ಷಕರೂ ಕೂಡ ಸಂಗೀತ ಆಲಿಸಲು ಅಣಿಯಾದರು.

ಅಷ್ಟರಲ್ಲಿ ವೇದಿಕೆಯ ಹಿಂಬದಿ ಯಿಂದ ಸುಶ್ರಾವ್ಯ ಕಂಠವೊಂದು ಕೇಳಿಸಿತು. ‘ಆಮೀರ್' ಚಿತ್ರದ ‘ಮೇ ತೋ ತೇರೆ ಪ್ಯಾರ್ ಮೈ ದೀವಾನ ಹೋ ಗಯಾ' ಗೀತೆಯನ್ನು ಹಾಡುತ್ತಾ ಕೈಲಾಶ್ ವೇದಿಕೆಯ ಮೇಲೆ ಕಾಣಿಸಿಕೊಂಡಾಗ ಪ್ರೇಕ್ಷಕರು ಅವರನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ವೇದಿಕೆಗೆ ಬಂದ ಕೈಲಾಶ್ ಒಂದು ಮಾತನ್ನೂ ಆಡದೇ ಬ್ಯಾಕ್‍ ಟು ಬ್ಯಾಕ್ ಮೂರು ಹಾಡು ಹಾಡಿದರು. ಮೂರನೇ ಹಾಡನ್ನು ಮುಗಿಸಿ ಪ್ರೇಕ್ಷಕರನ್ನು ಉದ್ದೇಶಿಸಿ ಅವರು ಹೇಳಿದ್ದು ಹೀಗೆ: ‘ನಮಸ್ಕಾರ ನಮ್ಮ ಮಂಗಳೂರು. ಇದೇ ಮೊದಲಬಾರಿಗೆ ನಾನು ಆಳ್ವಾಸ್ ವಿರಾಸತ್ ಕಾರ್ಯ ಕ್ರಮಕ್ಕೆ ಬಂದಿದ್ದೇನೆ. ಇಲ್ಲಿಗೆ ಬಂದಾಗ ಒಂದು ದಿವ್ಯಲೋಕಕ್ಕೆ ಬಂದ ಅನುಭವ ಆಯಿತು. ವೇದಿಕೆಯ ಮೇಲೆ ನಿಂತು ನೋಡುವಾಗ ಇಲ್ಲಿ ನಾನೇ ಬಾಹುಬಲಿ ಅನ್ನುವ ಫೀಲ್ ಆಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿರುವ ನಿಮ್ಮ ಶಿಸ್ತು ನೋಡಿ ನಾನು ತುಂಬ ಇಂಪ್ರೆಸ್ ಆದೆ. ಕರಾವಳಿ ಮಣ್ಣಿನಲ್ಲೇ ಸಂಸ್ಕೃತಿಯ ಸೊಗಡಿದೆ. ಶಿಸ್ತಿನ ಗುಣವಿದೆ’.

‘ತೌಬ ತೌಬ ವೇ-ತೇರಿ-ಸೂರತ್’, ‘ಕೈಸೆ ಬಿತಾ ಹೇ’, ‘ಮಿಲ್ ಕೆ ಬಿ ಹಮ್ನಾ ಮಿಲೇ’ ಗೀತೆಗಳು ಅಲ್ಲಿ ಸೇರಿದ್ದ 40 ಸಾವಿರಕ್ಕೂ ಅಧಿಕ ಪ್ರೇಕ್ಷಕರನ್ನು ಮೋಡಿ ಮಾಡಿದವು. ನಂತರ ಅವರ ಮಾತು ಸ್ಯಾಂಡಲ್‍ವುಡ್‍ನತ್ತ ಹೊರಳಿತು. ‘ಕನ್ನಡ ಭಾಷೆಯಲ್ಲಿ ಒಳ್ಳೊಳ್ಳೆ ಸಿನಿಮಾ ಗಳು ರೂಪುಗೊಳ್ಳುತ್ತಿವೆ. ಇಲ್ಲಿ ಅದ್ಭುತ ಕಲಾವಿದರಿದ್ದಾರೆ. ಹಾಗೆಯೇ, ಸಂಗೀತ ನಿರ್ದೇಶಕರು, ಗಾಯಕರು ಇದ್ದಾರೆ. ಚಂದನವನದ ಕಂಪು ಎಲ್ಲೆಡೆ ಹರಡಲಿ. ಕೈಲಾಶ್ ಖೇರ್ ಆರ್ಕೆಸ್ಟ್ರಾದಲ್ಲಿರುವ ನಾಲ್ಕು ಸ್ತಂಭಗಳು ಕೂಡ ಕರಾವಳಿ ಮಣ್ಣಿನಲ್ಲೇ ಹುಟ್ಟಿಬೆಳೆದವರು. ಗಿಟಾರ್‍ನಲ್ಲಿ ಸಹಕರಿಸುವ ಪರೇಶ್ ಕಾಮತ್ ಮತ್ತು ನರೇಶ್ ಕಾಮತ್ ನಿಮ್ಮವರೇ. ಹಾಗೆಯೇ, ಸೌಂಡ್ ಎಂಜಿನಿಯರ್ ಮತ್ತು ಕೀಬೋರ್ಡ್ ಕಲಾವಿದರು ಕೂಡ ಇಲ್ಲೇ ಹುಟ್ಟಿ ಬೆಳೆದವರು' ಎಂದು ತಂಡದ ಸದಸ್ಯರನ್ನು ಪರಿಚಯಿಸಿದಾಗ ಪ್ರೇಕ್ಷಕರು ಆ ನಾಲ್ಕೂ ಜನ ಕಲಾವಿದರಿಗೆ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಚಿತ್ರರಂಗವನ್ನು ಹೊಗಳಿದ ನಂತರ ಅವರ ಶಾರೀರದಿಂದ ಹೊಮ್ಮಿದ್ದು ಪುನೀತ್ ರಾಜ್‍ಕುಮಾರ್ ಅಭಿನಯದ ‘ಜಾಕಿ' ಚಿತ್ರದ ಜನಪ್ರಿಯ ಗೀತೆಗಳಲ್ಲಿ ಒಂದಾದ ‘ಎಕ್ಕ ರಾಜ ರಾಣಿ ನಿನ್ನ ಕೈಯೊಳಗೆ’ ಗೀತೆ. ಈ ಗೀತೆಯನ್ನು ಹಾಡುವಾಗ ಪ್ರೇಕ್ಷಕರು ಶಿಳ್ಳೆ ಹೊಡೆದು ಕುಣಿದರು. ಕೇಕೆ ಹಾಕಿ ಸಂಭ್ರಮಿಸಿದರು. ನಂತರ ಕೈಲಾಶ್ ಕಂಠದಿಂದ ಮೂಡಿ ಬಂದ ‘ಬಾಹುಬಲಿ 2’ನ ‘ಧರಾ ಧರೇಂದ್ರ ನಂದಿನಿ' ಗೀತೆ ಕೇಳಿಸಿ ಕೊಂಡ ಪ್ರೇಕ್ಷಕರ ಸಂಭ್ರಮ ಮೇರೆ ಮೀರಿತ್ತು.

ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ ಚಿತ್ರ ಸಂಗೀತ ಕಾರ್ಯಕ್ರಮದಲ್ಲಿ ಪ್ರೇಕ್ಷಕರನ್ನು ರಂಜಿಸಿ ದ್ದು ಅವರ ವಿಶಿಷ್ಟ ಮ್ಯಾನರಿಸಂ. ಸ್ಯಾಂಡಲ್‍ವುಡ್‍ನ ಬಾಕ್ಸ್‌ ಆಫೀಸ್ ಸುಲ್ತಾನ ದರ್ಶನ್ ಅವರನ್ನು ನೆನಪಿಸು ವಂತಹ ನಡಿಗೆ, ಸಾಧು ಕೋಕಿಲಾ ಅವರಂತಹ ಮಾತು ಗಾರಿಕೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದವು. ಹಾಗೆಯೇ, ಎತ್ತರದಲ್ಲಿ ವಾಮನನಂತೆ ಕಾಣಿಸುವ ಕೈಲಾಶ್ ಅವರು ತಮ್ಮ ಸಿರಿಕಂಠದಿಂದ ಸೂಫಿ ಹಾಗೂ ಜಾನಪದ ಗೀತೆ ಅದ್ಭುತವಾಗಿ ಹಾಡುವ ಮೂಲಕ ಪ್ರೇಕ್ಷಕರ ಹೃದಯ ಸಿಂಹಾಸನದಲ್ಲಿ ತ್ರಿವಿಕ್ರಮನಂತೆ ವಿರಾಜಮಾನರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry