ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಲಾಟರಿ ಮೂಲಕ ಹಂಚಿಕೆ

ಮಂಗಳೂರು ನಗರದ ಬಡವರಿಗೆ ಫ್ಲಾಟ್
Last Updated 15 ಜನವರಿ 2018, 4:40 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಮಹಾ ನಗರದಲ್ಲಿ ವಸತಿ ರಹಿತ ಬಡವರಿಗೆ ಇದೇ ಮೊದಲ ಬಾರಿಗೆ ಫ್ಲಾಟ್ ನಿರ್ಮಿಸಿಕೊಡಲು ಮಹಾನಗರಪಾಲಿಕೆ ಮುಂದಾಗಿದ್ದು, ಇದೇ 16ರ ಮಂಗಳವಾರ ಪುರಭವನದಲ್ಲಿ ಫಲಾನುಭವಿಗಳಿಗೆ ಲಾಟರಿ ಮೂಲಕ ಫ್ಲಾಟ್‌ ಹಂಚಿಕೆಯಾಗಲಿದೆ.

ಹಲವು ವರ್ಷಗಳ ಬಳಿಕ ನಗರ ಮಂಗಳೂರು ಮಹಾನಗರದಲ್ಲಿ ಬಡವರಿಗೆ ಬೃಹತ್ ಸಂಖ್ಯೆಯಲ್ಲಿ ಮನೆ ಗಳನ್ನು ನಿರ್ಮಿಸಿಕೊಡುವ ಯೋಜನೆ ಜಾರಿಗೆ ಬರುತ್ತಿದೆ. ನಗರ ವ್ಯಾಪ್ತಿಯಲ್ಲಿ ಜಾಗದ ಸಮಸ್ಯೆಯಿಂದ ವಸತಿ ಯೋಜನೆಗೆ ತೀವ್ರ ಅಡ್ಡಿಯಾಗಿತ್ತು. ಆದರೆ ಅಪಾರ್ಟ್‌ಮಂಟ್‌ಗಳ ಮಾದರಿ ಯಲ್ಲಿ ಮನೆ ನಿರ್ಮಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮನೆ ನಿರ್ಮಿಸಬಹುದು ಎಂಬ ದೃಷ್ಟಿಯಿಂದ ಈ ಯೋಜನೆ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿತ್ತು. ಇದಕ್ಕೆ ಸರ್ಕಾರದ ಅನುಮೋದನೆಯೂ ದೊರಕಿದೆ.

ಮೊದಲ ಹಂತವಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ನಗರಾಶ್ರಯ ಸಮಿತಿ ಆಶ್ರಯದಲ್ಲಿ ಶಕ್ತಿನಗರ ಸಮೀಪದ ರಾಜೀವನಗರದ 10 ಎಕರೆ ಪ್ರದೇಶದಲ್ಲಿ ನೆಲಮಹಡಿ ಹಾಗೂ 3 ಮಹಡಿಗಳ ಅಪಾರ್ಟ್‍ಮೆಂಟ್ ನಲ್ಲಿ ಸುಮಾರು 930 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಪ್ರತಿಯೊಂದು ಫ್ಲಾಟ್‌ ನಿರ್ಮಾಣ ವೆಚ್ಚ ₹ 5ಲಕ್ಷಗಳಾಗಿದ್ದು, ಈ ಯೋಜ ನೆಗೆ ಅವಶ್ಯವಿರುವ ಅನು ದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ, ಮಹಾನಗರಪಾಲಿಕೆ ನಿಧಿ, ಫಲಾನುಭವಿಗಳ ವಂತಿಗೆ ಹಾಗೂ ಫಲಾನುಭವಿಗಳ ಬ್ಯಾಂಕ್ ಸಾಲದಿಂದ ಹೊಂದಿಸಲಾಗುತ್ತದೆ. ಫಲಾನುಭವಿಗಳು ಬ್ಯಾಂಕ್ ಸಾಲ ಪಡೆಯಲು ಅವರಿಗೆ ಹಂಚಿಕೆ ಮಾಡುವ ನಿರ್ದಿಷ್ಟ ಫ್ಲಾಟ್ ಸಂಖ್ಯೆ ಅಗತ್ಯವಾಗಿ ಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಿಂದ ನಗರಾಶ್ರಯ ಸಮಿತಿ ಆಶ್ರಯದಲ್ಲಿ ಈಗಾಗಲೇ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಲಾಟರಿ ಮೂಲಕ ಫ್ಲಾಟ್‌ಗಳನ್ನು ಆಯ್ಕೆ ಮಾಡಿ, ಹಂಚಿಕೆ ಮಾಡಲಾಗುವುದು.

ಫ್ಲಾಟ್ ಸಂಖ್ಯೆ ಹಂಚಿಕೆಯನ್ನು ಪಾರದರ್ಶಕವಾಗಿ ನಡೆಸುವ ಸಲುವಾಗಿ 16ರಂದು ಬೆಳಿಗ್ಗೆ 11 ಗಂಟೆಗೆ ಪುರಭವನದಲ್ಲಿ ಸಾರ್ವಜನಿಕವಾಗಿಯೇ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಇದೇ ಮಾದರಿಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಮಹಾನಗರಪಾಲಿಕೆ ವ್ಯಾಪ್ತಿಯ ಬಡವರಿಗೂ 792 ಫ್ಲಾಟ್‌ಗಳನ್ನು ಜಿ+3 ಮಾದರಿಯಲ್ಲಿ ನಿರ್ಮಿಸಿಕೊಡುವ ಯೋಜನೆಯು ಅಂತಿಮ ಹಂತದಲ್ಲಿದ್ದು, ಶೀಘ್ರವೇ ಫಲಾನುಭವಿಗಳಿಗೆ ಲಾಟರಿ ಮೂಲಕ ಫ್ಲಾಟ್ ಸಂಖ್ಯೆಗಳ ಹಂಚಿಕೆಯಾಗಲಿದೆ. ಸುರತ್ಕಲ್ ಇಡ್ಯಾ ಗ್ರಾಮದಲ್ಲಿ ಈ ಅಪಾರ್ಟ್‍ಮೆಂಟ್‌ ನಿರ್ಮಿಸಲಾಗುತ್ತಿದ್ದು, ಈಗಾಗಲೇ ಫಲಾನುಭವಿಗಳ ಆಯ್ಕೆಯಾಗಿದೆ.

ಮಂಗಳೂರು ನಗರದಲ್ಲಿ ಇದೇ ರೀತಿಯ ಇನ್ನೂ ಹಲವು ವಸತಿ ಯೋಜನೆಗಳನ್ನು ಜಾರಿಗೆ ತರಲು ಮಹಾನಗರಪಾಲಿಕೆ ಮುಂದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT