ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಲಿ’

ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪಗೆ 99ನೇ ಜನ್ಮ ದಿನದ ಅಭಿನಂದನಾ ಸಮಾರಂಭ
Last Updated 15 ಜನವರಿ 2018, 5:06 IST
ಅಕ್ಷರ ಗಾತ್ರ

ಧಾರವಾಡ: ‘ದೇವರ ಕಣ್ಣಿಗೂ ಬಟ್ಟೆ ಕಟ್ಟಿ ನ್ಯಾಯ ಮರೆ ಮಾಚಿದಾಗ ಪತ್ರಿಕಾರಂಗ ನ್ಯಾಯ ಒದಗಿಸುತ್ತಿತ್ತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ. ಸತ್ಯಾಸತ್ಯತೆ ತಿಳಿಸುವುದು ತಮ್ಮ ಕರ್ತವ್ಯ ಎಂಬುದನ್ನು ಪತ್ರಕರ್ತರು ಮರೆಯುತ್ತಿದ್ದು, ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಮುಂಡರಗಿಯ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.

ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಅವರಿಗೆ 99ನೇ ಜನ್ಮ ದಿನದ ಅಂಗವಾಗಿ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

’ಪತ್ರಿಕಾರಂಗವು ಉದ್ಯಮವಾಗಿ ಬೆಳೆದ ನಂತರದಲ್ಲಿ ಪತ್ರಿಕಾರಂಗದ ಬೆಳಕು ಉದ್ಯಮದ ಕತ್ತಲಲ್ಲಿ ಕಣ್ಮರೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಮಾಜದಲ್ಲಿ ಮಾಧ್ಯಮಗಳೇ ಗುರುವಾಗಿರುವಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಪ್ರಾಚೀನ ಸಾಹಿತಿ, ಪ್ರಾಚೀನ ಬರಹಗಾರರನ್ನೇ ಇಂದಿಗೂ ನೆನೆಯುವ ಪರಿಸ್ಥಿತಿ ಬಂದಿರುವುದು ಸಮಾಜದಲ್ಲಿನ ಯುವ ಬರಹಗಾರರ ಕೊರತೆಯನ್ನು ಬಿಂಬಿಸುತ್ತಿದೆ’ ಎಂದರು.

‘ಪಾಪು ಅವರ 100 ವರ್ಷದ ಜನ್ಮ ದಿನಾಚರಣೆಗೆ ದೇಶದ ಪತ್ರಕರ್ತರಿಗೆ ತರಬೇತಿ ಕಾರ್ಯಾಗಾರ ನಡೆಸಬೇಕು. ದೇಶದ ಮುಖಂಡರನ್ನು ಬದಲಾಯಿಸುವಲ್ಲಿ ಧಾರ್ಮಿಕ ಮುಂಡರಷ್ಟೇ ದೃಶ್ಯ ಮಾಧ್ಯಮದ ಜವಾಬ್ದಾರಿಯೂ ಇದೆ’ ಎಂದರು.

‘ಕಾವಿಯೊಳಗಿನ ಖಾದಿ ಅಪಾಯಕಾರಿ ಆಗಿದೆ. ಇಂದಿನ ಸ್ವಾಮೀಜಿಗಳು ಧ್ಯಾನ, ಜಪ, ತಪಗಳನ್ನು ಮರೆತು ಬ್ಯಾಂಕ್ ಚೆಕ್ ಸಹಿ ಮಾಡುವ, ಐಷಾರಾಮಿ ಕಟ್ಟಡ, ಕಾರು ಬಯಸುವ ಸ್ವಾಮೀಜಿಗಳಾಗುತ್ತಿರುವುದು ಸರಿಯಲ್ಲ. ಸಮಾಜಕ್ಕೆ ಅಗತ್ಯ ಮಾರ್ಗದರ್ಶನ ಮಾಡುವಂತೆ ಅವರು ನಡೆದುಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿ, ‘ಪುಟ್ಟಪ್ಪನವರು ವೈವಿಧ್ಯಮಯ ಬದುಕು ಕಂಡ ಹೋರಾಟಗಾರ, ಬರಹಗಾರ, ಜನಪ್ರತಿನಿಧಿ, ಪತ್ರಕರ್ತ. ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆ’ ಎಂದರು.

‘ಪಾಪು ಒಳಗಡೆ ಗಾಂಧಿ ಅಡಗಿದ್ದಾರೆ. ನಾವು ಹತ್ತು ಜನ್ಮದಲ್ಲಿ ಸಾಧಿಸಲಾಗದ್ದನ್ನು ಒಂದೇ ಜನ್ಮದಲ್ಲಿ ಪಾಪು ಸಾಧಿಸಿದ್ದಾರೆ. ಸಮಾಜದಲ್ಲಿ ಪಾಪು ಮಾರ್ಗದರ್ಶನ ಚಿರ ಚೇತನವಾಗಿರಲಿ’ ಎಂದು ಆಶಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಪಾಟೀಲ ಪುಟ್ಟಪ್ಪ, ‘ಸಾಮಾನ್ಯ ಬಡ ಕುಟುಂಬದಲ್ಲಿ ಜನಸಿದ ನಾನು ದೇಶದ ಇತಿಹಾಸದಲ್ಲಿ ಹೆಸರು ಮಾಡಿದ ನಾಯಕರು ಹಾಗೂ ತಜ್ಞರನ್ನು ಭೇಟಿ ಮಾಡಿದ್ದೇನೆ. ಅತ್ಯಂತ ಸರಳ ಬದುಕು ನಡೆಸುವುದನ್ನು ಅವರಿಂದಲೂ ಕಲಿತಿದ್ದೇನೆ. ವಕೀಲರಾಗಬೇಕಿದ್ದ ನನ್ನನ್ನು ಸರ್ದಾರ್ ವಲ್ಲಭಭಾಯಿ ಪಟೇಲರು ಪತ್ರಕರ್ತರಾಗುವಂತೆ ಮಾಡಿದರು’ ಎಂದು ಸ್ಮರಿಸಿದರು.

‘ಕನ್ನಡ ನಾಡು ಎಂದರೇ ತುಂಬ ಪ್ರೀತಿ. ಹೀಗಾಗಿಯೇ ನಾಡಿಗಾಗಿ ಅನೇಕ ಹೋರಾಟಗಳನ್ನು ಮಾಡಿದ್ದು, ಯಶಸ್ಸನ್ನು ಕಂಡಿದ್ದೇನೆ. ಬ್ಯಾಡಗಿಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಅವರು ನನ್ನ ಬೆನ್ನು ಚಪ್ಪರಿಸಿ, ನಿನ್ನ ಹೋರಾಟ ಮುಂದುವರೆಸು ಎಂದು ಹೇಳಿದ್ದು ನನಗಿನ್ನು ನೆನಪಿದ್ದು, ಇದು ಗಾಂಧಿ ಮುಟ್ಟಿದ ದೇಹ’ ಎಂದು ಹೆಮ್ಮೆ ಪಟ್ಟರು.

ಪಾಪು ವಿಚಾರ ವೇದಿಕೆಯ ಕಾರ್ಯಾಧ್ಯಕ್ಷ ಡಾ.ಜಿ.ಆರ್. ತಮಗೊಂಡ, ಕೋಶಾಧ್ಯಕ್ಷ ಎನ್.ಬಿ. ರಾಮಾಪೂರ, ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕಾರ್ಯಾಧ್ಯಕ್ಷ ಡಾ.ಡಿ.ಎಂ. ಹಿರೇಮಠ, ನಿರಂಜನ ವಾಲಿಶೆಟ್ಟರ, ಶಿವಣ್ಣ ಬೆಲ್ಲದ, ಕೃಷ್ಣಾ ಜೋಶಿ, ಡಾ.ಜಿ.ಎಂ. ಹೆಗಡೆ, ಎಂ.ಎ. ಸುಬ್ರಹ್ಮಣ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT