ಹಬ್ಬದ ಸಂಭ್ರಮಕ್ಕೆ ರೊಟ್ಟಿ ಊಟದ ಮೆರುಗು

7
ವಾಣಿಜ್ಯ ನಗರಿಯಲ್ಲಿ ಮಕರ ಸಂಕ್ರಾಂತಿ ಸಡಗರ, ಉದ್ಯಾನಗಳಲ್ಲಿ ಹೆಚ್ಚಿದ ಉತ್ಸಾಹ

ಹಬ್ಬದ ಸಂಭ್ರಮಕ್ಕೆ ರೊಟ್ಟಿ ಊಟದ ಮೆರುಗು

Published:
Updated:
ಹಬ್ಬದ ಸಂಭ್ರಮಕ್ಕೆ ರೊಟ್ಟಿ ಊಟದ ಮೆರುಗು

ಹುಬ್ಬಳ್ಳಿ: ಹೊಸವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ವಾಣಿಜ್ಯ ನಗರಿಯ ಜನ ಭಾನುವಾರ ಸಂತೋಷ, ಸಡಗರದಿಂದ ಆಚರಿಸಿದರು.

ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಸೇಂಗಾ ಹೋಳಿಗೆ, ಬದನೇಕಾಯಿ ಪಲ್ಯ, ಹೆಸರು ಕಾಳು ಹೀಗೆ ವಿವಿಧ ನಮೂನೆಯ ಊಟ ತಯಾರಿಸಿಕೊಂಡು ಉದ್ಯಾನಗಳಲ್ಲಿ ಕುಟುಂಬ ಸಮೇತವಾಗಿ ಸವಿದರು. ನೇತ್ರ ತಜ್ಞ ಎಂ.ಎಂ. ಜೋಶಿ ಅವರ ಹೊಲದಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸಡಗರದಲ್ಲಿ ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಭಾಗಿಯಾದರು.

ಉಣಕಲ್‌ ಕೆರೆಯ ಉದ್ಯಾನ, ವಿವಿಧ ಬಡಾವಣೆಗಳ ಉದ್ಯಾನಗಳಲ್ಲಿ ಬುತ್ತಿಕಟ್ಟಿಕೊಂಡು ಬಂದು ಊಟ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು. ಭಾನುವಾರ ಬೆಳಿಗ್ಗೆಯಿಂದಲೇ ಜನ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಸ್ನೇಹಿತರು, ಸಂಬಂಧಿಕರು ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡರು.

ದುರ್ಗದ ಬೈಲ್‌ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿತ್ತು. ಗ್ರಾಹಕರನ್ನು ಸೆಳೆಯುವ ಸಲುವಾಗಿ ವ್ಯಾಪಾರಸ್ಥರು ತರಹೇವಾರಿ ಕುಸುರೆಳ್ಳುಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಸಕ್ಕರೆ, ಬಿಳಿಎಳ್ಳು, ಬಡೆಸೋಪು, ಕಲ್ಲಂಗಡಿ ಬೀಜ, ಹವಿಜಾ ಮತ್ತು ಚುರುಮರಿಯಿಂದ ಕುಸುರಳ್ಳುಗಳನ್ನು ತಯಾರಿಸಲಾಗಿತ್ತು.  ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರ ಕಡಿಮೆ ಎಂದು ವ್ಯಾಪಾರಸ್ಥರು ಬೇಸರ ತೋಡಿಕೊಂಡರು.

‘ಹೋದ ವರ್ಷದ ಸಂಕ್ರಾಂತಿಯಲ್ಲಿ ಕಡಲೆಕಾಯಿ ಬೆಲೆ ಪ್ರತಿ ಕೆ.ಜಿ.ಗೆ ₹ 50ರಿಂದ 60 ಇತ್ತು. ಈ ವರ್ಷ ₹ 20ಕ್ಕೆ ಮಾರುತ್ತಿದ್ದರೂ ಹೆಚ್ಚು ವ್ಯಾಪಾರ ಆಗಿಲ್ಲ. ಈ ವರ್ಷ ಮೂರು ದಿನ ಕಳೆದರೂ ಮೂರು ಕ್ವಿಂಟಲ್‌ ಕೂಡ ವ್ಯಾಪಾರವಾಗಿಲ್ಲ’ ಎಂದು ದುರ್ಗದ ಬೈಲ್‌ನಲ್ಲಿ ಕಡಲೆಕಾಯಿ ಮಾರುತ್ತಿದ್ದ ಅಬ್ದುಲ್‌ ಗಣಿ ಬಂಕಾಪುರ ಬೇಸರ ವ್ಯಕ್ತಪಡಿಸಿದರು.

‘ಒತ್ತಡದ ಬದುಕಿನಲ್ಲಿ ಮನೆಮನೆಗೆ ಹೋಗಿ ಎಳ್ಳು–ಬೆಲ್ಲ ಕೊಡುವಷ್ಟು ಪುರುಸೊತ್ತು ಯಾರಿಗೂ ಇಲ್ಲದಂತಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಫೇಸ್‌ಬುಕ್‌ ಮತ್ತು ವ್ಯಾಟ್ಸ್‌ಆ್ಯಪ್‌ ಮೂಲಕವೇ ಹೆಚ್ಚಿನ ಜನ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬ ಆಚರಿಸುತ್ತಾರೆ. ಆದ್ದರಿಂದ ಕುಸುರೆಳ್ಳು ಮಾರಾಟ ವ್ಯಾಪಾರ ಕಡಿಮೆಯಾಗಿದೆ’ ಎಂದು ಕುಸುರೆಳ್ಳು ಮಾರುತ್ತಿದ್ದ ಆನಂದ ನಡಗಟ್ಟಿ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry