ಸ್ಮಾರ್ಟ್‌ಸಿಟಿ ವ್ಯಾಪ್ತಿಗೆ ನೃಪತುಂಗಬೆಟ್ಟ: ಶೆಟ್ಟರ್‌ ಪ್ರಸ್ತಾವ

7
ಪಿರಮಿಡ್‌ ಧ್ಯಾನಮಂದಿರ ಲೋಕಾರ್ಪಣೆ 16ಕ್ಕೆ

ಸ್ಮಾರ್ಟ್‌ಸಿಟಿ ವ್ಯಾಪ್ತಿಗೆ ನೃಪತುಂಗಬೆಟ್ಟ: ಶೆಟ್ಟರ್‌ ಪ್ರಸ್ತಾವ

Published:
Updated:

ಹುಬ್ಬಳ್ಳಿ: ನೃಪತುಂಗಬೆಟ್ಟ, ಇಂದಿರಾ ಗ್ಲಾಸ್‌ಹೌಸ್‌, ಉಣಕಲ್‌ ಮತ್ತು ತೋಳನಕೆರೆಯನ್ನು ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ಮೂಲಕ ಅಭಿವೃದ್ಧಿ ಪಡಿಸಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ, ಶೀಘ್ರದಲ್ಲೇ ಪ್ರಸ್ತಾವ ಸಲ್ಲಿಸಲಾಗುವುದು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹೇಳಿದರು.

ಇಲ್ಲಿನ ನೃಪತುಂಗ ಬೆಟ್ಟದ ಬಳಿ ನಿರ್ಮಾಣವಾಗಿರುವ ಪಿರಮಿಡ್‌ ಧ್ಯಾನಮಂದಿರಕ್ಕೆ ಶನಿವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಗರದ ಪ್ರಮುಖ ಉದ್ಯಾನ ಮತ್ತು ಕೆರೆಗಳು ನಿರ್ವಹಣೆ ಇಲ್ಲದೆ ಸೊರಗಿವೆ. ಕಾರಣ ಇವುಗಳಿಗೆ ಸ್ಮಾರ್ಟ್‌ಸಿಟಿ ಯೋಜನೆಯಡಿ ತಲಾ ₹ 10 ಕೋಟಿಯಿಂದ ₹ 15 ಕೋಟಿ ಅನುದಾನವನ್ನು ನೀಡಿ ಅಭಿವೃದ್ಧಿ ಪಡಿಸಿದರೆ ಸಾರ್ವಜನಿಕರ ಬಳಕೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

16ಕ್ಕೆ ಉದ್ಘಾಟನೆ: ಕನಕಪುರ ಧ್ಯಾನಮಂದಿರದ ಮಾದರಿಯಲ್ಲಿ ನೃಪತುಂಗ ಬೆಟ್ಟದ ಬಳಿ ₹ 3.5 ಕೋಟಿ ಅನುದಾನದಲ್ಲಿ ನಿರ್ಮಾಣವಾಗಿರುವ ಪಿರಮಿಡ್‌ ಧ್ಯಾನಮಂದಿರದ ಲೋಕಾರ್ಪಣೆ ಇದೇ 16ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ. ಇದರಿಂದ ಬಹುದಿನಗಳ ಕನಸು ನನಸಾದಂತಾಗಿದೆ ಎಂದು ಅವರು ಹೇಳಿದರು.

ಈ ಧ್ಯಾನಮಂದಿರದಲ್ಲಿ ಸಾರ್ವಜನಿಕರಿಗೆ ಧ್ಯಾನ, ಯೋಗ ತರಬೇತಿ ನೀಡಲಾಗುತ್ತದೆ. ಒಮ್ಮೆಗೆ ಸುಮಾರು 600 ಜನ ಧ್ಯಾನಕ್ಕೆ ಕುಳಿತುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರ ನಿರ್ಲಕ್ಷ್ಯ: ಅವಳಿ ನಗರದಲ್ಲಿ ನಡೆಯುತ್ತಿರುವ ಬಿಆರ್‌ಟಿಎಸ್‌, ಸ್ಮಾರ್ಟ್‌ಸಿಟಿ ಕಾಮಗಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯದಿಂದಾಗಿ ಆಮೆಗತಿಯಲ್ಲಿ ನಡೆಯುತ್ತಿವೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಒಮ್ಮೆಯೂ ಬಿಆರ್‌ಟಿಎಸ್‌, ಸ್ಮಾಟ್‌ಸಿಟಿ ಕಾಮಗಾರಿಗಳ ಕುರಿತು ಪ್ರಗತಿಪರಿಶೀಲನೆ ನಡೆಸಿಲ್ಲ. ಇದರಿಂದ ಅಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲ ಎಂದು ದೂರಿದರು.

ಬಿಆರ್‌ಟಿಎಸ್‌ ರಸ್ತೆ ಕಾಮಗಾರಿಯನ್ನು ಜನವರಿ ಒಳಗಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪರಿಣಾಮ ರಸ್ತೆ ನಿರ್ಮಾಣ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ ಎಂದು ತಿಳಿಸಿದರು.

ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣ ನವೀಕರಣ ಕಾರ್ಯ ಕೂಡ ವಿಳಂಬವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಹಲವು ಬಾರಿ ಗಮನಕ್ಕೆ ತಂದರೂ ಅವರು ಆಸಕ್ತಿ ವಹಿಸುತ್ತಿಲ್ಲ ಎಂದು ದೂರಿದರು.

ಪಾಲಿಕೆ ಸದಸ್ಯ ವೀರಣ್ಣ ಸವಡಿ, ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಮುಖಂಡರಾದ ಮಲ್ಲಿಕಾರ್ಜುನ ಸಾಹುಕಾರ, ಹನುಮಂತಪ್ಪ ದೊಡ್ಡಮನಿ, ಎಸ್‌.ಎಂ.ಪಟ್ಟಣಶೆಟ್ಟಿ, ನೃಪತುಂಗಬೆಟ್ಟ ವಾಯು ವಿಹಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದು ಮೊಗಲಿಶೆಟ್ಟರ, ಎಸ್‌.ಬಿ.ಬಾರಿಗಿಡದ, ಎಸ್‌.ವಿ.ಅಂಗಡಿ, ಡಾ.ಮಹಾಂತೇಶ ತಪಶೆಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry