ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದಿಂದ ಮನಸ್ಸು ಒಡೆಯದಿರಲಿ

ಮುಗಳಖೋಡ: ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆ ಸಮಾರೋಪದಲ್ಲಿ ಖರ್ಗೆ ಹೇಳಿಕೆ
Last Updated 15 ಜನವರಿ 2018, 5:28 IST
ಅಕ್ಷರ ಗಾತ್ರ

ಮುಗಳಖೋಡ: ‘ಧರ್ಮಕ್ಕಾಗಿ ಮನುಷ್ಯರು ಹುಟ್ಟಿಲ್ಲ. ಮಾನವ ಕಲ್ಯಾಣ ಮತ್ತು ಅವರ ಶ್ರೇಷ್ಠತೆಗಾಗಿ ಧರ್ಮಗಳು ಹುಟ್ಟಿವೆ. ಜಾತಿ, ಧರ್ಮಗಳಿಂದ ಮನಸ್ಸುಗಳು ಒಡೆಯಬಾರದು. ಪರಸ್ಪರ ಸೌಹಾರ್ದ ಬೆಳೆಸಬೇಕು’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇಲ್ಲಿಯ ಜಿಡಗಾಮಠದಲ್ಲಿ ಮೂರು ದಿನಗಳಿಂದ ಆಯೋಜಿಸಿದ್ದ ‘ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆ’ಯ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

‘ಬಸವಣ್ಣ, ಬುದ್ಧ, ಗುರುನಾನಕ್‌, ಮಹಮ್ಮದ್‌ ಪೈಗಂಬರ್‌, ಯೇಸು ಸೇರಿದಂತೆ ಎಲ್ಲ ಧರ್ಮ ಸಂಸ್ಥಾಪಕರೂ ಜಾತಿ, ಮತ ಎನ್ನದೇ ಮಾನವೀಯತೆ ಎತ್ತಿಹಿಡಿದವರು. ಏಕತೆಯ ಸಂದೇಶವನ್ನು ಸಾರಿ ವಿಶ್ವಮಾನ್ಯರಾಗಿ ಬೆಳಗಿದವರು. ಆ ಸಂಪ್ರದಾಯ ಬೆಳೆಸುತ್ತಿರುವ ಮಠಗಳಲ್ಲಿ ಜಿಡಗಾ ಮಠ ಒಂದಾಗಿದೆ. ಜಾತಿ, ಧರ್ಮ ಎನ್ನದೇ ಸಮಾಜ ಮತ್ತು ಮಾನವ ಕಲ್ಯಾಣಕ್ಕೆ ಶ್ರಮಿಸುತ್ತಿರುವ ಶ್ರೀಮಠವು ರಾಷ್ಟ್ರದಲ್ಲಿಯೇ ಆದರ್ಶವಾಗಿದೆ’ ಎಂದು ಶ್ಲಾಘಿಸಿದರು.

‘ಸತ್ಯ ಮತ್ತು ಭಾವೈಕ್ಯಕ್ಕೆ ಮತ್ತೊಂದು ಹೆಸರು ಎನ್ನುವಂತೆ ಈ ಮಠವಿದೆ. 70 ವರ್ಷಗಳ ಹಿಂದೆ ತಂದೆ ಮಠದ ಪರಮಭಕ್ತರಾಗಿದ್ದರು. ಆಗ ನಾನು 6 ವರ್ಷದ ಬಾಲಕನಾಗಿದ್ದೆ. ಆಗಿನ ಯಲ್ಲಾಲಿಂಗ ಮಹಾರಾಜರು ಎಲ್ಲ ಜಾತಿಯವರನ್ನು ಒಂದೇ ಪಂಕ್ತಿಯಲ್ಲಿ ಕೂರಿಸಿ ಪ್ರಸಾದ ಮಾಡಿಸುತ್ತಿದ್ದುದ್ದಕ್ಕೆ ತಂದೆ ಅತ್ಯಂತ ಪ್ರಭಾವಿತರಾಗಿದ್ದರು’ ಎಂದು ನೆನಪಿಸಿಕೊಂಡರು.

ಶ್ರೀಮಠದ ಪರಮಭಕ್ತರಾಗಿದ್ದ ತಮ್ಮ ರಾಜಕೀಯ ಒಡನಾಡಿ ಮಾಜಿ ಮುಖ್ಯಮಂತ್ರಿ ದಿ. ಎನ್‌. ಧರ್ಮಸಿಂಗ್‌ ಅವರನ್ನೂ ಸ್ಮರಿಸಿದರು.

ಬೆಳ್ಳಿ ಕಿರೀಟ ತೊಡಿಸಿ ಸತ್ಕಾರ: ‘ಜಾತ್ರೆಯಲ್ಲಿ ಸೇರಿರುವ ಸಾಗರೋಪಾ ದಿಯ ಭಕ್ತಸಮೂಹ ಕಂಡು ಪುಳಕಿತನಾಗಿದ್ದೇನೆ. ಇದರಿಂದ ಸಂತೋಷವಾಗಿದೆ. ಶ್ರೀಮಠದ ಬೆಳವಣಿಗೆಗೆ ಸಂಪೂರ್ಣ ಬೆಂಬಲವಿದೆ’ ಎಂದು ಭರವಸೆ ನೀಡಿದರು.

ಅವರನ್ನು ಶ್ರೀಮಠದಿಂದ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಲಾಯಿತು.

ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ, ‘ಮುಗಳಖೋಡದ ಕಲ್ಯಾಣಮಂಟಪಕ್ಕೆ ತಮ್ಮ ನಿಧಿಯಿಂದ ₹ 1 ಕೋಟಿ ಒದಗಿಸುತ್ತೇನೆ. ಈ ತಾಣವನ್ನು ಪ್ರವಾಸಿ ಕೇಂದ್ರವಾಗಿಸುವ ನಿಟ್ಟಿನಲ್ಲಿ ಕೇಂದ್ರದಿಂದ ಸೌಲಭ್ಯಗಳನ್ನು ಕೊಡಿಸುತ್ತೇನೆ’ ಎಂದು ತಿಳಿಸಿದರು.

ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಎಲ್ಲರ ಕಲ್ಪನೆಯನ್ನು ಮೀರಿ ಸಂಕಲ್ಪ ಜಾತ್ರೆ ಯಶಸ್ವಿಯಾಗಿದೆ. ಇದರಿಂದ ಸಂತೋಷವಾಗಿದೆ.

ಮಠವು ವಿಶ್ವವ್ಯಾಪಿಯಾಗಿ ಗುರುತಿಸಿ ಕೊಂಡಿರುವುದು ಹೆಮ್ಮೆಯ ಸಂಗತಿ ಯಾಗಿದೆ’ ಎಂದರು.

ಶಾಸಕ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ‘ಸಂಕಲ್ಪ ಸಿರಿ’ ಸ್ಮರಣಸಂಚಿಕೆಯನ್ನು ಬಿಡುಗಡೆ ಮಾಡಿದರು.

ಧರ್ಮಗುರುಗಳು ಭಾಗಿ: ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿದರು. ಬೀದರ್‌ನ ಗುರುನಾನಕ್‌ ಝರ್‌ ಸಂಸ್ಥಾನದ ಜಾನಿ ದರಬಾರ್‌ ಸಿಂಗ್‌, ಮೌಂಟ್‌ಅಬು ವಿಶ್ವ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಕಾರ್ಯದರ್ಶಿ ಮೃತ್ಯುಂಜಯ, ಮಹಾಲಿಂಗಪುರದ ಸೂಫಿ ಸಂತ ಇಬ್ರಾಹಿಂ ಸುತಾರ, ಚಿಕ್ಕಮಂಗಳೂರಿನ ಸಿಂಹನಗದ್ದೆ ಜೈನಮಠದ ಲಕ್ಷ್ಮೇಸೇನ ಭಟ್ಟಾರಕ ಮಂಚಾಚಾರ್ಯರು, ಪಾದ್ರಿ ಮೈಕಲ್‌ ಸೋಜಾ, ಜರ್ಮನಿಯ ಅಮೃತಾಮನಿ ಇದ್ದರು.

ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ಸಿದ್ದು ನ್ಯಾಮಗೌಡ, ಮುಖಂಡ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಎಸ್.ಬಿ. ಘಾಟಗೆ, ವಿಧಾನ ಪರಿಷತ್ ಸದಸ್ಯ ವೀರಕುಮಾರ ಪಾಟೀಲ, ಪ್ರತಾಪರಾವ ಪಾಟೀಲ, ರೋಣ ಶಾಸಕ ಜಿ.ಎಸ್. ಪಾಟೀಲ, ಬಿ.ಆರ್. ಪಾಟೀಲ, ದತ್ತಾತ್ರೇಯ ಪಾಟೀಲ, ಅಶೋಕ ದಳವಾಯಿ, ಬಸಗೌಡ ಪಾಟೀಲ ನಾಗನೂರ ಇದ್ದರು.

ಕುಡಚಿ ಶಾಸಕ ಪಿ. ರಾಜೀವ ಸ್ವಾಗತಿಸಿದರು. ಇದಕ್ಕೂ ಮುನ್ನ, ಹೆಲಿಕಾಪ್ಟರ್‌ ಮೂಲಕ ಶ್ರೀಮಠದ ಶಿಖರದ ಮೇಲೆ ಪುಷ್ಪವೃಷ್ಟ ಮಾಡಲಾಯಿತು. ಭಕ್ತರ ಹರ್ಷ ಮುಗಿಲುಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT