9 ವರ್ಷದಲ್ಲಿ 70 ಹಳ್ಳಿಗಳಿಗೆ ಶುದ್ಧ ನೀರು

7
ಅಭಿವೃದ್ಧಿ ಜತೆ ಕನ್ನಡದ ಸೇವೆ: ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ

9 ವರ್ಷದಲ್ಲಿ 70 ಹಳ್ಳಿಗಳಿಗೆ ಶುದ್ಧ ನೀರು

Published:
Updated:

ಯಮಕನಮರಡಿ: ಕ್ಷೇತ್ರದಲ್ಲಿ 9 ವರ್ಷದಲ್ಲಿ 70 ಹಳ್ಳಿಗಳಿಗೆ ನದಿಮೂಲದಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಕಾಕತಿ ವಲಯದ 11 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ, ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ತಿಳಿಸಿದರು.

ಬೆಳಗಾವಿ ತಾಲ್ಲೂಕಿನ ಹೊಸಇದ್ದಲಹೊಂಡ (ಶಿವಾಪುರ) ಗ್ರಾಮದ ಸರ್ಕಾರಿ ಪ್ರೌಢಶಾಲೆಯ ದಶಮಾನೋತ್ಸವ, ಸನ್ಮಾನ, 5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪು ಮತ್ತು ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಮುಳುಗಡೆ ಪ್ರದೇಶವಾದ ಶಿವಾಪುರ ಗ್ರಾಮ ಮೊದಲಿನಿಂದಲೂ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಗಡಿಭಾಗದಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಭಾಷೆ, ನೆಲಜಲ, ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಗ್ರಾಮಸ್ಥರು ಮಾಡುತ್ತಿರುವ ಕಾರ್ಯವೂ ಶ್ಲಾಘನೀಯವಾದುದು’ ಎಂದರು.

‘ಶಿವಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಯಮಕನಮರಡಿ, ಉಳ್ಳಾಗಡ್ಡಿ-ಖಾನಾಪುರ ಹಾಗೂ ಬೆಳಗಾವಿಗೆ ಹೆಚ್ಚಿನ ಅಭ್ಯಾಸಕ್ಕೆ ಹೋಗುತ್ತಿದ್ದಾರೆ. ಮತ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಜತೆಗೆ ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ಹಾಗೂ ಸಾಮಾಜಿಕ ಚಿಂತನೆಗಳಿಗೆ ಪ್ರೇರೇಪಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ‘ಕನ್ನಡವು ತನ್ನ ಅಸ್ತಿತ್ವ, ಸಂಸ್ಕೃತಿ ಉಳಿಸಿಕೊಳ್ಳಲು ಹೋರಾಡುವುದು ಅನಿವಾರ್ಯವಾಗಿದೆ. ಗಡಿಭಾಗದಲ್ಲಿ ಭಾಷೆಯ ಕಂಪನ್ನು ಪಸರಿಸುವ ನಿಟ್ಟಿನಲ್ಲಿ ಈ ಗ್ರಾಮಸ್ಥರು ಮಾಡುತ್ತಿರುವ ಕನ್ನಡ ಸೇವೆ ಅನನ್ಯವಾದುದು. ಇದು ಇದ್ದಲಹೊಂಡವಲ್ಲ, ಬಂಗಾರದ ಹೊಂಡವಾಗಿದೆ. ಕನ್ನಡ ನಾಡು, ನುಡಿ ರಕ್ಷಣೆಗಾಗಿ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು’ ಎಂದು ಮನವರಿಕೆ ಮಾಡಿಕೊಟ್ಟರು.

ಉಪನ್ಯಾಸ ನೀಡಿದ ಮೈತ್ರೇಯಿಣಿ ಗದಿಗೆಪ್ಪಗೌಡರ, ‘ಜೀವಂತಿಕೆ ಮತ್ತು ಕ್ರಿಯಾಶೀಲತೆ ಹೊಂದಿರುವ ಈ ಗ್ರಾಮದ ಕಾರ್ಯ ವಿಶೇಷವಾಗಿದೆ. ಸ್ತ್ರೀಯರು ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದರು.

ಸರ್ಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಹಂಜಿ ಮಾತನಾಡಿ, ‘ಗ್ರಾಮವನ್ನು ಗ್ರಾಮ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಬೇಕು’ ಎಂದು ಕೋರಿದರು.

ಸ್ಥಳೀಯರಾದ ಆನಂದ ಚನ್ನಪ್ಪಗೋಳ, ಸುರೇಶ ಹಂಜಿ, ಎಸ್.ಎಮ್. ಶಿರೂರ, ಯಮನಪ್ಪ ಗಿರೆನ್ನವರ ಹಾಗೂ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಕಾಕತಿ ಜಿಲ್ಲಾ ಪಂಚಾಯ್ತಿ ಸದಸ್ಯ ಸಿದಗೌಡ ಸುಣಗಾರ, ಕನ್ನಡ ಹೋರಾಟಗಾರ ಸಿದ್ದನಗೌಡ ಪಾಟೀಲ, ಮುಖಂಡರಾದ ಫಕೀರವ್ವ ಹಂಚಿನಮನಿ, ರಾಮ ಗುಳ್ಳಿ, ಶಿವಪ್ಪ ವಣ್ಣೂರಿ, ಲಗಮನಗೌಡ ಪಾಟೀಲ, ಎಚ್ಎಂಆರ್ ಓಲಮ್ ಶುಗರ್ಸ್‌ನ ಸತೀಶ ಬೋಸಲೆ, ಭೀಮಗೌಡ ಪಾಟೀಲ, ಬಸಗೌಡ ಹುದ್ದಾರ, ಯಲ್ಲಪ್ಪ ಕೋಳೆಕರ, ಎಸ್.ಎಂ. ಶಿರೂರ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry