ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್‌ಎಸ್‌ಎಸ್‌ ದೇಶಭಕ್ತ ಸಂಘಟನೆ, ಯಾವುದೇ ಭೇದ ಇಲ್ಲ’

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವ
Last Updated 15 ಜನವರಿ 2018, 5:42 IST
ಅಕ್ಷರ ಗಾತ್ರ

ತೆಲಸಂಗ: ‘ಆರ್.ಎಸ್.ಎಸ್.ದಲ್ಲಿ ಜಾತಿ ಮತ ವಯಸ್ಸಿನ ಭೇದವಿಲ್ಲ. ಭಾರತ ದೇಶ, ಧರ್ಮ, ಸಂಸ್ಕೃತಿ ಉಳಿವಿಗಾಗಿ ಸ್ವಯಂ ಸೇವಕನಿಗೆ ಸಂಸ್ಕಾರ ನೀಡಿ ಅದರಿಂದ ಅವನ ಕುಟುಂಬದ ಸಮೇತ ದೇಶ ಕಟ್ಟುವ ಕೆಲಸಕ್ಕೆ ಸಿದ್ಧಗೊಳಿಸುವುದು ಮುಖ್ಯ ಉದ್ದೇಶವಾಗಿದೆ' ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸೇವಾ ಪ್ರಮುಖ ಅಶೋಕ ಹೇಳಿದರು.

ಗ್ರಾಮದಲ್ಲಿ ಸ್ಥಳೀಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಹಿಂದು, ಮುಸ್ಲಿಂ, ಕ್ರೈಸ್ತ ಯಾರೇ ಇರಲಿ ಎಲ್ಲರೂ ಒಟ್ಟಾಗಿ ದೇಶ ನಿರ್ಮಾಣ ಮಾಡಬೇಕು ಎನ್ನುವುದೇ ಆರ್.ಎಸ್.ಎಸ್. ಉದ್ದೇಶ.  ದೇಶದ ಯಾವುದೇ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಲ್ಲ ಶಕ್ತಿ ಆರ್.ಎಸ್.ಎಸ್.ಗೆ ಇದೆ‌ ಎಂದು ಜಗತ್ತು ಇಂದು ಭಾರತಕ್ಕೆ ಮನ್ನಣೆ ಕೊಡುತ್ತಿದೆ ಎಂದರು.

‘ಸಂಘದಲ್ಲಿ ನಾನು ಎಂಬ ಭಾವ ಮಾಯವಾಗಿ ನಮ್ಮದು ಎಂಬ ಭಾವ ಸ್ವಯಂ ಸೇವಕನಲ್ಲಿ ಮೂಡುತ್ತದೆ. ಪ್ರತಿಯೊಬ್ಬರು ಸಂಘದ ಕಾರ್ಯಕ್ಕೆ ಕೈಜೋಡಿಸಬೇಕು. ಶಾಖೆಗೆ ಬನ್ನಿ ವ್ಯಕ್ತಿತ್ವ ನಿರ್ಮಿಸಿಕೊಳ್ಳಬೇಕು’ ಎಂದರು.

ಹಿರೇಮಠದ ವೀರೇಶ್ವರ ಸ್ವಾಮೀಜಿ ಮಾತನಾಡಿ, ಯುವಕರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶಾರೀರಿಕ, ಮಾನಸಿಕ ಸದೃಢತೆ ನೀಡಿ ವ್ಯಕ್ತಿತ್ವ ರೂಪಿಸಿ, ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುತ್ತದೆ ಎಂದರು.

ಮನೆ ಮನೆಯ ಮಕ್ಕಳಿಗೆ ಆರ್‌ಎಸ್‌ಎಸ್‌ಗೆ ಸೇರಿಸಿ ಮಕ್ಕಳು ದುಶ್ಚಟಗಳಿಂದ ದಾರಿ ತಪ್ಪುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ನಿವೃತ್ತ ಸೈನಿಕ ಬಸವರಾಜ ಬೆಟಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಥಳೀಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವ ಅಂಗವಾಗಿ ಗ್ರಾಮದಲ್ಲಿ ಶನಿವಾರ ಸಂಜೆ ಗಣವೇಷಧಾರಿ ಪಥಸಂಚಲನ ನಡೆಯಿತು. ಪಥಸಂಚಲನದ ಮಾರ್ಗದುದ್ದಕ್ಕೂ ರಂಗೋಲಿ, ಹೂ ಹಾಕಿ ಭಾರತ ಮಾತೆಗೆ ಜೈಕಾರ ಕೂಗಿ ದೇಶಭಕ್ತಿ ಮೆರೆದರು. ಸ್ವದೇಶಿ ಸಂಗೀತ ನಾದಕ್ಕೆ ಹೆಜ್ಜೆ ಹಾಕಿದ ಸ್ವಯಂ ಸೇವಕರನ್ನು ಜನ ಕಣ್ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT