ಆಗ ಆಟೊ, ಈಗ ಕ್ಯಾಲೆಂಡರ್‌ ತಂತ್ರ

7
ವಿಜಯನಗರ ಕ್ಷೇತ್ರದ ಮತದಾರರ ಮನಗೆಲ್ಲಲು ಆನಂದ್‌ ಸಿಂಗ್‌ ವಿನೂತನ ಪ್ರಚಾರ

ಆಗ ಆಟೊ, ಈಗ ಕ್ಯಾಲೆಂಡರ್‌ ತಂತ್ರ

Published:
Updated:
ಆಗ ಆಟೊ, ಈಗ ಕ್ಯಾಲೆಂಡರ್‌ ತಂತ್ರ

ಹೊಸಪೇಟೆ: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಉಳಿದಿರುವುದರಿಂದ ರಾಜಕೀಯ ಮುಖಂಡರು ಪ್ರಚಾರಕ್ಕಾಗಿ ಹಲವು ತಂತ್ರಗಳನ್ನು ಅನುಸರಿಸಿ ಮತದಾರರ ಮನಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.

ಜಿಲ್ಲೆಯ ಇತರೆ ಮುಖಂಡರಿಗೆ ಹೋಲಿಸಿದರೆ ಅದರಲ್ಲಿ ವಿಜಯನಗರ ಕ್ಷೇತ್ರದ ಹಾಲಿ ಶಾಸಕ ಆನಂದ್‌ ಸಿಂಗ್‌ ಅವರು ಮುಂಚೂಣಿಯಲ್ಲಿದ್ದಾರೆ. ಆಟೊಗಳ ಮೇಲೆ ತಮ್ಮ ಭಾವಚಿತ್ರ ಅಂಟಿಸಿಕೊಂಡು ಪ್ರಚಾರ ಕೈಗೊಳ್ಳುವ ಚಾಲಕರಿಗೆ ಲಕ್ಕಿ ಡಿಪ್‌ ಮೂಲಕ ಉಚಿತವಾಗಿ ಆಟೊ ವಿತರಿಸಿ, ವಿನೂತನ ರೀತಿಯಲ್ಲಿ ಡಿಸೆಂಬರ್‌ನಿಂದ ಪ್ರಚಾರ ಆರಂಭಿಸಿದ್ದಾರೆ. 900 ಆಟೊಗಳ ಮೇಲೆ ಅವರ ಭಾವಚಿತ್ರ ರಾರಾಜಿಸುತ್ತಿದೆ. ಈಗಾಗಲೇ ಮೂರು ಆಟೊಗಳನ್ನು ವಿತರಿಸಲಾಗಿದ್ದು, ಜನವರಿ ಹಾಗೂ ಫೆಬ್ರುವರಿಯಲ್ಲಿ ತಲಾ ಮೂರು ಆಟೊಗಳನ್ನು ವಿತರಿಸಲು ಉದ್ದೇಶಿಸಲಾಗಿದೆ.

ಈಗ ಹೊಸ ವರ್ಷದ ಗೋಡೆ ಕ್ಯಾಲೆಂಡರ್‌ಗಳನ್ನು ಕ್ಷೇತ್ರದ ಮತದಾರರ ಮನೆ ಮನೆಗೆ ಉಚಿತವಾಗಿ ತಲುಪಿಸುವ ಮೂಲಕ ಮತ್ತೊಂದು ಬಗೆಯ ಪ್ರಚಾರ ಆರಂಭಿಸಿದ್ದಾರೆ. ಡಿಸೆಂಬರ್‌ ಕೊನೆಯ ವಾರದಿಂದಲೇ ಕ್ಯಾಲೆಂಡರ್‌ಗಳನ್ನು ವಿತರಿಸಲಾಗುತ್ತಿದ್ದು, ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಈ ಕೆಲಸ ಪೂರ್ಣಗೊಂಡಿದೆ. ಈಗ ನಗರದಲ್ಲಿ ಈ ಕೆಲಸ ಶುರುವಾಗಿದೆ.

ನಿತ್ಯ ಒಂದೊಂದು ಬಡಾವಣೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿರುವ ಎಲ್ಲ ನಿವಾಸಿಗಳಿಗೂ ಕ್ಯಾಲೆಂಡರ್‌ ಹಂಚುತ್ತಿದ್ದಾರೆ. ಈ ಕೆಲಸದಲ್ಲಿ ಸುಮಾರು 15ರಿಂದ 20 ಮಹಿಳೆಯರು ತೊಡಗಿದ್ದಾರೆ.

ಕ್ಯಾಲೆಂಡರ್‌ ಮುಖಪುಟದಲ್ಲಿ ಆನಂದ್‌ ಸಿಂಗ್‌ ಅವರು ಕೈಮುಗಿದು ನಿಂತಿರುವ ದೊಡ್ಡ ಭಾವಚಿತ್ರವಿದ್ದು, ಮೇಲ್ಭಾಗದಲ್ಲಿ ನಟ ರಾಜಕುಮಾರ್‌ ಚಿಕ್ಕ ಭಾವಚಿತ್ರ ಮುದ್ರಿಸಲಾಗಿದೆ. ‘ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಅಭಿಮಾನಿಗಳೇ ನಮ್ಮನೆ ದೇವ್ರು’ ಎಂಬ ಶೀರ್ಷಿಕೆ ಇದೆ. ಮಧ್ಯದಲ್ಲಿ ‘ಈ ಹೊಸ ವರ್ಷವು ಕ್ಷೇತ್ರದ ಜನತೆಗೆ ಸುಖ, ಶಾಂತಿ, ‘ಆನಂದ’ ಹಾಗೂ ನೆಮ್ಮದಿಯನ್ನು ತರಲಿ, ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌, ಸಮಾಜ ಸೇವೆಯೊಂದಿಗೆ ಸದಾ ನಿಮ್ಮೊಂದಿಗೆ’ ಎಂಬ ಬರಹ ಇದೆ. ಕೆಳಭಾಗದಲ್ಲಿ ನಿಮ್ಮ ಸೇವಕ ಆನಂದ್‌ ಸಿಂಗ್‌, ಕ್ಷೇತ್ರದ ಅಭಿವೃದ್ಧಿಗಾಗಿ ಹರಸಿ– ಆಶೀರ್ವದಿಸಿ’ ಎಂಬ ಸಾಲಿದೆ.

ಕ್ಯಾಲೆಂಡರ್‌ನ ಪ್ರತಿ ಪುಟದ ಮೇಲೆ ಆನಂದ್‌ ಸಿಂಗ್‌ ಅವರ ಭಾವಚಿತ್ರವಿದ್ದು, ಕ್ಷೇತ್ರದಲ್ಲಿ ಅವರ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಚಿತ್ರ, ಅದರ ಕಿರು ಪರಿಚಯವೂ ಇದೆ.

ಆದರೆ, ಇಡೀ ಕ್ಯಾಲೆಂಡರ್‌ನಲ್ಲಿ ಎಲ್ಲೂ ಬಿಜೆಪಿಯ ಕಮಲ ಚಿಹ್ನೆಯಾಗಲಿ, ಆ ಪಕ್ಷದ ಮುಖಂಡರ ಭಾವಚಿತ್ರ ಇಲ್ಲ. ಇತ್ತೀಚೆಗಷ್ಟೇ ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯಿಂದಲೂ ಆನಂದ್‌ ಸಿಂಗ್‌ ದೂರ ಉಳಿದಿದ್ದರು. ಅವರು ಬಿಜೆಪಿ ತೊರೆಯುತ್ತಾರೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ. ಕ್ಯಾಲೆಂಡರ್‌ನಲ್ಲಿ ಬಿಜೆಪಿ ಪಕ್ಷ ಹಾಗೂ ಆ ಪಕ್ಷದ ಮುಖಂಡರ ಬಗ್ಗೆ ಪ್ರಸ್ತಾಪ ಇಲ್ಲದಿರುವುದು ಅದನ್ನು ಪುಷ್ಟೀಕರಿಸುತ್ತಿದೆ.

‘ಡಿಸೆಂಬರ್‌ ಕೊನೆಯ ವಾರದಿಂದ ಎಲ್ಲೆಡೆ ಕ್ಯಾಲೆಂಡರ್‌ಗಳನ್ನು ಹಂಚುತ್ತಿದ್ದೇವೆ. ಗ್ರಾಮೀಣ ಭಾಗದಲ್ಲಿ ಇತ್ತೀಚೆಗಷ್ಟೇ ಕೆಲಸ ಪೂರ್ಣಗೊಂಡಿದೆ. ನಗರದಲ್ಲಿ ಕೆಲ ಬಡಾವಣೆಗಳ ಮನೆಗಳಿಗೆ ಕ್ಯಾಲೆಂಡರ್‌ ಮುಟ್ಟಿಸುವ ಕೆಲಸ ನಡೆದಿದೆ.

ಒಟ್ಟು ಎರಡು ಕ್ರೂಸರ್‌ ವಾಹನಗಳು, ಸುಮಾರು 20 ಮಹಿಳೆಯರು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಭಾನುವಾರ ಇಲ್ಲಿನ

ಪಟೇಲ್‌ ನಗರಕ್ಕೆ ಕ್ಯಾಲೆಂಡರ್‌ ಹೊತ್ತು ತಂದಿದ್ದ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಚಾಲಕ ‘ಪ್ರಜಾವಾಣಿ’ಗೆ ತಿಳಿಸಿದರು.

ಒಟ್ಟು ಎಷ್ಟು ಕ್ಯಾಲೆಂಡರ್‌ಗಳನ್ನು ಮುದ್ರಿಸಲಾಗಿದೆ. ಅದಕ್ಕಾಗಿ ತಗಲಿರುವ ವೆಚ್ಚದ ಕುರಿತು ಮಾಹಿತಿ ಪಡೆಯಲು ಶಾಸಕ ಆನಂದ್‌ ಸಿಂಗ್‌, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಂದೀಪ್‌ ಸಿಂಗ್‌ ಅವರನ್ನು ಸಂಪರ್ಕಿಸಿದಾಗ ಕರೆ ಸ್ವೀಕರಿಸಲಿಲ್ಲ.

***

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry