ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಸೂಚನೆ

ಅಂಗನವಾಡಿ ಕೇಂದ್ರದ ಪಕ್ಕದ ನಗರಸಭೆಯ ಆಸ್ತಿ ಅತಿಕ್ರಮಣ
Last Updated 15 ಜನವರಿ 2018, 7:46 IST
ಅಕ್ಷರ ಗಾತ್ರ

ಹೊಸಪೇಟೆ: ಎಂ.ಜೆ. ನಗರದ 12ನೇ ಕ್ರಾಸ್‌ನಲ್ಲಿರುವ ಅಂಗನವಾಡಿ ಕೇಂದ್ರದ ಪಕ್ಕದಲ್ಲಿರುವ ನಗರಸಭೆಯ ಜಾಗವನ್ನು ಅತಿಕ್ರಮಣ ಮಾಡಿಕೊಂಡವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕೆಂದು ಕಲಬುರ್ಗಿ ಪ್ರಾದೇಶಿಕ ಆಯುಕ್ತರು ಇಲ್ಲಿನ ನಗರಸಭೆ ಪೌರಾಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.

ಆಯುಕ್ತರು ಈ ಸಂಬಂಧ 2017ರ ನ. 29ರಂದು ಪೌರಾಯುಕ್ತರಿಗೆ ಪತ್ರ ಬರೆದಿದ್ದು, ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಅಂಗನವಾಡಿ ಸಮೀಪದ 654-/ಬಿ–1ರ 720 ಚದರ ಅಡಿಯ ಜಾಗವನ್ನು ಅತಿಕ್ರಮಿಸಲಾಗಿದೆ ಎಂದು ಸಾರ್ವಜನಿಕರು ದೂರು ಕೊಟ್ಟಿದ್ದರು. ಜಾಗವನ್ನು ಜಿಲಾನ್‌ ಬಾಷಾ ಮೆಹಬೂಬ್‌ ಸಾಬ್‌ ಎಂಬುವರು ಅರ್ಷಿಯಾ ಎಸ್‌. ವಲಿಬಾಷಾ ಅವರಿಗೆ 2016ರ ಫೆಬ್ರುವರಿ 1ರಂದು ₹5.90 ಲಕ್ಷಕ್ಕೆ ಕ್ರಯ ಪತ್ರ ಮಾಡಿಕೊಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.

ಈ ವಿಷಯದ ಕುರಿತು ಮಾಹಿತಿ ನೀಡುವಂತೆ ಆಯುಕ್ತರು ನಗರಸಭೆಗೆ ಸೂಚನೆ ಕೊಟ್ಟಿದ್ದರು. ಸುಳ್ಳು ಮಾಹಿತಿ ನೀಡಿ ಖಾತೆ ಬದಲಾಯಿಸಿಕೊಳ್ಳಲಾಗಿದೆ ಎಂದು ನಗರಸಭೆ ವರದಿ ನೀಡಿತ್ತು. ಅದರ ವರದಿ ಆಧರಿಸಿ ಆಯುಕ್ತರು ಈ ಸೂಚನೆ ಕೊಟ್ಟಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಆಸ್ತಿಯನ್ನು ಅತಿಕ್ರಮಣ ಮಾಡಿದ್ದು, ಖರೀದಿ ಪತ್ರವನ್ನು ರದ್ದುಪಡಿಸಲು ಸಂಬಂಧಿಸಿದ ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಹೂಡಬೇಕು. ಅತಿಕ್ರಮಣ ಮಾಡಿರುವ ಜಾಗವನ್ನು ಅಂಗನವಾಡಿ ಕೇಂದ್ರಕ್ಕೆ ಬಾಡಿಗೆ ನೀಡಲಾಗಿತ್ತು. ಎಷ್ಟು ದಿನ ಬಾಡಿಗೆ ನೀಡಲಾಗಿತ್ತೋ ಆ ಅವಧಿಯ ಬಾಡಿಗೆಯನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಬೇಕು. ಅಕ್ರಮವಾಗಿ ಖಾತೆ ಬದಲಾವಣೆ ಮಾಡಿಕೊಟ್ಟಿರುವುದು, ಮನೆ ಸಂಖ್ಯೆ ನೀಡಿರುವ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಇಲಾಖಾ ಮುಖ್ಯಸ್ಥರಿಗೆ ಶಿಫಾರಸು ಮಾಡಬೇಕೆಂದು ಆಯುಕ್ತರು ಸೂಚಿಸಿದ್ದಾರೆ.

ಠಾಣೆಗೆ ದೂರು: ಸುಳ್ಳು ಮಾಹಿತಿ ನೀಡಿ ಸರ್ಕಾರಿ ಆಸ್ತಿಯನ್ನು ಅತಿಕ್ರಮಿಸಿದ ಜಿಲಾನ್‌ ಬಾಷಾ ಮೆಹಬೂಬ್‌ ಸಾಬ್‌, ಅದನ್ನು ಖರೀದಿಸಿದ ಅರ್ಷಿಯಾ ಎಸ್‌. ವಲಿಬಾಷಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಗರಸಭೆಯ ಪೌರಾಯುಕ್ತರು ಜ. 9ರಂದು ಪಟ್ಟಣ ಠಾಣೆಗೆ ದೂರುನೀಡಿದ್ದಾರೆ. ಈ ಕುರಿತು ನಗರಸಭೆಯ ಪೌರಾಯುಕ್ತರನ್ನು ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.
***
ಸಿಡಿಪಿಒಗೆ ನಿರ್ದೇಶನ

‘ಸರ್ಕಾರಿ ಆಸ್ತಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿ ಬಾಡಿಗೆಗೆ ಕೊಡಲಾಗಿತ್ತು. ಹಾಗಾಗಿ ಪಾವತಿಸಿದ ಸಂಪೂರ್ಣ ಬಾಡಿಗೆಯನ್ನು ಹಿಂಪಡೆದು ಸರ್ಕಾರಕ್ಕೆ ಚಲನ್‌ ಮೂಲಕ ಜಮೆ ಮಾಡಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಹೊಸಪೇಟೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ (ಸಿ.ಡಿ.ಪಿ.ಒ.) 2017ರ ಡಿ. 19ರಂದು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

‘ಜಿಲಾನ್‌ ಬಾಷಾ ಅವರಿಗೆ 2010ರ ಏಪ್ರಿಲ್‌ನಿಂದ 2016ರ ಸೆಪ್ಟೆಂಬರ್‌ ವರೆಗೆ ಬಾಡಿಗೆ ಪಾವತಿಸಲಾಗಿದ್ದು, ಅದನ್ನು ಹಿಂತಿರುಗಿಸುವಂತೆ ನೋಟಿಸ್‌ ನೀಡಲಾಗಿದೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಭಾಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT