ಮೊಳಗಿದ ಮಾಂಗಲ್ಯಂ ತಂತು ನಾನೇನ...

7
ಜಾತ್ರಾ ಮಹೋತ್ಸವದ ಎರಡನೇ ದಿನ ಭರಪೂರ ಜನ

ಮೊಳಗಿದ ಮಾಂಗಲ್ಯಂ ತಂತು ನಾನೇನ...

Published:
Updated:
ಮೊಳಗಿದ ಮಾಂಗಲ್ಯಂ ತಂತು ನಾನೇನ...

ಸುತ್ತೂರು: ಒಬ್ಬೊಬ್ಬರ ಮುಖದಲ್ಲಿ ಒಂದೊಂದು ಭಾವ. ವೇದಿಕೆಯಲ್ಲಿದ್ದ ನವಜೋಡಿಗಳಲ್ಲಿ ಕೆಲವರು ಗಂಭೀರವಾಗಿ ಕುಳಿತಿದ್ದರೆ, ಮತ್ತೆ ಕೆಲವರು ಪಿಸುಮಾತನ್ನಾಡುತ್ತಿದ್ದರು. ಇನ್ನು ಕೆಲವರು ಸಭಾಂಗಣದಲ್ಲಿ ಕುಳಿತಿದ್ದ ಕುಟುಂಬ ಸದಸ್ಯರತ್ತ ಕೈಬೀಸುತ್ತಿದ್ದರು. ಸಂತಸ ಹಾಗೂ ಉದ್ವೇಗದ ಭಾವ ಕಣ್ಣುಗಳಲ್ಲಿ ಎದ್ದುಕಾಣುತ್ತಿತ್ತು.

ಸುತ್ತೂರು ಕ್ಷೇತ್ರದಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ನಡೆದ ಸಾಮೂಹಿಕ ವಿವಾಹ ವೇದಿಕೆಯಲ್ಲಿ ಕಂಡುಬಂದ ದೃಶ್ಯಗಳಿವು. ಜಾತ್ರೆಯ ತಾಣವೇ ಮದುವೆ ಮಂಟಪದಂತೆ ಕಂಡುಬಂತು. ನವಜೋಡಿಗಳ ಕುಟುಂಬ ಸದಸ್ಯರ ಧಾವಂತ, ಮಕ್ಕಳ ಓಡಾಟ ಜಾತ್ರೆಯ ಕಳೆಯನ್ನು ಹೆಚ್ಚಿಸಿತು.

ಮಂಗಳವಾದ್ಯ, ಮಂತ್ರಘೋಷ, ಕುಟುಂಬ ಸದಸ್ಯರ ಹಾರೈಕೆ ಮತ್ತು ಅಲ್ಲಿ ನೆರೆದಿದ್ದ ಭಕ್ತರು, ಸಾರ್ವಜನಿಕರ ಹರ್ಷೋದ್ಗಾರದ ನಡುವೆ 145 ಜೋಡಿಗಳು ಹಸೆಮಣೆ ಏರಿದವು.

ನವಜೋಡಿಗಳನ್ನು ಭವ್ಯ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಬೆಳಿಗ್ಗೆ 10ರ ವೇಳೆಗೆ ಎಲ್ಲ ವಧೂ–ವರರು ವೇದಿಕೆಯಲ್ಲಿ ಶಿಸ್ತಿನಿಂದ ಕುಳಿತರು. ಸುಮಾರು ಒಂದೂವರೆ ಗಂಟೆ ಸಭಾ ಕಾರ್ಯಕ್ರಮ ನಡೆಯಿತು. ಈ ವೇಳೆ ಪರಸ್ಪರ ಪಿಸುಮಾತನ್ನಾಡುತ್ತಾ, ಸ್ವಾಮೀಜಿಗಳು ಮತ್ತು ಗಣ್ಯರ ಸಂದೇಶಗಳನ್ನು ಆಲಿಸುತ್ತಾ ಕಾಲ ಕಳೆದರು.

ತಾಳಿಕಟ್ಟುವ ಕ್ಷಣ ಬಂದಾಗ ನವಜೋಡಿಗಳ ಮುಖದಲ್ಲಿ ಸಂತಸ, ಉದ್ವೇಗ ಜತೆಯಾಗಿ ಕಂಡುಬಂದವು. 11.45ರ ವೇಳೆಗೆ ಮೈಕ್‌ನಲ್ಲಿ ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನಾ... ಮಂತ್ರ ಮೊಳಗುತ್ತಿದ್ದಂತೆಯೇ ತಾಳಿಕಟ್ಟಿದರು. ಸಾವಿರಾರು ಕ್ಯಾಮೆರಾ ಮತ್ತು ಮೊಬೈಲ್‌ಗಳು ಈ ಕ್ಷಣವನ್ನು ಸೆರೆಹಿಡಿದವು.

ಹುಡುಗ ತಾಳಿಕಟ್ಟಿ ಕುಡಿನೋಟ ಬೀರಿದಾಗ ಹುಡುಗಿ ನಾಚಿ ನೀರಾದಳು. ಕುಟುಂಬ ಸದಸ್ಯರು ಆ ಕ್ಷಣವನ್ನು ಕಣ್ತುಂಬಿಕೊಂಡು ಸಂತಸಪಟ್ಟರು. ಮಕ್ಕಳು ನವಜೋಡಿಯ ಬಳಿ ನಿಂತು ಸೆಲ್ಫಿ ತೆಗೆದುಕೊಂಡರು.

ವಧುಗಳು ಕೇಸರಿ ಬಣ್ಣದ ಸೀರೆಯುಟ್ಟಿದ್ದರೆ, ವರರು ಬಿಳಿ ಬಣ್ಣದ ಶರ್ಟ್‌ ಹಾಗೂ ಪಂಚೆಯು ಟ್ಟುಕೊಂಡಿದ್ದರು. ಎಲ್ಲ ಜೋಡಿಗಳಿಗೂ ಮಾಂಗಲ್ಯ, ಕಾಲುಂಗುರ ನೀಡಲಾಯಿತು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರು ನವ ಜೋಡಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ‘ಬದುಕಿನ ಸುಖ ದುಃಖಗಳಲ್ಲಿ ನಾವಿಬ್ಬರೂ ಒಂದಾಗಿ ಪರಸ್ಪರ ಅರಿತುಕೊಂಡು ಪ್ರೀತಿ ವಿಶ್ವಾಸದಿಂದ, ಗೌರವ ಆದರದಿಂದ ಸಾಮರಸ್ಯದ ಜೀವನ ನಡೆಸುತ್ತೇವೆ...’ ಎಂದು ಪ್ರತಿಜ್ಞೆ ಸ್ವೀಕರಿಸಿದರು.

ಹೊಸ ಕನಸು, ನಿರೀಕ್ಷೆಗಳನ್ನು ಹೊತ್ತುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳಿಗೆ ಹಾರಕೂಡ ಚನ್ನಬಸವೇಶ್ವರ ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಮತ್ತು ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಶುಭ ಸಂದೇಶ ನೀಡಿದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವದಿಸಿದರು.

ಮಹಾರಥೋತ್ಸವ ಇಂದು: ಜಾತ್ರೆಯ ಪ್ರಧಾನ ಆಕರ್ಷಣೆ ಎನಿಸಿರುವ ಮಹಾರಥೋತ್ಸವ ಸೋಮವಾರ ನಡೆಯಲಿದೆ. ಬೆಳಿಗ್ಗೆ 10.15 ರಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಭಾನುವಾರ ರಾಜ್ಯಮಟ್ಟದ ಭಜನಾ ಮೇಳ, ದೇಸಿ ಆಟಗಳು ನಡೆದವು. ಮಕ್ಕಳಿಗಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ನೂರಾರು ಮಂದಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry