ತರಕಾರಿ ವ್ಯಾಪಾರಿಗಳಿಗೆ ಸಂಕಟ

7
ಹೊಸ ಕಟ್ಟಡ ನಿರ್ಮಾಣ: ಪರ್ಯಾಯ ವ್ಯವಸ್ಥೆಯ ಗೊಂದಲ

ತರಕಾರಿ ವ್ಯಾಪಾರಿಗಳಿಗೆ ಸಂಕಟ

Published:
Updated:
ತರಕಾರಿ ವ್ಯಾಪಾರಿಗಳಿಗೆ ಸಂಕಟ

ಚಾಮರಾಜನಗರ: ನಗರದಲ್ಲಿ ಈಗಿರುವ ತರಕಾರಿ ಮಾರುಕಟ್ಟೆಯನ್ನು ತೆರವುಗೊಳಿಸಿ, ಅಲ್ಲಿ ಹೊಸ ಮಾರುಕಟ್ಟೆ ನಿರ್ಮಿಸುವ ಯೋಜನೆ ವರ್ತಕರಲ್ಲಿ ಗೊಂದಲ ಮೂಡಿಸಿದೆ.

ತಮಗೆ ಸುಸಜ್ಜಿತವಾದ ಮಾರುಕಟ್ಟೆ ಬೇಕು ಎನ್ನುವುದನ್ನು ಇಲ್ಲಿನ ವ್ಯಾಪಾರಿಗಳು ಒಪ್ಪಿಕೊಂಡರೂ, ತಮಗೆ ಸರಿಯಾದ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ಈ ಜಾಗ ತೆರವುಗೊಳಿಸಲಾರೆವು ಎನ್ನುತ್ತಿದ್ದಾರೆ.

ಜಾಗ ಎಲ್ಲಿದೆ?: ಈಗ ನಗರದೆಲ್ಲೆಡೆ ರಸ್ತೆ ವಿಸ್ತರಣೆ ಕಾಮಗಾರಿಗಳು ನಡೆಯುತ್ತಿ ರುವುದರಿಂದ ಸಮರ್ಪಕವಾದ ಸ್ಥಳ ಸಿಗುತ್ತಿಲ್ಲ. ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವುದಾಗಿ ಶಾಸಕರು ಮತ್ತು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಇದಕ್ಕೆ ವ್ಯಾಪಾರಿಗಳ ಸಹಮತಿ ಇಲ್ಲ. ತಮ್ಮ ವಿರೋಧಕ್ಕೆ ಅವರು ಕಾರಣಗಳ ಪಟ್ಟಿಯನ್ನೇ ತೆರೆದಿಡುತ್ತಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಸುಮಾರು 45 ವ್ಯಾಪಾರಿಗಳಿದ್ದಾರೆ. ಮಾರಿಗುಡಿ ಬಳಿ ಚಿಕ್ಕ ಚಿಕ್ಕ ಅಂಗಡಿಗಳೆಂದರೂ ಗರಿಷ್ಠ 20 ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸಬಹುದು. ಮಹದೇಶ್ವರ ಬೆಟ್ಟಕ್ಕೆ ಹೋಗುವ ಭಕ್ತರು ರಾತ್ರಿ ಈ ಆವರಣದಲ್ಲಿಯೇ ತಂಗುತ್ತಾರೆ. ಸುತ್ತಮುತ್ತ ವಾಹನಗಳನ್ನು ಪಾರ್ಕಿಂಗ್‌ ಮಾಡುತ್ತಾರೆ. ಈ ಒತ್ತಡಗಳ ಮಧ್ಯೆ ನಾವು ವ್ಯಾಪಾರ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಮುಂದಿಡುತ್ತಾರೆ.

ಅಲ್ಲಿಂದಲೂ ಕಳುಹಿಸಿದರೆ...?: ಇನ್ನು ಒಂದು ತಿಂಗಳೊಳಗೆ ಮಾರಿಗುಡಿಯಲ್ಲಿ ಜಾತ್ರೆ ನಡೆಯಲಿದೆ. ಆ ವೇಳೆ ಅಲ್ಲಿ ವ್ಯಾಪಾರ ಮಾಡಲು ಬಿಡುತ್ತಾರೆಯೇ? ನಮಗೆ ಹೆಚ್ಚು ವ್ಯಾಪಾರವಾಗುವುದೇ ಹಬ್ಬ, ಜಾತ್ರೆಗಳಂದು. ಆ ಸಂದರ್ಭ ಗಳಲ್ಲಿಯೇ ಅಂಗಡಿ ಹಾಕಲು ಜಾಗವಿಲ್ಲದಿದ್ದರೆ ವ್ಯಾಪಾರ ಹೇಗೆ ಮಾಡುವುದು? ಎಂಬ ಸಂಕಟ ಅವರನ್ನು ಕಾಡುತ್ತಿದೆ.

‘ತಳ್ಳುಗಾಡಿಯಲ್ಲಿಯಾದರೆ ಇನ್ನೊಂದು ಕಡೆ ಕೊಂಡೊಯ್ದು ವ್ಯಾಪಾರ ಮಾಡಬಹುದು. ಅವರದು ಸಾವಿರ ರೂಪಾಯಿ ವಹಿವಾಟಿನ ವ್ಯಾಪಾರ. ನಾವು ಲಕ್ಷಗಟ್ಟಲೆ ಬಂಡವಾಳ ಹೂಡಿ ತರಕಾರಿಗಳನ್ನು ತರುತ್ತೇವೆ. ಇವರು ವ್ಯಾಪಾರಕ್ಕೆ ಜಾಗ ಕೊಡುತ್ತೇವೆ ಎಂದು ನೀಡುವ ಭರವಸೆಯನ್ನು ಒಪ್ಪಿಕೊಳ್ಳೋಣ. ಆದರೆ, ನಾವು ತರಿಸಿಕೊಳ್ಳುವ ತರಕಾರಿಗಳನ್ನು ಎಲ್ಲಿ ಇರಿಸುವುದು. ಮೊದಲು ಅದಕ್ಕೆ ವ್ಯವಸ್ಥೆ ಮಾಡಲಿ’ ಎನ್ನುತ್ತಾರೆ ವ್ಯಾಪಾರಿ ಭಾಗ್ಯ.

ಚಾಮರಾಜೇಶ್ವರ ದೇವಸ್ಥಾನದ ಹಿಂಭಾಗ, ಪೊಲೀಸ್‌ ಠಾಣೆ ಎದುರಿನ ರಸ್ತೆಯ ಎರಡೂ ದಿಕ್ಕಿನಲ್ಲಿ ತಾತ್ಕಾಲಿಕವಾಗಿ ವ್ಯಾಪಾರ ನಡೆಸಲಿ ಅನುವು ಮಾಡಿಕೊಡಲಿ. ಇಲ್ಲದಿದ್ದರೆ ವೀರಭದ್ರಸ್ವಾಮಿ ದೇವಸ್ಥಾನ ಸಮೀಪದ ಹಳೆ ಮಾರುಕಟ್ಟೆಯನ್ನೇ ಸಜ್ಜುಗೊಳಿಸಿಕೊಡಲಿ ಎನ್ನುವುದು ವ್ಯಾಪಾರಿಗಳ ಬೇಡಿಕೆ.

‘ಇಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯವಿಲ್ಲ. ವಿದ್ಯುತ್‌ ಕೂಡ ಇಲ್ಲ. ಮನೆಯಿಂದ ಯುಪಿಎಸ್ ಚಾರ್ಜ್‌ ಮಾಡಿಕೊಂಡು ತಂದು ಬಳಸುತ್ತಿದ್ದೇವೆ’ ಎನ್ನುತ್ತಾರೆ ಅವರು.

‘ಈ ಹಿಂದೆ, ವಿದ್ಯುತ್‌ ಸಂಪರ್ಕ ಒದಗಿಸಿ ಎಂದು ಕೋರಿದ್ದಕ್ಕೆ ಸಂಜೆ ಆರು ಗಂಟೆಗೆ ಎಲ್ಲ ಖಾಲಿಮಾಡಿಕೊಂಡು ಹೋಗುತ್ತಾರೆ. ಇವರಿಗೇಗೆ ವಿದ್ಯುತ್‌ ಕೊಡುವುದು ಎಂದು ಪಾಲಿಕೆಯ ಸದಸ್ಯರೊಬ್ಬರು ಉಡಾಫೆಯಿಂದ ಹೇಳಿದ್ದರು. ನಾವು ಬೆಳಿಗ್ಗೆ ಬಂದರೆ ರಾತ್ರಿ 10ರವರೆಗೂ ವ್ಯಾಪಾರ ಮಾಡುತ್ತೇವೆ. 8–10 ವರ್ಷಗಳಿಂದ ಇಲ್ಲಿದ್ದೇವೆ. ಒಂದು ದಿನವೂ ತಪ್ಪದೆ ನಿತ್ಯ ಬಾಡಿಗೆ ಕಟ್ಟುತ್ತಿದ್ದೇವೆ. ಆದರೆ ಮೂಲಸೌಕರ್ಯ ಮಾತ್ರ ಕಲ್ಪಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

2004ರಲ್ಲಿ ಆರಂಭವಾದ ಈಗಿನ ಕಟ್ಟಡ ಕಾಮಗಾರಿ ಮುಗಿದು 2009ರಲ್ಲಿ ಉದ್ಘಾಟನೆಯಾಗಿತ್ತು.

‘6 ತಿಂಗಳಲ್ಲಿ ಹೊಸ ಕಟ್ಟಡ ಕಟ್ಟಿಕೊಡುತ್ತೇವೆ ಎನ್ನುತ್ತಾರೆ. ಆದರೆ ಅದು ಸಾಧ್ಯವೇ? ಒಂದೂವರೆ ಎರಡು ತಿಂಗಳಲ್ಲಿ ಮುಗಿಸುವುದಾಗಿ ಹೇಳಿ ಆರಂಭಿಸಿದ ರಸ್ತೆ ಕಾಮಗಾರಿಗಳನ್ನು ಅರ್ಧದಲ್ಲಿಯೇ ನಿಲ್ಲಿಸಿದ್ದಾರೆ. ಇದೂ ಹಾಗೆಯೇ ಆಗುವುದಿಲ್ಲ ಎನ್ನುವುದಕ್ಕೆ ಖಾತರಿ ಏನು?’ ಎನ್ನುತ್ತಾರೆ ವ್ಯಾಪಾರಿ ಸ್ವಾಮಿ.

ಇಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಿ ಕೆಳಗಿನ ಭಾಗ ತರಕಾರಿ ಮಾರುಕಟ್ಟೆ, ಮೇಲ್ಭಾಗದಲ್ಲಿ ಮಾಲ್ ಮಾಡಲಾಗುವುದು ಎನ್ನುತ್ತಿರುವುದು ವರ್ತಕರ ಗೊಂದಲ ಹೆಚ್ಚಿಸಿದೆ. ಜನಪ್ರತಿನಿಧಿಗಳು ಭರವಸೆ ನೀಡುತ್ತಾರೆ. ಇಂದು ಅಧಿಕಾರದಲ್ಲಿದ್ದವರ ಮಾತನ್ನು ನಂಬಿದರೆ, ನಾಳೆ ಅಧಿಕಾರಕ್ಕೆ ಬರುವ ಹೊಸಬರು ಬೇರೆಯದೇ ಹೇಳುತ್ತಾರೆ. ನಮಗೆ ಜನಪ್ರತಿನಿಧಿಗಳ ಬಗ್ಗೆ ವಿಶ್ವಾಸವಿಲ್ಲ. ನಗರಸಭೆ ಅಧಿಕಾರಿಗಳು ಸ್ಪಷ್ಟವಾಗಿ ಮಾಹಿತಿ ನೀಡಲಿ ಎನ್ನುವುದು ಅವರ ಆಗ್ರಹ.

***

ಮೂರು ಕಡೆ ಮಾಲ್

ನಗರದಲ್ಲಿ ಇದುವರೆಗೂ ಮಾಲ್ ಅಥವಾ ಸೂಪರ್‌ ಮಾರ್ಕೆಟ್‌ ಸಂಸ್ಕೃತಿ ಪರಿಚಯವಾಗಿಲ್ಲ. ಈಗ ಮಾಲ್ ಸ್ವರೂಪದ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳಿಗೆ ಮುಖ್ಯಮಂತ್ರಿ ವಿಶೇಷ ಅನುದಾನದ ಹಣವನ್ನು ಬಳಸಿಕೊಳ್ಳಲಾಗುತ್ತಿದೆ.

ಈಗ ತರಕಾರಿ ಮಾರುಕಟ್ಟೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಸ ಕಟ್ಟಡಕ್ಕೆ ₹4.50 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಇದಲ್ಲದೆ, ಹಳೆಯ ಮಾರುಕಟ್ಟೆ ಜಾಗ ಮತ್ತು ಸಂತೇಮರಹಳ್ಳಿ ವೃತ್ತದ ಬಳಿ ವಾಣಿಜ್ಯ ಸಮುಚ್ಚಯ ನಿರ್ಮಾಣಕ್ಕೆ ತಯಾರಿ ನಡೆಸಲಾಗಿದೆ.

***

ಪರ್ಯಾಯ ಜಾಗ ಒದಗಿಸುವ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ, ಈ ಸ್ಥಳ ತೆರವುಗೊಳಿಸಲು ನಾವು ಒಪ್ಪುವುದಿಲ್ಲ.

–ಭಾಗ್ಯ, ತರಕಾರಿ ವ್ಯಾಪಾರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry