ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕ, ವಿವೇಚನೆ ಬೆಳೆಸಿಕೊಂಡರೆ ಯಶಸ್ಸು

ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮ
Last Updated 15 ಜನವರಿ 2018, 8:55 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ಇರುವುದೊಂದೇ ಜನ್ಮ. ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ನಮ್ಮ ಅನುಪಸ್ಥಿತಿಯಲ್ಲಿ ಜಗತ್ತು ನೆನೆಯುವಂತಹ ಸಾಧನೆ ಮಾಡಬೇಕು’ ಎಂದು ಸಾಹಿತಿ ಸುಂಡ್ರಹಳ್ಳಿ ಎನ್. ಶ್ರೀನಿವಾಸಮೂರ್ತಿ ತಿಳಿಸಿದರು.

ನಗರದ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಆಯೋಜಿಸಿದ್ದ ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ - 7 ನೇ ತಿಂಗಳ ಕಾರ್ಯಕ್ರಮದಲ್ಲಿ ಅವರು ತಮ್ಮ ಕೃತಿಗಳಾದ ‘ಸೆಲ್ಫೀ ವಿಥ್ ವಿಕ್ಟರಿ’ ಮತ್ತು ‘ಕಡಲು ಕೂಡುವ ಹನಿಗಳು’ ಕುರಿತು ಮಾತನಾಡಿದರು.

ಸವಾಲುಗಳಿಗೆ ಎದೆಯೊಡ್ಡಿ ನಿಲ್ಲಬೇಕು. ಸೋಲುಗಳೇ ಗೆಲುವಿನ ಮೆಟ್ಟಿಲುಗಳಾಗಬೇಕು. ಗಳಿಸಿದ್ದನ್ನು ಹಂಚಿ ತಿಂದಾಗ ಸಿಗುವ ಸಂತೋಷಕ್ಕೆ ಬೆಲೆ ಕಟ್ಟಲಾಗದು. ಆತ್ಮವಿಶ್ವಾಸದಿಂದ ಸನ್ಮಾರ್ಗದಲ್ಲಿ ನಡೆದಾಗ ಯಶಸ್ಸು ಸಾಧ್ಯ. ವಿವೇಕ ಮತ್ತು ವಿವೇಚನೆ ಬೆಳೆಸಿಕೊಂಡರೆ ಯಶಶ್ಸು ನಿಶ್ಚಿತ ಎಂದು ಕಥೆಗಳ ಮೂಲಕ ವಿವರಿಸಿದರು.

‘ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ನಾನು ನಂತರ ಪಾಸು ಮಾಡಿ ಮುಂದೆ ಪಿಯುಸಿಯಲ್ಲಿ ಜಿಲ್ಲೆಗೇ ಮೊದಲಿಗನಾದೆ. ಮೊದಲ ಪುಸ್ತಕವನ್ನು ಪ್ರಕಟಿಸಲು ವಿಜಯಪುರದ ಕಸಾಪ ಮುಂದೆ ಬಂದು ಪ್ರೋತ್ಸಾಹಿಸಿದರು. ನಮ್ಮ ಶ್ರಮ, ಪ್ರಯತ್ನ ಅಚಲವಾದ ಗುರಿ ದಾರಿ ತೋರಿಸುತ್ತದೆ. ಸೋತಾಗ ನಿರಾಶರಾಗದೆ ಪ್ರಯತ್ನ ಮುಂದುವರಿಸಿದರೆ ಜಯ ಸಿಗುತ್ತದೆ ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ಒತ್ತಡದ ಬದುಕಿನಲ್ಲಿ ಓದುಗರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ‘ಅನುಭವ ಮಂಟಪ’ ಸೃಷ್ಟಿಸಿದೆ ಎಂದು ಹೇಳಿದರು.

ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌. ಅನಂತಕೃಷ್ಣ ಅವರು ಲೇಖಕರ ಪರಿಚಯ ಮಾಡಿಕೊಟ್ಟರು. ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ. ತ್ಯಾಗರಾಜ್‌, ಲಕ್ಷ್ಮೀನಾರಾಯಣ್‌, ವಿರೂಪಾಕ್ಷಪ್ಪ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಜೆ. ಸಂದೀಪ್‌, ಅಜಿತ್‌ ಕೌಂಡಿನ್ಯ, ನೃತ್ಯಕಲಾವಿದ ಸಿ.ಎನ್‌. ಮುನಿರಾಜು, ಕಿರುತೆರೆ ನಟಿ ಸುಷ್ಮಾ, ಟಿ.ಟಿ. ನರಸಿಂಹಪ್ಪ, ಎಸ್‌.ವಿ.ನಾಗರಾಜರಾವ್‌, ಕೆ.ವೀರಭದ್ರ, ವಿ.ವೆಂಕಟರಮಣ, ಮಕ್ಸೂದ್‌, ಚಾಂದ್‌ ಪಾಷಾ, ವೈಶಾಕ್‌, ಮಂಜುನಾಥ್‌, ವೃಷಭೇಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT